2nd Puc Kannada Muttisikondavanu Notes Question Answer Chapter 1 lesson Pdf Download 2024, ಮುಟ್ಟಿಸಿಕೊಂಡವನು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು
ತರಗತಿ : ದ್ವಿತೀಯ ಪಿ.ಯು.ಸಿ
ಪಾಠದ ಹೆಸರು : ಮುಟ್ಟಿಸಿಕೊಂಡವನು
ಕೃತಿಕಾರರ ಹೆಸರು : ಪಿ. ಲಂಕೇಶ್
Muttisikondavanu Kannada Notes
ಕವಿ ಪರಿಚಯ :
ಪಿ . ಲಂಕೇಶ್ ( ೧೯೩೫-೨೦೦೦ ) : ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪಿ . ಲಂಕೇಶ್ ಕನ್ನಡ ಕಥಾಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು . ಹುಟ್ಟೂರು ಶಿವಮೊಗ್ಗ ಸಮೀಪದ ಕೊನಗವಳ್ಳಿ ಗ್ರಾಮ . ಹಲವು ವರ್ಷಗಳ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ , ಆನಂತರ ಆ ವೃತ್ತಿ ಯನ್ನು ತ್ಯಜಿಸಿ ತಮ್ಮ ಹೆಸರಿನಲ್ಲಿ ‘ ಲಂಕೇಶ್ ಪತ್ರಿಕೆ ‘ ಎಂಬ ವಾರಪತ್ರಿಕೆಯನ್ನು ಆರಂಭಿಸಿ ಕನ್ನಡ ನಾಡಿನ ಜಾಣ – ಜಾಣೆಯರ ಮನಸ್ಸಿಗೆ ಲಗ್ಗೆಯಿಟ್ಟವರು .
ಲಂಕೇಶ್ ಬರೆದ ಕೃತಿಗಳು ಹಲವಾರು . ಕೆರೆಯ ನೀರನು ಕೆರೆಗೆ ಚೆಲ್ಲಿ , ನಾನಲ್ಲ . ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ , ಕಲ್ಲುಕರಗುವ ಸಮಯ ಮತ್ತು ಇತರ ಕತೆಗಳು , ಉಲ್ಲಂಘನೆ , ಮಂಜು ಕವಿದ ಸಂಜೆ ಮೊದಲಾದ ಕಥಾಸಂಕಲನಗಳನ್ನು , ಬಿರುಕು , ಮುಸ್ಸಂಜೆಯ ಕಥಾಪ್ರಸಂಗ , ಅಕ್ಕ ಮೊದಲಾದ ಕಾದಂಬರಿಗಳನ್ನು , ತಲೆಮಾರು , ಬಿಚ್ಚು ಮೊದಲಾದ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ . ನಾಟಕ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸಮಾಡಿದ ಲಂಕೇಶ್ ಅವರ ಟಿ . ಪ್ರಸನ್ನನ ಗೃಹಸ್ಥಾಶ್ರಮ , ನನ್ನ ತಂಗಿಗೊಂದು ಗಂಡು ಕೊಡಿ , ತೆರೆಗಳು , ಸಂಕ್ರಾಂತಿ , ಗುಣಮುಖ ಮೊದಲಾದ ನಾಟಕಗಳು ರಂಗಾಸಕ್ತರ ಗಮನಸೆಳೆದಿವೆ .
ಹುಳಿಮಾವಿನ ಮರ ಇವರ ಆತ್ಮಕಥನ . ಪಾಪದ ಹೂವುಗಳು , ದೊರೆ ಈಡಿಪಸ್ ಮತ್ತು ಅಂತಿಗೊನೆ ಅನುವಾದ ಕೃತಿಗಳು . ಪ್ರಸ್ತುತ , ಕಂಡದ್ದು ಕಂಡಹಾಗೆ ಇವರ ವಿಮರ್ಶಾ ಕೃತಿಗಳು . ‘ ಅಕ್ಷರ ಹೊಸ ಕಾವ್ಯ ‘ ಇವರು ಸಂಗ್ರಹಿಸಿ ಸಂಪಾದಿಸಿದ ವಿಶಿಷ್ಟ ಕಾವ್ಯಸಂಗ್ರಹ , ಲಂಕೇಶ್ ಪತ್ರಿಕೆಯಲ್ಲಿ ಇವರು ಬರೆದ ಟೀಕೆ ಟಿಪ್ಪಣಿ , ಮರೆಯುವ ಮುನ್ನ ಅಂಕಣಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ . ‘ ಪಲ್ಲವಿ ‘ , ‘ ಅನುರೂಪ ‘ , ‘ ಎಲ್ಲಿಂದಲೋ ಬಂದವರು ‘ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ ಲಂಕೇಶ್ ‘ ಪಲ್ಲವಿ ‘ ಚಿತ್ರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ . ೧೯೯೩ ರಲ್ಲಿ ಲಂಕೇಶ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ . ‘ ಮುಟ್ಟಿಸಿಕೊಂಡವನು ‘ ಲಂಕೇಶ್ ಅವರು ಬರೆದ ವಿಶಿಷ್ಟ ಕತೆಗಳಲ್ಲೊಂದು .
