rtgh

ಕನ್ನಡ ವ್ಯಾಕರಣಾಂಶಗಳು | Kannada Grammar

Kannada Grammar,ಕನ್ನಡ ವ್ಯಾಕರಣಾಂಶಗಳು Kannada Grammar Pdf, Kannada Grammar Book, Kannada Grammar in Kannada Language Vyakarana in Kannada ಕನ್ನಡ ವ್ಯಾಕರಣ ಅಲಂಕಾರಗಳು Kannada Grammar Notes Kannada Vyakarana

Kannada Grammar ಕನ್ನಡ ವ್ಯಾಕರಣಾಂಶಗಳು
Kannada Grammar ಕನ್ನಡ ವ್ಯಾಕರಣಾಂಶಗಳು

ಕೃದಂತ – ತದ್ಧಿತಾಂತ

ಕೃದಂತ (ಕೃನ್ನಾಮ)

ನಾಮಪ್ರಕೃತಿಗಳು ನಾಲ್ಕು ಪ್ರಕಾರಗಳೆಂದು ತಿಳಿದಿರುವಿರಿ.

(೧) ಸಹಜನಾಮಪ್ರಕೃತಿಗಳು

(೨) ಕೃದಂತಗಳು

(೩) ತದ್ಧಿತಾಂತಗಳು

(೪) ಸಮಾಸಗಳು – ಎಂದೇ ಆ ನಾಲ್ಕುವಿಧವಾದ ನಾಮಪ್ರಕೃತಿಗಳು.

ಸಹಜನಾಮಪ್ರಕೃತಿಗಳೆಂದರೇನು? ಅವು ನಾಮವಿಭಕ್ತಿಪ್ರತ್ಯಯ ಸೇರಿ, ನಾಮಪದಗಳಾಗು ವಿಕೆ, ಅವುಗಳ ಲಿಂಗ, ವಚನಾದಿಗಳ ಬಗೆಗೂ, ಸಮಾಸವೆಂದರೇನು? ಅವುಗಳ ಪ್ರಕಾರಗಳ ಬಗೆಗೂ ಹಿಂದಿನ ಪ್ರಕರಣಗಳಲ್ಲಿ ತಿಳಿದಿದ್ದೀರಿ.  ಈಗ ಕೃದಂತ, ತದ್ಧಿತಾಂತಗಳೆಂದರೇನೆಂಬ ಬಗೆಗೆ ತಿಳಿಯಿರಿ.

ಮೊದಲು ಕೃದಂತಪ್ರಕರಣದಲ್ಲಿ ಕೃದಂತಗಳ ಬಗೆಗೂ, ಅನಂತರ ತದ್ಧಿತಾಂತ ಪ್ರಕರಣದಲ್ಲಿ ತದ್ಧಿತಾಂತಗಳ ಬಗೆಗೂ ವಿವರಗಳನ್ನು ನೋಡಿರಿ.

ಧಾತುಕ್ರಿಯಾಪದಕೃದಂತ ನಾಮಪ್ರಕೃತಿಕೃದಂತ ನಾಮಪದ
(೧)ಮಾಡುಮಾಡಿದನುಮಾಡಿದಮಾಡಿದವನು, ಮಾಡಿದವನನ್ನು, ಮಾಡಿದವನಿಂದ -ಇತ್ಯಾದಿ
(೨)ಹೋಗುಹೋಗುವನುಹೋಗುವಹೋಗುವವನು, ಹೋಗುವವನನ್ನು, ಹೋಗುವವನಿಂದ -ಇತ್ಯಾದಿ
(೩)ತಿನ್ನುತಿನ್ನುತ್ತಾನೆತಿನ್ನುವತಿನ್ನುವವನು, ತಿನ್ನುವವನನ್ನು, ತಿನ್ನುವವನಿಗೆ, ತಿನ್ನುವವನಲ್ಲಿ -ಇತ್ಯಾದಿ
(೪)ಬರೆಬರೆಯುವನುಬರೆಯುವಬರೆಯುವವನು, ಬರೆಯುವವನನ್ನು -ಇತ್ಯಾದಿ

ಮೇಲಿನ ನಾಲ್ಕು ಉದಾಹರಣೆಗಳಲ್ಲಿ-ಮಾಡು, ಹೋಗು, ತಿನ್ನು, ಬರೆ-ಈ ನಾಲ್ಕು ಧಾತುಗಳು-ಮಾಡಿದನು, ಹೋಗುವನು, ತಿನ್ನುತ್ತಾನೆ, ಬರೆಯುವನು ಈ ನಾಲ್ಕು ರೀತಿಯ ಕ್ರಿಯಾಪದಗಳಾಗಿವೆ.  ಇವು ಕ್ರಿಯಾಪದಗಳಾಗುವ ರೀತಿಯನ್ನು ಹಿಂದಿನ ಕ್ರಿಯಾಪದ ಪ್ರಕರಣದಲ್ಲಿ ತಿಳಿದಿದ್ದೀರಿ.  ಅವುಗಳ ಮುಂದಿರುವ ಮಾಡಿದ, ಹೋಗುವ, ತಿನ್ನುವ, ಬರೆಯುವ- ಇವು ಕ್ರಮವಾಗಿ – ಮಾಡು+ದ+ಅ=ಮಾಡಿದ, ಹೋಗು+ವ+ಅ=ಹೋಗುವ, ತಿನ್ನು+ವ+ಅ=ತಿನ್ನುವ, ಬರೆ+ಉವ+ಅ=ಬರೆಯುವ – ಹೀಗಾಗಿವೆ.  ಇವು ಎಲ್ಲಾ ಕಡೆಗೂ ಕೊನೆಯಲ್ಲಿ ಅ ಎಂಬ ಪ್ರತ್ಯಯವನ್ನೂ ಮಧ್ಯದಲ್ಲಿ ದ, ವ, ಉವ ಇತ್ಯಾದಿ ಪ್ರತ್ಯಯಗಳನ್ನೂ ಹೊಂದಿವೆ.  ಧಾತುಗಳು ಹೀಗೆ – ಮಾಡಿದ, ಹೋಗುವ, ತಿನ್ನುವ, ಬರೆಯುವ – ಇತ್ಯಾದಿ ರೂಪ ಪಡೆದ ಮೇಲೆ ಧಾತುವಿನಿಂದ ಹುಟ್ಟಿದ ನಾಮಪ್ರಕೃತಿಗಳೆನಿಸಿದವು.  ಅಥವಾ ಕೃದಂತನಾಮ ಪ್ರಕೃತಿಗಳೆನಿಸಿದವು.  ಇನ್ನು ಇವುಗಳ ಮೇಲೆ-ಉ, ಅನ್ನು, ಇಂದ, ಗೆ, ಇಗೆ, ಕ್ಕೆ, ಅಕ್ಕೆ, ದೆಸೆಯಿಂದ, ಅ, ಅಲ್ಲಿ – ಇತ್ಯಾದಿ ಸಪ್ತ ವಿಧವಾದ ನಾಮವಿಭಕ್ತಿಪ್ರತ್ಯಯಗಳೂ ಸೇರಿ ಕೃದಂತನಾಮಪದಗಳೆನಿಸುತ್ತವೆ.  ಇಂಥವನ್ನೇ ನಾವು ಸಾಧಿತ ನಾಮಗಳು ಎನ್ನುತ್ತೇವೆ.  ಮೇಲಿನ ಉದಾಹರಣೆಗಳಲ್ಲಿ ಕೊನೆಯಲ್ಲಿ ಬಂದಿರುವ ಅ ಎಂಬುದೇ ಕೃತ್‌ಪ್ರತ್ಯಯ.  ಇಂಥ ಕೃತ್‌ಪ್ರತ್ಯಯವನ್ನು ಅಂತದಲ್ಲಿ ಉಳ್ಳದ್ದೇ ಕೃದಂತ.  ಮಧ್ಯದಲ್ಲಿ ಬಂದಿರುವ ದ, ವ, ಉವಗಳು ಕಾಲವನ್ನು ಸೂಚಿಸುವ ಪ್ರತ್ಯಯಗಳು.  ಇವಕ್ಕೆ ಕಾಲಸೂಚಕ ಪ್ರತ್ಯಯಗಳೆನ್ನುವರು.  ಹಾಗಾದರೆ ಕೃದಂತವೆಂದರೇನು? ಎಂಬ ಬಗೆಗೆ ಸೂತ್ರವನ್ನು ಕೆಳಗಿನಂತೆ ಹೇಳಬಹುದು.

ಕೃದಂತ :- 

ಧಾತುಗಳಿಗೆ ಕೃತ್‌ಪ್ರತ್ಯಯಗಳು ಸೇರಿ ಕೃದಂತಗಳೆನಿಸುವುವು. ಇವಕ್ಕೆ ಕೃನ್ನಾಮಗಳೆಂದೂ ಹೆಸರು.

ಕೃದಂತಗಳು – ಕೃದಂತನಾಮ (ಕೃನ್ನಾಮ), ಕೃದಂತ ಭಾವನಾಮಕೃದಂತಾವ್ಯಯ ಗಳೆಂದು ಮೂರು ವಿಧ.

