ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-7 ಸಾಮಾಜಿಕ ಚಳುವಳಿ ನೋಟ್ಸ್‌ | 2nd Puc Sociology Chapter 7 Question Answer

ದ್ವಿತೀಯ ಪಿ.ಯು.ಸಿ ಸಮಾಜಶಾಸ್ತ್ರ ಅಧ್ಯಾಯ-7 ಸಾಮಾಜಿಕ ಚಳುವಳಿ ನೋಟ್ಸ್‌, 2nd Puc Sociology Chapter 7 Question Answer Notes Mcq Pdf in Kannada Medium, 2nd Puc Samajika Chaluvali Sociology Notes in Kannada Kseeb Solution For Class 12 Sociology Chapter 7 Notes social movements sociology class 12 pdf

ಅಧ್ಯಾಯ-7 ಸಾಮಾಜಿಕ ಚಳುವಳಿ

2nd puc sociology 7th chapter notes inkannada
2nd Puc Sociology Chapter 7

2nd Puc Sociology 7th Chapter Notes in Kannada

ಒಂದು ಅಂಕದ ಪ್ರಶ್ನೆಗಳು :

1. ಸಾಮಾಜಿಕ ಚಳುವಳಿಯ ಒಂದು ಅಂಶವನ್ನು ತಿಳಿಸಿ .

ಸಾಮಾಜಿಕ ಚಳುವಳಿಯ ಮೂಲಾಂಶಗಳು ಸಿದ್ಧಾಂತ , ಸಾಮೂಹಿಕ ಕ್ರೋಢೀಕರಣ ಸಂಘಟನೆ ಮತ್ತು ನಾಯಕತ್ವಗಳು .

2. ನವೀನ ಸಾಮಾಜಿಕ ಚಳುವಳಿಯ ಒಂದು ಅಂಶವನ್ನು ತಿಳಿಸಿ.

ನವೀನ ಸಾಮಾಜಿಕ ಚಳುವಳಿ ಮೂಲಾಂಶಗಳು ಸಿದ್ಧಾಂತದ ಗ್ರಹಿಕೆ , ಸಂಘಟನೆಯ ವ್ಯವಸ್ಥೆ , ಕ್ರೋಢೀಕರಣ ಪ್ರಕ್ರಿಯೆ , ನಾಯಕತ್ವ ಮತ್ತು ಸಾಮೂಹಿಕ ಕ್ರಿಯೆಯ ತಂತ್ರ ಹೊಸ ಅನನ್ಯತೆ ಇತ್ಯಾದಿ .

3. ನವೀನ ಸಾಮಾಜಿಕ ಚಳುವಳಿಯ ಪ್ರಕಾರಗಳನ್ನು ಬರೆಯಿರಿ .

ನವೀನ ಸಾಮಾಜಿಕ ಚಳುವಳಿಯ ಪ್ರಕಾರಗಳು ಎರಡು ಅವು ಒಳಗೊಳ್ಳುವ ಚಳುವಳಿಗಳು ಮತ್ತು ಹೊರಗುಳಿಸುವ ಚಳುವಳಿಗಳು .

4. ಜಾತಿ ಪದ್ಧತಿಯ ವಿರುದ್ಧ ಮೊದಲು ಸಂಘಟಿತ ಹೋರಾಟ ಮಾಡಿದ ವ್ಯಕ್ತಿ ಯಾರು ?

ಜಾತಿ ಪದ್ಧತಿಯ ವಿರುದ್ಧ ಮೊದಲು ಸಂಘಟಿತ ಹೋರಾಟ ಮಾಡಿದವರು ಪೂನಾ ನಗರದ ಜ್ಯೋತಿರಾವ್ ಪುಲೆ .

5. 1873 ರಲ್ಲಿ ಯಾವ ಸಾಮಾಜಿಕ ಸಂಘಟನೆಯನ್ನು ಸ್ಥಾಪಿಸಲಾಯಿತು ?

1873 ರಲ್ಲಿ ‘ ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಸಂಘಟನೆಯನ್ನು ಆರಂಭಿಸಿದರು . ಅಂದು ಸಮಾಜ ಸುಧಾರಣಾ ಚಳುವಳಿ ಪ್ರಾರಂಭವಾಯಿತು .

6. ಮದ್ರಾಸ್ ಪ್ರಾಂತ್ಯದಲ್ಲಿ ಬ್ರಾಹ್ಮಣೇತರ ಚಳುವಳಿ ಆರಂಭಿಸಿದ ಸಂಘಟನೆ ಯಾವುದು ?

ಮದ್ರಾಸ್ ಪ್ರಾಂತ್ಯದಲ್ಲಿ ಹಿಂದುಳಿದ ವರ್ಗಗಳ ನಾಯಕರು ಸೇರಿ ‘ ದಕ್ಷಿಣ ಭಾರತದ ಜನಸಂಘ ‘ ಮತ್ತು 1944 ರಲ್ಲಿ ಬ್ರಾಹ್ಮಣೇತರಿಗಾಗಿ ದ್ರಾವಿಡ ಖಸಗಂ ಎಂಬ ಸಂಘಟನೆ ಪ್ರಾರಂಭವಾಯಿತು .

7. ಭೀಮ ಸೇನೆ ಪ್ರಾರಂಭಿಸಿದವರು ಯಾರು ?

1970 ರಲ್ಲಿ ಬಿ.ಶಾಮಸುಂದರ್‌ರವರು ಭೀಮಸೇನಾ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು .

2nd Puc Sociology Chapter 7 Question Answer

ಎರಡು ಅಂಕದ ಪ್ರಶ್ನೆಗಳು :

8. ಸಾಮಾಜಿಕ ಚಳುವಳಿ ಎಂದರೇನು ?

ಸಂಘಟಿತ ಪ್ರಯತ್ನದ ಮೂಲಕ ನಂಬಿಕೆ , ಮೌಲ್ಯ , ಆದರ್ಶಗಳಲ್ಲಿ ಪರಿವರ್ತನೆ ತರುವ ಮೂಲಕ ಸಾಮಾಜಿಕ ಸಂಸ್ಥೆಗಳಲ್ಲಿ ಪರಿವರ್ತನೆಯನ್ನು ಉಂಟು ಮಾಡುವುದು ಅಥವಾ ಸಂಘಟಿತವಾಗಿ ವಿರೋಧಿಸುವ ಸಾಂಸ್ಥಿಕ ಪ್ರಯತ್ನವನ್ನು ಸಾಮಾಜಿಕ ಚಳುವಳಿ ಎನ್ನುತ್ತಾರೆ . ಸಾಮಾಜಿಕ ಚಳುವಳಿಯು ಸಾಮಾಜಿಕ ಪ್ರಗತಿಯ ಒಂದು ಭಾಗ . ಸಾಮಾಜಿಕ ಚಳುವಳಿಯು ಒಂದು ಕಾಲ ಮತ್ತು ಪ್ರದೇಶದಲ್ಲಿ ವೈವಿದ್ಯವಾದ ಸಾಮೂಹಿಕ ಕ್ರಿಯೆ .

9. ಸಾಮಾಜಿಕ ಚಳುವಳಿಗೆ ಒಂದು ವ್ಯಾಖ್ಯೆ ನೀಡಿರಿ .

ಸಾಮಾಜಿಕ ಚಳುವಳಿಯನ್ನು ಸಮಾಜ ಶಾಸ್ತ್ರಜ್ಞರು ಹೀಗೆ ವ್ಯಾಖ್ಯಾನಿಸುತ್ತಾರೆ .

1 ) ಬ್ಲೂಮರ್ ರವರ ಪ್ರಕಾರ ಸಾಮೂಹಿಕ ಪ್ರಯತ್ನದ ಮೂಲಕ ಹೊಸ ಸಾಮಾಜಿಕ ವ್ಯವಸ್ಥೆಯನ್ನು ಸ್ಥಾಪಿಸುವ ಕ್ರಮವನ್ನು ಸಾಮಾಜಿಕ ಚಳುವಳಿ ” ಎಂದು ವ್ಯಾಖ್ಯಾನಿಸಿದ್ದಾರೆ .

2 ) ಎಂ.ಎಸ್.ಎ.ರಾವ್ ರವರ ಪ್ರಕಾರ “ ಸಾಮೂಹಿಕ ಕ್ರೋಢೀಕರಣ ಮತ್ತು ಸಿದ್ಧಾಂತದ ಮೂಲಕ ಒಂದು ಸಮಾಜದ ಆಂಶಿಕ ಭಾಗ ಅಥವಾ ಪೂರ್ಣ ಭಾಗದ ಪರಿವರ್ತನೆ ತರುವ ಸಂಘಟಿತ ಪ್ರಯತ್ನವನ್ನು ಸಾಮಾಜಿಕ ಚಳುವಳಿ ” ಎಂದು ಅರ್ಥೈಸಿದ್ದಾರೆ .

10. ಯಾವುದಾದರೂ ಎರಡು ಸಾಮಾಜಿಕ ಚಳುವಳಿಗಳನ್ನು ಹೆಸರಿಸಿ .

ಭಾರತದಲ್ಲಿ ನಡೆದ ಸಾಮಾಜಿಕ ಚಳುವಳಿಗಳು ಹಲವಾರು ; ಅವುಗಳಲ್ಲಿ ಪ್ರಮುಖವಾದುದು

1 ) ಭಾರತದ ಸ್ವಾತಂತ್ರ್ಯ ಹೋರಾಟ

2 ) ರೈತರ ಚಳುವಳಿಗಳು

3 ) ಬೆಲೆ ಏರಿಕೆ ವಿರುದ್ಧ ಚಳುವಳಿ ಇತ್ಯಾದಿಗಳು

11. ಮಲಪ್ರಭ ರೈತರ ಪ್ರತಿಭಟನೆಗೆ ಯಾವುದಾದರೂ ಎರಡು ಕಾರಣಗಳನ್ನು ಬರೆಯಿರಿ .

ಮಲಪ್ರಭ ರೈತರ ಪ್ರತಿಭಟನೆಗೆ ಹಲವಾರು ಕಾರಣ ಗಳಿವೆ . ಅವುಗಳಲ್ಲಿ ಪ್ರಮುಖವಾದವುಗಳು :

1 ) ಸ್ಥಿರ ಬೆಲೆಯ ಪ್ರಶ್ನೆ ( The Issue of Price Stability ) : ರೈತರು ಹೆಚ್ಚಿನ ಆದಾಯ ತರುವ ವರಲಕ್ಷ್ಮಿ ಹತ್ತಿ ಮತ್ತು ಹೈಬ್ರಿಡ್ ಜೋಳವನ್ನು ಬೆಳೆದರು . ಹೊಸ ಕೃಷಿ ತಂತ್ರಜ್ಞಾನದ ಕೊರತೆ ಮತ್ತು ಬೀಜಗಳ ಗುಣಮಟ್ಟ ಕಳಪೆಯಾಗಿದ್ದರೂ ತೊಂದರೆ ತೆಗೆದುಕೊಂಡು ಬೆಳೆದ ಬೆಳೆಯ ಬೆಲೆ ಕುಸಿಯಿತು . ಕ್ವಿಂಟಾಲ್‌ಗೆ 1,000 / ರೂ.ಗಳಿಂದ 350 ರೂ.ಗಳಿಗೆ ಇದು ರೈತರ ಚಳುವಳಿಗೆ ಕಾರಣವಾಯಿತು .

2 ) ಲೆವಿಯ ಪ್ರಶ್ನೆ ( The Levy Issue ) : ನೀರಾವರಿ ಸೌಕರ್ಯ ದೊರೆತಿದೆಯೋ ಇಲ್ಲವೋ ಗಮನಿಸದೆ ಎಲ್ಲಾ ರೈತರಿಗೂ ಎಕರೆಯೊಂದಕ್ಕೆ 500 ರೂಪಾಯಿಗಳಿಂದ 1500 ರೂ.ಗಳವರೆಗೆ ಲೆವಿಯನ್ನು ವಿಧಿಸಿದರು . ಸಮರ್ಪಕ ಕಾಲುವೆ ವ್ಯವಸ್ಥೆ ಇಲ್ಲದೆ ನೀರಿನ ಕಾರ ಹೆಚ್ಚಾಗಿ ಬೆಳೆ ನಿರುಪ ಯುಕ್ತವಾಯಿತು . ಇದು ಮಲಪ್ರಭ ರೈತರ ಪ್ರತಿಭಟನೆಗೆ ಕಾರಣವಾದ ಎರಡನೇ ಅಂಶವಾಯಿತು . ಇನ್ನೂ ಅನೇಕ ಅಂಶಗಳಿವೆ .