ವ್ಯಕ್ತಿಯ ಮುಗ್ಧತೆ , ಸಣ್ಣತನ ಮತ್ತು ಆತನೊಳಗೆ ಹುದುಗಿರುವ ಜಾತಿಪ್ರಜ್ಞೆ – ಇವು ಉಂಟುಮಾಡುವ ನೋವು , ತಳಮಳ , ಸಮಸ್ಯೆಗಳನ್ನು ತಣ್ಣನೆಯ ಶೈಲಿಯಲ್ಲಿ ಈ ಕತೆ ನಿರೂಪಿಸುತ್ತದೆ . ವ್ಯಕ್ತಿಯ ಜಾತಿಪ್ರಜ್ಞೆ ಹುಟ್ಟುಹಾಕುವ ಸಮಸ್ಯೆ ಮತ್ತು ಈ ಅವಮಾನಗಳನ್ನು ಮಾನವೀಯ ನೆಲೆಯಲ್ಲಿ ಎದುರಿಸುವ ವೈದ್ಯನ ಪ್ರಾಮಾಣಿಕತೆ ಈ ಎರಡರ ವೈರುಧ್ಯದಲ್ಲಿಯೇ ಕತೆಯ ತೀವ್ರತೆ ಇದೆ . ಶಿವರಾಮಕಾರಂತರ ‘ ಚೋಮನದುಡಿ ‘ ಕಾದಂಬರಿಯ ನಂತರ ದಲಿತ ಸಂವೇದನೆಯನ್ನು ದಲಿತೇತರನೊಬ್ಬ ವಿಶಿಷ್ಟವಾಗಿ ನೋಡುವ ಸಂದರ್ಭ ಈ ಕತೆಯಲ್ಲಿದೆ .
ಕಥೆಯ ಹಿನ್ನೆಲೆ :
ಜಾತಿಪದ್ಧತಿ ಶತಶತಮಾನಗಳ ಕಾಲದಿಂದಲೂ ಬೆಳೆದುಬಂದಿರುವ ಕ್ರೂರ ಪದ್ಧತಿ , ಜಾತಿಯ ಹಿನ್ನಲೆಯಲ್ಲಿ ವ್ಯಕ್ತಿಗಳನ್ನು ನೋಡುವ ಮೌಡ್ಯ , ಆ ನೆಲೆಯಲ್ಲಿ ನಡೆದ ಶೋಷಣೆ ಇನ್ನೂ ಹೋಗಿಲ್ಲ . ಶಿಕ್ಷಣ , ನಗರೀಕರಣ , ವಿಜ್ಞಾನದ ಬೆಳವಣಿಗೆಗಳಿಂದಲೂ ನಮ್ಮ ದೇಶ ಜಾತಿಪದ್ಧತಿಯಿಂದ ಮುಕ್ತವಾಗದಿರುವುದು ನಮ್ಮ ದುರಂತ . ವ್ಯಕ್ತಿವ್ಯಕ್ತಿಯ ನಡುವಿನ ತರತಮ – ಭಾವವಳಿದು ಮಾನವೀಯವಾಗಿ ನೋಡುವ ಗುಣ ಬೆಳೆಯಬೇಕಾಗಿದೆ ಮತ್ತು ಶರಣರ , ಸಂತರ ಸಮಾನತೆಯ ಆಶಯ ಸಾಕಾರಗೊಳ್ಳಬೇಕಿದೆ . ಬದಲಾವಣೆಗಾಗಿ ಹಂಬಲಿಸುತ್ತಿರುವ ಸಮಾಜಕ್ಕೆ ಬಿಡುಗಡೆಯ ದಾರಿಯನ್ನು ತೋರಿಸುವ ದಿಕ್ಕಿನಲ್ಲಿ ಈ ಕತೆ ಮುಖ್ಯ ಹೆಜ್ಜೆ .
ಲಂಕೇಶರು ನಿಜವಾದ ಅರ್ಥದಲ್ಲಿ ವಿಸ್ಮಯದ ಸೃಷ್ಟಿಕರ್ತ . ಪೀಡನೆ , ಹಿಂಸೆಗಳನ್ನು ನಿಕಟವಾಗಿ ಹಾಗೂ ತಂತ್ರ ವಿಧಾನವಾಗಿ ಬಳಸಿ ವ್ಯಕ್ತಿಯ ಗೋಸುಂಬೆತನವನ್ನು ಅಥವಾ ಪ್ರಜ್ಞಾಸ್ಥರದಲ್ಲಿ ಆ ವ್ಯಕ್ತಿಯೂ ಗುರುತಿಸಿಕೊಂಡಿರಲಾರದ ಅನುಭವದ ಬಿರುಕನ್ನು ಅಲ್ಪತೆಯನ್ನು ಒಂದೊಂದೇ ಪದರದಲ್ಲಿ ಬಿಚ್ಚುತ್ತಾ ಒಳಗಿನ ಸತ್ಯವನ್ನು ಅದರ ನಗ್ನತೆಯಲ್ಲಿ ತೋರಿಸಿಬಿಡುವ ಶಕ್ತಿ ಅವರದು . ವರ್ತಮಾನದ ಘಟನೆ ಮತ್ತು ವ್ಯಕ್ತಿ ಮುಖಾಮುಖಿಯಾಗುವಲ್ಲಿ ನಿಜ ತೆರೆದುಕೊಳ್ಳುವುದೆಂಬ ತಿಳಿವಳಿಕೆ ಈ ಕತೆಯ ಹಿಂದಿದೆ .