ಉದಾಹರಣೆಗೆ :-

ಕೃದಂತನಾಮಕೃದಂತಭಾವನಾಮಕೃದಂತಾವ್ಯಯ
ಮಾಡಿದಮಾಟಮಾಡಿ
ತಿನ್ನುವತಿನ್ನುವಿಕೆತಿಂದು
ನಡೆಯುವನಡೆತನಡೆಯುತ್ತ
ಹೋಗದಹೋಗುವಿಕೆಹೋಗಲು

(ಕೃದಂತ ನಾಮಗಳು

(೮೭) ಕೃದಂತನಾಮಗಳು:- ಧಾತುಗಳಿಗೆ ಕರ್ತೃ ಮೊದಲಾದ ಅರ್ಥಗಳಲ್ಲಿ ಸಾಮಾನ್ಯವಾಗಿ ಅ ಎಂಬ ಕೃತ್‌ಪ್ರತ್ಯಯವು ಬರುವುದು. ಆಗ ಧಾತುವಿಗೂ ಕೃತ್‌ಪ್ರತ್ಯಯಕ್ಕೂ ಮಧ್ಯದಲ್ಲಿ ವರ್ತಮಾನ, ಭವಿಷ್ಯತ್‌ಕಾಲಗಳಲ್ಲಿ ವ ಉವ ಎಂಬ ಕಾಲಸೂಚಕ ಪ್ರತ್ಯಯಗಳೂ, ಭೂತಕಾಲದಲ್ಲಿ ದ ಎಂಬ ಕಾಲಸೂಚಕ ಪ್ರತ್ಯಯವೂ, ನಿಷೇಧಾರ್ಥದಲ್ಲಿ ಅದ ಎಂಬುದೂ ಆಗಮಗಳಾಗುತ್ತವೆ. ಇವನ್ನೇ ಕೃದಂತನಾಮಗಳೆ ನ್ನುವರು.

ಇವು ನಾಮಪ್ರಕೃತಿಗಳೆನಿಸಿದ್ದರಿಂದ ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರಿ ನಾಮಪದಗಳಾಗುವುವು.

ಉದಾಹರಣೆಗೆ:-

(i) ವರ್ತಮಾನ ಕೃದಂತಕ್ಕೆ

ಮಾಡು++=ಮಾಡುವ
ತಿನ್ನು++=ತಿನ್ನುವ
ಬರೆ+ಉವ+=ಬರೆಯುವ

ಇದರಂತೆ-ಹೋಗುವ, ಬರುವ, ತಿನ್ನುವ, ನೋಡುವ, ಓಡುವ, ನಡೆಯುವ, ಕಾಣುವ, ಕೊಡುವ[1].

(ii) ಭೂತ ಕೃದಂತಕ್ಕೆ

ಮಾಡು++=ಮಾಡಿದ
ತಿನ್ನು++=ತಿಂದ
ಹೋಗು++=ಹೋದ

ಇದರಂತೆ ಬರೆದ, ನೋಡಿದ, ನಡೆದ, ಕಂಡ, ಕರೆದ-ಇತ್ಯಾದಿ.

(iii) ನಿಷೇಧ ಕೃದಂತಕ್ಕೆ

ಮಾಡು+ಅದ+=ಮಾಡದ
ತಿನ್ನು+ಅದ+=ತಿನ್ನದ

ಇದರಂತೆ ಹೋಗದ, ಬರದ, ನೋಡದ, ನುಡಿಯದ, ಬರೆಯದ-ಇತ್ಯಾದಿ.

ಮೇಲೆ ಹೇಳಿದ ವರ್ತಮಾನ, ಭವಿಷ್ಯತ್, ಭೂತ, ನಿಷೇಧಾರ್ಥ ಕೃದಂತನಾಮಗಳೆಲ್ಲ ಈಗ ನಾಮವಿಭಕ್ತಿಪ್ರತ್ಯಯ ಹತ್ತಲು ಸಿದ್ಧವಾದವು. ಇವುಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗಗಳಲ್ಲಿ ಆಗುವ ವ್ಯಾಕರಣ ವಿಶೇಷಗಳನ್ನು ಈ ಕೆಳಗೆ ನೋಡಿರಿ.

(i) ಪುಲ್ಲಿಂಗದಲ್ಲಿ

ಕೃದಂತನಾಮಪದಗಳು
ಮಾಡುವಮಾಡುವ+ಅವನು+=ಮಾಡುವವನು
ಮಾಡುವ+ಅವರು+=ಮಾಡುವವರು
ಮಾಡುವ+ಅವನು+ಅನ್ನು=ಮಾಡುವವನನ್ನು
ಮಾಡಿದ+ಅವನು+=ಮಾಡಿದವನು (ಏ.ವ.)
ಮಾಡಿದ+ಅವರು+=ಮಾಡಿದವರು (ಬ.ವ.)
ಮಾಡಿದ+ಅವರು+ಇಂದ=ಮಾಡಿದವರಿಂದ (ಬ.ವ.)
ಮಾಡದ+ಅವನು+=ಮಾಡದವನು (ಏ.ವ.)
ಮಾಡದ+ಅವನು+ಅಲ್ಲಿ=ಮಾಡದವನಲ್ಲಿ (ಏ.ವ.)
ಮಾಡದ+ಅವರು+ಅಲ್ಲಿ=ಮಾಡದವರಲ್ಲಿ (ಬ.ವ.)

(ii) ಸ್ತ್ರೀಲಿಂಗದಲ್ಲಿ

ಕೃದಂತನಾಮಪದಗಳು
ಬರೆದಬರೆದ+ಅವಳು+=ಬರೆದವಳು (ಏ.ವ.)
ಬರೆದ+ಅವಳು+ಅನ್ನು=ಬರೆದವಳನ್ನು (ಏ.ವ.)
ಬರೆದ+ಅವರು+ಇಂದ=ಬರೆದವರಿಂದ (ಬ.ವ.)
ಬರೆದ+ಅವಳು+ಇಗೆ=ಬರೆದವಳಿಗೆ (ಏ.ವ.)
ಬರೆದ+ಅವರು+ಇಗೆ=ಬರೆದವರಿಗೆ (ಬ.ವ.)
ಬರೆದ+ಅವಳು+ಅಲ್ಲಿ=ಬರೆದವಳಲ್ಲಿ (ಏ.ವ.)
ಬರೆದ+ಅವಳು+=ಬರೆದವಳೇ (ಏ.ವ.)
ತಿನ್ನದ+ಅವಳು+=ತಿನ್ನದವಳು
ತಿನ್ನದ+ಅವರು+ಅನ್ನು=ತಿನ್ನದವರನ್ನು
ತಿನ್ನದ+ಅವಳು+ಇಂದ=ತಿನ್ನದವಳಿಂದ

(iii) ನಪುಂಸಕಲಿಂಗದಲ್ಲಿ

ಕೃದಂತನಾಮಪದಗಳು
ಹೋಗುವಹೋಗುವ+ಉದು+=ಹೋಗುವುದು
ಹೋಗುವ+ಉದು+ಅನ್ನು=ಹೋಗುವುದನ್ನು
ಹೋಗುವ+ಉವು+ಅನ್ನು=ಹೋಗುವುವನ್ನು
ಹೋಗುವ+ಉದು+ಅರು+ಇಂದ=ಹೋಗುವುದರಿಂದ
ಹೋಗುವ+ಉದು+ಅಕ್ಕೆ=ಹೋಗುವುದಕ್ಕೆ
ಹೋಗುವ+ಉದು+ಅರು+ಅಲ್ಲಿ=ಹೋಗುವುದರಲ್ಲಿ
ಹೋಗುವ+ಉವು+ಗಳು+ಅಲ್ಲಿ=ಹೋಗುವುವುಗಳಲ್ಲಿ
(ಅವು)ಹೋಗುವವುಗಳಲ್ಲಿ
ಹೋದ+ಉದು+ಅನ್ನು=ಹೋದುದನ್ನು
ಹೋದ+ಉವು+ಗಳು+ಇಂದ=ಹೋದುವುಗಳಿಂದ

– ಇತ್ಯಾದಿ

ಮೇಲೆ ಹೇಳಿದ ಉದಾಹರಣೆಗಳನ್ನೆಲ್ಲ ನೋಡಿದರೆ ಕೃದಂತಗಳ ಮೇಲೆ ನಾಮವಿಭಕ್ತಿಪ್ರತ್ಯಯಗಳು ಸೇರುವಾಗ ಕೃದಂತಕ್ಕೂ, ನಾಮವಿಭಕ್ತಿಪ್ರತ್ಯಯಕ್ಕೂ ಮಧ್ಯದಲ್ಲಿ ಪುಲ್ಲಿಂಗ ಏಕವಚನದಲ್ಲಿ ಅವನು ಎಂಬುದೂಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ.

ಸ್ತ್ರೀಲಿಂಗದ ಏಕವಚನದಲ್ಲಿ ಅವಳು ಬಹುವಚನದಲ್ಲಿ ಅವರು ಎಂಬ ಸರ್ವನಾಮ ಬರುತ್ತವೆ.

ನಪುಂಸಕಲಿಂಗದ ಏಕವಚನದಲ್ಲಿ ಉದು (ಅದುಮತ್ತು ಬಹುವಚನದಲ್ಲಿ ಉವು (ಅವುಎಂಬ ಸರ್ವನಾಮಗಳು ಬರುತ್ತವೆ[2].

(ಇದುವರೆಗೆ ತಿಳಿಸಿದ ಕೃದಂತನಾಮಗಳು ನಾಮಪದಗಳನ್ನು ವಿಶೇಷಿಸುತ್ತವೆ.

(i) ವರ್ತಮಾನಭವಿಷ್ಯತ್ ಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡುವ ಕೆಲಸ

ಹಾಡುವ ಪದ

ನೋಡುವ ಕಾರ‍್ಯ

ತಿನ್ನುವ ಪದಾರ್ಥ – ಇತ್ಯಾದಿ.

(ii) ಭೂತಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡಿದ ಕೆಲಸ

ಹಾಡಿದ ಪದ

ನೋಡಿದ ಕಾರ‍್ಯ

ತಿಂದ ಪದಾರ್ಥ – ಇತ್ಯಾದಿ.