12. ಸ್ವಾತಂತ್ರ್ಯ ಪೂರ್ವದಲ್ಲಿ ದಲಿತ ಚಳುವಳಿಯ ಬೆಳವಣಿಗೆಯ ಮೂರು ಹಂತಗಳನ್ನು ತಿಳಿಸಿ .

ಸ್ವಾತಂತ್ರ್ಯ ಪೂರ್ವ ದಲಿತ ಚಳುವಳಿಯನ್ನು ಮೂರು ಹಂತಗಳಲ್ಲಿ ಅಥವಾ ಮೂರು ವಿಭಾಗಗಳಾಗಿ ವಿಂಗಡಿಸ ಬಹುದು . ಅವುಗಳೆಂದರೆ :

1 ) ಬಸವೇಶ್ವರ ಮತ್ತು ದಲಿತ ಚಳುವಳಿ ( Basaveshvara and the Dabit Movement ) : ಬಸವಣ್ಣನವರು ‘ ಅನುಭವ ಮಂಟಪ ‘ ವನ್ನು ಸ್ಥಾಪಿಸಿ , ವಿಚಾರ ಕ್ರಾಂತಿಗೆ ನಾಂದಿ ಹಾಡಿದರು . ಅಂತರ್ ಜಾತಿ ವಿವಾಹ ಮಾಡಿಸಿದ್ದುದು ಈ ದೇಶ ಕಂಡ ಒಂದು ದೊಡ್ಡ ಸಾಮಾಜಿಕ ಕ್ರಾಂತಿ ಎನ್ನಬಹುದು .

2 ) ಹಳೇ ಮೈಸೂರು ಪ್ರಾಂತ್ಯದ ದಲಿತ ಚಳುವಳಿ ( Dalit Movement in the Old Mysore Region ) : ದಲಿತ ಚಳುವಳಿ ಸ್ವತಂತ್ರವಾಗಿ ಹೊರ ಹೊಮ್ಮದೇ ಹೋದರೂ , ಮೈಸೂರು ಮಹಾರಾಜರ ಅನುಕಂಪ ಮತ್ತು ಹಿಂದುಳಿದ ವರ್ಗಗಳ ಚಳುವಳಿಯ ಪ್ರೇರಣೆ ಇದಕ್ಕಿತ್ತೆಂದು ಹೇಳಬಹುದು .

3 ) ಮುಂಬಯಿ ಕರ್ನಾಟಕದಲ್ಲಿ ದಲಿತ ಚಳುವಳಿ ( Dalit Movement in the Mumbai Karnataka ) : ಅಂಬೇಡ್ಕರ್‌ರ ವಿಚಾರಧಾರೆಯನ್ನು ಅನುಮೋದಿಸಿ , ಆ ಮೂಲಕ ದಲಿತರಲ್ಲಿ ಜಾಗೃತಿ ಮತ್ತು ಐಕ್ಯತೆ ಮೂಡಿಸಲು ಪ್ರಾರಂಭಿಸಿತು .

13. ಭಾರತದ ಯಾವುದಾದರೂ ಎರಡು ಮಹಿಳಾ ಸಂಘಟನೆಗಳನ್ನು ಬರೆಯಿರಿ .

ಸಮಾಜ ಸುಧಾರಣಾ ಸಂಘಟನೆಗಳಾಗಿದ್ದ ಬ್ರಹ್ಮಸಮಾಜ , ಆರ್ಯ ಸಮಾಜದ ಪ್ರಯತ್ನದಿಂದ ಮಹಿಳಾ ಸಂಘಟನೆಗಳು ರೂಪುಗೊಂಡವು . ಇದರಿಂದ ಸ್ತ್ರೀಯರ ಸಾಮಾಜೀಕರಣ ಮತ್ತು ಶಿಕ್ಷಣಕ್ಕೆ ಸೂಕ್ತ ವಾತಾವರಣ ದೊರೆಯಿತು .

1900 ರ ಅವಧಿಯ ಆರಂಭದಲ್ಲಿ ಸ್ತ್ರೀಯರ ಸಂಘಟನೆಗಳು ಭಾಷೆ , ಧರ್ಮ , ಸೇವೆಗಳು ಆಧಾರವಾಗಿ ಸ್ಥಾಪನೆಗೊಂಡವು . ಅನೇಕ ಸ್ತ್ರೀ ಸಂಘಟನೆಗಳು ಭಾರತದ ನಗರ ಕೇಂದ್ರಗಳಲ್ಲಿ ಸ್ಥಾಪನೆಗೊಂಡವು . ಸುಬ್ಬಲಕ್ಷ್ಮಿ ಅಮ್ಮಾಳ್‌ರವರಿಂದ ಮದ್ರಾಸಿನಲ್ಲಿ ಬ್ರಾಹ್ಮಣ ಮಹಿಳಾ ನಿಲಯ ಸ್ಥಾಪನೆಯಾಯಿತು . ಮೈಸೂರಿನಲ್ಲಿ ಮಹಿಳಾ ಸೇವಾ ಸಮಾಜ , ಪೂನಾದಲ್ಲಿ ಭಗಿನೀ ಸಮಾಜ , ಬರೋಡದಲ್ಲಿ ಚಾಮನ್ ಭಾಯಿ ಪ್ರಸೂತಿ ಮತ್ತು ಶಿಶು ಅಭಿವೃದ್ಧಿ ಕೇಂದ್ರ ಇತ್ಯಾದಿ . 1924 ರಲ್ಲಿ ಅಖಿಲ ಭಾರತದ ಸ್ತ್ರೀಯರ ಸಮ್ಮೇಳನ ನಡೆಯಿತು .

Social Movements Sociology Notes in Kannada Medium

ಐದು ಅಂಕಗಳ ಪ್ರಶ್ನೆಗಳು :

14. ಸಾಮಾಜಿಕ ಚಳುವಳಿಯ ಮೂಲಾಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ಸಾಮಾಜಿಕ ಚಳುವಳಿಯ ಮೂಲಾಂಶಗಳು ( Major Components of Social Movements ) : ಎ.ರಾವ್‌ರವರು ತಮ್ಮ ಸಂಪಾದಿತ ಕೃತಿ “ ಭಾರತದಲ್ಲಿ ಸಾಮಾಜಿಕ ಚಳುವಳಿಯಲ್ಲಿ ಸಿದ್ಧಾಂತ , ಸಾಮೂಹಿಕ ಕ್ರೋಢೀಕರಣ ಸಂಘಟನೆ ಮತ್ತು ನಾಯಕತ್ವಗಳು ಸಾಮಾಜಿಕ ಚಳುವಳಿಯ ಮೂಲಾಂಶಗಳೆಂದು ಗುರ್ತಿಸುತ್ತಾರೆ

1 ) ಸಿದ್ಧಾಂತ ( Ideology ) ಸಿದ್ಧಾಂತವು ಚಳುವಳಿಯ ಕ್ರಿಯಾ ಚೌಕಟ್ಟು ಮತ್ತು ಸಾಮೂಹಿಕ ಕ್ರೋಢೀಕರಣಕ್ಕೆ ಸಹಾಯಕವಾಗಿ ಸಂಘಟನೆಯನ್ನು ವೈಚಾರಿಕ ಹಿನ್ನೆಲೆಯಲ್ಲಿ ಸಾಮೂಹಿಕ ಸಂಘಟನೆಗೆ ಬದ್ಧತೆಯನ್ನು ನೀಡುತ್ತದೆ.

2 ) ಸಾಮೂಹಿಕ ಕ್ರೋಢೀಕರಣ ( Collective Mobilization ) ಸಾಮೂಹಿಕ ಕ್ರೋಢೀಕರಣವು ಸಾಮಾಜಿಕ ಚಳುವಳಿಯ ಕೇಂದ್ರಬಿಂದು . ಚಳುವಳಿಯ ಸ್ವರೂಪ ಮತ್ತು ದಿಕ್ಕನ್ನು ಸಾಮೂಹಿಕವಾಗಿ ಕೋಢೀಕರಣವು ನಿರ್ಧರಿಸುತ್ತದೆ . ಸಾಮೂಹಿಕ ಕ್ರೋಢೀಕರಣವು ತೀವ್ರ ಸ್ವರೂಪ ( Radical ) , ಅಸಾಂಸ್ಥಿಕ ಮಾರ್ಗ , ಸ್ವಯಂಪ್ರೇರಿತ ಅಥವಾ ಅಹಿಂಸಾತ್ಮಕ , ಸಾಂಸ್ಥಿಕ ಮತ್ತು ಸೀಮಿತವಾಗಿಯೂ ಇರಬಹುದು . ಸಾಮಾಜಿಕ ಚಳುವಳಿಯು ಕೆಲವೊಮ್ಮೆ ಹಿಂಸಾ ಮಾರ್ಗದಿಂದ ಅಹಿಂಸಾಮಾರ್ಗಕ್ಕೆ ರೂಪಾಂತರ ವಾಗಬಹುದು .

3 ) ನಾಯಕತ್ವ ಮತ್ತು ಸಂಘಟನೆ ( Leadership and Organization ) ನಾಯಕತ್ವ ಮತ್ತು ಸಂಘಟನೆ ಸಾಮೂಹಿಕ ಕ್ರೋಢೀಕರಣಕ್ಕೆ ಪೂರಕ ಸಂಗತಿಯಾಗಿದೆ . ನಾಯಕನು ಆಕರ್ಷಕ ವ್ಯಕ್ತಿತ್ವ ( Charismatic ) ದಿಂದ ಅಥವಾ ಚುನಾಯಿತ ನಾಯಕನಾಗಿರಬಹುದು . ಸಾಮಾಜಿಕ ಚಳುವಳಿಯು ಸಮಾಜದಲ್ಲಿ ಪರಿವರ್ತನೆ ತರುವ ಉದ್ದೇಶವನ್ನು ಹೊಂದಿರುತ್ತದೆ . ಇದು ಜನರ ಸಾಮೂಹಿಕ ವರ್ತನೆಯನ್ನು ಒಳಗೊಂಡಿರುತ್ತದೆ . ಈ ಚಳುವಳಿಗೆ ಸಂಘಟನಾತ್ಮಕ ಪ್ರಯತ್ನದ ಅವಶ್ಯಕತೆ ಇರುತ್ತದೆ . ಜನರಲ್ಲಿ ಬದಲಾವಣೆಯ ಬಗ್ಗೆ ಜಾಗೃತಿ ಇರಬೇಕು . ಚಳುವಳಿಯ ತತ್ವಾದರ್ಶ , ವಿಧಾನ ಮತ್ತು ಪರಿಣಾಮಗಳ ಸ್ವರೂಪ ಈ ಅಂಶಗಳು ಕಾರಣವಾಗುತ್ತವೆ .

15 , ನವೀನ ಸಾಮಾಜಿಕ ಚಳುವಳಿಯ ಚಳುವಳಿಯ ಮೂಲಾಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ .

ನವೀನ ಸಾಮಾಜಿಕ ಚಳುವಳಿಯ ಮೂಲಾಂಶಗಳು ( New Components of Social Movements ) ಸಾಮಾಜಿಕ ಚಳುವಳಿಗಳ ಹಿನ್ನೆಲೆಯಲ್ಲಿ ನಾಯಕತ್ವ , ಸಂಘಟನೆ , ಸಿದ್ಧಾಂತ , ಸಾಮೂಹಿಕ ಕ್ರೋಢೀಕರಣಗಳು ಹೊಸ ಆಯಾಮವನ್ನು ಪಡೆದುಕೊಂಡಿದೆ . ಪ್ರಸ್ತುತ ಚಲನಾತ್ಮಕ ಸಮಾಜದಲ್ಲಿ ಸಿದ್ಧಾಂತದ ಗ್ರಹಿಕೆ , ಸಂಘಟನ ವ್ಯವಸ್ಥೆ , ಕ್ರೋಢೀಕರಣ ಪ್ರಕ್ರಿಯೆ , ನಾಯಕತ್ವ ಮತ್ತು ಸಾಮೂಹಿಕ ಕ್ರಿಯೆಯ ತಂತ್ರ ಚಳುವಳಿಯಲ್ಲಿ ಮಹತ್ವ ಪಡೆದ ವಿಚಾರಗಳು ಮತ್ತು ಈ ಎಲ್ಲಾ ಸಂಗತಿಗಳು ಸಮಾಜಕ್ಕೆ ಹೇಗೆ ಸಂಬಂಧಿಸಿವೆ ಎಂಬುದು ಚಳುವಳಿಯ ಹೊಸ ಮಾನದಂಡಗಳಾಗಿವೆ . ಹೊಸ ಸಾಮಾಜಿಕ ಚಳುವಳಿಗಳ ಉಗಮದಲ್ಲಿ ಮೌಲ್ಯಗಳು , ಸಂಸ್ಕೃತಿ , ವಿಷಯ ನಿಷ್ಠತೆ Subjecticity ಆದರ್ಶಗಳು , ನೈತಿಕತೆ , ಅನನ್ಯತೆ ಮತ್ತು ಸಬಲೀಕರಣ ಇತ್ಯಾದಿಗಳು ಮಾನ್ಯತೆ ಪಡೆದಿವೆ . ಬಾರ್ಟಾಕ್ಸ್ Bortax ರವರ ಪ್ರಕಾರ ವಿಷಯ ನಿಷ್ಟತೆ ಮತ್ತು ಆದರ್ಶವಾದ Jarnalism ಸಾಮಾಜಿಕ ಚಳುವಳಿಯ ಪ್ರಮುಖಾಂಶ ಗಳಾಗಿವೆ . ಈ ಪ್ರಮುಖಾಂಶಗಳು ಸಾಮೂಹಿಕ ಕ್ರೋಢೀಕರಣ ಮತ್ತು ಹೊಸ ಅನನ್ಯತೆಯನ್ನು ರೂಪಿಸುತ್ತವೆ . New Identity formation .

ಪಿ.ಎನ್.ಮುಖರ್ಜಿಯವರು ಸಾಮಾಜಿಕ ಚಳುವಳಿ ಗಳನ್ನು ಸಾಮೂಹಿಕ ಕ್ರೋಢೀಕರಣವು ಉಂಟುಮಾಡುವ ಪರಿವರ್ತನೆಯ ಸ್ವಭಾವ ಮತ್ತು ಪರಿವರ್ತನೆಯನ್ನು ಆಧರಿಸಿ ಕ್ರಾಂತಿಕಾರಿ ಚಳುವಳಿ ಮತ್ತು ಭಾಗಶಃ ಚಳುವಳಿ ( Quasi Movement ) ಎಂದು ವರ್ಗೀಕರಿಸಿದ್ದಾರೆ . ಟಿ.ಕೆ.ಊಮನ್‌ರವರು ಸಾಮೂಹಿಕ ಕ್ರೋಢೀಕರಣ ಮತ್ತು ಸಾಂಸ್ಥಿಕರಣವು ಸಾಮಾಜಿಕ ಚಳುವಳಿಗೆ ಹೊಸ ಮಾರ್ಗಗಳನ್ನು ನೀಡುತ್ತದೆ ಎಂದಿದ್ದಾರೆ . ಇವರು ಕೇರಳದ ಕೃಷಿ ಕಾರ್ಮಿಕರ ಚಳುವಳಿಯ ಅಧ್ಯಯನದಲ್ಲಿ , ಚಳುವಳಿಯ ಉಗಮವು ಆಕರ್ಷಕ ನಾಯಕತ್ವ , ನೌಕರಶಾಹಿಯ ಬೆಳವಣಿಗೆ , ಗಣ್ಯರ ಉಗಮ , ಅವಶ್ಯಕತೆಗಿಂತ ಹೆಚ್ಚಾಗಿ ಜನಸಾಮಾನ್ಯರ ಕ್ರೋಢೀಕರಣವು ಸಾಮಾಜಿಕ ಚಳುವಳಿಯನ್ನು ಸಾಂಸ್ಥಿಕರಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ .

16. ಕ್ಯಾಥೋಲಿನ್ ಗಾಫ್ ಪ್ರಕಾರ ರೈತರ ಚಳುವಳಿಗೆ ಕಾರಣವಾದ ಅಂಶಗಳನ್ನು ವಿವರಿಸಿ .

ಕ್ಯಾಥೋಲಿನ್ ಗಾಫ್ ಪ್ರಕಾರ ರೈತರ ಚಳುವಳಿಗೆ ಕಾರಣವಾದ ಅಂಶಗಳು ಹೀಗಿವೆ . ಭಾರತದಲ್ಲಿ ವಿಭಿನ್ನ ರೈತ ಹೋರಾಟಗಳಿಗೆ ಕಾರಣವಾದ ರೈತ ಸಮುದಾಯವನ್ನು ಪ್ರಭಾವಿತಗೊಳಿಸಿದ ಸಂಗತಿಗಳನ್ನು ಕ್ಯಾಥೋಲಿನ್ ಗಾಫ್‌ರವರು ಈ ರೀತಿ ಪಟ್ಟಿ ಮಾಡಿದ್ದಾರೆ . ಅವುಗಳು

1 ) ಅಧಿಕ ಕಂದಾಯ ಸಂಗ್ರಹಣೆ

2 ) ವಿಭಿನ್ನ ಪ್ರಕಾರದ ಮಧ್ಯವರ್ತಿಗಳು ರೈತರಿಂದ ಕೃಷಿಯಲ್ಲಿ ಹೊಂದಿದ್ದ ಅಧಿಕ ಉತ್ಪಾದನೆಯನ್ನು ಕಸಿದುಕೊಂಡಿದ್ದು .

3 ) ಭೂಮಿಯನ್ನು ಬಂಡವಾಳ ಸ್ವರೂಪದ ಖಾಸಗಿ ಆಸ್ತಿಯನ್ನಾಗಿ ಪರಿಗಣನೆ .

4 ) ಬ್ರಿಟಿಷರ ಕಾಲದಿಂದ ಬುಡಕಟ್ಟು ಜನರ ಜಮೀನಿನ ಅತಿಕ್ರಮಣ .

5 ) ಕೆಲವೊಂದು ಕೈಗಾರಿಕೆಗಳಿಗೆ ನೀಡಿದ ಬ್ರಿಟಿಷರ ಬೆಂಬಲ ಹಾಗೂ ಅವರ ಆಮದು ರಫ್ತು ನೀತಿಯಿಂದಾಗಿ ಅನೇಕ ಕುಶಲಕರ್ಮಿಗಳು ಜೀವನಾಧಾರವಾಗಿದ್ದ ಉದ್ಯೋಗವನ್ನು ಕಳೆದುಕೊಳ್ಳುವಂತಾದದ್ದು .

6 ) ಸಾರ್ವಜನಿಕ ಸೇವೆ , ವಸಾಹತುಶಾಹಿ , ಯುದ್ಧಕ್ಕೆ ಸಾಲ , ಸಂಬಳ , ಲಾಭದ ಹಿಂತಿರುಗಿಸುವಿಕೆ , ಇತ್ಯಾದಿ ನೆಪದಲ್ಲಿ ಬ್ರಿಟಿಷರು ಭಾರತವನ್ನು ಕೊಳ್ಳೆ ಹೊಡೆದು ಬಂಡವಾಳವನ್ನು ಬ್ರಿಟನ್ನಿಗೆ ವರ್ಗಾಯಿಸಿದರು .

7 ) ಕೈಗಾರಿಕೆಗೆ ಬೇಕಾದ ಕಚ್ಚಾ ವಸ್ತುಗಳು ಮತ್ತು ರಫ್ತಗೆ ಅವಶ್ಯಕವಾದ ಆಹಾರ ಪದಾರ್ಥಗಳನ್ನು ಬೆಳೆಯುವಂತೆ ಕೃಷಿಕರನ್ನು ಪ್ರೋತ್ಸಾಹಿಸಿ ಮತ್ತು ಕೆಲವೊಮ್ಮೆ ಒತ್ತಾಯಿಸಿ , ಬಲವಂತಪಡಿಸಲಾಯ್ತು . ಇದರಿಂದಾಗಿ ರೈತರಿಗೆ ಬೇಕಾದ ಅವಶ್ಯಕ ಆಹಾರ ಧಾನ್ಯಗಳನ್ನು ಬೆಳೆಯಲು ಭೂಪ್ರದೇಶ ಕಡಿಮೆಯಾಯಿತು .

8 ) ಗೈರು ಹಾಜರಿ ಭೂಮಾಲೀಕತ್ವದ ಮತ್ತು ಖಾಸಗಿ ಲಾಭಕ್ಕಾಗಿ ಕೃಷಿಯ ಅಭಿವೃದ್ಧಿಯಿಂದಾಗಿ ಗೇಣಿದಾರ ಹಾಗೂ ಕೃಷಿ ಕಾರ್ಮಿಕ ಹೊಸ ಬಗೆಯ ಶೋಷಣೆಗಳಿಗೆ ಒಳಗಾಗಬೇಕಾಯಿತು .

9 ) 1921 ರ ನಂತರ ಜನಸಂಖ್ಯೆ ತ್ವರಿತಗತಿಯಿಂದ ಬೆಳೆಯಿತು . ಇದರಿಂದಾಗಿ ಗ್ರಾಮದ ರೈತರ ಮೇಲಿನ ಹೊರೆ ಅಧಿಕವಾಯಿತು .

10 ) .ಬ್ರಿಟಿಷರಿಂದ ಪರಿಚಿತವಾದ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ರಾಷ್ಟ್ರೀಯತೆಯನ್ನು ಬಲಗೊಳಿಸಿದ್ದಷ್ಟೇ ಅಲ್ಲದೆ ಗ್ರಾಮ ಮತ್ತು ನಗರದ ಕಾರ್ಮಿಕರ ನಡುವೆ ಏಕತೆಗೂ ಸಹಕಾರಿಯಾಯಿತು .

11 ) ಬ್ರಿಟಿಷ್ ಆಡಳಿತಾವಧಿಯ ಪ್ರಮುಖ ಲಕ್ಷಣವೆಂದರೆ ಕ್ಷಾಮ , ಜನಸಂಖ್ಯಾ ಬೆಳವಣಿಗೆ , ಆಹಾರದ ಕೊರತೆ , ಮತ್ತು ಕ್ಷಾಮದಿಂದಾಗಿ ರೈತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು . ಸಂಪತ್ತಿನ ಅಸಮಾನ ಹಂಚಿಕೆಗೆ ಕೂಡಾ ಅವಕಾಶವಾಯಿತು .

12 ) ಕೃಷಿ ಕ್ರಾಂತಿ ಕೂಡಾ ಕೃಷಿ ಆದಾಯದ ಅಸಮತೋಲನ ಹಂಚಿಕೆಗೆ ಕಾರಣವಾಗಿದೆ . ಆಧುನಿಕ ಕೃಷಿ ತಂತ್ರಜ್ಞಾನ , ಉತ್ತಮ ತಳಿಯ ಬೀಜಗಳು , ಗೊಬ್ಬರ ಇತ್ಯಾದಿಗಳ ಪ್ರಯೋಜನ ಕೇವಲ ಶ್ರೀಮಂತ ರೈತರಿಗಷ್ಟೇ ದೊರಕಿ ಬಡರೈತರ ಪರಿಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಲಿಲ್ಲ . ಈ ಮೇಲಿನ ಅಂಶಗಳೆಲ್ಲ ರೈತರ ಚಳುವಳಿಗೆ ಕಾರಣವಾಯಿತು .

17. ಹಿಂದುಳಿದ ವರ್ಗಗಳ ಹೋರಾಟದ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ .

ಹಿಂದುಳಿದ ವರ್ಗಗಳ ಹೋರಾಟ : ಹಿಂದುಳಿದ ವರ್ಗಗಳ ಹೋರಾಟವೆಂದರೆ ಜಾತಿಯ ಅಸಮಾನತೆ , ಸಾಮಾಜಿಕ , ಆರ್ಥಿಕ ಹಾಗೂ ಧಾರ್ಮಿಕ ಭೇದ ಭಾವ ಮತ್ತು ಅವಕಾಶ ವಂಚನೆಯ ವಿರುದ್ಧ ಬ್ರಾಹ್ಮಣೇತರ ಜಾತಿಗಳು ನಡೆಸಿದ ಚಳುವಳಿಗಳು . ಈ ಹೋರಾಟವು ಜಾತಿಯ ಅಸಮಾನತೆಯನ್ನು ತೊಡೆದು ಹಾಕಿ , ಬಡವರ ಆರ್ಥಿಕ ಪ್ರಗತಿಯನ್ನು ಪ್ರೋತ್ಸಾಹಿಸಿ , ಸಮಾನ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳನ್ನು ಪಡೆಯುವ ಮೂಲ ಉದ್ದೇಶವನ್ನು ಹೊಂದಿತ್ತು . ಹಿಂದುಳಿದ ವರ್ಗಗಳ ಚಳುವಳಿಯು ಕೆಳಜಾತಿಯ ಸಾಮಾಜಿಕ ಪ್ರಜ್ಞೆ ಮತ್ತು ಸಾಮಾಜಿಕ ಚಲನೆಯ ಮೂಲಕ ಅವಕಾಶಗಳನ್ನು ಗಳಿಸುವ ಮಹತ್ವವಾಗಿತ್ತು .

ಜ್ಯೋತಿರಾವ್ ಪುಲೆಯವರು ಮೇಲ್ದಾತಿಯ ದೌರ್ಜನ್ಯದ ವಿರುದ್ಧ ಮೊದಲು ಧ್ವನಿ ಎತ್ತಿದರು . ಇವರು ಹೋರಾಟ ನಡೆಸಲು 1873 ರಲ್ಲಿ ‘ ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು . ಶೂದ್ರರು ಮತ್ತು ಅಸ್ಪೃಶ್ಯರು ಗುಲಾಮಗಿರಿಯಿಂದ ಹೊರ ಬಂದು , ಮೇಲ್ಜಾತಿಯ ಹಿಡಿತದಿಂದ ಮುಕ್ತರನ್ನಾಗಿಸುವ ಉದ್ದೇಶವನ್ನು ಹೊಂದಿತ್ತು . ಹಿಂದುಳಿದ ವರ್ಗದವರು ಸಮಾಜದಲ್ಲಿ ಗೌರವ , ಮರ್ಯಾದೆ ಮತ್ತು ಸಮಾನತೆ ಪಡೆಯಬೇಕಾದರೆ ಶಿಕ್ಷಣ ಅವಶ್ಯಕವೆಂದು 1848 ರಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ಸ್ಥಾಪಿಸಿದರು .

ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಲು ಕೆಳವರ್ಗದವರು ಜಾಗೃತಗೊಳ್ಳಬೇಕೆಂದು ಸಾಹು ಮಹಾರಾಜರು ಶಾಲೆ ಮತ್ತು ವಸತಿ ನಿಲಯಗಳನ್ನು ಕೆಳವರ್ಗದವರಿಗಾಗಿಯೇ ಪ್ರಾರಂಭಿಸಿದರು . ಮಹಾರಾಜರು ಕೆಲವು ಸಂಘ – ಸಂಸ್ಥೆಗಳನ್ನು ಮತ್ತು ಸಂಘಟನೆಗಳನ್ನು ಮಾಡಿ ಹಿಂದುಳಿದ ವರ್ಗದವರ ಚಳುವಳಿಗೆ ಪ್ರೇರಣೆ ನೀಡಿದರು . ಸಾಹು 20 ನೇ ಶತಮಾನದ ಎರಡನೇ ದಶಕದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ಹಿಂದುಳಿದ ವರ್ಗಗಳ ಚಳುವಳಿಯು ವ್ಯವಸ್ಥಿತವಾಗಿ ರೂಪುಗೊಂಡಿತು . ಮದ್ರಾಸಿನಲ್ಲಿ ಹಿಂದುಳಿದ ವರ್ಗಗಳ ನಾಯಕರಾದ ಡಾ.ಟಿ.ಎಂ.ನಾಯರ್ , ಸರ್ ಪಿ.ಟಿ.ಚೆಟ್ಟಿಯಾರ್ ಮತ್ತು ಟಿ.ಇ.ಮೊದಲಿಯಾರ್ ಇವರೆಲ್ಲಾ ಸೇರಿ ‘ ದಕ್ಷಿಣ ಭಾರತದ ಜನರ ಸಂಘ ‘ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು .

ಹಿಂದುಳಿದ ವರ್ಗದವರ ಹಿತಾಸಕ್ತಿಗಾಗಿ ಇಂಗ್ಲೀಷಿನಲ್ಲಿ ಜಸ್ಟೀಸ್ ( Justice ) ತಮಿಳಿನಲ್ಲಿ ದಿ ದ್ರಾವಿಡಿಯನ್ ಮತ್ತು ತೆಲುಗಿನಲ್ಲಿ ಆಂಧ್ರ ಪ್ರಕಾಶಿಕ ಪತ್ರಿಕೆಗಳನ್ನು ಪ್ರಾರಂಭಿಸಿದರು . ಪೆರಿಯಾರ್ ಇ.ವಿ.ರಾಮಸ್ವಾಮಿ ನಾಯ್ಕರ್‌ರವರ ಪ್ರವೇಶದಿಂದ ಹಿಂದುಳಿದ ವರ್ಗಗಳ ಚಳುವಳಿಯಲ್ಲಿ ಸ್ವ ಗೌರವ ಸ್ವರೂಪ ಪಡೆಯಿತು . ದ್ರಾವಿಡರ ಸ್ವಗೌರವ ಈ ಚಳುವಳಿಯ ಮೂಲಾಂಶವಾಗಿತ್ತು ಮತ್ತು ಹಿಂದುಳಿದ ವರ್ಗಗಳಿಂದ ಹೆಚ್ಚಿನ ಬೆಂಬಲ ವ್ಯಕ್ತವಾಯಿತು . ಕಾಲಾನಂತರದಲ್ಲಿ ಈ ಹೋರಾಟವು ಹೆಚ್ಚು ತೀವ್ರ ಹಾಗೂ ಹಿಂಸಾತ್ಮಕ ಸ್ವರೂಪ ಪಡೆಯಿತು . ಸ್ವಾತಂತ್ರ್ಯ ಮತ್ತು ಸ್ವಗೌರವಕ್ಕಾಗಿ ತೀವ್ರಗಾಮಿ ಹೋರಾಟದ ಮಾರ್ಗ ಹಿಡಿದರು . ಆಗ ಈ ಚಳುವಳಿಯು ಕೆಳವರ್ಗ , ಮಧ್ಯಮವರ್ಗ ಮತ್ತು ಅಸ್ಪೃಶ್ಯ ಜಾತಿಗಳ ಬೆಂಬಲ ಪಡೆಯಿತು .

ಮಿಲ್ಲರ್ ಆಯೋಗದ ಮನವಿಯಿಂದ ಹಿಂದುಳಿದ ವರ್ಗಗಳ ಶಿಕ್ಷಣ , ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಾಯಿತು . ಶ್ರೀ ನಾರಾಯಣ ಗುರುರವರು ಸಾಮೂಹಿಕವಾಗಿ ಹಿಂದುಳಿದ ವರ್ಗಗಳನ್ನು ಸಂಘಟನಾತ್ಮಕವಾಗಿ ಸಶಕ್ತಗೊಳಿಸುವ ಸಲುವಾಗಿ ಅನೇಕ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು . ಹಿಂದುಳಿದ ವರ್ಗಗಳ ಜನರಿಗೆ ಆತ್ಮವಿಶ್ವಾಸ , ಸಾಮಾಜಿಕ ಜಾಗೃತಿ ಮತ್ತು ಸ್ವಚ್ಛತೆಯ ಶುದ್ಧ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಬೋಧಿಸುತ್ತಿದ್ದರು . ಕೇರಳದಲ್ಲಿ ಜಾತಿರಹಿತ ಸಮಾಜ ನಿರ್ಮಿಸಲು ಸಾಮಾಜಿಕ ಕ್ರಾಂತಿಯನ್ನು ಕೈಗೊಂಡರು . ಈ ರೀತಿ ಹಿಂದುಳಿದ ವರ್ಗದವರು ಹೋರಾಟ ಮಾಡಿದರು .

18. ದಲಿತ ಚಳುವಳಿಯ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ .

ದಲಿತ ಚಳುವಳಿಯು ಪ್ರಜ್ಞಾಪೂರ್ವಕ ಸಾಮಾಜಿಕ ಚಳುವಳಿಯಾಗಿದ್ದು , ಭಾರತದ ಸಾಮಾಜಿಕ , ಆರ್ಥಿಕ , ಧಾರ್ಮಿಕ ಮತ್ತು ರಾಜಕೀಯ ಅಸಮಾನತೆ ಮತ್ತು ವ್ಯವಸ್ಥೆಗಳ ವಿರುದ್ಧ ದಲಿತರನ್ನು ಸಂಘಟಿಸುತ್ತದೆ . ಶತಶತಮಾನಗಳ ದಾರಿದ್ರ , ದಬ್ಬಾಳಿಕೆ ಮತ್ತು ಶೋಷಣೆ ಮತ್ತು ದಲಿತರು ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗಿದ್ದಾರೆ . ಆದ್ದರಿಂದ ದಲಿತರು ತಮ್ಮ ಸಮಸ್ಯೆಗಳಿಂದ ಮುಕ್ತರಾಗಲು ಸಂಘಟಿತಗೊಂಡು ಹೋರಾಟ ನಡೆಸಲು ಪ್ರಯತ್ನಿಸಿದರು .

ದಲಿತ ಚಳುವಳಿಯ ಮೂಲ ಆಶಯ ಸ್ವಾಭಿಮಾನ ಮತ್ತು ಸ್ವಾವಲಂಬನೆ ಮತ್ತು ಬದುಕಿನ ಅನ್ವೇಷಣೆಯಾಗಿತ್ತು . ಶೋಷಣೆಗೆ ಒಳಗಾಗಿರುವ ದಲಿತರಿಗೆ ದಲಿತತ್ವವನ್ನು ಹುಟ್ಟು ಹಾಕಲು ದಲಿತ ಚಳುವಳಿ ಸಹಾಯಮಾಡಿತು . ಕರ್ನಾಟಕದಲ್ಲಿ ಈ ದಲಿತ ಚಳುವಳಿಯನ್ನು ಎರಡು ಭಾಗವಾಗಿ ಎಂದರೆ ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಚಳುವಳಿ ಎಂದು ವಿಂಗಡಿಸಬಹದು . ಸ್ವಾತಂತ್ರ್ಯಪೂರ್ವ ದಲಿತ ಚಳುವಳಿಯನ್ನು ಮತ್ತೆ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ . ಅವುಗಳು

1. ಬಸವೇಶ್ವರ ಮತ್ತು ದಲಿತ ಚಳುವಳಿ

2. ಹಳೆಯ ಮೈಸೂರು ಪ್ರಾಂತ್ಯದ ದಲಿತ ಚಳುವಳಿ

3. ಮುಂಬಯಿ ಕರ್ನಾಟಕದ ದಲಿತ ಚಳುವಳಿ

1. ಬಸವೇಶ್ವರ ಮತ್ತು ದಲಿತ ಚಳುವಳಿ ( Basaveshwara and the Dalit Movement ) : ಬಸವಣ್ಣನವರ ವಚನ ಚಳುವಳಿ ಇಡೀ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಪ್ರೇರಣೆಯಾಗಿದೆ . ತಮ್ಮ ಚಳುವಳಿಯಲ್ಲಿ ಬಸವಣ್ಣನವರು ಹೆಚ್ಚಾಗಿ ಕೆಳವರ್ಗದ ಜನರನ್ನೇ ತೊಡಗಿಸಿದರು . ಇವರು ನಡೆಸಿದ ‘ ಜಾತಿ ವಿನಾಶ ‘ ಚಳುವಳಿಯಲ್ಲಿ ಎಲ್ಲರೂ ಹಿಂದುಳಿದ ಜನಾಂಗದವರು ಮತ್ತು ಕೆಳವರ್ಗದ ಜನರು ಮತ್ತು ಮಹಿಳೆಯರು ಭಾಗಿಯಾಗಿದ್ದರು .