ಶಬ್ದಾರ್ಥ :
ಕುಳ – ನೇಗಿಲಿನ ತುದಿ ; ನೊಗ – ಎತ್ತುಗಳ ಹೆಗಲಿನ ಮೇಲೆ ಹೇರುವ ಮರದ ದಿಂಡು ; ಗಾಸಿ – ತೊಂದರೆ , ಹಿಂಸೆ ; ಸಾಟಿ – ವಿನಿಮಯ , ಅದಲುಬದಲು ; ಲೇಹ್ಯ – ನೆಕ್ಕಿತಿನ್ನುವ ಔಷಧ , ಮಲಾಮು ; ಹಕ್ಕೆ – ಆಶ್ರಯ , ನೆಲೆ ; ಹಿತ್ತಲು – ಮನೆಯ ಹಿಂದಿನ ಪ್ರದೇಶ ; ಗೇಯು – ದುಡಿಮೆ ; ಛಾತಿ – ಧೈರ್ಯ , ಕೆಚ್ಚು : ನಿಸೂರ – ನಿರುಮ್ಮಳ ; ಹೊಂಚಿಕೊಳ್ಳು ಹೊಂದಿಸಿಕೊಳ್ಳು,
2nd Puc Kannada Muttisikondavanu Notes
I . ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
ಬಸವಲಿಂಗನಿಗೆ ಕಾಣಿಸಿಕೊಂಡ ತೊಂದರೆ ಎಡಗಣ್ಣಿನಲ್ಲಿ ಬೇನೆ ಕಾಣಿಸಿಕೊಂಡು ಬಹಳ ಹಿಂಸೆ ಕೊಡುತ್ತಿತ್ತು .
ಬಸಲಿಂಗನಿಗೆ ಮೊದಲು ಎಡಕಣ್ಣಿನಲ್ಲಿ ನೋವು ಆರಂಭಗೊಂಡಿತು .
ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರು ಡಾ || ತಿಮ್ಮಪ್ಪ .
ಬಸಲಿಂಗನ ಹೆಂಡತಿಯ ಹೆಸರು ಸಿದ್ಲಿಂಗಿ
ಬಸಲಿಂಗನು ಡಾ ॥ ತಿಮ್ಮಪ್ಪನಿಗೆ ತಾನು ತಲೆಗೆ ನೀರು ಹಾಕಿಲ್ಲ ಎಂದು ಸುಳ್ಳು ಹೇಳಿದನು .
ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ ಎಂದು ಬಸಲಿಂಗನಲ್ಲಿದ್ದ ಅಭಿಪ್ರಾಯ .
ಬಸಲಿಂಗ ವ್ಯದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ರುದ್ರಪ್ಪ .
ಬಸಲಿಂಗ ಸುಳ್ಳುಗಳಿಂದ ಮುಕ್ತನಾಗಿದ್ದನು .
ಬಸಲಿಂಗನ ಕಾಯಿಲೆ ದೇಹ ಮಟ್ಟದಿಂದ ಮೀರಿದ್ದು ಅವನ ನೋವು ಡಾ || ತಿಮ್ಮಪ್ಪನವರ ಪ್ರೀತಿಯ ಮಾತುಗಳು , ಮಿಂಚಿನಂತಹ ಅವರ ಬೆರಳುಗಳನ್ನು ಸ್ಮರಿಸತೊಡಗಿದ್ದವು .
ಡಾ ತಿಮ್ಮಪ್ಪ ಬಸಲಿಂಗನಿಗೆ ಡಾ || ಚಂದ್ರಪ್ಪನವರನ್ನು ಕಾಣಬೇಕೆಂದು ಸೂಚಿಸಿದರು
II. ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
2nd Puc Kannada Muttisikondavanu Notes Question Answer
1 ) ಹೆಂಡ್ತಿ ಸಿದ್ಧಿಂಗಿ ಏನು ಹೇಳುತ್ತಲೇ ಇದ್ದಳು ?
ಹೆಂಡ್ತಿ ಸಿದ್ಲಿಂಗಿ ಮಗುವಿಗೆ ಮೈಯಲ್ಲಿ ಸರಿಯಿಲ್ಲ . ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೇಳುತ್ತಲೆ ಇದ್ದಳು .
2 ) ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಯಾವುದು ಗೌಣವಾಗಿ ಕಾಣ ತೊಡಗಿದವು !
ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಉಳಿದಿರುವ ನೆಲ , ಮಗುವಿನ ಕಾಯಿಲೆ ಎಲ್ಲವೂ ಅವನಿಗೆ ಗೌಣವಾಗಿ ಕಾಣಿಸತೊಡಗಿದವು .
3 ) ಸಿದ್ಧಿಂಗಿ ಏಕೆ ರಾದ್ಧಾಂತ ಮಾಡಿದಳು ?
ಸಿದ್ಧಿಂಗಿಗೆ ಡಾ || ತಿಮ್ಮಪ್ಪ ಹೊಲೆಯರೆಂಬುದು ತಿಳಿದಿತ್ತು ಆದ್ದರಿಂದ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದಳು . ತಲೆಗೆ ನೀರು ಬೀಳ ಕೂಡದು ಎಂಬ ಎಚ್ಚರಿಕೆ ಕೊಟ್ಟಿರು ಆದರೂ ಅವರು ಮುಟ್ಟಿದ್ದು ಸೂತಕವಾಯಿತೆಂದು ಭಾವಿಸಿ ಅದನ್ನು ಪರಿಷ್ಕರಿಸು ಮೈತೊಳೆದುಕೊಂಡು ( ಸ್ನಾನ ಮಾಡಿಯೇ ) ಬರಬೇಕೆಂದು ಹಠ ಹಿಡಿದಳು .
4 ) ಕಣ್ಣನ್ನು ಪರೀಕ್ಷಿಸಿದ ಡಾ || ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು ?
ಕಣ್ಣನ್ನು ಪರೀಕ್ಷಿಸಿದ ಡಾ || ತಿಮ್ಮಪ್ಪ ಬಸಲಿಂಗನಿಗೆ ‘ ನಿನ್ನ ಕಣ್ಣು ಸರಿ ಹೋಗಿತ್ತ ಆದರೆ ಆಪರೇಷನ್ ಆಗಬೇಕು , ಪರವಾಗಿಲ್ಲ ಎಂದು ಕೇಳಿದರು .
5 ) ಬಸಲಿಂಗನಿಗೆ ಅದು ಪುರುಸೋತ್ತಿಲ್ಲದ ಕಾಲ ಯಾಕೆ ?
ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ , ದುಡಿಯಲು ನಾಲ್ಕು ದಿನ ತಡಮಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲ . ಇರುವ ಎರಡು ಎತ್ತುಗಳಲ್ಲಿ ನೊಗ ಇಟ್ಟೊಡನೆ ಮಲಗಿ ಬಿಡುತ್ತದೆ . ಎಷ್ಟು ಹೊಡೆದರೂ ಏಳುವುದಿಲ್ಲ ಮತ್ತೊಂದು ಹೊಡೆದರೆ ಏಳುವುದು , ಹೊಸ ಎತ್ತುಕೊಳ್ಳಬೇಕೆಂಬ ಯೋಚನೆ ಬೇರೆ , ಹೊಲ-ಗದ್ದೆ ಕೆಲಸದಿಂದ ಬಸಲಿಂಗನಿಗೆ ಪುರುಸೊತ್ತು ಇರಲಿಲ್ಲ .
6 ) ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು ?
ಕೊನೆಯಲ್ಲಿ ಬಸಲಿಂಗನಿಗೆ ಬಲಗಣ್ಣಿನ ನೋವು ಭೀಕರವಾಗಿ , ದೃಷ್ಟಿ ಮಂದವಾಗ ತೊಡಗಿತ್ತು . ತನ್ನ ಉಡಾಫೆ , ಸುಳ್ಳು ಜಾತಿ ಮಠದ ಗುರು – ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗಿತ್ತು .
7 ) ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು .
ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ – ಡಾ || ತಿಮ್ಮಪ್ಪನಿಗೆ ಇಲ್ಲ . ಅದಕ್ಕೆ ಆಪರೇಷನ್ ಮಾಡಿದ್ದಾರೆ ” ಎಂದು ಹೇಳಿದರು . ಔಷಧಿ ನೀಡಿ ಹಿತವಚನ ಕೊಟ್ಟರು .
8 ) ಡಾ || ಚಂದ್ರಪ್ಪ ಬಸಲಿಂಗನಿಗೆ ಡಾ || ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು ?
ಡಾ || ಚಂದ್ರಪ್ಪ ಬಸಲಿಂಗನಿಗೆ ಡಾ || ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೆಂದರೆ “ ಡಾ ॥ ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ . ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ ‘ ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ , ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು , ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ ‘ ಎಂದು ಹೇಳಿದರು .
III. ಐದಾರು ವಾಕ್ಯಗಳಲ್ಲಿ ಉತ್ತರಿಸಿ, ( ನಾಲ್ಕು ಅಂಕಗಳ ಪ್ರಶ್ನೆಗಳು ) :
1 ) ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು ?
ಬಸಲಿಂಗ ತನ್ನ ಎಡಗಣ್ಣು ನೋಯತೊಡಗಿದಾಗ ಕಣ್ಣುಬೇನೆ ಎಂದು ಮೊದಲಿಗೆ ಉದಾಸೀನ ಮಾಡಿದ , ನೋವಿನೊಂದಿಗೆ ಕಣ್ಣು ಮಂದವಾಗುತ್ತಿದೆ ಎನ್ನಿಸಿ ಹೆದರಿಕೆಯಾದಾಗ ನಗರದ ತನ್ನ ಎಂದಿನ ವೈದ್ಯರಿಗೆ ತೋರಿಸಿದ . ಅವರು ಹಚ್ಚಿಕೊಳ್ಳಲು ಒಂದು ಲೇಹ್ಯಕೊಟ್ಟು ಧೈರ್ಯ ಹೇಳಿ ಕಳುಹಿಸಿದರು . ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ವೈದ್ಯರು ಹೇಳಿದಂತೆ ಹಲವು ದಿನ ಲೇಹ್ಯ ಹಚ್ಚಿಕೊಂಡು ಬಟ್ಟೆಯ ಕಾವು , ಉಪ್ಪಿನ ಕಾವು ಕೊಟ್ಟುಕೊಂಡ . ಆದರೆ ಕಣ್ಣಿನ ಮಂದಸ್ಥಿತಿ ಮತ್ತು ನೋವು ಎರಡೂ ಹೆಚ್ಚುತ್ತಲೇ ಹೋಯಿತು . ಒಲ್ಲದ ಮನಸ್ಸಿನಿಂದಲೇ ಆತ ಸರ್ಕಾರಿ ಆಸ್ಪತ್ರೆಯ ಡಾ || ತಿಮ್ಮಪ್ಪನವರ ಬಳಿ ಬಂದ .
2 ). ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು ? ಅದಕ್ಕೆ ಕಾರಣಗಳೇನು ?