(iii) ನಿಷೇಧಕೃದಂತಗಳು ನಾಮಪದಗಳನ್ನು ವಿಶೇಷಿಸುವುದಕ್ಕೆ

ಮಾಡದ ಕೆಲಸ

ಹಾಡದ ಪದ

ನೋಡದ ಕಾರ‍್ಯ

ತಿನ್ನದ ಪದಾರ್ಥ – ಇತ್ಯಾದಿ.

(ಕೃದಂತಭಾವನಾಮಗಳು (ಭಾವಕೃದಂತ)

(i) ಆತನ ಓಟ ಚೆನ್ನಾಗಿತ್ತು

(ii) ಅದರ ನೆನಪು ಇಲ್ಲ

(iii) ಗಡಿಗೆಯ ಮಾಟ ಸೊಗಸು

(iv) ಇದರ ಕೊರೆತ ಹಸನಾಗಿದೆ

ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಓಟಮಾಟನೆನಪುಕೊರೆತ-ಈ ಶಬ್ದಗಳನ್ನು ಗಮನಿಸಿರಿ.

ಓಡುವ ರೀತಿಯೇ ಓಟ – ಓಡು .

ಮಾಡಿರುವ ರೀತಿಯೇ ಮಾಟ – ಮಾಡು .

ನೆನೆಯುವ ರೀತಿಯೇ ನೆನಪು – ನೆನೆ ಅಪು.

ಕೊರೆದಿರುವಿಕೆಯೇ ಕೊರೆತ – ಕೊರೆ +.

ಇವೆಲ್ಲ ಕ್ರಿಯೆಯ ಭಾವವನ್ನು ತಿಳಿಸುತ್ತದೆ.  ಆದುದರಿಂದ ಇವನ್ನು ಕೃದಂತ ಭಾವನಾಮಗಳು ಅಥವಾ ಭಾವಕೃದಂತಗಳು ಎನ್ನುತ್ತಾರೆ.

ಕೃದಂತಭಾವನಾಮಗಳು –

ಧಾತುಗಳ ಮೇಲೆ ಭಾವಾರ್ಥದಲ್ಲಿ ಕೃತ್ ಪ್ರತ್ಯಯಗಳು ಸೇರಿ ಕೃದಂತಭಾವನಾಮಗಳೆನಿಸುವುವು.

ಉದಾಹರಣೆಗೆ:

ಧಾತು+ಭಾವಾರ್ಥದಲ್ಲಿ ಕೃತ್ಪ್ರತ್ಯಯ=ಕೃದಂತ ಭಾವನಾಮಇದರಂತೆ ಇರುವ  ಇತರ ರೂಪಗಳು
ಮಾಡು+ವುದು[3]=ಮಾಡುವುದುನೋಡುವುದು, ತಿನ್ನುವುದು
ತಿನ್ನು+ಇಕೆ=ತಿನ್ನುವಿಕೆನೋಡುವಿಕೆ, ಬರೆಯುವಿಕೆ, ಕೊರೆಯುವಿಕೆ
ಅಂಜು+ಇಕೆ=ಅಂಜಿಕೆನಂಬಿಕೆ, ಹೊಗಳಿಕೆ,  ತೆಗಳಿಕೆ, ಆಳಿಕೆ,  ನಾಚಿಕೆ, ಬಳಲಿಕೆ, ಕಲಿಕೆ
ಉಡು+ಇಗೆ=ಉಡಿಗೆತೊಡಿಗೆ, ಅಡಿಗೆ,  ಮುತ್ತಿಗೆ, ಹಾಸಿಗೆ, ಏಳಿಗೆ
ಉಡು+ಗೆ=ಉಡುಗೆತೊಡುಗೆ, ನಂಬುಗೆ, ಹೊಲಿಗೆ, ಏಳ್ಗೆ
ಬರು+ಅವು=ಬರವುಸೆಳವು, ಮರವು, ಒಲವು, ಕಳವು, ತೆರವು
ಸಾ+ವು=ಸಾವುನೋವು, ಮೇವು,  ದಣಿವು, ಅರಿವು
ಕೊರೆ+=ಕೊರೆತಸೆಳೆತ, ಕಟೆತ, ಇರಿತ,  ತಿವಿತ, ಕುಣಿತ, ಒಗೆತ
ಓಡು+=ಓಟಮಾಟ, ಕೂಟ, ನೋಟ, ಆಟ, ಕಾಟ
ನಡೆ+ವಳಿ=ನಡೆವಳಿನುಡಿವಳಿ, ಸಲುವಳಿ, ಹಿಡಿವಳಿ, ಕೂಡುವಳಿ, ಮುಗಿವಳಿ
ಕಾ+ಪು=ಕಾಪುಮೇಪು, ತೀರ್ಪು, ತಿಳಿಪು, ಹೊಳೆಪು, ನೆನೆಪು,
ಹೊಳೆ+ಅಪು=ಹೊಳಪುನೆನಪು
ಮುಗ್ಗು+ಅಲು=ಮುಗ್ಗಲುಒಣಗಲು, ಜಾರಲು,
ಬಿಕ್ಕಲು, ಒಕ್ಕಲು
ನಗು+=ನಗೆಹೊರೆ
ಬೆರೆ+ಅಕೆ=ಬೆರಕೆಮೊಳಕೆ
ಬೆಳೆ+ವಳಿಕೆ=ಬೆಳೆವಳಿಕೆತಿಳಿವಳಿಕೆ, ನಡೆವಳಿಕೆ
ಮೆರೆ+ವಣಿಗೆ=ಮೆರೆವಣಿಗೆಬೆಳವಣಿಗೆ, ಬರೆವಣಿಗೆ
ಅಳೆ+ಅತೆ=ಅಳತೆನಡತೆ
ಮುಳಿ+ಸು=ಮುಳಿಸುತೊಳೆಸು, ಮುನಿಸು
ಮುರಿ+ಅಕು=ಮುರಕುಹರಕು
ನಡುಗು+ಉಕ=ನಡುಕಮುರುಕ
ಒಪ್ಪು+ಇತ=ಒಪ್ಪಿತತಪ್ಪಿತ

(೧) ಕೆಲವು ಧಾತುಗಳು ಅಲ್ಪಸ್ವಲ್ಪ ವ್ಯತ್ಯಾಸದಿಂದ ಭಾವಕೃದಂತ (ಭಾವನಾಮ)ಗಳಾಗುವುವು.

ಧಾತುಭಾವಕೃದಂತನಾಮಪದ
ಕಿಡುಕೇಡುಕೇಡನ್ನು, ಕೇಡಿನಿಂದ.
ಬಿಡುಬೀಡುಬೀಡನ್ನು, ಬೀಡಿನಿಂದ, ಬೀಡಿಗೆ.
ಪಡುಪಾಡುಪಾಡನ್ನು, ಪಾಡಿನಿಂದ, ಪಾಡಿಗೆ.

(೨) ಕೆಲವು ಧಾತುಗಳು ಇದ್ದ ರೂಪದಲ್ಲಿಯೇ ಭಾವಕೃದಂತ (ಕೃದಂತ ಭಾವನಾಮ) ಗಳಾಗುವುವು.

ಧಾತುಭಾವಕೃದಂತನಾಮಪದ
ನಡೆನಡೆನಡೆಯನ್ನು, ನಡೆಯಿಂದ
ನುಡಿನುಡಿನುಡಿಯು, ನುಡಿಯನ್ನು, ನುಡಿಯಿಂದ, ನುಡಿಗೆ-ಇತ್ಯಾದಿ
ಓದುಓದುಓದು, ಓದನ್ನು, ಓದಿನಿಂದ, ಓದಿನಲ್ಲಿ-ಇತ್ಯಾದಿ
ಕಟ್ಟುಕಟ್ಟುಕಟ್ಟು, ಕಟ್ಟನ್ನು, ಕಟ್ಟಿನಿಂದ, ಕಟ್ಟಿಗೆ, ಕಟ್ಟಿನಲ್ಲಿ
ಅಂಟುಅಂಟುಅಂಟನ್ನು, ಅಂಟಿನ ದೆಸೆಯಿಂದ, ಅಂಟಿನಲ್ಲಿ
ಹಿಡಿಹಿಡಿಹಿಡಿಯನ್ನು, ಹಿಡಿಯಿಂದ
ಉರಿಉರಿಉರಿಯನ್ನು, ಉರಿಯಿಂದ
ಹೇರುಹೇರುಹೇರನ್ನು, ಹೇರಿನಿಂದ, ಹೇರಿನಲ್ಲಿ
ಉಗುಳುಉಗುಳುಉಗುಳನ್ನು, ಉಗುಳಿನ, ಉಗುಳಿನಲ್ಲಿ
ಹುಟ್ಟುಹುಟ್ಟುಹುಟ್ಟನ್ನು, ಹುಟ್ಟಿನ, ಹುಟ್ಟಿನಲ್ಲಿ
ಚಿಗುರುಚಿಗುರುಚಿಗುರನ್ನು, ಚಿಗುರಿನಲ್ಲಿ
ಬೆಳೆಬೆಳೆಬೆಳೆಯನ್ನು, ಬೆಳೆಯಲ್ಲಿ
ಸವಿಸವಿಸವಿಯನ್ನು, ಸವಿಯಲ್ಲಿ
ಗುದ್ದುಗುದ್ದುಗುದ್ದನ್ನು, ಗುದ್ದಿನಲ್ಲಿ
ಬದುಕುಬದುಕುಬದುಕನ್ನು, ಬದುಕಿನಲ್ಲಿ

(೩) ಹಳಗನ್ನಡದ ಕೆಲವು ಕೃದಂತ ಭಾವನಾಮಗಳು ಹೊಸಗನ್ನಡದಲ್ಲಿ ರೂಪಾಂತರ ಹೊಂದುತ್ತವೆ.