2 ) ಹಳೆಯ ಮೈಸೂರು ಪ್ರಾಂತ್ಯದಲ್ಲಿ ದಲಿತರಿಗೆ , ಕೆಳವರ್ಗದವರಿಗೆ ಮತ್ತು ಅಸ್ಪೃಶ್ಯರಿಗಾಗಿ ಮೈಸೂರಿನ ಮಹಾರಾಜರು ಸಾರ್ವಜನಿಕ ಶಾಲೆ ಮತ್ತು ವಸತಿ ನಿಲಯದಲ್ಲಿ ಪ್ರವೇಶಾವಕಾಶವನ್ನು ಮಾಡಿಕೊಟ್ಟರು . ಇದರಿಂದ ಹಿಂದುಳಿದ ವರ್ಗಗಳ ಚಳುವಳಿಯಲ್ಲಿ ಅವರಿಗೆ ಪ್ರೇರಣೆ ದೊರಕಿತು .

3 ) ಮುಂಬೈ ಕರ್ನಾಟಕದಲ್ಲೂ ಸಹ ಅಸ ಸಾಮಾಜಿಕ , ಆರ್ಥಿಕ , ಶೈಕ್ಷಣಿಕ ಮತ್ತು ರಾಜಕೀಯ ಸ್ಥಾನಮಾನಗಳು ಬಹಳ ಹಿಂದುಳಿದಿತ್ತು . ಆಗ ಅಂಬೇಡ್ಕರ್‌ರವರು ಅವರಲ್ಲಿ ಜಾಗೃತಿ ಮೂಡಿಸಲು ಹೋರಾಟ ನಡೆಸಿದರು . ಇದರಿಂದ ದಲಿತರಲ್ಲಿ ಜಾಗೃತಿ ಮತ್ತು ಐಕ್ಯತೆ ಮೂಡಲು ಪ್ರಾರಂಭವಾಯಿತು . ಸ್ವಾತಂತ್ರ್ಯ ನಂತರದ ದಲಿತ ಚಳುವಳಿಯನ್ನು ಕರ್ನಾಟಕದಲ್ಲಿ ಎರಡು ಮಹತ್ವದ ದಲಿತ ಚಳುವಳಿಗಳ ಮೂಲಕ ನೋಡಬಹುದು .

1 ) ಬಿ.ಶಾಮಸುಂದರ್‌ರವರು ಸಂಘಟಿಸಿದ ಭೀಮಸೇನಾ ಸಂಘಟನೆ

2 ) ದಲಿತ ಸಂಘರ್ಷ ಸಮಿತಿ DSS .

ಇಷ್ಟೇ ಅಲ್ಲದೆ ಬಸವಲಿಂಗಪ್ಪ ಬೂಸಾ ಪ್ರಕರಣ , ಅನೇಕ ದಲಿತ ಸಂಘರ್ಷ ಸಮಿತಿಗಳ ಮೂಲಕ ನಡೆಸಿದ ಚಳುವಳಿಗಳು .

ಈ ರೀತಿ ದಲಿತರು ತಮ್ಮ ಚಳುವಳಿಯಿಂದ ಭೂಮಿಯ ಹಕ್ಕು ಪಡೆಯುವಲ್ಲಿ ಸಫಲರಾಗಿದ್ದಾರೆ .

ಹತ್ತು ಅಂಕದ ಪ್ರಶ್ನೆಗಳು :

19. ಸಾಮಾಜಿಕ ಚಳುವಳಿಯ ಪ್ರಕಾರಗಳನ್ನು ವಿವರಿಸಿ .

ಸಾಮಾಜಿಕ ಚಳುವಳಿಯ ಪ್ರಕಾರಗಳು : ಸಾಮಾಜಿಕ ಚಳುವಳಿಯನ್ನು ಈ ಕೆಳಕಂಡಂತೆ ವರ್ಗೀಕರಿಸಬಹುದು . ಎಂ.ಎಸ್.ಎ.ರಾವ್‌ರವರು ಸಾಮಾಜಿಕ ಚಳುವಳಿ ಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಿದ್ದಾರೆ . ಅವುಗಳು

1 ) ಸಮಾಜ ಸುಧಾರಣಾ ಚಳುವಳಿಗಳು ( Reform Movements ) : ಈ ರೀತಿಯ ಚಳುವಳಿಗಳು ಸಮಾಜ ದಲ್ಲಿ ಭಾಗಶಃ ಪರಿವರ್ತನೆ ಅಥವಾ ಬದಲಾವಣೆಯನ್ನು ತರುತ್ತದೆ .

2 ) ಕ್ರಾಂತಿಕಾರಿ ಚಳುವಳಿಗಳು ( Revolutionary Movements ) : ಈ ಕ್ರಾಂತಿಕಾರಿ ಚಳುವಳಿಗಳು ಸಮಾಜದ ಒಟ್ಟು ಸಂಸ್ಕೃತಿಯಲ್ಲಿ ರಚನಾತ್ಮಕ ಪರಿವರ್ತನೆಯನ್ನು ಉಂಟು ಮಾಡುತ್ತದೆ ಮತ್ತು ಸಂಘರ್ಷ ಮತ್ತು ಹಿಂಸೆಯಿಂದ ಕೂಡಿರುತ್ತದೆ .

3 ) ರೂಪಾಂತರ ಚಳುವಳಿಗಳು ( Transformatic Movements ) : ಇವು ಅಲ್ಪಮಟ್ಟದ ಪರಿವರ್ತನೆಯನ್ನು ತರುವುದರ ಜೊತೆಗೆ ಅಧಿಕಾರ ಮತ್ತು ಸಂಪತ್ತಿನ ಹಂಚಿಕೆ , ಹಕ್ಕು ಮತ್ತು ಬಾದ್ಯತೆಗಳಲ್ಲಿ ಪರಿವರ್ತನೆ ತರುತ್ತದೆ . ಸುಧಾರಣಾ ಚಳುವಳಿಗಿಂತ ರೂಪಾಂತರ ಚಳುವಳಿಗಳು ಹೆಚ್ಚು ಸಂಘರ್ಷಾತ್ಮಕವಾಗಿರುತ್ತದೆ . ಘನಶ್ಯಾಂರವರು ಎಂಟು ಪ್ರಕಾರದ ಸಾಮಾಜಿಕ ಚಳುವಳಿಗಳನ್ನು ಭಾರತದಲ್ಲಿ ಗುರ್ತಿಸಿದ್ದಾರೆ . ಅವುಗಳು

1 ) ರೈತ ಚಳುವಳಿ

2 ) ಬುಡಕಟ್ಟು ಚಳುವಳಿ

3 ) ದಲಿತ ಚಳುವಳಿ

4 ) ಹಿಂದುಳಿದ ವರ್ಗಗಳ ಚಳುವಳಿ

5 ) ಮಹಿಳಾ ಚಳುವಳಿ

6 ) ವಿದ್ಯಾರ್ಥಿ ಚಳುವಳಿ

7 ) ಮಧ್ಯಮ ವರ್ಗದ ಚಳುವಳಿ

8 ) ಕೈಗಾರಿಕಾ ಕಾರ್ಮಿಕರ ಚಳುವಳಿ ಇತ್ಯಾದಿ ಇನ್ನೊಂದು ರೀತಿಯ ವರ್ಗೀಕರಣದ ಪ್ರಕಾರ ಭಾರತದ ಒಟ್ಟು ಚಳುವಳಿಗಳನ್ನು ಎರಡು ಪ್ರಕಾರವಾಗಿ ವಿಂಗಡಿಸಬಹುದು . ಅವು

1 ) ಹಳೆಯ ಸಾಮಾಜಿಕ ಚಳುವಳಿ ಮತ್ತು

2 ) ಹೊಸ ಸಾಮಾಜಿಕ ಚಳುವಳಿ

1 ) ಹಳೆಯ ಸಾಮಾಜಿಕ ಚಳುವಳಿಗಳು ( Old Social Movements ) : ಈ ರೀತಿಯ ಚಳುವಳಿಗಳಲ್ಲಿ ರೈತ ಬುಡಕಟ್ಟು ಮತ್ತು ಕೈಗಾರಿಕೆಯ ಕಾರ್ಮಿಕರಿಗೆ ಸಂಬಂಧಿಸಿದ ವಿಚಾರಗಳು ಪ್ರಮುಖವಾಗಿರುತ್ತವೆ . ಅನನ್ಯತೆ , ಪರಿಸರ ಸಾಮೂಹಿಕ ಕ್ರೋಢೀಕರಣದ ಜೊತೆಗೆ ಲಿಂಗ ಮತ್ತು ಸಾಮಾಜಿಕ ನ್ಯಾಯ ಮುಂತಾದವುಗಳು ಪ್ರಮುಖ ವಿಚಾರಗಳಾಗಿರುತ್ತವೆ .

2 ) ಹೊಸ ಸಾಮಾಜಿಕ ಚಳುವಳಿಗಳು : ಹೊಸ ಸಾಮಾಜಿಕ ಚಳುವಳಿಗಳು ಕೈಗಾರಿಕೋತ್ತರ ಮತ್ತು ಬಂಡವಾಳೋತ್ತರ ಸಮಾಜದ ಆಶಯಗಳನ್ನು ಬಿಂಬಿಸುತ್ತವೆ . ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ದೇಶೀಯ ಜನರ ಅನನ್ಯತೆಯನ್ನು ಬಿಂಬಿಸುವ ವಿಚಾರಗಳಾದ ಖಾದಿ , ಗುಡಿಕೈಗಾರಿಕೆಗಳು , ಸ್ವಸಹಾಯ , ವಿದೇಶೀ ವಸ್ತುಗಳ ಬಹಿಷ್ಕಾರ ಮುಂತಾದವುಗಳು . ಭೂದಾನ , ಗ್ರಾಮದಾನ ಮತ್ತು ಸರ್ವೋದಯ ಚಳುವಳಿಗಳು ಹೊಸ ಸಾಮಾಜಿಕ ಚಳುವಳಿಗೆ ಉತ್ತಮ ಉದಾಹರಣೆ . ಹೊಸ ಸಾಮಾಜಿಕ ಚಳುವಳಿಗಳು ತನ್ನತನವನ್ನು ಬಿಂಬಿಸುವುದರ ಜೊತೆಗೆ ತನ್ನ ಸಂಸ್ಕೃತಿಯನ್ನು ಸಂರಕ್ಷಿಸಲು ಭವಿಷ್ಯದ ಬಗ್ಗೆ ಚಿಂತಿಸುತ್ತವೆ .

ಹೊಸ ಸಾಮಾಜಿಕ ಚಳುವಳಿಯ ಎರಡು ಪ್ರಕಾರಗಳು :

1 ) ಒಳಗೊಳ್ಳುವ ಮತ್ತು

2 ) ಹೊರಗುಳಿಸುವ ಚಳುವಳಿಗಳು

1 ) ಒಳಗೊಳ್ಳುವ ಚಳುವಳಿಗಳು ( Inclusivist Movements ) : ಈ ರೀತಿಯ ಚಳುವಳಿಗಳು ಸಾರ್ವತ್ರಿಕವಾಗಿದ್ದು , ಅಹಿಂಸಾತ್ಮಕ ಮತ್ತು ಮಾನವೀಯ ಮೌಲ್ಯಗಳನ್ನು ಹೊಂದಿರುತ್ತದೆ . ಅನನ್ಯತೆ , ಸಮಾನತೆ , ಗೌರವ ಮತ್ತು ಸಾಮಾಜಿಕ ನ್ಯಾಯವನ್ನು ಪಡೆಯಲು ಕೈಗೊಳ್ಳುವ ಚಳುವಳಿಗಳಾಗಿರುತ್ತವೆ . ಮಹಿಳೆ ಮತ್ತು ದಲಿತ ಚಳುವಳಿಗಳು ಉದಾಹರಣೆಗಳಾಗಿವೆ . ಜಾತಿ , ಧರ್ಮ ಮತ್ತು ಜನಾಂಗೀಯ ಅಸಮಾನತೆ ಮತ್ತು ಭೇದವನ್ನು ಸರಿಪಡಿಸುವ ಚಳುವಳಿಗಳಾಗಿರುತ್ತವೆ .