ಡಾ || ಚಂದ್ರಪ್ಪನವರು ತಿಮ್ಮಪ್ಪನವರ ಬಗ್ಗೆ ವ್ಯಕ್ತಪಡಿಸಿದ ಭಾವನೆಯನ್ನು ಕೇಳಿದ ನಂತರ ಬಸಲಿಂಗನು ತನ್ನ ಬಲಗಣ್ಣನ್ನಾದರೂ ಉಳಿಸಿಕೊಳ್ಳಲು ನಿರ್ಧರಿಸುತ್ತಾನೆ . ದಿನೇದಿನೇ ಬಲಗಣ್ಣಿನ ದೃಷ್ಟಿ ಮಂದವಾಗುತ್ತಿರುವುದು ಅವನ ಅರಿವಿಗೆ ಬಂದಿತ್ತು . ತನ್ನ ಉಡಾಫೆ , ಸುಳ್ಳು , ಜಾತಿ , ಮಠದ ಗುರು – ಯಾರೂ ತನ್ನನ್ನು ಉಳಿಸುವುದಿಲ್ಲವೆಂದು ನಿಶ್ಚಿತವಾಗಿತ್ತು . ಅವನಿಗೆ ಡಾ || ತಿಮ್ಮಪ್ಪನವರ ಮಿಂಚಿನಂತಹ ಬೆರಳು , ಪ್ರೀತಿ ತುಂಬಿದ ಮುಖ ನೆನಪಿಗೆ ಬಂದು , ನೇರವಾಗಿ ತಿಮ್ಮಪ್ಪನವರ ಬಳಿ ಬಂದವನೇ ಕಣ್ಣೀರು ಸುರಿಸುತ್ತಾ ಅವರ ಕೈ ಹಿಡಿದುಕೊಂಡ . ಅವರನ್ನು ಗಟ್ಟಿಯಾಗಿ ಹಿಡಿದು ಅಳತೊಡಗಿದ . ಅವನಲ್ಲಿ ಮರುಕಳಿಸಿದ ಮುಗ್ಧತೆಯನ್ನು ಕಂಡು ಅವರೂ ಕರಗಿದರು . ಬಸಲಿಂಗನ ಈ ಕೊನೆಯ ನಿರ್ಧಾರದಿಂದಾಗಿ ಅವನ ಬಲಗಣ್ಣು ಉಳಿಯುವಂತಾಯ್ತು .
3 ). ಬಸಲಿಂಗ ಡಾ | ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು ?
ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ || ತಿಮ್ಮಪ್ಪನವರು ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ , ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು , ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ . ಇದನ್ನು ಸರಿಯಾಗಿ ನೆನಪಿಟ್ಟುಕೊ ಎಂದು ಎಚ್ಚರಿಸಿ ಕಳುಹಿಸಿದ್ದರೂ ಮನೆಗೆ ಬಂದ ಮೇಲೆ ಹೆಂಡತಿ ಸಿದ್ಧಿಂಗಿಯ ತಗಾದೆಯಿಂದಾಗಿ ಡಾ || ತಿಮ್ಮಪ್ಪನವರ ಸೂಚನೆಯನ್ನು ಪಾಲಿಸಲು ಬಸಲಿಂಗನಿಗೆ ಸಾಧ್ಯವಾಗಲಿಲ್ಲ . ಬಸಲಿಂಗ ಹೇಳದಿದ್ದರೂ ಸಿದ್ಧಿಂಗಿಗೆ ಅದು ಹೇಗೋ ಡಾ || ತಿಮ್ಮಪ್ಪ ಹೊಲೆಯರೆಂಬುದು ಗೊತ್ತಾಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿದಳು . ಬಸಲಿಂಗನಿಗೂ ತಿಮ್ಮಪ್ಪ ತನ್ನನ್ನು ಮುಟ್ಟುವ ಮುನ್ನ ಅವರು ತಮ್ಮ ಜಾತಿಯ ಬಗ್ಗೆ ಒಂದು ಮಾತು ಹೇಳಿದ್ದರೆ ಚೆನ್ನಾಗಿತ್ತೆಂದು ಅನ್ನಿಸಿತು . ಈ ಎಲ್ಲದರಿಂದಾಗಿ ಆತನಿಗೆ ತನ್ನ ಆಳನದಲ್ಲಿ ಏನೋ ಕಮ್ಮಿಯಾದಂತೆನಿಸಿ ಬಸಲಿಂಗ ನೊಂದುಕೊಂಡ . ಈ ವಿಷಯವನ್ನು ಯಾರಿಗೂ ಹೇಳಬಾರದೆಂದೂ ಗಂಡ – ಹೆಂಡತಿ ತೀರ್ಮಾನಿಸಿ , ಮೈಲಿಗೆ ಪರಿಹರಿಸಿ ಕೊಳ್ಳಲು ಮೈತೊಳೆದುಕೊಳ್ಳಲು ನಿರ್ಧರಿಸಿ , ಕಣ್ಣು ನೆನೆಯುವಂತೆ ಬಿಸಿನೀರಿನ ಸ್ನಾನ ಮಾಡಿದಾಗ ಮುಂದಿನ ಸಮಸ್ಯೆಗಳು ಎದುರಾದವು .
4 ). ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು ?
ಬಸಲಿಂಗನಿಗೆ ಅದು ಯಾವುದಕ್ಕೂ ಪುರುಸೊತ್ತಿಲ್ಲದ ಕಾಲವಾಗಿತ್ತು , ಕೆಲ ಮಾಡುವುದನ್ನು ನಾಲ್ಕು ದಿನ ತಡಮಾಡಿದರೆ ಕುಳ ನೆಲದಲ್ಲಿ ನಾಟುವುದಿಲ್ಲವೆಂಬ ಚಿಂತೆಯಾಗಿತ್ತು . ಇರುವ ಎರಡು ಎತ್ತುಗಳಲ್ಲಿ ಒಂದು ನೊಗ ಹೆಗಲಿಗಿಟೊಡನೆ ಮಲಗಿ , ಎಷ್ಟು ಹೊಡೆದರೂ ಮೇಲೇಳುತ್ತಿರಲಿಲ್ಲ . ಈ ಎತ್ತುಗಳನ್ನು ಸಾಟಿಯಲ್ಲಿ ಯಾರಿಗಾದರೂ ಮಾರಿ ಬೇರೆಯದನ್ನು ತರಬೇಕೆಂದು ಅವನು ಯೋಚಿಸುತ್ತಿದ್ದನು . ಇದರ ಜೊತೆಗೆ ಮಗುವಿಗೆ ಆರೋಗ್ಯ ಸರಿಯಿರಲಿಲ್ಲ . ಏನು ಮಾಡಿದರೂ ಮಗುವಿನ ಕೆಮ್ಮು ಕಡಿಮೆಯಾಗುತ್ತಿಲ್ಲ . ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೆಂಡತಿ ಹೇಳುತ್ತಿದ್ದರೂ ಬಸಲಿಂಗನಿಗೆ ಪುರುಸೊತ್ತಿರಲಿಲ್ಲ . ಈ ಎಲ್ಲದರ ನಡುವೆ ಬಸಲಿಂಗನ ಎಡಗಣ್ಣಲ್ಲಿ ನೋವು ಕಾಣಿಸಿಕೊಂಡು ದಿನೇದಿನೇ ಹೆಚ್ಚುತ್ತಲೇ ಹೋಯಿತು .