ಏಳ್ಗೆ-ಏಳಿಗೆ, ಸಲ್ಗೆ-ಸಲಿಗೆ, ಕಾಣ್ಕೆ-ಕಾಣಿಕೆ, ಒಲ್ಮೆ-ಒಲುಮೆ, ಪೂಣ್ಕೆ-ಪೂಣಿಕೆ – ಇತ್ಯಾದಿ.

(ಕೃದಾಂತಾವ್ಯಯಗಳು (ಅವ್ಯಯಕೃದಂತ)

ಧಾತುವಿನಿಂದ ಹುಟ್ಟಿ ಅವ್ಯಯದ ಗುಣವನ್ನು ಪಡೆದಂಥ ಶಬ್ದ ರೂಪಗಳೇ ಕೃದಂತಾವ್ಯಯಗಳು ಅಥವಾ ಅವ್ಯಯಕೃದಂತಗಳುಈ ಕೆಳಗಿನ ಕೆಲವು ಉದಾಹರಣೆ ನೋಡಿರಿ.

(೧) ರಾಮನು ಉಣ್ಣದೆ ಮಲಗಿದನು.

(೨) ಮಳೆ ಬರಲು ಕರೆ ತುಂಬಿತು.

(೩) ಅವನು ಬರುತ್ತ ತಿಂದನು.

(೪) ಅದನ್ನು ಬರೆದು ಕಳುಹಿಸಿದನು.

(೫) ಅಲ್ಲಿಗೆ ಹೋಗಲಿಕ್ಕೆ ತಡವಾಯಿತು.

ಮೇಲಿನ ವಾಕ್ಯಗಳಲ್ಲಿ ದಪ್ಪಕ್ಷರ ಶಬ್ದಗಳಾದ ಉಣ್ಣದೆ, ಬರಲುಬರುತ್ತಬರೆದುಹೋಗಲಿಕ್ಕೆ-ಮುಂತಾದವುಗಳು ಉಣ್ಣು+ಅದೆಬರು+ಅಲುಬರು+ಉತ್ತಬರೆ+ದುಹೋಗು+ಅಲಿಕ್ಕೆಹೀಗೆ ಧಾತುಗಳ ಮೇಲೆ-ಅದೆಅಲುಉತ್ತದುಅಲಿಕ್ಕೆ-ಇತ್ಯಾದಿ ಪ್ರತ್ಯಯಗಳು ಬಂದು ಆದ ಶಬ್ದರೂಪಗಳು.  ಇವು ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಗಳಲ್ಲೂ, ಏಕವಚನ ಬಹುವಚನಗಳಲ್ಲೂ ಒಂದೇ ರೂಪವಾಗಿರುತ್ತವೆ.  ಅಲ್ಲದೆ ಇವುಗಳ ಮೇಲೆ ಇನ್ನಾವ ವಿಭಕ್ತಿಪ್ರತ್ಯಯಗಳೂ ಬರುವುದಿಲ್ಲ.  ಆದ್ದರಿಂದ-ಇಂಥ ಶಬ್ದಗಳು ಅವ್ಯಯದ[4] ಗುಣವನ್ನು ಪಡೆದವು.  ಆದ್ದರಿಂದಲೇ ಇವುಗಳನ್ನು ಅವ್ಯಯಕೃದಂತಗಳು ಅಥವಾ ಕೃದಂತಾವ್ಯಯಗಳು ಎನ್ನುವರು.  ಕೆಳಗಿನ ಸೂತ್ರವನ್ನು ಗಮನಿಸಿರಿ.

(೮೯ಧಾತುಗಳ ಮೇಲೆ ಉತಉತ್ತಅದೆದರೆಅಲುಅಲಿಕ್ಕೆದುಇತ್ಯಾದಿ ಪ್ರತ್ಯಯಗಳು ಸೇರಿ ಕೃದಂತಾವ್ಯಯಗಳೆನಿಸುವುವು.

ಇವು ಪೂರ್ಣಕ್ರಿಯಾರ್ಥವನ್ನು ಕೊಡದೆಇನ್ನೊಂದು ಕ್ರಿಯೆಯನ್ನಪೇಕ್ಷಿಸುವುದರಿಂದ ಇವನ್ನು ಅಪೂರ್ಣಕ್ರಿಯೆ ಅಥವಾ ನ್ಯೂನಕ್ರಿಯೆಗಳೆಂದು ಕರೆಯುವರು.

(ರಾಮನು ಉಣ್ಣುತ್ತಾ ಮಾತಾಡಿದನು.

ಎಂಬ ಈ ವಾಕ್ಯದಲ್ಲಿ ರಾಮನೆಂಬ ಕರ್ತೃವು ಉಣ್ಣುವ ಮತ್ತು ಮಾತನಾಡುವ ಕ್ರಿಯೆಗಳೆರಡನ್ನೂ ಮಾಡಿದನಾದ್ದರಿಂದ ಇಂಥವು ಏಕಕರ್ತೃಕ ಕ್ರಿಯೆಗಳು.

(ಮಳೆ ಬರಲು ಕೆರೆ ತುಂಬಿತು.

ಎಂಬ ಈ ವಾಕ್ಯದಲ್ಲಿ ಬರಲು ಎಂಬ ಕ್ರಿಯೆಗೆ ಮಳೆಯೂ, ತುಂಬುವ ಕ್ರಿಯೆಗೆ ಕೆರೆಯೂ ಕರ್ತೃಗಳಾದ್ದರಿಂದ ಇವೆರಡೂ ಕ್ರಿಯೆಗೆ ಬೇರೆ ಬೇರೆ ಕರ್ತೃಗಳು ಇದ್ದಹಾಗಾಯಿತು.  ಇಂಥವನ್ನು ಭಿನ್ನಕರ್ತೃಗಳು ಎನ್ನುತ್ತಾರೆ.

ಉದಾಹರಣೆಗೆ:

ಪ್ರತ್ಯಯಗಳುಧಾತು+ಪ್ರತ್ಯಯ=ಅವ್ಯಯಕೃದಂತ
ಉತಮಾಡು+ಉತ=ಮಾಡುತ, ಇದರಂತೆ ನೋಡುತ, ಮಾರುತ, ಬರುತ
ಉತ್ತ[5]ತಿನ್ನು+ಉತ್ತ=ತಿನ್ನುತ್ತ, ಇದರಂತೆ ನೋಡುತ್ತ, ನಡೆಯುತ್ತ, ಬರುತ್ತ
ಅದೆಮಾಡು+ಅದೆ=ಮಾಡದೆ, ಇದರಂತೆ ನೋಡದೆ, ತಿನ್ನದೆ, ಬರೆಯದೆ
ಅಲುಬರು+ಅಲು=ಬರಲು, ಇದರಂತೆ ತಿನ್ನಲು, ಉಣ್ಣಲು, ನೋಡಲು, ನುಡಿಯಲು, ಬರೆಯಲು
ಅಲಿಕ್ಕೆತಿನ್ನು+ಅಲಿಕ್ಕೆ=ತಿನ್ನಲಿಕ್ಕೆ, ಇದರಂತೆ ಮಾಡಲಿಕ್ಕೆ, ತಿಳಿಯಲಿಕ್ಕೆ, ಬರಲಿಕ್ಕೆ, ನಡೆಯಲಿಕ್ಕೆ
ಹೇಳು+=ಹೇಳ[6], ಇದರಂತೆ ಮಾಡ, ನೋಡ, ನುಡಿಯ
ಮಾಡು+=ಮಾಡಿ, ಇದರಂತೆ ಹೇಳಿ, ಕೇಳಿ, ನೋಡಿ
ದುತಿನ್ನು+ದು=ತಿಂದು, ಇದರಂತೆ ನುಡಿದು, ನಡೆದು, ಕರೆದು, ಬರೆದು

ಈಗ ಏಕಕರ್ತೃಕ ಕೃದಂತಾವ್ಯಯಗಳು ಮತ್ತು ಭಿನ್ನಕರ್ತೃಕ ಕೃದಂತಾವ್ಯಯಗಳಲ್ಲಿ ಯಾವ ಯಾವ ಪ್ರತ್ಯಯಗಳು ಬರುತ್ತವೆಂಬುದರ ವ್ಯವಸ್ಥೆಯನ್ನು ನೋಡಿರಿ.

(ಏಕಕರ್ತೃಕ ಕೃದಂತಾವ್ಯಯಗಳು.

(i) ಒಂದು ಕರ್ತೃವಿನಿಂದ ಎರಡು ಕ್ರಿಯೆಗಳು ನಡೆದಾಗ ಮೊದಲು ಹೇಳುವ ಕ್ರಿಯೆಯಲ್ಲಿ ಭೂತಕಾಲ ತೋರಿದರೆ ದು ಅಥವಾ ಇ ಪ್ರತ್ಯಯಗಳು ಬರುತ್ತವೆ.

[7](ಅ) ಅದನ್ನು ತಿಂದು ಹೋದನು (ತಿನ್ನು+ದು=ತಿಂದು)

83(ಆ) ಆ ಕೆಲಸವನ್ನು ಮಾಡಿ ಬಂದೆನು (ಮಾಡು+ಇ=ಮಾಡಿ)

-ಇಲ್ಲಿ ತಿಂದು, ಮಾಡಿ ಎಂಬುವೆರಡೂ ಮೊದಲ ಕ್ರಿಯೆಗಳು ಮುಗಿದು ಹೋದ (ಭೂತ) ಕಾಲವನ್ನು ತೋರಿಸುತ್ತವಾದ್ದರಿಂದ, ದು, ಇ ಪ್ರತ್ಯಯಗಳು ಬಂದಿವೆ.