2 ) ಹೊರಗುಳಿಸುವ ಚಳುವಳಿಗಳು ( The Exclusivist Movements ) : ಈ ಚಳುವಳಿಗಳು ಸಾಮಾನ್ಯವಾಗಿ , ತಮ್ಮ ಸಂಕಷ್ಟಗಳಿಗೆ ಹೊರಗಿನವರನ್ನು ದೂಷಿಸುವ ಮೂಲಕ ರೂಪಗೊಳ್ಳುತ್ತದೆ . ಪ್ರತ್ಯೇಕತ ಚಳುವಳಿಗಳು ತಮ್ಮ ರಕ್ಷಣೆಗಾಗಿ ಸಾಮಾಜಿಕ , ಆರ್ಥಿಕ ಮತ್ತು ಸಾಂಸ್ಕೃತಿಕ ಅನನ್ಯತೆಗಾಗಿ ಹೊರಗುಳಿಯಲು ಪ್ರಯತ್ನಿಸುತ್ತವೆ . ತಮ್ಮ ಪರಿಶುದ್ಧತೆ ಮತ್ತು ಸಾಂಸ್ಕೃತಿಕ ಪರಂಪರೆಯು ಅಪಾಯದಲ್ಲಿದೆ ಎಂದು ಹಣ , ಶಕ್ತಿ ಮತ್ತು ಸಾಮರ್ಥ್ಯದ ಮೂಲಕ ತ್ಯಾಗ ಬಲಿದಾನ ಮಾಡಲು ಸಮೂಹವನ್ನು ಕ್ರೋಢೀಕರಿಸುತ್ತಾರೆ . ಉದಾಹರಣೆ – ಅಸ್ಸಾಮಿನಲ್ಲಿ ಉಂಟಾದ ಚಳುವಳಿ “ ಅಸ್ಸಾಮಿಗಳಿಗೆ ಮಾತ್ರ ಅಸ್ಸಾಂ ” , ಗೂರ್ಖಾಲ್ಯಾಂಡ್ ಚಳುವಳಿ , ಉತ್ತರ ಪ್ರದೇಶದ ಉತ್ತರಖಂಡ ಚಳುವಳಿಗಳು . ಈ ರೀತಿ ಸಾಮಾಜಿಕ ಚಳುವಳಿಗಳ ಪ್ರಕಾರಗಳಿವೆ .

20. ಕರ್ನಾಟಕದಲ್ಲಿ ರೈತರ ಚಳುವಳಿಯನ್ನು ವಿವರಿಸಿ .

ಕರ್ನಾಟಕದಲ್ಲಿ ರೈತರ ಚಳುವಳಿ : ಕರ್ನಾಟಕದಲ್ಲಿ ಸ್ವಾತಂತ್ರ್ಯಕ್ಕೂ ಮೊದಲು ಮತ್ತು ನಂತರ ಸಾಕಷ್ಟು ರೈತ ಚಳುವಳಿಗಳಾಗಿದೆ . ಭೂಸುಧಾರಣೆ ಮತ್ತು ಅದರ ಅನುಷ್ಠಾನದ ಉದ್ದೇಶಗಳಿಗಾಗಿ ಚಳುವಳಿ ಮಾಡಿದರು . ಮಲಪ್ರಭಾ ಹೋರಾಟ , ಕಾಗೋಡು ರೈತರ ಸತ್ಯಾಗ್ರಹ , ಸಾಗರ – ತೀರ್ಥಹಳ್ಳಿ ತಾಲೂಕುಗಳ ರೈತರ ದಂಗೆ , ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರ್ನಾಡ್ ರೈತರ ಹೋರಾಟ ಇತ್ಯಾದಿ ಅನೇಕ ಚಳುವಳಿಗಳಾದವು .

ಕಾಗೋಡು ಸತ್ಯಾಗ್ರಹ ಅಥವಾ ಹೋರಾಟ ( Kagodu Movement ) : ಭೂಮಿಯ ಹಕ್ಕಿಗಾಗಿ ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಮೊದಲ ಹೋರಾಟವಿದು . ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಗೋಡು ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆದದ್ದರಿಂದ ಕಾಗೋಡು ಸತ್ಯಾಗ್ರಹ ಎಂಬ ಹೆಸರು ಬಂದಿತು . ಆಂಗ್ಲರ ಕಾಲದಲ್ಲಿ ಕಾಗೋಡಿನಲ್ಲಿ ಊಳಿಗಮಾನ್ಯ ಪದ್ಧತಿ ಅಸ್ತಿತ್ವದಲ್ಲಿತ್ತು . ಗೇಣಿದಾರರು ಭೂಮಾಲೀಕರ ಶೋಷಣೆ ಮತ್ತು ಅಧಿಕ ಪ್ರಮಾಣದ ಪಾಲು ಕೊಡಲು ನಿರಾಕರಿಸಿ ಭೂಹಕ್ಕಿಗಾಗಿ ಪ್ರತಿಭಟಿಸಿದರು . ‘ ಉಳುವವನಿಗೆ ಭೂಮಿ ‘ ಎಂಬ ಧೈಯವು ಗೇಣಿದಾರರಿಗೆ ಸಾಮಾಜಿಕ ನ್ಯಾಯ ಒದಗಿಸಿ , ಕೃಷಿ ಉತ್ಪಾದನೆಯನ್ನು ಹೆಚ್ಚಿಸಬೇಕೆಂಬುದು ಕಾಗೋಡು ಸತ್ಯಾಗ್ರಹದಿಂದ ಸ್ಫೂರ್ತಿ ಪಡೆಯಿತು .

ಮಲಪ್ರಭಾ ಹೋರಾಟ ( The Malaprabha Agitation ) : ಈ ಚಳುವಳಿಯು ರೈತರ ಚಳುವಳಿ ಅಥವಾ ಹೋರಾಟದಲ್ಲಿ ಒಂದು ಮೈಲಿಗಲ್ಲು , ಮಲಪ್ರಭಾ ನದಿಗೆ ಅಣೆಕಟ್ಟನ್ನು ಕಟ್ಟಲು ಉದ್ದೇಶಿಸಿದ್ದರೂ 30 ಕೋಟಿ ರೂಪಾಯಿಗಳ ಅಂದಾಜಿಗೆ 162 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿಯೂ ಈ ಯೋಜನೆ ಪೂರ್ತಿಯಾಗದೆ ವರವು ಶಾಪವಾಗಿ ಬದಲಾಗಿತ್ತು . ಕಾಲುವೆ ಉಪಕಾಲುವೆಗಳ ಲಭ್ಯತೆಯಿಲ್ಲದೆ , ನೀರು ಹರಿದು ಹೋಗದೆ , ಭೂಮಿಯ ಕ್ಷಾರ ಹೆಚ್ಚಾಗಿ ಬೆಳೆಗೆ ಅನುಕೂಲವಾಗಲಿಲ್ಲ . ಆದ್ದರಿಂದ ರೈತರು ಚಳುವಳಿ ಮಾಡಬೇಕಾಯಿತು.

ಇದರ ಕಾರಣಗಳು ಹೀಗಿವೆ :

1 ) ಸ್ಥಿರ ಬೆಲೆಯ ಪ್ರಶ್ನೆ : ನೀರಾವರಿಯಿಂದ ಕೃಷಿಯ ವಾಣಿಜೀಕರಣವಾಗುವುದೆಂದು ರೈತರಿಗೆ ವರಲಕ್ಷ್ಮಿ ಹತ್ತಿ ಮತ್ತು ಹೈಬ್ರಿಡ್ ಜೋಳವನ್ನು ಬೆಳೆಯಲು ಪ್ರೋತ್ಸಾಹಿಸಿದರು . ಎಷ್ಟೆಲ್ಲಾ ತೊಂದರೆಯನ್ನು ಅನುಭವಿಸಿ ಬೆಳೆ ಬೆಳೆದರೂ ಹತ್ತಿಯ ಬೆಲೆ ಕ್ವಿಂಟಾಲ್‌ಗೆ 1000 ರೂಪಾಯಿ ಇದ್ದದ್ದು 350 ರೂ.ಗಳಿಗೆ ಕುಸಿಯಿತು . ಈ ರೀತಿ ರೈತರು ನಷ್ಟವನ್ನನುಭವಿಸಿ ಹೋರಾಟಕ್ಕೆ ಮೊದಲಾದರು .

2 ) ಲೆವಿಯ ಪ್ರಶ್ನೆ : ನೀರಾವರಿ ಬಂದ ವರ್ಷದಿಂದ ಎಕರೆಯೊಂದಕ್ಕೆ 500 ರೂ.ಗಳಿಂದ 1500 ರೂಪಾಯಿಗಳ ವರೆಗೆ ಲೆವಿ ಕಟ್ಟಬೇಕಿತ್ತು . ಆದರೆ ನೀರಾವರಿ ಸೌಕರ್ಯ ದೊರೆತಿದೆಯೋ ಇಲ್ಲವೋ ಎಂದು ಪರೀಕ್ಷಿಸದೆ ಆ ಭಾಗದ ಎಲ್ಲರೂ ಲೆವಿ ಕಟ್ಟಬೇಕೆಂಬ ಒತ್ತಾಯವೇ ರೈತರ ಆಕ್ರೋಶಕ್ಕೆ ಗುರಿಯಾಯಿತು . ಸಮರ್ಪಕ ಕಾಲುವೆ ಸೌಕರ್ಯವಿಲ್ಲದೆ ಬೆಳೆ ಹಾಳಾಯಿತು . ಈ ರೀತಿ ರೈತರ ಸಮಸ್ಯೆ ಉಲ್ಬಣ ಗೊಂಡಿತು .

3 ) ಸ್ಥಳೀಯ ನೌಕರಶಾಹಿಯ ಪಾತ್ರ : ಸರ್ಕಾರ ನೌಕರರಲ್ಲಿ ಭ್ರಷ್ಟಾಚಾರ , ಔದಾಸೀನ್ಯ , ಬಲವಂತದಿಂದ ಕಂದಾಯ ವಸೂಲಿ ಮತ್ತು ರಾಜಕೀಯ ನಾಯಕತ್ವದ ವೈಫಲ್ಯತೆ ರೈತರ ಚಳುವಳಿಗೆ ಪ್ರಮುಖ ಕಾರಣವಾಯಿತು . ಚಳುವಳಿಯು 1980 ರ ಮಾರ್ಚ್‌ನಲ್ಲಿ ಪ್ರಾರಂಭವಾಯ್ತು ಮೊದಲು ನವಲಗುಂದ ತಾಲೂಕಿಗೆ ಸೀಮಿತವಾಗಿದ್ದ ಹೋರಾಟ ರೋಣ , ಸವದತ್ತಿ , ರಾಂದುರ್ಗಗಳಿಗೂ ವ್ಯಾಪಿಸಿತು . ರೈತ ಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು , ಕಂದಾಯ ಮಂತ್ರಿಗಳನ್ನು ಭೇಟಿ ಮಾಡಿ ಬೇಡಿಕೆ ಸಲ್ಲಿಸಿದರೂ ಉಪಯೋಗವಾಗಲಿಲ್ಲ . ಆಗ ರೈತರು ಜುಲೈ 21 ಕ್ಕೆ ಬಂದ್ ಕರೆ ಕೊಟ್ಟರು . ಈ ಉಪವಾಸ ಮುಷ್ಕರದಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಂಡಿದ್ದರು .