5 ) ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು ? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ ?
ತಲೆಗೆ ಸ್ನಾನ ಮಾಡಿದ್ದರಿಂದ ಬಸಲಿಂಗನ ಎಡಗಣ್ಣು ತೀವ್ರ ತೊಂದರೆ ಗೀಡಾಯಿತು . ಬಸಲಿಂಗ ಮೊದಲು ಬೇರೆ ವೈದ್ಯರ ಬಳಿ ಹೋದರೂ ವಿಧಿಯಿಲ್ಲದೆ ಡಾ || ತಿಮ್ಮಪ್ಪನವರ ಬಳಿಬಂದು ತಾನು ನೀರು ಸೋಂಕಿಸಿಯೇ ಇಲ್ಲವೆಂದು ಸುಳ್ಳಾಡಿದ . ನಂತರ ನಡೆದುದನ್ನು ತಿಳಿಸಿ ಇನ್ನೊಮ್ಮೆ ಆಪರೇಷನ್ ಮಾಡಿ , ನಿಮ್ಮ ಮಾತು ಮೀರೊಲ್ಲ ಎಂದು ಕೇಳಿಕೊಂಡನು . ಪುನಃ ಆಪರೇಷನ್ ಮಾಡಲು ಒಪ್ಪದ ಡಾ || ತಿಮ್ಮಪ್ಪ ‘ ಈಗಿರೋ ಗಾಯಕ್ಕೆ ಔಷಧಿ ಕೊಡೇನೆ . ತಪ್ಪದೆ ಹಚ್ಚಿಕೋ ‘ ಎಂದಾಗ ಬಸಲಿಂಗನಿಗೆ ಸಿಟ್ಟು ಬಂದಿತು . ತನ್ನ ಜಾತಿಯನ್ನು ಕೆಡಿಸಿದ ತಿಮ್ಮಪ್ಪ ತನ್ನ ಬಗ್ಗೆ ನಿರ್ಲಕ್ಷ್ಯ ತಾಳಿರುವಂತೆ ಆತನಿಗೆ ಅನ್ನಿಸಿ , ತನ್ನ ಕಣ್ಣು ಹೋಗಲು ಅವರೇ ಕಾರಣರೆಂದು ನಿರ್ಧರಿಸಿದ . ತಾನು ಬಲ್ಲವರಲ್ಲಿ ತಿಮ್ಮಪ್ಪನವರ ಬಗ್ಗೆ ಇಲ್ಲಸಲ್ಲದ ಚಾಡಿಮಾತು ಹೇಳಿ ನಂಬಿಸಿದ . ಹೀಗೆ ಬಸಲಿಂಗ ತನ್ನ ಸಿಟ್ಟಿನ ಪರಿಣಾಮದಿಂದ ಸಣ್ಣತನ ಬೆಳೆಸಿಕೊಂಡನು .
IV. ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
2nd Puc Kannada Muttisikondavanu Notes
1 ) “ ನೀರು ಬಿದ್ದರೆ ಕಣ್ಣು ಹೋಗುವ ಅಪಾಯ ಇದೆ . ”
. ಪಿ . ಲಂಕೇಶರ ‘ ಮುಟ್ಟಿಸಿಕೊಂಡವನು ‘ ಕಥೆಯಲ್ಲಿ ಡಾ | ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಹೇಳಿರುವ ಮಾತುಗಳಿವು . ಕಣ್ಣಿನ ಆಪರೇಷನ್‌ಗೆಂದು ನಿಗದಿತ ದಿನದಂದು ಬಸಲಿಂಗ ಡಾ | ತಿಮ್ಮಪ್ಪನವರ ಬಳಿ ಬಂದಾಗ ಅವರು ಅವನಿಗಾಗಿಯೇ ಕಾಯುತ್ತಿದ್ದಂತಿತ್ತು . ಬಸಲಿಂಗನಲ್ಲಿ ಅವರಿಗೆ ವಿಶೇಷ ಪ್ರೀತಿ ಮತ್ತು ಆಸಕ್ತಿಗಳಿದ್ದವು . ಅನುಭವಿ ವೈದ್ಯರಾದ ಆತ ಬಸಲಿಂಗನನ್ನು ಆಪರೇಷನ್‌ಗೆ ಸಿದ್ಧಗೊಳಿಸಿ ಕೆಲವೇ ನಿಮಿಷಗಳಲ್ಲಿ ಆಪರೇಷನ್ ಮಾಡಿ ಮುಗಿಸಿದರು . ನಂತರ ಬಸಲಿಂಗನ ಕೈ ಹಿಡಿದುಕೊಂಡು “ ನೋಡು , ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ . ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು . ನೀರು ಬಿದ್ದರೆ ಕಣ್ಣು ಕೆಟ್ಟು ಹೋಗುವ ಅಪಾಯವಿದೆ . ಇದನ್ನು ಸರಿಯಾಗಿ ನೆನಪಿಟ್ಟುಕೋ ‘ ಎಂದು ಹೇಳಿ ಎಚ್ಚರಿಕೆ ಕೊಟ್ಟು ಕಳುಹಿಸುವ ಸಂದರ್ಭವಿದಾಗಿದೆ .