(ii) ಒಂದೇ ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಮೊದಲನೆಯ ಕ್ರಿಯೆಯ ಮೇಲೆ ಉತ್ತ (ಉತ್ತಾಪ್ರತ್ಯಯವೂನಿಷೇಧ ತೋರಿದರೆ ಅದೇ ಪ್ರತ್ಯಯವೂ ಬರುವುವು.

(ಅ) ಅವನು ಉಣ್ಣುತ್ತ ಮಾತನಾಡಿದನು (ಏಕಕಾಲದಲ್ಲಿ ನಡೆದ ಕ್ರಿಯೆಗಳು)

(ಆ) ಅವನು ಉಣ್ಣದೆ ಹೋದನು (ನಿಷೇಧ)

-ಇಲ್ಲಿ ಮೊದಲ ವಾಕ್ಯದಲ್ಲಿ ಮಾತನಾಡುವ ಕ್ರಿಯೆ, ಉಣ್ಣುವ ಕ್ರಿಯೆಗಳು ಒಬ್ಬನಿಂದಲೇ ಏಕಕಾಲದಲ್ಲಿ ಆಗಿವೆ.  ಆದ್ದರಿಂದ ಉತ್ತ ಎಂಬುದೂ, ಎರಡನೆಯ ವಾಕ್ಯದಲ್ಲಿ ನಿಷೇಧ ಕ್ರಿಯೆ, ಹೋಗುವ ಕ್ರಿಯೆಗಳೆರಡೂ ಒಬ್ಬ ಕರ್ತೃವಿನಿಂದ ನಡೆದಿವೆ.  ಆದ್ದರಿಂದ ಅದೆ ಎಂಬುದು ಮೊದಲ ಕ್ರಿಯೆಯ ಮೇಲೆ ಬಂದಿದೆ.

(iii) ಒಂದು ಕರ್ತೃವಿನಿಂದ ಏಕಕಾಲದಲ್ಲಿ ಎರಡು ಕ್ರಿಯೆಗಳುಂಟಾದಾಗ ಪ್ರಯೋಜನ ತೋರಿದರೆ ಅಲು ಅಲಿಕ್ಕೆ ಪ್ರತ್ಯಯಗಳು ಮೊದಲನೆಯ ಕ್ರಿಯೆಯ ಮೇಲೆ ಬರುತ್ತವೆ.

(ಅ) ಅವನು ತಿನ್ನಲು ಹೋದನು (ಪ್ರಯೋಜನ)

(ಆ) ಅವನು ತಿನ್ನಲಿಕ್ಕೆ ಹೋದನು (    “    )

-ಮೇಲಿನ ಎರಡೂ ವಾಕ್ಯಗಳಲ್ಲಿ ಹೋಗುವ ಕ್ರಿಯೆಯು ತಿನ್ನುವ ಪ್ರಯೋಜನಕ್ಕಾಗಿ.  ಆದ್ದರಿಂದ ಮೊದಲ ಕ್ರಿಯೆಯ ಮೇಲೆ ಅಲು, ಅಲಿಕ್ಕೆ ಪ್ರತ್ಯಯಗಳು ಬಂದಿವೆ.

(ಭಿನ್ನಕರ್ತೃಕ ಕೃದಂತಾವ್ಯಯಗಳು

(i) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳುಂಟಾದಾಗ ಕಾರಣ ತೋರುವಾಗ ಅಲು ಮತ್ತು ದು ಪ್ರತ್ಯಯಗಳು ಮೊದಲ ಕ್ರಿಯೆಯ ಮೇಲೆ ಬರುತ್ತವೆ.

ಉದಾಹರಣೆಗೆ:

(ಅ) ಹೊಲ ಬೆಳೆಯಲು ರೈತನು ಸುಖ ಹೊಂದಿದನು.

(ಆ) ಹೊಲ ಬೆಳೆದು ರೈತನಿಗೆ ಸುಖ ಬಂದಿತು.

(ii) ಬೇರೆ ಬೇರೆ ಕರ್ತೃಗಳಿಂದ ಎರಡು ಕ್ರಿಯೆಗಳು ಏಕ ಕಾಲದಲ್ಲಿ ತೋರಿದರೆ ಉತ್ತದುಅದೆ ಪ್ರತ್ಯಯಗಳು ಬಂದಾಗ ಅವುಗಳ ಮುಂದೆ ಇರಲು ಇರಲಾಗಿ ಎಂಬುವು ಸೇರುವುವು.

ಉದಾಹರಣೆಗೆ:

(ಅ) ಅವನು ಬರುತ್ತಿರಲು ಎಲ್ಲರೂ ಓಡಿದರು.

(ಆ) ಅವನು ಬರುತ್ತಿರಲಾಗಿ ಎಲ್ಲರೂ ಓಡಿದರು.

(ಇ) ಅವನು ಬರದಿರಲು ನಾವು ಮನೆಗೆ ಹೋದೆವು.

(ಈ) ಅವನು ಬರದಿರಲಾಗಿ ನಾವು ಮನೆಗೆ ಹೋದೆವು.

(ಉ) ಅವನು ಬಂದಿರಲು ನಾವೇಕೆ ಬರಬಾರದು.

(ಊ) ಅವನು ಬಂದಿರಲಾಗಿ ನಾವೇಕೆ ಬರಬಾರದು.

(iii) ಎರಡು ಕ್ರಿಯೆಗಳು ಬೇರೆ ಬೇರೆ ಕರ್ತೃಗಳಿಂದ ನಡೆದಾಗ ಪಕ್ಷಾರ್ಥ ತೋರಿದರೆ ದರೆ ಎಂಬುದೂಭಾವಾರ್ಥ ತೋರಿದರೆ ಅ ಎಂಬುದೂ ಬರುವುವು.

ಉದಾಹರಣೆಗೆ:

(೧) ಪಕ್ಷಾರ್ಥಕ್ಕೆ

(ಅ) ಮಳೆ ಬಂದರೆ, ಕರೆ ತುಂಬುವುದು.

(ಆ) ನೀವು ಬಂದರೆ ನಾವು ಬರುತ್ತೇವೆ.

(೨) ಭಾವಾರ್ಥಕ್ಕೆ

(ಅ) ಅವನು ನನ್ನನ್ನು ಹೋಗ ಹೇಳಿದನು. (ಹೋಗು+ಅ=ಹೋಗ)

(ಆ) ಅವನಿಗೆ ಅಲ್ಲಿ ಮಾಡ ಕೆಲಸವಿಲ್ಲ.  (ಮಾಡು+ಅ=ಮಾಡ)

ಮೇಲಿನ ವಾಕ್ಯಗಳಲ್ಲಿನ ‘ಮಾಡ’ ‘ಹೋಗ’ ಇವು ಭಾವಾರ್ಥಕ ಕ್ರಿಯೆಗಳೆಂದು ತಿಳಿಯಬೇಕು.

[1] ವರ್ತಮಾನ ಮತ್ತು ಭವಿಷ್ಯತ್ ಕೃದಂತಗಳು ಒಂದೇ ರೂಪವಾಗಿರುತ್ತವೆ.  ಇವೆರಡು ಕೃದಂತಗಳಲ್ಲೂ ಕಾಲಸೂಚಕ ಪ್ರತ್ಯಯ ಒಂದೇ ತೆರನಾಗಿರುತ್ತದೆ.  ಕೆಲವರು ವರ್ತಮಾನ ಕೃದಂತಗಳೇ ಇರುವುದಿಲ್ಲ ಎಂದೂ ಹೇಳುವುದುಂಟು. [2] ನಪುಂಸಕಲಿಂಗದಲ್ಲಿ-ಹೋಗುವುದರಿಂದ-ಇತ್ಯಾದಿಗಳಿಗೆ ಪ್ರತಿಯಾಗಿ ಹೋಗುವಂತಹುದರಿಂದ, ನಡೆಯುವಂಥಾದ್ದರಿಂದ, ತಿನ್ನುವವುಗಳಿಂದ ಎಂಬುದಕ್ಕೆ ತಿನ್ನುವಂತಹವುಗಳಿಂದ, ತಿನ್ನುವಂಥವುಗಳಿಂದ-ಇತ್ಯಾದಿಯಾಗಿ ಹೊಸಗನ್ನಡದಲ್ಲಿ ಉಪಯೋಗಿಸುವುದುಂಟು.  ನಡೆಯುವುದನ್ನು, ನಡೆಯುವದನ್ನು-ಹೀಗೆ ಎರಡು ರೂಪಗಳ ಪ್ರಯೋಗವೂ ರೂಢಿಯಲ್ಲುಂಟು.  ಏಕವಚನದಲ್ಲಿ ಅವನು ಎಂಬುದೂ, ಬಹುವಚನದಲ್ಲಿ ಅವರು ಎಂಬ ಸರ್ವನಾಮಗಳೂ ಆಗಮಗಳಾಗಿ ಬರುತ್ತವೆ. [3] ಸಾಮಾನ್ಯವಾಗಿ ಎಲ್ಲ ಧಾತುಗಳ ಮೇಲೂ ಭಾವಾರ್ಥದಲ್ಲಿ ವುದು, ವಿಕೆ – ಎಂಬ ಪ್ರತ್ಯಯಗಳು ಬರುತ್ತವೆ.  ವಿಕೆ ಪ್ರತ್ಯಯಕ್ಕೆ ಪ್ರತಿಯಾಗಿ ಕೆಲವರು ಇಕೆ ಬರುತ್ತದೆಂದು ಹೇಳಿ ನೋಡುವಿಕೆ (ನೋಡು+ವ್+ಇಕೆ=ನೋಡುವಿಕೆ) ಇತ್ಯಾದಿ ರೂಪಗಳು ಆಗುತ್ತವೆನ್ನುತ್ತಾರೆ.  ಆದರೆ ಇವೆರಡೂ ಪ್ರತ್ಯಯಗಳು ಬೇರೆಬೇರೆಯೇ ಆಗಿವೆ. [4] ಅವ್ಯಯ ಎಂದರೆ ಲಿಂಗ, ವಚನ, ವಿಭಕ್ತಿಗಳಿಂದ ವ್ಯತ್ಯಾಸವಾಗದ ಶಬ್ದರೂಪ.  ಇವುಗಳ ವಿಷಯವನ್ನು ಮುಂದೆ ತಿಳಿಯುತ್ತೀರಿ. [5] ಉತ್ತ ಪ್ರತ್ಯಯವನ್ನು ಹೊಸಗನ್ನಡದಲ್ಲಿ ಕೆಲವರು ಉತ್ತಾ ಎಂದು ಹೇಳಿ ಹೋಗುತ್ತಾ, ಬರುತ್ತಾ, ತಿನ್ನುತ್ತಾ ಇತ್ಯಾದಿಯಾಗಿ ಕೃದಂತಾವ್ಯಯಗಳನ್ನು ಬಳಸುವುದುಂಟು. [6] ಹೇಳ ಬಂದನು, ಹೇಳ ಬಂದಳು, ಮಾಡ ಬಂದಳು, ನುಡಿಯ ಬಂದನು, ನುಡಿಯ ಬಂದಿತು-ಇತ್ಯಾದಿಗಳು ಈ ಶಬ್ದಗಳು ಬಂದ ವಾಕ್ಯಗಳು. [7] ಮಾಡಿ, ತಿಂದು, ನೋಡಿ, ನೀಡಿ, ಉಂಡು, ಕೊಟ್ಟು ಇವೆಲ್ಲ ಭೂತನ್ಯೂನಗಳು.