ಸವದತ್ತಿ , ನವಲಗುಂದ ಮತ್ತು ನರಗುಂದಗಳಲ್ಲಿ ರೈತರು ಒಗ್ಗೂಡಿ ಎಲ್ಲಾ ಸರ್ಕಾರಿ ಕರಿಗಳನ್ನು ಮುಚ್ಚಿಸಲು ಒತ್ತಾಯಿಸಿದರು . ಸವದತ್ತಿಯ ತಹಶೀಲ್ದಾರರು ಒಪ್ಪಿಕೊಂಡದ್ದು ಹೆಚ್ಚಿನ ಗಲಾಟೆಯಾಗಲಿಲ್ಲ . ಆದರೆ ನವಲಗುಂದ ಮತ್ತು ನರಗುಂದಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ರೈತರು ಕಚೇರಿಯ ವಸ್ತುಗಳಿಗೆ ಬೆಂಕಿ ಇಟ್ಟರು. ಸಬ್‌ ಇನ್‌ಸ್ಪೆಕ್ಟರು , ಪೋಲಿಸ್ ಸಿಬ್ಬಂದಿ ಹಾಗೂ ರೈತರ ಮಧ್ಯೆ ಹಾಹಾಕಾರದ ಬೆಂಕಿಯ ಜ್ವಾಲೆ ಪಸರಿಸಿ , ರೈತನೊಬ್ಬ ಹಾಗೂ ಒಬ್ಬ ಪೋಲಿಸ್ ಜೀವ ಕಳೆದುಕೊಳ್ಳ ಬೇಕಾಯಿತು . ನಂತರ ಎರಡೂ ಸ್ಥಳಗಳಲ್ಲಿ ಕರ್ಥ್ಯವನ್ನು ಹೇರಲಾಯಿತು .

ಬೆಲೆ ಏರಿಕೆ ವಿರುದ್ಧ ಚಳುವಳಿ ( Anti – Price Agitation ) : ರೈತರ ಚಳುವಳಿಗಳು ಗದಗ್ , ಬೆಟಗೇರಿ , ದಾವಣಗೆರೆ , ಚಿತ್ರದುರ್ಗ , ಆಂಕೋಲಾ , ಕುಮ್ಬ , ಸಿರಸಿ , ರಾಯಚೂರು , ಶಿವಮೊಗ್ಗ , ಮಂಡ್ಯ , ಕನಕಪುರ ಮತ್ತಿತರ ಭಾಗಗಳಿಗೆ ಹರಡಿತು . ಸುಮಾರು 20 ಜನ ಹಿಂಸೆಗೆ ಬಲಿಯಾಗಿದ್ದರು . ಮುಂದೆ ಬೆಳಗಾಂನ ಘಟಪ್ರಭಾ ನೀರಾವರಿ ಪ್ರದೇಶದ ರೈತರೂ ಸಹ ಪ್ರತಿಭಟನೆಯನ್ನು ಮಾಡಿ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು . ರುದ್ರಪ್ಪನವರ ರೈತ ಸಂಘದ ಉದಯವಾಯಿತು . ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ಪ್ರವೇಶವಾಯಿತು . ರಾಜ್ಯ ಮಟ್ಟದಲ್ಲಿ ಪಕ್ಷಾತೀತ ಸಂಘವೊಂದನ್ನು ಕಟ್ಟಲು ನಿರ್ಧರಿಸಿದರು . ಆಗ ‘ ಕರ್ನಾಟಕ ರಾಜ್ಯ ರೈತ ಸಂಘದ ( KRRS ) ಉದಯವಾಯಿತು . ರಾಜ್ಯಾದ್ಯಂತ ಚಳುವಳಿಗಳಾದವು . ಈ ರೀತಿ ಕರ್ನಾಟಕದಾದ್ಯಂತ ರೈತರು ತಮ್ಮ ಬೇಡಿಕೆಗಳಿಗಾಗಿ , ಹೋರಾಟ ಮಾಡತೊಡಗಿದರು .

21. ಕರ್ನಾಟಕ ರಾಜ್ಯ ರೈತರ ಸಂಘವು ಸರ್ಕಾರದ ಮುಂದಿಟ್ಟ ಬೇಡಿಕೆಗಳ ಪಟ್ಟಿ ಮಾಡಿ ,

ಕರ್ನಾಟಕ ರಾಜ್ಯ ರೈತರ ಸಂಘವು ಅಕ್ಟೋಬರ್ 17 , 1980 ರಂದು ಮುಖ್ಯಮಂತ್ರಿಯವರ ಮುಂದಿಟ್ಟ ಬೇಡಿಕೆಗಳು ಈ ಕೆಳಗಿನಂತಿದ್ದವು .

1 ) ವಿಭಿನ್ನ ಚಳುವಳಿಗಳಲ್ಲಿ ಬಂಧನಕ್ಕೊಳಗಾಗಿರುವ ರೈತರನ್ನು ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಅವರ ವಿರುದ್ಧದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು .

2 ) ಬೆಲೆಗಳನ್ನು ತಗ್ಗಿಸಿ , ಲೆವಿ ಸಂಗ್ರಹಿಸಿ ರೈತರು ಸಾಲಕ್ಕೀಡಾಗಿದ್ದರಿಂದ ಅದನ್ನು ಪೂರ್ಣವಾಗಿ ಮನ್ನಾ ಮಾಡಬೇಕು . ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗಳ ಮಧ್ಯಸ್ಥಿಕೆ ಇಲ್ಲದೇ ಸರ್ಕಾರವೇ ನೇರವಾಗಿ ಸಾಲ ನೀಡಬೇಕು.

3 ) ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಅನುಗುಣವಾಗಿ ಸಾಲ ನೀಡಬೇಕು .

4 ) ಸಾಲ ಹಿಂತಿರುಗಿಸಲಾಗದೆ ಇದ್ದ ರೈತರುಗಳ ಹರಾಜು ಹಾಕಿದ್ದ ಮತ್ತು ಮುಟ್ಟಗೋಲು ಹಾಕಿದ್ದ ಆಸ್ತಿಗಳನ್ನು ಹಿಂತಿರುಗಿಸಬೇಕು .

5 ) ಭೂಕಂದಾಯವನ್ನು ತೆಗೆದುಹಾಕಿ , ಉತ್ಪಾದನೆ ಆಧಾರಿತ ತೆರಿಗೆಯನ್ನಷ್ಟೇ ವಿಧಿಸಬೇಕು . ಬೆಟರ್‌ಮೆಂಟ್ ಲೆವಿ , ಕೆರೆ ನೀರಿನ ಮೇಲಿನ ತೆರಿಗೆಗಳನ್ನು ತೆಗೆದು ಹಾಕಬೇಕು . ನೀರು ಪೂರೈಕೆ ಆಗದಿದ್ದ ಜಮೀನಿನ ಮೇಲೆ ತೆರಿಗೆ ವಿಧಿಸಕೂಡದು . ರೈತರ ಮೇಲೆ ಹಾಕಲಾದ ಕೃಷಿ ತೆರಿಗೆಯನ್ನು ತೆಗೆದುಹಾಕಬೇಕು .

6 ) ರೈತರು ಬಳಸುವ ಟ್ರ್ಯಾಕ್ಟರ್‌ ಮತ್ತು ಟ್ರೇಲರ್‌ಗಳ ಮೇಲಿನ ಎಲ್ಲಾ ತೆರಿಗೆಗಳನ್ನು ಮತ್ತು ನಿರ್ಬಂಧಗಳನ್ನು ತೆಗೆದುಹಾಕಬೇಕು .

7 ) 1979-80 ರಿಂದಲೇ ಕಬ್ಬಿನ ಮೇಲಿನ ಕೊಳ್ಳುವ ತೆರಿಗೆಯನ್ನು ತೆಗೆಯಬೇಕು .

8 ) ಯೂನಿಟ್‌ಗೆ 6 1/2 ಪೈಸೆಯಂತೆ ವಿದ್ಯುತ್ ದರ ನಿಗದಿಗೊಳಿಸಬೇಕು .

9 ) ವೆಚ್ಚವಾದ ಮಾನವ ತಾಸುಗಳನ್ನು ಪರಿಗಣಿಸಿ , ವೈಜ್ಞಾನಿಕವಾಗಿ ಕೃಷಿಯ ದರಗಳನ್ನು ನಿಗದಿಗೊಳಿಸಬೇಕು . ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಕೊಳ್ಳಬೇಕು .

10 ) ಬೆಲೆ ನಿಗದಿಗೊಳಿಸುವ ತತ್ವ ವಾಸ್ತವಿಕವಾಗಿರಬೇಕು . ಅಂದರೆ ವೆಚ್ಚವಾದ ಮಾನವ ತಾಸುಗಳು ಮತ್ತು ಇತರ ವಸ್ತುಗಳ ಬೆಲೆಗಳನ್ನು ಗಮನಿಸಿ ಕೃಷಿ ಉತ್ಪನ್ನದ ಬೆಲೆ ಗೊತ್ತುಪಡಿಸಬೇಕು .

11 ) ಕೃಷಿಯನ್ನು ಉದ್ಯಮವೆಂದು ಘೋಷಿಸಿ , ಕೃಷಿ ಕಾರ್ಮಿಕರಿಗೂ ಕೈಗಾರಿಕಾ ಕಾರ್ಮಿಕನ ಎಲ್ಲಾ ಸವಲತ್ತುಗಳನ್ನು ವಿಸ್ತರಿಸಬೇಕು .

12 ) ಪ್ರೀಮಿಯಂ ಕಟ್ಟದೆ ಬೆಳೆ ವಿಮೆಯನ್ನು ರಾಜ್ಯಾದ್ಯಂತ ಒದಗಿಸಬೇಕು .

13 ) ಪ್ರತಿಯೊಬ್ಬ ರೈತನಿಗೂ , ರೈತ ಕಾರ್ಮಿಕನಿಗೂ ನಿವೃತ್ತಿ ವೇತನ ದೊರಕಬೇಕು .

14 ) ಕೈಗಾರಿಕಾ ಕಾರ್ಮಿಕರಿಗೆ ನೀಡುವಂತೆ ಕೃಷಿ ಕಾರ್ಮಿಕರಿಗೂ ಕೂಲಿ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು . ರೈತರಿಗೆ ಸರಿಯಾದ ಬೆಲೆಯಷ್ಟೇ ನೀಡಿದರೆ ಸಾಲದು , ಕಾಲದಿಂದ ಕಾಲಕ್ಕೆ ಕೃಷಿ ಕಾರ್ಮಿಕರ ಕೂಲಿಯನ್ನು ಪರಿಷ್ಕರಿಸಬೇಕು .

15 ) ಭೂಮಿಯ ಮೇಲಿನ ಒತ್ತಡ ತಗ್ಗಿಸಲು ಕೃಷಿಯೋಗ್ಯ ಸರ್ಕಾರಿ ಜಮೀನನ್ನು ಭೂಹೀನ ಕೃಷಿ ಕಾರ್ಮಿಕರಿಗೆ ನೀಡಿ ಸರ್ಕಾರದ ಉಸ್ತುವಾರಿಯಲ್ಲೇ ಸಾಗುವಳಿ ಮಾಡಿಸಬೇಕು .

16 ) ಭೂ ಸುಧಾರಣೆಯಿಂದ ಜಮೀನು ಪಡೆದ ಗೇಣಿದಾರರಿಗೆ ( Occupany price ) ಹಕ್ಕುಪತ್ರ ನೀಡಬೇಕು . ಭೂಮಾಲೀಕರಿಗೆ ಒಂದೇ ಕಂತಿನಲ್ಲಿ ಪರಿಹಾರ ಧನ ನೀಡಬೇಕು .

17 ) ಯೋಜನಾ ವೆಚ್ಚದ ಪ್ರತಿಶತ 80 ನ್ನು ಗ್ರಾಮಾಭಿವೃದ್ಧಿ ಕಾರ್ಯಗಳಿಗೆ ಮೀಸಲಿರಿಸಬೇಕು .

18 ) ಗ್ರಾಮಾಂತರ ಪ್ರದೇಶಗಳಲ್ಲಿ ಸಂಚಾರ ಯೋಗ್ಯ ರಸ್ತೆಗಳನ್ನು ಒದಗಿಸಬೇಕು .

19 ) ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹುದ್ದೆಗಳಲ್ಲಿ ರೈತರ ಮಕ್ಕಳಿಗೆ ಶೇ .50 ನ್ನು ಮೀಸಲಿರಿಸಬೇಕು . ರೈತರ ಈ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿದ ಗುಂಡೂರಾವ್‌ರವರ ಸರ್ಕಾರ 12 ಬೇಡಿಕೆಗಳನ್ನು ಆ ಕೂಡಲೇ ಒಪ್ಪಿರುವುದಾಗಿ ಘೋಷಿಸಿ , ಉಳಿದ ಬೇಡಿಕೆಗಳನ್ನು ಕೇಂದ್ರ ಹಾಗೂ ಆರ್.ಬಿ.ಐ.ನಿಂದ ಅನುಮತಿ ಪಡೆದ ನಂತರ ಪರಿಶೀಲಿಸುವುದಾಗಿ ತಿಳಿಸಿತು .

22. ಭಾರತದಲ್ಲಿ ಮಹಿಳಾ ಚಳುವಳಿಯನ್ನು ವಿವರಿಸಿ .

ಭಾರತದಲ್ಲಿ ಮಹಿಳಾ ಚಳುವಳಿ ( Women’s Movement in India ) : ಭಾರತದ ಇತಿಹಾಸದಲ್ಲಿ ಮಹಿಳಾ ಚಳುವಳಿಯನ್ನು ಎರಡು ಭಾಗವಾಗಿ ವಿಂಗಡಿಸಲಾಗಿದೆ . 1 ) ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳುವಳಿ 2 ) ಸ್ವಾತಂತ್ರ್ಯ ನಂತರ ಮಹಿಳಾ ಚಳುವಳಿ

1 ) ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳುವಳಿ ( Pre Independence Phase ) : ಸ್ವಾತಂತ್ರ್ಯ ಪೂರ್ವದ ಮಹಿಳಾ ಚಳುವಳಿಗಳು ಸಮಾಜ ಸುಧಾರಣೆಯ ಚಳುವಳಿಯಲ್ಲಿ ಸೇರಿ ಹೋಗಿತ್ತು . ವಿಧವೆಯರು , ಸತಿ ಪದ್ಧತಿಯಿಂದ ಶೋಷಿತರಾದವರು , ವೇಶ್ಯಾವಾಟಿಕೆ , ಬಾಲ್ಯವಿವಾಹಕ್ಕೆ ಒಳಗಾದವರ ಪರವಾಗಿ ಹೋರಾಟ ಮಾಡಿದರು . ಮಹಿಳೆಯರ ಸುದೀರ್ಘವಾದ ಹೋರಾಟದ ಫಲವಾಗಿ 1829 ರಲ್ಲಿ ಸತಿಪದ್ಧತಿ ನಿಷೇಧ ಕಾನೂನನ್ನು ಜಾರಿಗೊಳಿಸಿದರು . ಸ್ತ್ರೀಯರು ಪರದಾ ಪದ್ಧತಿ , ಕೌಟುಂಬಿಕ ಹೊಣೆಗಾರಿಕೆಗಳು ಮತ್ತು ಪುರುಷಪ್ರಧಾನ ಸಮಾಜದಲ್ಲಿ ಆಗುತ್ತಿದ್ದ ಶೋಷಣೆಗಳು ಇವೆಲ್ಲವುಗಳ ವಿರುದ್ಧವಾಗಿ ಚಳುವಳಿಯನ್ನು ಮಾಡುತ್ತಿದ್ದರು . 1900 ರ ಅನೇಕ ಸ್ತ್ರೀಯರ ಸಂಘಟನೆಗಳು , ಸಮಾಜಗಳು ಸ್ಥಾಪಿತವಾದವು .

ಆರ್ಯಸಮಾಜ ಮತ್ತು ಬ್ರಹ್ಮಸಮಾಜಗಳ ಪ್ರೋತ್ಸಾಹ ದೊರೆಯಿತು . 1905 ರಲ್ಲಿ ವಿದೇಶಿ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಹಿಳಾ ನೇತಾರರಿಗೆ ಕರೆ ನೀಡಲಾಗಿತ್ತು . 1930 ರ ಅಸಹಕಾರ – ಚಳುವಳಿ ಮತ್ತು ಕಾನೂನು ಭಂಗ ಚಳುವಳಿಯಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು . ಅಖಿಲ ಭಾರತದ ಸ್ತ್ರೀಯರ ಸಮ್ಮೇಳನ ( TheAll India Women’s Conference ) 1924 ರಲ್ಲಿ ಸ್ಥಾಪನೆಗೊಂಡಿತ್ತು . ಕಾಲಕ್ರಮೇಣ ಇದು ಬೃಹತ್ ಸಮಾವೇಶವಾಗಿ ಬೆಳೆಯಿತು . ಮಹಿಳೆಯರು ಸಮಾನ ಹಕ್ಕುಗಳು , ಸಹಶಿಕ್ಷಣ , ವಿವಾಹ , ವಿಚ್ಛೇದನೆ , ಆಸ್ತಿಯ ಉತ್ತರಾಧಿಕಾರದ ಹಕ್ಕು , ಆರ್ಥಿಕ ಸಮಾನತೆ , ಗಂಡನ ಆದಾಯದಲ್ಲಿ ಸಮಪಾಲು , ವಿಧವೆಯರಿಗೆ ವೃದ್ಯಾಪ್ಯವೇತನ ಮತ್ತು ಗರ್ಭಪಾತ ಕಾನೂನು ಮುಂತಾದ ವಿಷಯಗಳ ಬೇಡಿಕೆ ಇಟ್ಟಿತ್ತು .

2 ) ಸ್ವಾತಂತ್ರೋತ್ತರ ಮಹಿಳಾ ಚಳುವಳಿ ( Post Independence Phase ) : ಸ್ವಾತಂತ್ರ್ಯ , ಸಮಾನತೆ ಮತ್ತು ಪ್ರಜಾಪ್ರಭುತ್ವ ಸಮಾಜದ ನಿರ್ಮಾಣ , ಲಿಂಗ ಭೇದಭಾವ ರಹಿತ್ಯ ಇಂತಹ ಬೇಡಿಕೆಗಳಿಗಾಗಿ ವಿವಿಧ ಸಂಘ , ಸಂಸ್ಥೆಗಳ ಸ್ಥಾಪನೆಯಾಯಿತು . ಇದುವರೆಗೂ ನಿಷೇಧಿತ ಕ್ಷೇತ್ರಗಳಲ್ಲಿ – ಸ್ತ್ರೀಯರ ಪ್ರವೇಶದಿಂದ ಹೊಸ ಭರವಸೆ ನಿರ್ಮಾಣ ವಾಯಿತು .

1960 ರ ಅವಧಿಯಲ್ಲಿ ಹಲವಾರು ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ ಎಂದು ಮನವರಿಕೆಯಾಗಿತ್ತು . 1960 ಮತ್ತು 1970 ರ ಅವಧಿಯಲ್ಲಿ ಹಲವಾರು ಮಹಿಳಾ ಹೋರಾಟಗಳು ವ್ಯಕ್ತವಾದವು . ದೇಶದ್ಯಾಂತ ಮಹಿಳೆಯರು ಹೋರಾಟಗಳಲ್ಲಿ ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು . ಅನೇಕ ಜನ ನಾಯಕರು ಸ್ತ್ರೀಯರಿಗೆ ಹೋರಾಟದಲ್ಲಿ ಪ್ರೋತ್ಸಾಹ ನೀಡಿದರು . ಸ್ತ್ರೀಯರು ಸುಲಭವಾಗಿ ಚಳುವಳಿಗಳಲ್ಲಿ ಭಾಗವಹಿಸಿ ರಾಜಕೀಯ ಪಕ್ಷ ಮತ್ತು ಸಂಘಟನೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ದೊರಕಿತು . ದೇಶದ ವಿವಿಧ ಭಾಗಗಳಲ್ಲಿ ದೇವದಾಸಿಯರು ಮತ್ತು ಮುಸ್ಲಿಂ ಸ್ತ್ರೀಯರು ಸಭೆಗಳನ್ನು ನಡೆಸಿದರು . 1980 ರ ದಶಕದ ಆರಂಭದಲ್ಲಿ ಸ್ತ್ರೀ ಮುಕ್ತಿ ಸಂಘಟನೆಯು ಕಾನೂನಿನ ರಕ್ಷಣೆಯ ಜಾಗೃತಿಗಳನ್ನು ಮೂಡಿಸಿತ್ತು .

ಸ್ವಾತಂತ್ರ್ಯ ನಂತರದಲ್ಲಿ ಮಹಿಳಾ ಸಂಘಟನೆಗಳು ಸ್ತ್ರೀ – ವಿರೋಧಿ ಮತ್ತು ಪಕ್ಷಪಾತವನ್ನು ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ . ಚಿಕ್ಕೋ ಚಳುವಳಿ , ಪಾನ ನಿಷೇಧ ಚಳುವಳಿಗಳಲ್ಲಿ ಮಹಿಳೆಯರ ಪಾಲೂ ಇದೆ . ರಾಷ್ಟ್ರೀಯ ಮಹಿಳಾ ಆಯೋಗದ ಸ್ಥಾಪನೆಯು ಸ್ತ್ರೀಯರಿಗೆ ಮಾರಕವಾಗಿರುವ ಧೋರಣೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಗಮನಹರಿಸುತ್ತದೆ . ಭಾರತದಲ್ಲಿ ಸ್ತ್ರೀಯರ ಚಳುವಳಿಗಳು ರಾಜ್ಯದ ಮೇಲೆ ಪ್ರಭಾವ ಮತ್ತು ಒತ್ತಡ ಬೀರುವ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ ವಿನಃ ರಾಜ್ಯದ ವಿರುದ್ಧ ಹೋರಾಡುವ ಪ್ರಯತ್ನ ಮಾಡಿಲ್ಲ . ಈ ರೀತಿ ಮಹಿಳಾ ಚಳುವಳಿಗೆ ಸುದೀರ್ಘವಾದ ಚರಿತ್ರೆಯಿದೆ .

FAQ

1. ಭೀಮ ಸೇನೆ ಪ್ರಾರಂಭಿಸಿದವರು ಯಾರು ?

1970 ರಲ್ಲಿ ಬಿ.ಶಾಮಸುಂದರ್‌ರವರು ಭೀಮಸೇನಾ ಎಂಬ ಸಂಘಟನೆಯನ್ನು ಪ್ರಾರಂಭಿಸಿದರು .

2. ಸಾಮಾಜಿಕ ಚಳುವಳಿಯ ಒಂದು ಅಂಶವನ್ನು ತಿಳಿಸಿ .

ಸಾಮಾಜಿಕ ಚಳುವಳಿಯ ಮೂಲಾಂಶಗಳು ಸಿದ್ಧಾಂತ , ಸಾಮೂಹಿಕ ಕ್ರೋಢೀಕರಣ ಸಂಘಟನೆ ಮತ್ತು ನಾಯಕತ್ವಗಳು .

ಇತರೆ ವಿಷಯಗಳು :

ದ್ವಿತೀಯ ಪಿ.ಯು.ಸಿ ಕನ್ನಡ ನೋಟ್ಸ್‌

ದ್ವಿತೀಯ ಪಿ.ಯು.ಸಿ ಇತಿಹಾಸ ನೋಟ್ಸ್‌

ದ್ವಿತೀಯ ಪಿ.ಯು.ಸಿ ಎಲ್ಲಾ ಪಠ್ಯ ಪುಸ್ತಕಗಳ Pdf

1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ Pdf

1 ರಿಂದ 12ನೇ ತರಗತಿ ಪಠ್ಯಪುಸ್ತಕಗಳ Pdf

All Subject Notes

All Notes App

Leave a Reply

Your email address will not be published. Required fields are marked *

rtgh