2 ) “ ಬಸಲಿಂಗಪ್ಪ , ನೀನು ತುಂಬಾ ಒಳ್ಳೆಯವನು .
” ಪಿ . ಲಂಕೇಶ್ ಅವರು ರಚಿಸಿರುವ ‘ ಮುಟ್ಟಿಸಿಕೊಂಡವನು ‘ ಎಂಬ ಸಣ್ಣಕಥೆ ಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಡಾ || ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಹೇಳುವ ಮಾತಿದು . ಡಾ || ತಿಮ್ಮಪ್ಪನವರು ಎರಡು ವಾರಗಳ ಕಾಲ ತಲೆಗೆ ನೀರು ಸೋಂಕಿಸಬಾರದು . ನೀರು ಬಿದ್ದರೆ ಕಣ್ಣು ಕೆಟ್ಟುಹೋಗುವ ಅಪಾಯವಿದೆ ಎಂದು ಎಚ್ಚರಿಸಿದ್ದರೂ ಬಸಲಿಂಗ ಹೆಂಡತಿಯ ಒತ್ತಾಯಕ್ಕೆ ಕಟ್ಟುಬಿದ್ದು ತಲೆಗೆ ಸ್ನಾನಮಾಡಿ ಕಣ್ಣಿನ ನೋವನ್ನು ಪುನಃ ತಂದುಕೊಂಡನು . ಪಶ್ಚಾತ್ತಾಪದಿಂದ ತಿಮ್ಮಪ್ಪನವರ ಬಳಿ ಬರದೆ ಬೇರೆ ಡಾಕ್ಟರುಗಳಿಗೆ ಕಣ್ಣು ತೋರಿಸಿದ . ಅವರು ಕೊಟ್ಟ ಔಷಧಿ ಉಪಯೋಗಕ್ಕೆ ಬಾರದಿದ್ದಾಗ ಪುನಃ ಅವನು ತಿಮ್ಮಪ್ಪನವರ ಬಳಿಗೇ ಬರಬೇಕಾಯಿತು . ತಿಮ್ಮಪ್ಪನವರು ಅವನನ್ನು ಕುಳ್ಳಿರಿಸಿ ಪ್ರೀತಿಯಿಂದಲೇ ಪ್ರಶ್ನೆ ಕೇಳಿದರಾದರೂ ಬಸಲಿಂಗ ತಾನು ತನ್ನ ತಲೆಗೆ ನೀರನ್ನು ಸೋಂಕಿಸಿಯೇ ಇಲ್ಲ ಎಂದು ಸುಳ್ಳಾಡಿದನು . ಅವನು ನಡುಗುತ್ತಿರುವುದನ್ನು ಗಮನಿಸಿದ ತಿಮ್ಮಪ್ಪನವರು “ ಬಸಲಿಂಗಪ್ಪ , ನೀನು ತುಂಬ ಒಳ್ಳೆಯವನು . ಆದದ್ದು ಆದ ಹಾಗೆ ಹೇಳು ” ಎಂದು ತಣ್ಣಗೆ ಕೇಳಿದ ಸಂದರ್ಭವಿದು .
3 ) “ ಆಪರೇಷನ್ ಆಗಬೇಕು , ಪರವಾಗಿಲ್ಲವಾ ? ”
ಪಿ . ಲಂಕೇಶರು ಬರೆದಿರುವ ‘ ಮುಟ್ಟಿಸಿಕೊಂಡವನು ‘ ಎಂಬ ಸಣ್ಣಕಥೆಯಲ್ಲಿ ಡಾ ತಿಮ್ಮಪ್ಪನವರು ಬಸಲಿಂಗನನ್ನು ಉದ್ದೇಶಿಸಿ ಈ ಮೇಲಿನ ಮಾತನ್ನು ಆಡುವರು . ಊರಿನವರೊಬ್ಬರ ಸಲಹೆಯಂತೆ ಬಸಲಿಂಗನು ತನ್ನ ನೋಯುತ್ತಿರುವ ಕಣ್ಣನ್ನು ತೋರಿಸಿಕೊಳ್ಳಲು ಸರ್ಕಾರಿ ವೈದ್ಯರಾದ ಡಾ | ತಿಮ್ಮಪ್ಪನವರ ಬಳಿ ಬಂದು ತನ್ನ ನೆಮ್ಮದಿ ಕೆಡಿಸಿರುವ ವಿಚಾರಗಳನ್ನೆಲ್ಲ ತೋಡಿಕೊಂಡನು . ಅವನನ್ನು ಪರೀಕ್ಷಿಸಿದ ಡಾ ತಿಮ್ಮಪ್ಪನವರು ಅವನ ಕಣ್ಣು ನೋವಿನ ಕಾರಣಗಳನ್ನು ಹುಡುಕುತ್ತಲೇ ಬಸಲಿಂಗನಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ “ ನಿನ್ನ ಕಣ್ಣು ಸರಿಹೋಗುತ್ತೆ , ಆದರೆ ಆಫರೇಷನ್ ಆಗಬೇಕು , ಪರವಾಗಿಲ್ಲವಾ ? ” ಎಂದು ಕೇಳಿದ ಸಂದರ್ಭವಿದಾಗಿದೆ .
4 ) “ ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ “
ಪಿ . ಲಂಕೇಶ್ ಅವರು ಬರೆದಿರುವ ‘ ಮುಟ್ಟಿಸಿಕೊಂಡವನು ‘ ಎಂಬ ಕಥೆಯಲ್ಲಿ ಬಸಲಿಂಗಪ್ಪನಿಗೆ ಡಾ || ಚಂದ್ರಪ್ಪನವರು ಈ ಮೇಲಿನಂತೆ ಹೇಳಿದ್ದಾರೆ . ಬಸಲಿಂಗಪ್ಪ ಡಾ || ಚಂದ್ರಪ್ಪನವರ ಜಾತಿ ತಿಳಿದುಕೊಂಡು ನಿರಾಶನಾದ ನಂತರ ಅವರ ಬಳಿ ಬಂದು ತನ್ನ ಎಡಗಣ್ಣು ಹೋದ ವಿಚಾರವನ್ನು ತಿರುಚಿ ಹೇಳಿದನು . ಅವನ ಮಾತನ್ನು ಕೇಳಿದ ಡಾ || ಚಂದ್ರಪ್ಪನವರು ಬಸಲಿಂಗನ ಮಾತನ್ನು ಸ್ವಲ್ಪವೂ ನಂಬದೆ “ ಡಾ ॥ ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ . ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ , ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು , ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ ” ಎಂದು ಹೇಳಿದರು . ಮತ್ತೆ ವಿಧಿಯಿಲ್ಲದೆ . ಬಸಲಿಂಗ ಡಾ || ತಿಮ್ಮಪ್ಪನವರ ಬಳಿಗೆ ಹಿಂದಿರುಗುವುದು ಅನಿವಾರ್ಯವಾಯಿತು .
5 ). “ ಅವನು ನನ್ನಷ್ಟೇ ಒಳ್ಳೆಯ ಡಾಕ್ಟರು , ಏನೂ ತಪ್ಪು ತಿಳಿಯಬೇಡ . ”
ಪಿ . ಲಂಕೇಶ್‌ರವರ ‘ ಮುಟ್ಟಿಸಿಕೊಂಡವನು ‘ ಎಂಬ ಸಣ್ಣಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಬಸಲಿಂಗಪ್ಪ ತನ್ನ ಎಡಗಣ್ಣನ್ನು ಪೂರ್ತಿ ಕಳೆದುಕೊಂಡ ಮೇಲೆ ಅವನ ಬಲಗಣ್ಣು ನೋಯತೊಡಗಿತು . ಈ ಬಾರಿ ಅವನು ಬೇರೆ ಡಾಕ್ಟರರಲ್ಲಿ ತೋರಿಸಿ , ಉಪಾಯ ಕಾಣದೆ ಉಡಾಫೆಯ ಶೈಲಿಯಲ್ಲೇ ಪುನಃ ಡಾ || ತಿಮ್ಮಪ್ಪನವರ ಬಳಿ ಬಂದನು . ಡಾ || ತಿಮ್ಮಪ್ಪನವರಿಗೆ ಬಸಲಿಂಗನಲ್ಲಿ ಆಗಿರುವ ಬದಲಾವಣೆ ತಿಳಿಯಿತು . ತಮ್ಮ ಮುಟ್ಟುವಿಕೆಯಿಂದ ಬಸಲಿಂಗನಲ್ಲಿ ಊಹಿಸದಿರುವ ಬದಲಾವಣೆಯನ್ನು ಕಂಡ ಅವರು ಈ ಬಾರಿ ಅವರು ಅವನಿಗೆ “ ನೀನು ಡಾ || ಚಂದ್ರಪ್ಪನವರನ್ನು ನೋಡು ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು , ಏನೂ ತಪ್ಪು ತಿಳಿಯಬೇಡ ” ಎಂದು ಹೇಳಿ ಬಸಲಿಂಗನನ್ನು ಡಾ || ಚಂದ್ರಪ್ಪನವರ ಬಳಿಗೆ ಕಳುಹಿಸಿಕೊಟ್ಟ ಸಂದರ್ಭವಿದಾಗಿದೆ .
6 ). “ ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ . ”
ಪಿ . ಲಂಕೇಶ್ ಅವರ ‘ ಮುಟ್ಟಿಸಿಕೊಂಡವನು ‘ ಕಥೆಯಲ್ಲಿ ಡಾ || ತಿಮ್ಮಪ್ಪನವರು ಬಸಲಿಂಗನಿಗೆ ಈ ಮೇಲಿನ ಮಾತನ್ನು ಹೇಳುವರು . ತಾನು ಮುಟ್ಟಿದ್ದರಿಂದಾಗಿ ಬಸಲಿಂಗನಿಗಾದ ತೊಂದರೆ ಮತ್ತು ಅವನಲ್ಲಾದ ನಡುವಳಿಕೆಯ ಬದಲಾವಣೆಯನ್ನು ಗಮನಿಸಿದ ಡಾ | ತಿಮ್ಮಪ್ಪನವರಿಗೆ ನೋವಾಯಿತು . ಆದ್ದರಿಂದ ಅವರು ಬಸಲಿಂಗನ ಇನ್ನೊಂದು ಕಣ್ಣಿನ ಚಿಕಿತ್ಸೆಗೆ ಒಪ್ಪದೆ ಡಾ || ಚಂದ್ರಪ್ಪನವರ ಬಳಿ ಹೋಗುವಂತೆ ತಿಳಿಸುತ್ತಾ “ ಬಸಲಿಂಗಪ್ಪ , ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ ; ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಊಹಿಸದೆ ಇದ್ದುದ್ದನ್ನು ಮಾಡಿದೆ ” ಎಂದರಲ್ಲದೆ , ಇದು ನಿನ್ನ ತಪ್ಪಲ್ಲ . ಇದಕ್ಕಾಗಿ ನಾನು ಯಾರನ್ನೂ ಬೈಯುವುದಿಲ್ಲವೆಂದು ಹೇಳುವರು . ಅವರಿಗೆ ಸಮಾಜದ ವರ್ತನೆಯ ಅರಿವಿತ್ತು .
2nd Puc Kannada Muttisikondavanu Notes Question Answer Pdf
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.
TQ sir