‘ತದ್ಧಿತ‘ಎಂಬ ಹೆಸರಿನ ಪ್ರತ್ಯಯವನ್ನು ಅಂತದಲ್ಲಿ ಉಳ್ಳುದೇ ತದ್ಧಿತಾಂತವೆನಿಸುವುದು.  ಈ ಕೆಳಗಿನ ವಾಕ್ಯಗಳನ್ನು ನೋಡಿರಿ.
(೧) ಮೋಸವನ್ನುಮಾಡುವವನು ಇದ್ದಾನೆ.
(೨) ಅಲ್ಲಿ ಕನ್ನಡವನ್ನುಬಲ್ಲವರು ಬಹಳ ಜನರಿದ್ದರು.
(೩) ಹಾವನ್ನುಆಡಿಸುವವನು ಬಂದನು.
(೪) ಮಡಿಯನ್ನುಮಾಡುವವನು ಇನ್ನೂ ಬಂದಿಲ್ಲ.
ಮೇಲಿನ ನಾಲ್ಕು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಎರಡೆರಡು ನಾಮಪದಗಳನ್ನು ಸೇರಿಸಿ ಅದೇ ಅರ್ಥಬರುವಂತೆ ಒಂದು ಪದವನ್ನಾಗಿ ಸಮಾಸದ ಹಾಗೆ ಮಾಡಬಹುದು.  ಹೀಗೆ ನಾವು ಸಂಕ್ಷೇಪಗೊಳಿಸಿ ಹೇಳಿದಾಗ ಕಾಲ, ಶ್ರಮ, ಧ್ವನಿ ಮೊದಲಾದವುಗಳ ಉಳಿತಾಯವಾಗುವುದು.  ಹಾಗಾದರೆ ಆ ಪದಗಳನ್ನು ಯಾವ ಕ್ರಮದಿಂದ ಕೂಡಿಸುತ್ತೇವೆ?  ಇತ್ಯಾದಿಗಳ ಬಗೆಗೆ ಕೆಳಗೆ ನೋಡಿರಿ.
(೧) ಮೋಸವನ್ನುಮಾಡುವವನುಎಂಬಲ್ಲಿ ಮೋಸವನ್ನು ಎಂಬ ಪದದ ಮುಂದೆ ಮಾಡುವವನು ಎಂಬರ್ಥದಲ್ಲಿ ‘ಗಾರ ಪ್ರತ್ಯಯ ಸೇರಿಸಿ ಮೋಸವನ್ನು+ಗಾರ ಮಾಡುತ್ತೇವೆ.  ಒಂದೇ ಪ್ರಕೃತಿಯ ಮೇಲೆ ಎರಡು ಪ್ರತ್ಯಯ ಸೇರುವುದಿಲ್ಲ.  ಅನ್ನು ಎಂಬ ಪ್ರತ್ಯಯ ತೆಗೆದು-ಮೋಸ+ಗಾರ=ಮೋಸಗಾರ ಹೀಗೆ ಒಂದು ಹೊಸ ರೂಪ ಸಿದ್ಧವಾಯಿತು.  ಇಲ್ಲಿ ‘ಗಾರ’ ಎಂಬುದೇ ತದ್ಧಿತಪ್ರತ್ಯಯ.
(೨) ಕನ್ನಡವನ್ನುಬಲ್ಲವನು-ಎಂಬಲ್ಲಿ ಕನ್ನಡವನ್ನು ಎಂಬುದರ ಮೇಲೆ ಬಲ್ಲವನು ಎಂಬರ್ಥದಲ್ಲಿ ‘ಇಗ’ ಪ್ರತ್ಯಯ ಸೇರಿದಾಗ ಕನ್ನಡವನ್ನು+ಇಗ=ಕನ್ನಡ+ಇಗ=ಕನ್ನಡಿಗ ಎಂಬ ರೂಪ ಸಿದ್ಧವಾಯಿತು.  ಇಲ್ಲಿ ‘ಇಗ’ ಎಂಬುದೇ ‘ತದ್ಧಿತ ಪ್ರತ್ಯಯ’.
(೩) ಹಾವನ್ನುಆಡಿಸುವವನು-ಎಂಬಲ್ಲಿ ಹಾವನ್ನು ಎಂಬ ಪದದ ಮೇಲೆ ‘ಆಡಿಸುವವನು’ ಎಂಬರ್ಥದಲ್ಲಿ ‘ಆಡಿಗ’ ಎಂಬ ತದ್ಧಿತ ಪ್ರತ್ಯಯ ಬಂದು ಹಾವನ್ನು+ಆಡಿಗ=ಹಾವು+ಆಡಿಗಹಾವಾಡಿಗ ಎಂಬ ರೂಪ ಸಿದ್ಧವಾಯಿತು.
(೪) ಮಡಿಯನ್ನುಮಾಡುವವನುಎಂಬಲ್ಲಿ ಮಾಡುವವನು’ ಎಂಬರ್ಥದಲ್ಲಿ ವಳ (ವಾಳ) ಎಂಬ ಪ್ರತ್ಯಯವು ಬಂದು ಮಡಿಯನ್ನು+ವಳ=ಮಡಿ+ವಳ=ಮಡಿವಳ ಎಂಬ ರೂಪವಾಯಿತು.
ಮೋಸವನ್ನು-ಮಾಡುವವನೆಂಬರ್ಥದಲ್ಲಿ-ಗಾರ.
ಕನ್ನಡವನ್ನು-ಬಲ್ಲವನು ಎಂಬರ್ಥದಲ್ಲಿ-ಇಗ.
ಹಾವನ್ನು-ಆಡಿಸುವವನು ಎಂಬರ್ಥದಲ್ಲಿ-ಆಡಿಗ.
ಮಡಿಯನ್ನು-ಮಾಡುವವನು ಎಂಬರ್ಥದಲ್ಲಿ-ವಳ.
ಹೀಗೆ ಹಲವಾರು ಅರ್ಥಗಳಲ್ಲಿ-ಗಾರಇಗಆಡಿಗವಳ-ಎಂಬ ಪ್ರತ್ಯಯಗಳು ನಾಮಪದಗಳ ಮೇಲೆ ಬಂದು ಹೋಸ ಬಗೆಯ ಪ್ರಕೃತಿಗಳಾಗುವುವು. ಇಲ್ಲಿ ಬಂದಿರುವ ಇಂಥ ಪ್ರತ್ಯಯಗಳನ್ನು ತದ್ಧಿತ ಪ್ರತ್ಯಯಗಳೆನ್ನುವರು. ಇಂಥ ತದ್ಧಿತ ಪ್ರತ್ಯಯಗಳನ್ನು ಅಂತದಲ್ಲಿ ಉಳ್ಳ ಶಬ್ದರೂಪವೇ ತದ್ಧಿತಾಂತ’ವೆನಿಸುವುದು.  ಇದರ ಸೂತ್ರವನ್ನು ಕೆಳಗಿನಂತೆ ಹೇಳಬಹುದು.(೯೦ತದ್ಧಿತಾಂತನಾಮಪದಗಳಮೇಲೆಹಲವಾರುಅರ್ಥಗಳಲ್ಲಿಗಾರಕಾರಇಗಆಡಿಗವಂತವಳಇಕಆಳಿಇತ್ಯಾದಿತದ್ಧಿತಪ್ರತ್ಯಯಗಳುಸೇರಿತದ್ಧಿತಾಂತಗಳೆನಿಸುವುವು.
ಈ ತದ್ಧಿತ ಪ್ರತ್ಯಯಗಳು ಸೇರುವಾಗ ಪ್ರಾಯಶಃ ಮಧ್ಯದ ವಿಭಕ್ತಿ ಪ್ರತ್ಯಯವು ಲೋಪವಾಗುವುದು.  ಇವುಗಳಲ್ಲಿ – (ತದ್ಧಿತಾಂತನಾಮ(ತದ್ಧಿತಾಂತಭಾವನಾಮ(ತದ್ಧಿತಾಂತಾವ್ಯಯಗಳೆಂದು ಮೂರು ಬಗೆ.
(ತದ್ಧಿತಾಂತನಾಮಗಳು
ನಾಮಪದಗಳ ಮೇಲೆ ಗಾರಕಾರಇಗವಂತ ಇತ್ಯಾದಿ ಪ್ರತ್ಯಯಗಳು ಬಂದು ತದ್ಧಿತಾಂತ ನಾಮಗಳಾಗುವ ಬಗೆಯನ್ನು ಗಮನಿಸಿರಿ.
ಉದಾಹರಣೆಗೆ:

ತದ್ಧಿತಪ್ರತ್ಯಯನಾಮಪದ+ಅರ್ಥ=ತದ್ಧಿತಪ್ರತ್ಯಯತದ್ಧಿತಾಂತನಾಮ
ಗಾರಮಾಲೆಯನ್ನು+ಕಟ್ಟುವವನು=ಗಾರಮಾಲೆಗಾರ
ಬಳೆಯನ್ನು+ಮಾರುವವನು=ಗಾರಬಳೆಗಾರ
ಮೋಸವನ್ನು+ಮಾಡುವವನು=ಗಾರಮೋಸಗಾರ
ಪಾಲನ್ನು+ಹೊಂದುವವನು=ಗಾರಪಾಲುಗಾರ
ಛಲವನ್ನು+ಹೊಂದಿದವನು=ಗಾರಛಲಗಾರ
ಕಾರಓಲೆಯನ್ನು+ತರುವವನು=ಕಾರಓಲೆಕಾರ
ಕೋಲನ್ನು+ಹಿಡಿಯುವವನು=ಕಾರಕೋಲುಕಾರ
ಕೈದನ್ನು+ಹಿಡಿದಿರುವವನು=ಕಾರಕೈದುಕಾರ
ಇಗಕನ್ನಡವನ್ನು+ಬಲ್ಲವನು=ಇಗಕನ್ನಡಿಗ
ಲೆಕ್ಕವನ್ನು+ಬಲ್ಲವನು=ಇಗಲೆಕ್ಕಿಗ
ಚೆನ್ನನ್ನು+ಉಳ್ಳುವ=ಇಗಚೆನ್ನಿಗ
ಗಂದವನ್ನು+ಮಾರುವವನು=ಇಗಗಂದಿಗ
ಗಾಣವನ್ನು+ಆಡಿಸುವವನು=ಇಗಗಾಣಿಗ
ವಂತಹಣವನ್ನು+ಉಳ್ಳವನು=ವಂತಹಣವಂತ
ಸಿರಿಯನ್ನು+ಉಳ್ಳವನು=ವಂತಸಿರಿವಂತ
ವಳಮಡಿಯನ್ನು+ಮಾಡುವವನು=ವಳಮಡಿವಳ
=(ವಾಳ)ಮಡಿವಾಳ
ಹಡಪವನ್ನು+ಆಚರಿಸುವವನು=ವಳಹಡಪವಳ
ಆಡಿಗಹಾವನ್ನು+ಆಡಿಸುವವನು=ಆಡಿಗಹಾವಾಡಿಗ
ಹೂವನ್ನು+ಕಟ್ಟುವವನು=ಆಡಿಗಹೂವಾಡಿಗ
ಇಕಕರಿಯದನ್ನು (ಬಣ್ಣವನ್ನು)+ಉಳ್ಳವನು=ಇಕಕರಿಕ
ಬಿಳಿಯದನ್ನು(ಬಣ್ಣವನ್ನು)+ಉಳ್ಳವನು=ಇಕಬಿಳಿಕ
ಆಳಿಮಾತನ್ನು+ಹೆಚ್ಚು ಆಡುವ ಸ್ವಭಾವವುಳ್ಳವನು=ಆಳಿಮಾತಾಳಿ
ಓದನ್ನು+ಹೆಚ್ಚು ಆಚರಿಸುವವನು=ಆಳಿಓದಾಳಿ
ಆಳಿಜೂದನ್ನು+ಆಡುವವನು=ಆಳಿಜೂದಾಳಿ
ಗುಳಿಲಂಚವನ್ನು+ತೆಗೆದುಕೊಳ್ಳುವವನು=ಗುಳಿಲಂಚಗುಳಿ
ಅನೆಯಹತ್ತು+ಸಂಖ್ಯೆಯನ್ನುಳ್ಳುದು=ಅನೆಯಹತ್ತನೆಯ
ಒಂದು+ಸಂಖ್ಯೆಯನ್ನುಳ್ಳುದು=ಅನೆಯಒಂದನೆಯ
ಆರಕುಂಬವನ್ನು+ಮಾಡುವವನು=ಆರಕುಂಬಾರ[1]
ಕಮ್ಮವನ್ನು+ಆಚರಿಸುವವನು=ಆರಕಮ್ಮಾರ[1]

ಇದರ ಹಾಗೆಯೆ ಉಳಿದ ಕಡೆಗೆ ಬೇರೆ ಬೇರೆ ಪ್ರತ್ಯಯಗಳು ಬಂದು ತದ್ಧಿತಾಂತಗಳಾಗುತ್ತ ವೆಂದು ತಿಳಿಯಬೇಕು.

ಸ್ತ್ರೀಲಿಂಗದಲ್ಲಿಬರುವತದ್ಧಿತಪ್ರತ್ಯಯಗಳು
(೯೧ಸ್ತ್ರೀಲಿಂಗದಲ್ಲಿಇತಿಇತ್ತಿಗಿತ್ತಿತಿಇತ್ಯಾದಿತದ್ಧಿತಪ್ರತ್ಯಯಗಳುಬಂದುಸ್ತ್ರೀಲಿಂಗದತದ್ಧಿತಾಂತಗಳುಸಿದ್ಧಿಸುವುವು.
ಉದಾಹರಣೆಗೆ:
ಇತಿ – ಬೀಗಿತಿ, ಬ್ರಾಹ್ಮಣಿತಿ
ಇತ್ತಿ– ಒಕ್ಕಲಗಿತ್ತಿ, ಹೂವಾಡಗಿತ್ತಿ
ಗಿತ್ತಿ – ನಾಯಿಂದಗಿತ್ತಿ, ಅಗಸಗಿತ್ತಿ
ತಿ – ಗೊಲ್ಲತಿ, ವಡ್ಡತಿ, ಮಾಲೆಗಾರ‍್ತಿ
 – ಅರಸಿ, ಅಣುಗಿ
 – ಕಳ್ಳೆ, ಜಾಣೆ, ಗುಣವಂತೆ,  ಇತ್ಯಾದಿ-

(ತದ್ಧಿತಾಂತಭಾವನಾಮಗಳು
(ಅ) ಬಡತನಸಿರಿತನಗಳು ಸ್ಥಿರವಲ್ಲ.
(ಆ) ಊರಗೌಡಿಕೆ ರಾಮಣ್ಣನದು.
(ಇ) ನಮಗೆ ಅದೊಂದುಹಿರಿಮೆ.
ಈ ಮೇಲಿನ ಮೂರು ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ಬಡತನಸಿರಿತನಗೌಡಿಕೆಹಿರಿಮೆ-ಈ ಶಬ್ದಗಳನ್ನು ಯೋಚಿಸಿ ನೋಡಿದರೆ-ಬಡವನಭಾವವೇಬಡತನಸಿರಿವಂತನಭಾವವೇಸಿರಿತನಗೌಡನಭಾವವೇಗೌಡಿಕೆಹಿರಿಯದರಭಾವವೇ-‘ಹಿರಿತನ’ ಎಂದು ಅರ್ಥವಾಗುವುದು.  ಇಲ್ಲಿ ಬಂದಿರುವ ತನಇಕೆಮೆ-ಪ್ರತ್ಯಯಗಳು ಭಾವಾರ್ಥದಲ್ಲಿ ಬಡವನಸಿರಿವಂತನಗೌಡನಹಿರಿಯದರ – ಇತ್ಯಾದಿ ನಾಮಪದಗಳ ಮೇಲೆ ಬಂದಿವೆ ಎಂಬುದನ್ನು ಕೆಳಗೆ ಗಮನಿಸಿರಿ.
ಬಡವ-ಬಡತನ (ಬಡವನ ಭಾವ-ತನ)
ಸಿರಿ  – ಸಿರಿತನ (ಸಿರಿ ಉಳ್ಳವನ ಭಾವ-ತನ)
ಗೌಡ-ಗೌಡಿಕೆ (ಗೌಡನ ಭಾವ-ಇಕೆ)
ಹಿರಿದು-ಹಿರಿಮೆ (ಹಿರಿದರ ಭಾವ-ಮೆ)
ಸಾಮಾನ್ಯವಾಗಿ ಈ ಪ್ರತ್ಯಯಗಳೆಲ್ಲ ಷಷ್ಠೀವಿಭಕ್ತ್ಯಂತಗಳಾದ ನಾಮಪದಗಳ ಮೇಲೆ ಬಂದಿವೆಆದುದರಿಂದ ಈ ಬಗೆಗೆ ಸೂತ್ರವನ್ನು ಹೀಗೆ ಹೇಳಬಹುದು.

(೯೨ತದ್ಧಿತಾಂತಭಾವನಾಮಗಳುಸಾಮಾನ್ಯವಾಗಿಷಷ್ಠೀವಿಭಕ್ತ್ಯಾಂತಗಳಾದನಾಮಪದಗಳಮುಂದೆಭಾವಾರ್ಥದಲ್ಲಿತನಇಕೆಪುಮೆ– ಇತ್ಯಾದಿತದ್ಧಿತಪ್ರತ್ಯಯಗಳುಸೇರಿತದ್ಧಿತಾಂತಭಾವನಾಮಗಳೆನಿಸುವುವು.
ಉದಾಹರಣೆಗೆ:

ಪ್ರತ್ಯಯನಾಮಪದಭಾವಾರ್ಥದಲ್ಲಿಪ್ರತ್ಯಯತದ್ಧಿತಾಂತಭಾವನಾಮ
ತನದೊಡ್ಡವನ (ಭಾವ)ತನದೊಡ್ಡತನ
ಜಾಣನ (ಭಾವ)ತನಜಾಣತನ; ಇದರಂತೆ ದಡ್ಡತನ, ಚಿಕ್ಕತನ, ಸಣ್ಣತನ, ಹುಡುಗತನ, ಕಿರಿತನ, ಕಳ್ಳತನ, ಕೆಟ್ಟತನ, ಸೋಮಾರಿತನ,  -ಇತ್ಯಾದಿ
ಇಕೆಬ್ರಾಹ್ಮಣನ (ಭಾವ)ಇಕೆಬ್ರಾಹ್ಮಣಿಕೆ
ಚಲುವಿನ (ಭಾವ)ಇಕೆಚಲುವಿಕೆ; ಇದರಂತೆ  ಗೌಡಿಕೆ, ಉನ್ನತಿಕೆ, ತಳವಾರಿಕೆ, -ಇತ್ಯಾದಿ
ಕಿವುಡನ (ಭಾವ)ಕಿವುಡು
ಕುಳ್ಳನ (ಭಾವ)ಕುಳ್ಳು; ಇದರಂತೆ ಕುರುಡು, ಕುಂಟು, ಮೂಕು, ತೊದಲು, -ಇತ್ಯಾದಿ.
ಪುಬಿಳಿದರ (ಭಾವ)ಪುಬಿಳುಪು[2]
ಕರಿದರ (ಭಾವ)ಪುಕಪ್ಪು[2]
ಇನಿದರ (ಭಾವ)ಪುಇಂಪು
ತಣ್ಣನೆಯದರ (ಭಾವ)ಪುತಂಪು[2]
ನುಣ್ಣನೆಯದರ (ಭಾವ)ಪುನುಣುಪು[2]
ಮೆಜಾಣನ (ಭಾವ)ಮೆಜಾಣ್ಮೆ
ಜಾಣೆಯ (ಭಾವ)ಮೆಜಾಣ್ಮೆ
ಕೂರಿತ್ತರ (ಭಾವ)ಮೆಕೂರ‍್ಮೆ
ಪಿರಿದರ (ಭಾವ)ಮೆಪೆರ‍್ಮೆ
ಹಿರಿದರ (ಭಾವ)ಮೆಹಿರಿಮೆ

(ತದ್ಧಿತಾಂತಾವ್ಯಯಗಳು
(ಅ) ಅವನು ರಾಮನಂತೆ ಕಾಣುವನು
(ಆ) ಊರವರೆಗೆ ನಡೆದನು
(ಇ) ಮನೆಯತನಕ ಕಳಿಸು
(ಉ) ಅವನಿಗೋಸುಗ ಬಂದೆನು
(ಊ) ಅವನಿಗಿಂತ ಚಿಕ್ಕವನು
ಮೇಲಿನ ವಾಕ್ಯಗಳಲ್ಲಿ ಕೆಳಗೆ ಗೆರೆ ಎಳೆದಿರುವ ರಾಮನಂತೆಊರವರೆಗೆಮನೆಯತನಕಅವನಿಗೋಸುಗಅವನಿಗಿಂತ – ಇತ್ಯಾದಿ ಪದಗಳನ್ನು ಬಿಡಿಸಿದರೆ ರಾಮನ+ಅಂತೆಊರ+ವರಗೆಮನೆಯ+ತನಕಅವನಿಗೆ+ಓಸುಗಅವನಿಗೆ+ಇಂತಹೀಗಾಗುವುವು.  ಇಲ್ಲಿ ಬಂದಿರುವ ಅಂತೆವರೆಗೆತನಕಓಸುಗಇಂತ – ಇತ್ಯಾದಿ ಪ್ರತ್ಯಯಗಳು ನಾಮ ಪದಗಳ ಮುಂದೆ ಸೇರುವುವು.  ಆಗ ನಾಮಪದಗಳಲ್ಲಿರುವ ಗೆಗೆ – ಈ ನಾಮವಿಭಕ್ತಿಪ್ರತ್ಯಯಗಳು ಲೋಪವಾಗುವುದಿಲ್ಲ.  ಇಂಥ ಪದಗಳನ್ನು ತದ್ಧಿತಾಂತಾವ್ಯಯಗಳೆಂದು ಕರೆಯುವುದು ವಾಡಿಕೆ.

(೯೩ನಾಮಪದಗಳಮುಂದೆಅಂತೆವೊಲ್ವೊಲುವೋಲ್ವೋಲುತನಕವರೆಗೆಮಟ್ಟಿಗೆಓಸ್ಕರಇಂತಆಗಿಓಸುಗಇತ್ಯಾದಿಪ್ರತ್ಯಯಗಳುಸೇರಿತದ್ಧಿತಾಂತಾವ್ಯಯಗಳೆನಿಸುವುವು.
ಈ ಪ್ರತ್ಯಯಗಳು ಬಂದಾಗ ನಾಮಪದದಲ್ಲಿರುವ ವಿಭಕ್ತಿಪ್ರತ್ಯಯವು ಲೋಪವಾಗುವುದಿಲ್ಲ.
ಉದಾಹರಣೆಗೆ:

ಅಂತೆರಾಮನಂತೆ, ಚಂದ್ರನಂತೆ, ಭೀಮನಂತೆ, ಅವನಂತೆ
ವೊಲ್ರಾಮನವೊಲ್, ಚಂದ್ರನವೊಲ್, ಭೀಮನವೊಲ್, ಅವನವೊಲ್
ವೊಲುರಾಮನವೊಲು, ಚಂದ್ರನವೊಲು, ಭೀಮನವೊಲು, ನಿನ್ನವೊಲು
ವೋಲುಮನೆಯವೋಲು, ಅವನವೋಲು, ಚಂದ್ರನವೋಲು
ವೋಲ್ಮನೆಯವೋಲ್, ಅವನವೋಲ್, ಚಂದ್ರನವೋಲ್
ತನಕಮನೆಯತನಕ, ಊರತನಕ, ಅಲ್ಲಿಯತನಕ
ವರೆಗೆಊರವರೆಗೆ, ಚಂದ್ರನವರೆಗೆ
ಮಟ್ಟಿಗೆಅವನಮಟ್ಟಿಗೆ, ನನ್ನಮಟ್ಟಿಗೆ, ನಿನ್ನಮಟ್ಟಿಗೆ
ಓಸ್ಕರಅವನಿಗೋಸ್ಕರ, ರಾಮನಿಗೋಸ್ಕರ
ಸಲುವಾಗಿನನ್ನ ಸಲುವಾಗಿ, ನಿನ್ನ ಸಲುವಾಗಿ
ಇಂತಅವನಿಗಿಂತ, ಇವನಿಗಿಂತ
ಆಗಿಅವನಿಗಾಗಿ, ನನಗಾಗಿ, ನಿನಗಾಗಿ
ಓಸುಗರಾಮನಿಗೋಸುಗ, ಕಳ್ಳನಿಗೋಸುಗ
[1] ಕುಂಭಕಾರ, ಕರ್ಮಕಾರ-ಎಂಬ ಸಂಸ್ಕೃತ ಪದಗಳು ತದ್ಭವವಾಗಿ, ಕುಂಬಾರ, ಕಮ್ಮಾರ ಪದಗಳು ಸಿದ್ಧಿಸಿದೆ ಎಂಬುದು ಕೆಲವರ ಮತ.  ಆದರೆ ಹಳಗನ್ನಡದಲ್ಲಿ ಆರ ಪ್ರತ್ಯಯ ಬಂದು ಕುಂಬರ, ಕಮ್ಮರ ಎಂದಾದ ಈ ಶಬ್ದಗಳು ಹೊಸಗನ್ನಡದಲ್ಲಿ ಕುಂಬಾರ, ಕಮ್ಮಾರ-ಎಂದು ಆದುವೆಂದು ತಿಳಿಯುವುದು ಯುಕ್ತ. [2] ಹಳಗನ್ನಡದಲ್ಲಿ ಇವುಗಳ ರೂಪಗಳು ಬೆಳ್ಪು, ಕರ್ಪು, ತುಣ್ಪು, ನುಣ್ಪು-ಇತ್ಯಾದಿಯಾಗಿ ಆಗುವುವು.

FAQ :

ವ್ಯಾಕರಣ ಎಂದರೇನು?

ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.

ವರ್ಣಮಾಲೆ ಎಂದರೇನು?

ವರ್ಣ ಎಂದರೆ ಅಕ್ಷರ. ವರ್ಣಗಳ ವ್ಯವಸ್ಥಿತ ಜೋಡಣೆಯನ್ನು ವರ್ಣಮಾಲೆ ಎನ್ನುವರು.

ಇತರೆ ವಿಷಯಗಳು :

ಕನ್ನಡ ವರ್ಣಮಾಲೆ

Kannada Grammer

ಕನ್ನಡ ಸ್ವರಗಳು

Kannada Grammar Books ; Click Here

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app 

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ 

ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಕನ್ನಡ ವ್ಯಾಕರಣಾಂಶಗಳ ಬಗ್ಗೆ ಮಾಹಿತಿ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಕನ್ನಡ ವ್ಯಾಕರಣಾಂಶಗಳ ಬಗ್ಗೆ ಮಾಹಿತಿ ಕನ್ನಡದಲ್ಲಿ ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *