ದ್ವಿತೀಯ ಪಿ.ಯು.ಸಿ. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ನೋಟ್ಸ್‌ | 2 PUC Innu Huttadeyirali Nariyarennavolu Kannada Notes.

ದ್ವಿತೀಯ ಪಿ.ಯು.ಸಿ. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ನೋಟ್ಸ್. 2nd Puc Kannada Innu Huttadeyirali Nariyarennavolu Notes pdf Download.

ತರಗತಿ : ದ್ವಿತೀಯ ಪಿ.ಯು.ಸಿ.

ಪದ್ಯದ ಹೆಸರು : ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಕೃತಿಕಾರರ ಹೆಸರು : ಕುಮಾರವ್ಯಾಸ

2nd Puc Kannada Innu Huttadeyirali Nariyarennavolu Notes

ದ್ವಿತೀಯ ಪಿ.ಯು.ಸಿ. ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಕನ್ನಡ ನೋಟ್ಸ್‌. 2 PUC Kannada Innu Huttadeyirali Nariyarennavolu Kannada Notes.

ಕವಿ ಪರಿಚಯ :

ಯುಗಪ್ರವರ್ತಕ ಕವಿಯೆನಿಸಿದ ಕುಮಾರವ್ಯಾಸ ಭಾಗವತ ಭಕ್ತಕವಿಯೂ ಹೌದು . ಈತನ ಕಾಲ ಕ್ರಿ.ಶ. ೧೪೦೦. ಗದುಗಿನ ಹತ್ತಿರದ ಕೋಳಿವಾಡ ಈತನ ಹುಟ್ಟೂರು . ನಾರಣಪ್ಪ ಈತನ ನಿಜ ನಾಮಧೇಯ . ವ್ಯಾಸರ ಮೇಲಿನ ಪ್ರೀತಿ ಗೌರವಾದರಗಳಿಂದಾಗಿ ತನ್ನನ್ನು ಕುವರವ್ಯಾಸ , ಕುಮಾರವ್ಯಾಸ ಎಂಬುದಾಗಿ ಕರೆದು ಕೊಂಡಿದ್ದಾನೆ . ಸ್ಮಾರ್ಥ ವೈದಿಕ ಬ್ರಾಹ್ಮಣರಾದ ಈತನ ಹಿರಿಯರು ಕೋಳಿವಾಡ ಗ್ರಾಮದ ಶ್ಯಾನುಭೋಗ ವೃತ್ತಿಯಲ್ಲಿದ್ದರು . ಹರಿಭಕ್ತನಾದ ಈತನ ಆರಾಧ್ಯದೈವ ಗದುಗಿನ ವೀರನಾರಾಯಣ . ಆ ದೈವದ ಸನ್ನಿಧಿಯಲ್ಲಿಯೇ ಕುಳಿತು ಈತ ಕಾವ್ಯ ರಚಿಸಿದನೆಂಬ ಐತಿಹ್ಯವಿದೆ .

ಕುಮಾರವ್ಯಾಸನ ಕೃತಿಯ ಹೆಸರು ‘ ಕರ್ಣಾಟ ಭಾರತ ಕಥಾಮಂಜರಿ ‘ , ಕುಮಾರವ್ಯಾಸ ಭಾರತ , ಗದುಗಿನ ಭಾರತ ಎಂದೆಲ್ಲ ಹೆಸರುವಾಸಿಯಾದ ಈ ಕೃತಿಯು ಪಂಡಿತ – ಪಾಮರರಿಬ್ಬರಿಂದಲೂ ಮೆಚ್ಚುಗೆ ಗಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ . ವ್ಯಾಸರ ಮೂಲ ಸಂಸ್ಕೃತ ಭಾರತದ ೧೮ ಪರ್ವಗಳಲ್ಲಿ , ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸನು ಭಾಮಿನಿ ಷಟ್ನದಿಯಲ್ಲಿ ಅನುವಾದಿಸಿದ್ದಾನೆ . ಮೂಲಕೃತಿಯನ್ನನುಸರಿಸಿದರೂ ಕವಿಯು ತನ್ನ ಕಾವ್ಯದಲ್ಲಿ ಅಪಾರವಾದ ಪ್ರತಿಭಾಶಕ್ತಿಯನ್ನು ಮೆರೆದಿದ್ದಾನೆ . ಕನ್ನಡ ‘ ದೇಸಿ’ಯ ಸೊಗಡು , ಔಚಿತ್ಯಪೂರ್ಣವಾದ ರೂಪಕಗಳು ಕಾವ್ಯಕ್ಕೆ ಅಪೂರ್ವವಾದ ಕಳೆಯನ್ನು ತಂದುಕೊಟ್ಟಿವೆ . ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ‘ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು . ಭಾರತ ಕಣ್ಣಲಿ ಕುಣಿಯುವುದು ‘ ಎಂಬುದಾಗಿ ಕುವೆಂಪು ಅವರು ಮೆಚ್ಚುಗೆ ಸೂಚಿಸಿದ್ದರಲ್ಲಿ ಅತಿಶಯೋಕ್ತಿಯಿಲ್ಲ .

ಪ್ರಸ್ತುತ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಪಠ್ಯಭಾಗದಲ್ಲಿ ಕೀಚಕನಿಂದ ಅವಮಾನಿತಳಾದ ದ್ರೌಪದಿಯು , ಆತನ ಕಿರುಕುಳದಿಂದ ತನ್ನನ್ನು ಪಾರು ಮಾಡುವಂತೆ ಭೀಮನಲ್ಲಿ ಬಂದು ಬೇಡಿಕೊಳ್ಳುವ ಪ್ರಸಂಗವು ಇಲ್ಲಿ ವರ್ಣಿತವಾಗಿದೆ .

ಕಾವ್ಯದ ಹಿನ್ನೆಲೆ :

ಪ್ರಸ್ತುತ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಪಠ್ಯಭಾಗವನ್ನು ‘ ಕರ್ಣಾಟ ಭಾರತ ಕಥಾಮಂಜರಿ ‘ ಕೃತಿಯ ವಿರಾಟಪರ್ವದ ೩ ನೆಯ ಸಂಧಿಯಿಂದ ಆಯ್ದುಕೊಂಡಿದೆ . ಪಾಂಡವರು ಒಂದು ವರ್ಷದ ಅಜ್ಞಾತವಾಸದ ಅವಧಿಯನ್ನು ವಿರಾಟರಾಜನ ಆಶ್ರಯದಲ್ಲಿ ವೇಷಮರೆಸಿಕೊಂಡು ಬೇರೆಬೇರೆ ಹೆಸರುಗಳಿಂದ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡು ಕಾಲಕಳೆಯುತ್ತಿರುತ್ತಾರೆ . ದ್ರೌಪದಿ ಕೂಡ ‘ ಸೈರಂಧಿ ‘ ಎಂಬ ಹೆಸರಿನಲ್ಲಿ ವಿರಾಟರಾಜನ ರಾಣಿ ಸುದೇಷ್ಟೆಯ ದಾಸಿಯಾಗಿರುತ್ತಾಳೆ . ಸುಧೇಷ್ಟೆಯ ತಮ್ಮನಾದ ಕೀಚಕನು ಒಮ್ಮೆ ದಾಸಿ ಸೈರಂಧಿಯನ್ನು ಕಂಡು ಮೋಹಿತನಾಗುತ್ತಾನೆ . ಆಗಾಗ ಪದೇಪದೇ ಅವಳನ್ನು ಕೆಣಕುತ್ತಾ ಪೀಡಿಸುತ್ತಿರುತ್ತಾನೆ . ಒಮ್ಮೆಯಂತೂ ವಿರಾಟರಾಜನ ಓಲಗದಲ್ಲಿ ದ್ರೌಪದಿಯನ್ನು ಹಿಡಿದೆಳೆಯಲೆತ್ನಿಸಿ , ಸಾಧ್ಯವಾಗದಿದ್ದಾಗ ಕಾಲಿನಿಂದ ಒದೆದು ಅವಮಾನಿಸುತ್ತಾನೆ . ಹೀಗೆ ಕೀಚಕನ ನಿರಂತರವಾದ ಉಪಟಳದಿಂದ ನೊಂದು – ದುಃಖಿತೆಯಾದ ದ್ರೌಪದಿಯು , ಆತನನ್ನು ಕೊಲ್ಲುವಂತೆ ಭೀಮನಲ್ಲಿಗೆ ಬೇಡಿಕೊಳ್ಳಲು ಬರುವ ಪ್ರಸಂಗದೊಂದಿಗೆ ಪ್ರಸ್ತುತ ಪಠ್ಯಭಾಗ ಆರಂಭವಾಗುತ್ತದೆ . ಕೀಚಕನಿಂದಾದ ಅವಮಾನವನ್ನು ದ್ರೌಪದಿ ಭೀಮನಲ್ಲಿ ಹೇಳಿಕೊಳ್ಳುವುದು , ಆತನ ಪ್ರತ್ಯುತ್ತರ , ಕೊನೆಗೆ ಭೀಮನನ್ನು ಕೆಣಕಿ ಅವನ ಶೌಲ್ಯವನ್ನು ಬಡಿದೆಬ್ಬಿಸಿ – ಅಣಿಗೊಳಿಸುವ – ರೀತಿ ಮುಂತಾದವುಗಳು ನಾಟಕೀಯತೆಯಿಂದ ಕೂಡಿ , ಹೃದ್ಯವಾಗಿ ಮೂಡಿಬಂದಿದೆ .

ಪದಗಳ ಅರ್ಥ:

. ಉಸುರು – ಹೇಳು ; ಸಾರು – ಹತ್ತಿರ ಬರು , ಸಮೀಪಿಸು ; ಒರಲು – ಕೂಗಿ ಹೇಳು : ನವೆ – ನರಳು : ಹೊಯ್ದು – ಹೊಡೆದುಕೊಂಡು ಶಶಿವದನೆ – ದ್ರೌಪದಿ , ಚಂದ್ರನಂತೆ ಮುಖವುಳ್ಳವಳು .

. ಯಮಸುತ – ಧರ್ಮರಾಯ : ಗರ – ಗ್ರಹ , ದೆವ್ವ ಭ್ರಮಿತ – ಭ್ರಮೆಗೆ ಸಿಲುಕಿದ , ಕಂಗೆಟ್ಟ : ಪಾರ್ಥ ಅರ್ಜುನ : ಆಕ್ಷಮರು – ಅಸಮರ್ಥರು , ನಾಯ – ನಾಯಿಯನ್ನು ( ಕೀಚಕನನ್ನು ) : ರಮಣರು – ಪತಿಗಳು ,

. ಮಿಡುಕುಳ್ಳ – ಮಿಡಿಯುವವನು ; ಹುಬ – ಕಾರ್ಯ , ಪಾಲನೆ , ಸಂಕಷ್ಟ , ತೊಂದರೆ ; ಅಂಗೈಸು – ಕಾಳಜಿ ತೋರು : ಹೀಹಾಳಿ – ಸ್ವಾಭಿಮಾನದ ಜಿದ್ದು : ಹುರುಳು – ಕೆಚ್ಚು , ಸಾಮರ್ಥ್ಯ : ಯಿಲ್ಲ – ದುಷ್ಟ , ಕುಲ್ಲಕ ( ಕೀಚಕ ) ,

. ಮೋರೆ – ಮುಖ ; ಮು – ಕಳಾಹೀನತೆ ( ಸಪ್ಪಗಿನ ಮುಖ ) : ಸಾಮ – ಸಮಾಧಾನ , ತಾಳ್ಮೆ ತುಬ್ಬುವುದೋ – ಅರಿಯುವುದೋ ( ಅವನ ಮನಸ್ಸನ್ನು ) ; ನಿಬ್ಬರವು – ಆಕಾಲಿಕ ಆಗಮನ , ಬರವಲ್ಲದ ಬರವು ; ವಲ್ಲಭ – ಗಂಡ , ನಲ್ಲ , ಒಡೆಯ .

. ಅಪ್ರತಿಮಲ್ಲ – ಸರಿಸಾಟಿಯಿಲ್ಲದ ಜಟ್ಟಿ , ಧೀರ , ಭೀಮು : ಪಾಂಚಾಲನಂದನೆ – ಪಾಂಚಾಲ ದೇಶದ ಅರಸುಮತಿ , ದೌಪದಿ ; ವಲ್ಲಭೆ – ಪ್ರಿಯೆ , ಪತ್ನಿ : ತಲ್ಲಣ – ಹೆದರಿಕೆ , ಕಳವಳ : ಲತಾಂಗಿ – ಬಾಗಿ ಬಳುಕುವ ಅಂಗಾಂಗವುಳ್ಳವಳು , ದೌಪದಿ ; ತಳವು – ತಡ .

. ಅರೆಯಟ್ಟಿ – ಬೆನ್ನಟ್ಟಿ , ವಂದಿಗರು – ಜತೆಯವರು ; ಪರಿಭವ – ಅವಮಾನ , ಅನಾದರ , ಪಾತಕ – ಪಾಪ ; ಖತಿ – ಕೋಪ ; ಮಾಣದುಬಿಡದು : ಬೆಂಬಳಿಯ ಬಿಡ – ಬೆನ್ನು ಹತ್ತದೆ ಬಿಡಲಾರನು .

ಮಾನಾರ್ಥ – ಮಾನದ ವಿಷಯ : ಬಾಹಿರ – ಅದಕ್ಕೆ ಹೊರತಾದ ; ಸಮತೆ – ಶಾಂತಸ್ಥಿತಿ : ಕುಠಾರ ಕ್ರೂರಿ , ಕೊಡಲಿ ,

೮. ಹಳಿವು – ಕೆಟ್ಟಮಾತು ; ಹೊರೆ – ಜೊತೆ , ಪಕ್ಕ

. ಹರಿಬ – ಕರ್ತವ್ಯ , ರಕ್ಷಣೆ : ಕಡಿಖಂಡ – ಕಡಿದು ತುಂಡು ಮಾಡು

೧೦. ಕುಜನ – ಕೆಟ್ಟಜನ ; ಕಣ್ಣಿ – ಬಂಧನ , ಹಗ್ಗದ ಗಂಟು ,

೧೧. ಭೀಮಸನ್ನಿಭರು – ಭೀಮಸದೃಶ್ಯರು , ಭೀಮನಂತೆ ಬಲಶಾಲಿಗಳು ( ಹೆಂಡತಿಯನ್ನು ಕಾಪಾಡಲಾಗದ ಭೀಮನಂಥವರು ಹುಟ್ಟಿ ಏನು ಪ್ರಯೋಜನ ? ಎಂಬುದು ದೌಪದಿಯ ಮಾತಿನ ಅಭಿಪ್ರಾಯ ) : ನವೆ – ನರಳು : ಭಂಗಿತರು – ಅವಮಾನಕ್ಕೊಳಗಾದವರು ,

೧೨. ಮಂದೆಗಳೆಸು ತುಂಬಿದ ಸಭೆಗೆ ಎಳೆದುತರಿಸಿದ : ಮುಂದಲೆ – ತಲೆಯ ಮುಂಭಾಗದ ಕೂದಲು ; ಬಸವಳಿ – ಬಳಲು ; ಭಂಗ – ಅವಮಾನ ,

೧೩. ಕಾಲ – ಯಮ ; ಎಚ್ಚಾಳುತನ – ಬಿಲ್ವಿದ್ಯಾ ಜಾಣೆ : ತೋಳಹೊರೆ – ತೋಳಬಲ : ಕೂಳುಗೇಡಿಂಗೊಡಲ ಹೊರುವಿರಿ – ತಿನ್ನುವುದಕ್ಕೆ ಮಾತ್ರ ಹುಟ್ಟಿರುವ ನಿಯೋಜಕರಂತೆ ಬದುಕಿರುವಿರಿ ?

೧೪. ಘನತೆ – ಗುರುತ್ತ : ಉಬ್ಬರಿಸು – ಹೆಚ್ಚಾಗಿ : ಮಾನಿನಿ – ಹೆಣ್ಣು ( ದೌಪದಿ ) : ಹಿಂಡು – ತಿರುಚಿಕೊಲ್ಲು .

೧೫. ಮುಂಡಾಡು – ಮುದ್ದುಮಾಡು , ಹೊರೆ – ಸಮೀಪ , ಬಳಿಯಲ್ಲಿ : ಗಿಂಡಿ – ಚಿಕ್ಕ ತಂಬಿಗೆ : ಖಾತಿ – ಸಿಟ್ಟು , ಕೋಪ ; dfVfr- ಹೆಚ್ಚಿಗೆ ಮಾತೇಕೆ ?

2nd Puc Kannada Innu Huttadeyirali Nariyarennavolu Question Answer

ಆ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಪಾಂಚಾಲನಂದನೆ ಯಾರು ?

ಪಾಂಚಾಲನಂದನೆ ಎಂದರೆ ‘ ಪಾಂಚಾಲದೇಶದ ಅರಸುಪುತ್ರಿ ‘ ದ್ರೌಪದಿ

2 ) ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?

ಧರ್ಮರಾಯನಿಗೆ ಧರ್ಮಕ್ಷಮೆಯ ಗರ ಹೊಡೆದಿದೆ .

3 ) ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು ?

ಅಣ್ಣನಾಜ್ಞೆಯಲಿ ಭ್ರಮಿತನಾದವನು ಕಲಿಭೀಮ.

4 ) ದ್ರೌಪದಿ ತನ್ನನ್ನು ತಾನು ಏನೆಂದು ಕರೆದುಕೊಂಡಿದ್ದಾಳೆ ?

ದ್ರೌಪದಿ ತನ್ನನ್ನು ತಾನು ಸೈರೇಂದ್ರಿಯಾಗಿ ಕರೆದುಕೊಂಡಿದ್ದು ಯಾವ ನಾರಿಯು ತನ್ನಂತೆ ಹುಟ್ಟದಿರಲಿ ಎಂದಿದ್ದಾಳೆ .

5) ಕಲಿಭೀಮನು ಎಂತಹ ಗಂಡನೆಂದು ದ್ರೌಪದಿ ಹೇಳಿದ್ದಾಳೆ ?

ಕಲಿಭೀಮನು ಮಿಡುಗುಳ್ಳಗಂಡ ( ಪೌರುಷ ತುಂಬಿದ ಗಂಡ ) ಎಂದು ದ್ರೌಪದಿ ಹೇಳಿದ್ದಾಳೆ .

6 ) ಯಾರನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ ?

ಕೀಚಕನನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ .

7 ) ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ ?

ಕೀಚಕನ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ .

8 ) ಧರ್ಮಜನ ಹೊರಗೆ ಭೀತರಾದವರು ಯಾರು ?

ಧರ್ಮಜನ ಹೊರಗೆ ಭೀತರಾದವರು ಭೀಮ ಹಾಗೂ ಅವನ ಸಹೋದರ ( ಅರ್ಜುನ , ನಕುಲ , ಸಹದೇವ )

9 ) ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು ?

ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ‘ ಕೀಚಕ

10 ) ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು ?

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವರು ದ್ರೌಪದಿ .

11 ) ಗಂಡರೋ ನೀವ್ ಭಂಡರೋ ಎಂದು ಕೇಳಿದವರಾರು ?

ಗಂಡರೋ ನೀವ್ ಭಂಡರೋ ಎಂದು ಕೇಳಿದವರು ದ್ರೌಪದಿ

12 ) ದ್ರೌಪದಿಯ ಮುಂದಲೆಯ ಹಿಡಿದವರಾರು ?

ದ್ರೌಪದಿಯ ಮುಂದಲೆಯನ್ನು ಹಿಡಿದವರು ಕೌರವ .

13 ) ದ್ರೌಪದಿಯ ಮುಖವನ್ನು ಭೀಮ ಯಾವುದರಿಂದ ತೊಳೆದನು ?

ದ್ರೌಪದಿಯ ಮುಖವನ್ನು ಭೀಮನು ಗಿಂಡಿಯ ನೀರಿನಿಂದ ತೊಳೆದನು .

14 ) ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವರಾರು ?

ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವನು ಸೈಂಧವ ( ಜಯದ್ರಥ )

15 ) ಮನದೊಳಗೆ ಹಗೆಗಳನ್ನು ಹಿಂಡಿದವರಾರು ?

ಮನದೊಳಗೆ ಹಗೆಗಳನ್ನು ಹಿಂಡಿದವರು ಭೀಮ

ಇ) ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು

1) ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು ?

ದ್ರೌಪದಿಯು ಮಲಗಿರುವ ಭೀಮನ ಬಳಿ ಬಂದು ವಲ್ಲಭನ ಬದಿಗೆ ಸರಿದಳು . ಮೆಲ್ಲಮೆಲ್ಲನೆ ಮುಸುಕನ್ನು ಸಡಿಲಿಸಿ ಗಲ್ಲವನ್ನು ಹಿಡಿದು ಅಲುಗಿಸಿದಳು . ಅಪ್ರತಿಮ ಮಲ್ಲನು ಮೆಲ್ಲನೆ ಕಣ್ಣಿಟ್ಟು ಎದುರಿಗಿದ್ದ ಪಾಂಚಲನಂದನೆಯನ್ನು ಕಂಡನು .

2 ) ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ ?

ಕೀಚಕನು ಕಾಮಾಂಧನಾಗಿ ದ್ರೌಪದಿಗೆ ಬಹಳಷ್ಟು ಉಪದ್ರವ ಕೊಡುತ್ತಿದ್ದನು . ದ್ರೌಪದಿಗೆ ಸಹಿಸಲು ಅಸಾಧ್ಯವಾಗುತ್ತಿತ್ತು . ಅವಳನ್ನು ರಕ್ಷಿಸಲು ಐವರು ಗಂಡಂದಿರು ಮೌನ ವಹಿಸಿದ್ದರು . ಆದ್ದರಿಂದ ದ್ರೌಪದಿಯು ತಾನು ಘೋರತರ ವಿಷ ಕುಡಿಯುವುದಾಗಿ ಹೇಳುತ್ತಾಳೆ .

3 ) ಉಳಿದ ನಾಲ್ವರು ಪಾಂಡವರ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು ?

ಧರ್ಮರಾಯನೆಂದೆ ಎನಿಸಿದ ಯುಧಿಷ್ಠಿರನು ಧರ್ಮಕ್ಷಮೆಯ ಗರ ಬಡಿದವಂತಾಡುವನು . ಪಾರ್ಥನು ಮಮತೆ ತೋರಿದರೂ ಅಣ್ಣನ ಆಜ್ಞೆಯ ಭ್ರಮೆಯಲ್ಲಿರುವನು . ಇನ್ನು ನಕುಲ – ಸಹದೇವರು ಕೀಚಕನನ್ನು ಕೊಲ್ಲಲು ಅಸಮರ್ಥರು . ಈ ನಾಲ್ವರು ಕೀಚಕನಿಂದ ರಕ್ಷಿಸಲಾರರು ಎಂಬುದೇ ದ್ರೌಪದಿಯ ಅಭಿಪ್ರಾಯ .

4 ) ಕುಜನರಾದವರು ಏನೆಂದು ನುಡಿಯುತ್ತಾರೆ ?

ಹೆಣ್ಣಿನ ಅಭಿಮಾನಕ್ಕಾಗಿ ಕುಂತಿಯ ಮಗ ಅಣ್ಣನ ಆಜ್ಞೆಯನ್ನು ಮೀರಿ ಬದುಕಿದನೆಂದು ಕುಜನರು ನುಡಿಯುತ್ತಾರೆ

5) ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ ?

ನಕುಲ – ಸಹದೇವರು ಕೊಲಲಕ್ಷಮರೆಂದು ದ್ರೌಪದಿ ಹೇಳಿದ್ದಾಳೆ .

6 ) ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದು ?

ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯವೆಂದರೆ ಕಲಹಕ್ಕಾದರೆ ನಾವು , ರಮಿಸಲು ಉಳಿದವರು . ಗಾದೆಯ ಬಳಕೆಯಂತೆ ಕೆಲವರು ಗಳಿಸಿದರೆ ಕೆಲವರು ಉಂಡು ಜಾರುತ್ತಾರೆ ನಾನು ಅಳುಕಿ ನಡೆಯುವವನಲ್ಲ ಎಂಬುದಾಗಿ ಹೇಳಿದನು .

7) ಗಂಡವರು , ಮೂರು ಲೋಕದ ಗಂಡರಾರು ? ಹೆಸರಿಸಿ .

ಗಂಡರೈವರು ಎಂದರೆ – ಯುಧಿಷ್ಠರ , ಭೀಮ , ಪಾರ್ಥ ( ಅರ್ಜುನ ) , ನಕುಲ , ಸಹದೇವ , ಮೂರು ಲೋಕದ ಗಂಡ ಅರ್ಜುನ ಮತ್ತು ಭೀಮ .

8 ) ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ ?

ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಆಕೆಯ ಮಾನರಕ್ಷಣೆ ಮಾಡುತ್ತಾನೆ . ವೈರಿಯನ್ನು ಕರಿಖಂಡ ಮಾಡುತ್ತಾನೆ . ಅಥವಾ ಆ ಪ್ರಯತ್ನದಲ್ಲಿ ತನ್ನೊಡಲನ್ನು ನೀಡುವನೇ ವಿನಃ ಹೆಂಡತಿಯನ್ನು ಏಕಾಂಗಿಯಾಗಿ ಬಿಡುವುದಿಲ್ಲ .

ಈ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )

1. ಈ ಕಾವ್ಯಭಾಗದಲ್ಲಿ ಮೂಡಿಬಂದಿರುವ ಭೀಮ – ದ್ರೌಪದಿಯರ ಸಂಭಾಷಣೆಯ ಸ್ವಾರಸ್ಯವನ್ನು ವಿವರಿಸಿ .

‘ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಈ ಕಾವ್ಯಭಾಗದಲ್ಲಿ ಭೀಮ – ದ್ರೌಪದಿಯರ ಸಂಭಾಷಣೆಯು ಸ್ವಾರಸ್ಯಕರವಾಗಿ ಮೂಡಿಬಂದಿದೆ . ದ್ರೌಪದಿಯು ತನ್ನ ಐವರು ಗಂಡಂದಿರಲ್ಲಿ ಭೀಮನೇ ತನ್ನ ಅವಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಬಲ್ಲ ಪೌರುಷವಂತನೆಂದು ನಿರ್ಧರಿಸಿ , ಅವನ ಬಳಿ ಬಂದು ತನ್ನ ಸಂಕಟವನ್ನು ತೋಡಿಕೊಳ್ಳು ತಾಳೆ . ಭೀಮನು ಮೊದಲಿಗೆ ನೆರವಿಗೆ ಬರಲು ಒಪ್ಪದಿದ್ದಾಗ ಅವನ ಗಂಡಸುತನವನ್ನು ಪ್ರಶ್ನಿಸುವ ಮೂದಲಿಕೆಯ ಮಾತುಗಳನ್ನು ದ್ರೌಪದಿಯು ಆಡುತ್ತಾಳೆ . ಭೀಮನು ಉಳಿದ ತನ್ನ ಸಹೋದರರ ನಡೆಯನ್ನು ಟೀಕಿಸುತ್ತಾನಾದರೂ ಅಂತಿಮವಾಗಿ ತನ್ನಣ್ಣನಾಜ್ಞೆಯ ಗೆರೆಯನ್ನು ದಾಟಿ ದ್ರೌಪದಿಯ ನೆರವಿಗೆ ಬರಲು ನಿರ್ಧರಿಸುತ್ತಾನೆ . ತನಗೊದಗಿದ ಆಪತ್ತಿನಿಂದ ಪಾರಾಗಲು ದ್ರೌಪದಿಯು ತೋರುವ ಧೈರ್ಯ , ಚಾಣಾಕ್ಷತೆಗಳು ಈ ಸಂಭಾಷಣೆಯಲ್ಲಿ ಮುಖ್ಯವಾದ ಸಂಗತಿಗಳು . ಅಂತೆಯೇ ಹೆಂಡತಿಯನ್ನು ಸಮಾಧಾನ ಪಡಿಸಿ ಭೀಮನು ತನ್ನ ನಿರ್ಧಾರವನ್ನು ಪ್ರಕಟಿಸುವ ಸಂದರ್ಭದಲ್ಲಾಡುವ ಪೌರುಷದ ಗಂಡು ನುಡಿಗಳು ನೆನಪಿನಲ್ಲುಳಿಯುವಂತೆ ಕವಿ ಚಿತ್ರಿಸಿದ್ದಾನೆ .

2 ) ತನಗಾದ ಅವಮಾನವನ್ನು ದ್ರೌಪದಿ ಭೀಮನಿಗೆ ಹೇಳಿಕೊಂಡ ಬಗೆಯನ್ನು ವಿವರಿಸಿರಿ .

ತನಗಾದ ಅವಮಾನವನ್ನು ದ್ರೌಪದಿ ಭೀಮನಿಗೆ ಹೇಳಿಕೊಂಡ ಬಗೆಯೆಂದರೆ “ ನಿನ್ನೆಯ ಹಗಲು ಕೀಚಕ ಕುನ್ನಿ ನನ್ನನ್ನು ಅಟ್ಟಿಕೊಂಡು ಬಂದು ರಾಜಸಭೆಯಲ್ಲಿ ಕಾಲಿನಿಂದೊದೆದನು . ನಿನ್ನಂಥವರಿರುವಾಗ ನನಗೆ ಪರಿಭವವೇ ? ನನ್ನನ್ನು ಅವನು ಬಿಡುವುದಿಲ್ಲ . ಇನ್ನು ನಾನು ಬದುಕುವವಳಲ್ಲ . ಈ ಪಾತಕ ನಿನಗೆ ತಟ್ಟದಿರುವುದಿಲ್ಲ . ರಮಣ ಕೇಳು ಉಳಿದವರು ನನ್ನನು ರಮಿಸುತ್ತಾರೆ . ಮಾನದ ವಿಚಾರ ಬಂದಾಗ ನಿರ್ಗಮಿಸುತ್ತಾರೆ . ನೀನಲ್ಲದೆ ಉಳಿದವರು ಉಚಿತಬಾಹಿರರು . ನೀನು ನನ್ನನ್ನು ಮಮತೆಯಿಂದ ನೋಡು . ಮನಸ್ಸಿನ ಸಮತೆಯನ್ನು ತೊಲಗಿಸಿ ಬಿಡು , ಈ ಕುಠಾರನನ್ನು ಯಮನ ಬಳಿಗಟ್ಟಿ ಕರುಣಿಸು ಎಂದು ಕಾಂತೆ ಕೈಮುಗಿದಳು .

3 ) ಭೀಮನು ದ್ರೌಪದಿಯನ್ನು ಹೇಗೆ ಸಂತೈಸಿದನು ?

ದ್ರೌಪದಿಯ ಮಾತನ್ನು ಕೇಳಿ ಭೀಮನ ಅಂತಃಕರಣ ಪೂರ್ತಿಯಾಗಿ ಕರಗಿತು . ಕೇಳಿ ಕಂಬನಿದುಂಬಿದನು . ಮೈಯಲ್ಲಿ ಪುಳಕವುಬ್ಬರಿಸಿ ಬರುತ್ತಿರಲು ಮೆಲ್ಲನೆ ವನಿತೆಯನ್ನು ತೆಗೆದಪ್ಪಿದನು . ಕಲಿಭೀಮನು ಆ ಮಾನಿನಿಯ ಕಂಬನಿಯನ್ನು ಸೆರಗಿನಿಂದ ತೊಡೆದನು . ಕುರುಳನ್ನು ನೇವರಿಸಿದನು . ಗಲ್ಲವನ್ನೊರಸಿ ಮುದ್ದಾಡಿದನು . ಮಂಚದ ಪಕ್ಕದಲ್ಲಿದ್ದ ಗಿಂಡಿಯ ನೀರಿನಿಂದ ಅವಳ ಮುಖವನ್ನು ತೊಳೆದನು . ಅರಸಿ ಕೀಚಕನ ಬಸುರನ್ನು ಬಗೆಯುತ್ತೇನೆ . ಸ್ವಲ್ಪ ಮಿಸುಕಿದರೆ ವಿರಾಟವಂಶದ ಹೆಸರನ್ನೆ ತೊಡೆಯುತ್ತೇನೆ . ಕೌರವನನ್ನು ಚೂರುಚೂರಾಗಿ ತರಿದುಹಾಕುತ್ತೇನೆ . ದೇವತೆಗಳೇ ಅಡ್ಡ ಬಂದರು ಅವರ ಮುಸುಡನ್ನು ಅಮರಾದ್ದಿಗೆ ತಿಕ್ಕಿ ತೀಡಿ ಬಿಡುತ್ತೇನೆ ” ಎಂಬುದಾಗಿ ಹೇಳಿ ಸಾಂತ್ವನ ಹೇಳಿದನು .

4 ) ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳಾವುವು ?

ತನಗೊದಗಿದ ಸಂಕಟವನ್ನು ಹೇಳಿಕೊಳ್ಳುವ ದ್ರೌಪದಿಯ ಸ್ವಗತದ ನುಡಿಗಳು ಹೀಗಿವೆ : “ ಕೀಚಕನ ಉಪಟಳವನ್ನು ತಾಳಲಾಗದೆ ದ್ರೌಪದಿಯು ಮರುಗುತ್ತಾ ಯಾರಿಗೆ ಹೇಳಲಿ ? ಯಾರ ಬಳಿ ಹೋಗಲಿ ? ಯಾರ ಹತ್ತಿರ ಹೋಗಿ ಗೋಳಾಡಲಿ ? ಅಯ್ಯೋ ಈ ಹೆಣ್ಣು ಜನ್ಮವನ್ನು ಸುಡಲಿ ? ನನ್ನಂಥ ಘೋರ ಪಾತಕಿ ಹಿಂದೆ ಯಾರಿದ್ದರು ? ನನ್ನ ಹಾಗೆ ಯಾರು ನೊಂದು ನವೆದರು ? ಅಯ್ಯೋ ಮರಣ ಬಾರದಲ್ಲಾ ” ಎಂದು ಸಂಕಟಪಟ್ಟಳು . ಯುಧಿಷ್ಠಿರನಿಗೆ ಹೇಳೋಣವೆಂದರೆ ಅವನಿಗೆ ಧರ್ಮ ಕ್ಷಮೆಯ ಗರ ಹೊಡೆದಿದೆ . ಪಾರ್ಥನು ನನ್ನಲ್ಲಿ ಮಮತೆಯುಳ್ಳವನೆಂದರೆ ಅವರು ತಮ್ಮಣ್ಣನಾಜ್ಞೆಯಲ್ಲಿ ಸಿಕ್ಕಿ ಭ್ರಮಿತನಾಗಿದ್ದಾನೆ . ಉಳಿದಿಬ್ಬರು ರಮಣರು ಈ ನಾಯನ್ನು ಕೊಲ್ಲಲು ಸಮರ್ಥರಲ್ಲ . ಇವರೆಲ್ಲೆಲ್ಲಾ ಕಲಿಭೀಮನೆ ಮಿಡುಕುಳ್ಳ ಗಂಡ ಹಾನಿಹರಿಬಕ್ಕೆ ಹಿಂಜರಿಯದೆ ಮುನ್ನುಗ್ಗಿ ಬರುತ್ತಾನೆ . ಬಹು ಸಾಹಸವುಳ್ಳವನು . ಅವನಿಗೆ ಈ ಖಳನ ಉಪಟಳವನ್ನೆಲ್ಲ ಹೇಳುತ್ತೇನೆ . ಅವನಲ್ಲಿಯೂ ಹುರುಳಿಲ್ಲದಿದ್ದರೆ ಆಮೇಲೆ ಘೋರ ವಿಷವನ್ನು ಕುಡಿದು ಸಾಯುತ್ತೇನೆ ಎಂದು ಮನದಲ್ಲಿಯೇ ಮರುಗಿದಳು .

5) ದ್ರೌಪದಿ ಅವಮಾನಕ್ಕೊಳಗಾದ ಮೂರು ಪ್ರಸಂಗಗಳನ್ನು ವಿವರಿಸಿರಿ .

ಪ್ರಸ್ತುತ “ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ತನಗಾದ ಮೂರು ಅವಮಾನದ ಪ್ರಸಂಗಗಳನ್ನು ಭೀಮನೆದುರು ಪ್ರಸ್ತಾಪಿಸುವುದನ್ನು ಗಮನಿಸಬಹುದು . ಅವುಗಳಲ್ಲಿ ಮೊದಲನೆಯದು , ಜೂಜಿನಲ್ಲಿ ಯುಧಿಷ್ಠಿರ ಸೋತಾಗ ಒತ್ತೆಯಾಳಾದ ದ್ರೌಪದಿಯನ್ನು ದುರ್ಯೋಧನ ತುಂಬಿದ ಸಭೆಗೆ ಎಳೆತರಿಸಿ ದುಶ್ಯಾಸನನಿಂದ ವಸ್ತ್ರಾಪಹರಣ ಮಾಡಿಸಿರುತ್ತಾನೆ . ದುಶ್ಯಾಸನನು ತಾಯಿಸಮಾನಳಾದ ಅತ್ತಿಗೆ ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದು ತಂದು ಅವಮಾನಿಸಿರುತ್ತಾನೆ . ಎರಡನೆಯದು , ವನವಾಸದ ಅವಧಿಯಲ್ಲಿ ದುಶ್ಯಳೆಯ ಗಂಡನಾದ ಜಯದ್ರಥ ಅಥವಾ ಸೈಂಧವನು ದ್ರೌಪದಿಯನ್ನು ಅಪಹರಿಸಿಕೊಂಡು ಹೋಗಿ ಅವಮಾನಿಸಿರುತ್ತಾನೆ . ಮೂರನೆಯದು , ಕೀಚಕನು ರಾಜಸಭೆಯಲ್ಲೇ ದ್ರೌಪದಿ ಯನ್ನು ಅವಳ ಗಂಡಂದಿರೆದುರೇ ಎಡಗಾಲಿನಿಂದ ಒದ್ದು ಬೀಳಿಸಿದ ಅಪಮಾನ . ಈ ಮೂರೂ ಅಪಮಾನಗಳು ದ್ರೌಪದಿಯ ಸಂಕಟ – ನೋವು – ದುಃಖಗಳಿಗೆ ಕಾರಣಗಳಾಗಿದೆ .

೩.೫ ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1. “ ಒಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೊ “

‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಭೀಮನಿಗೆ ಹೇಳುವ ಮಾತಿದು . ಭೀಮನು ಧರ್ಮಜನ ಭಯ ತನಗಿರುವುದರಿಂದ ದ್ರೌಪದಿಗೆ ನೆರವು ನೀಡಲಾರೆ ನಂದಾಗ ದ್ರೌಪದಿಗೆ ರೋಷಮೂಡಿ ‘ ಒಬ್ಬ ಗಂಡನಿದ್ದರೂ ಹೆಂಡತಿಯ ಮಾನದ ರಕ್ಷಣೆಯ ವಿಚಾರ ಎದುರಾದಾಗ ಶತ್ರುವಿನೊಡನೆ ಹೋರಾಡುತ್ತಾನೆ . ಇಲ್ಲವೇ ಸಾಯು ತ್ತಾನೆ . ನನಗೆ ಮೂರುಲೋಕದ ವೀರರಾದ ಐವರು ಗಂಡರಿದ್ದೀರಿ , ನನ್ನೊಬ್ಬಳನ್ನು ಆಳಲಾರಿರಿ . ನೀವೇನು ಗಂಡಸರೋ ಇಲ್ಲ ಭಂಡರೋ ? ” ಎಂದು ಕೋಪಾವಿಷ್ಟಳಾಗಿ ನುಡಿಯುವಳು .

2. “ ಯಮಸುತಂಗರುಹುವೆನೆ ಧರ್ಮಕ್ಷಮೆಯ ಗರಹೊಡೆದಿಹುದು “

ʼಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ತನ್ನಲ್ಲಿಯೇ ಈ ವಾಕ್ಯವನ್ನು ಹೇಳಿಕೊಳ್ಳುತ್ತಾಳೆ .ಕೀಚಕನ ಕಾಟದಿಂದ ಪಾರುಮಾಡೆಂದು ಕೇಳಲು ತನ್ನ ಗಂಡಂದಿರಲ್ಲಿ ಮೊದಲು ಧರ್ಮಜನನ್ನು ನೆನಪಿಸಿಕೊಳ್ಳುತ್ತಾಳೆ . ಯಮಸುತನಾದ ಅವನ ಬಳಿ ಹೇಳೋಣ ವೆಂದರೆ ಅವನಿಗೆ ಧರ್ಮ ಮತ್ತು ಕ್ಷಮೆಗಳೆಂಬ ಗ್ರಹ ಹಿಡಿದಿದೆ ಎಂದು ದ್ರೌಪದಿ ಹೇಳಿಕೊಳ್ಳುತ್ತಾಳೆ . ಯುಧಿಷ್ಠಿರ ಯಾವಾಗಲೂ ಧರ್ಮಮಾರ್ಗದಲ್ಲಿ ನಡೆಯುವವನು ಮತ್ತು ಇತರರನ್ನು ಕ್ಷಮಿಸುವ ಗುಣವುಳ್ಳವನು . ಅವನ ಬಳಿ ಕೀಚಕನ ಬಗ್ಗೆ ದೂರು ಸಲ್ಲಿಸಿದರೆ ಉಪಯೋಗವಿಲ್ಲವೆಂದು ದ್ರೌಪದಿ ಯೋಚಿಸುವ ಸಂದರ್ಭವಿದಾಗಿದೆ .

3. “ ಕಲಿಭೀಮನೇ ಮಿಡುಕುಳ್ಳ ಗಂಡನು “

ʼಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದೌಪದಿಯು ಹೇಳುವ ಈ ಮೇಲಿನ ವಾಕ್ಯವನ್ನು ಕಾಣಬಹುದು . ಕೀಚಕನ ಕಾಟವನ್ನು ನಿವಾರಿಸಲು ತನ್ನ ಪತಿಗಳಲ್ಲಿ ಯಾರು ಸಮರ್ಥರೆಂದು ದ್ರೌಪದಿಯು ತನ್ನಲ್ಲೇ ಚಿಂತಿಸುತ್ತಾಳೆ . ಅವಳಿಗೆ ಧರ್ಮರಾಯ , ಅರ್ಜುನ , ನಕುಲ ಸಹದೇವರಿಂದ ಈ ವಿಚಾರದಲ್ಲಿ ತನಗೆ ಪ್ರಯೋಜನವಿಲ್ಲವೆಂಬುದು ಅರಿವಾಗುತ್ತದೆ . ನಂತರ ಅವಳು ಐವರಲ್ಲಿ ಕಲಿಭೀಮನೇ ಪೌರುಷವಂತನಾದ ಗಂಡನು . ಅವನಿಂದ ಈ ತೊಂದರೆ ನಿವಾರಣೆಯಾಗಬಹುದು ಎಂಬ ಭರವಸೆ ಮೂಡುವ ಸಂದರ್ಭದಲ್ಲಿ ಈ ವಾಕ್ಯ ಮೂಡಿಬಂದಿದೆ .

4. “ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ “

ʼಕವಿ ಕುಮಾರವ್ಯಾಸನ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಹೇಳುವ ಈ ಮೇಲಿನ ಮಾತುಗಳಿವೆ . ದ್ರೌಪದಿಯು ಕೀಚಕನು ಕಾಲಿನಿಂದ ಒದ್ದು ಮಾಡಿದ ಅಪಮಾನದಿಂದ ನೊಂದಿದ್ದಾಳೆ . ಯಾರು ತನ್ನನ್ನು ಇದರಿಂದ ಪಾರುಮಾಡಬಲ್ಲರೆಂಬುದನ್ನು ಯೋಚಿಸು ವಾಗ ಅವಳಿಗೆ ಅಂತಿಮವಾಗಿ ತನ್ನ ಐವರು ಪತಿಗಳಲ್ಲಿ ಭೀಮನೇ ಇದಕ್ಕೆ ಅರ್ಹನಾದವ ನೆನಿಸುತ್ತದೆ . ಅವನು ಒಂದುವೇಳೆ ಈ ಕಷ್ಟದಿಂದ ಪಾರುಮಾಡದೆ ಹೋದರೆ ನಾನು ಘೋರ ವಿಷವನ್ನು ಕುಡಿದು ಪ್ರಾಣಬಿಡುವೆನೆಂದು ಅವಳು ಯೋಚಿಸುತ್ತಾಳೆ . ನೊಂದ ಹೆಣ್ಣಿನ ಅಸಹಾಯಕತೆ ಇಲ್ಲಿ ವ್ಯಕ್ತಗೊಂಡಿದೆ .

5. “ ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ “

‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ಬರುವ ಈ ಮೇಲಿನ ವಾಕ್ಯವನ್ನು ಕಾವ್ಯಭಾಗದ ಅಂತ್ಯದಲ್ಲಿ ಭೀಮ ಹೇಳುತ್ತಾನೆ . ದ್ರೌಪದಿಯ ದುಃಖಕ್ಕೆ – ಅಪಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳಬಯಸುವ ಭೀಮನು ಕೀಚಕನ ಬಸುರನ್ನು ಬಗೆಯುವುದಾಗಿ ಹೇಳುತ್ತಾನೆ . ಇದಕ್ಕೆ ಅಡ್ಡಿ ಬಂದಲ್ಲಿ ವಿರಾಟ ರಾಜನ ವಂಶವನ್ನು ಹೇಳ ಹೆಸರಿಲ್ಲದಂತೆ ತೊಡೆದುಹಾಕುವುದಾಗಿಯೂ , ಅಜ್ಞಾತವಾಸ ದಲ್ಲಿರುವ ತಮ್ಮನ್ನು ಕೌರವರು ಗುರುತಿಸಿದರೆ ಅವರನ್ನು ನಾಶ ಮಾಡುವುದಾಗಿಯೂ ಹೇಳಿದ ಭೀಮನು ಒಂದು ವೇಳೆ ದೇವತೆಗಳೇ ಅಡ್ಡ ಬಂದರೆ ಅವರ ಮುಖವನ್ನು ಅಮರಾದ್ರಿಯ ಬಂಡೆಯ ಮೇಲೆ ತೇಯುವುದಾಗಿ ರೋಷದಿಂದ ನುಡಿಯುವ ಮಾತುಗಳು ಇಲ್ಲಿವೆ .

6. “ ನೀನಲ್ಲದುಳಿದವರುಚಿತ ಬಾಹಿರರು”

‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದ್ರೌಪದಿಯು ಭೀಮನನ್ನು ಉದ್ದೇಶಿಸಿ ಈ ವಾಕ್ಯವನ್ನಾಡುತ್ತಾಳೆ . ಕೀಚಕನನ್ನು ಕೊಲ್ಲಲು ಭೀಮನೇ ಸಮರ್ಥನೆಂದು ಅವನನ್ನು ಹೊಗಳುವ ದ್ರೌಪದಿಯು , ತನ್ನ ಉಳಿದ ನಾಲ್ವರು ಗಂಡಂದಿರನ್ನು ಭೀಮನೆದುರು ಹೀಯಾಳಿಸುತ್ತಾಳೆ . ನೀನೊಬ್ಬನೇ ನನಗೆ ತಕ್ಕ ಗಂಡ , ಉಳಿದವರು ನನ್ನೊಂದಿಗೆ ರಮಿಸುತ್ತಾರೆ , ಆದರೆ ನನ್ನ ಮಾನ ಕಾಪಾಡುವ ಸಂದರ್ಭ ಬಂದಾಗ ಮಾತ್ರ ಹೇಳದೆ ಕೇಳದೆ ಓಡುತ್ತಾರೆ . ಅವರಾರೂ ಯೋಗ್ಯರಲ್ಲ . ನೀನೊಬ್ಬನೇ ನನಗೆ ಯೋಗ್ಯನಾದ ಗಂಡನೆಂದು ಭೀಮನಿಗೆ ಹೇಳುವ ಸಂದರ್ಭವಿದಾಗಿದೆ .

7. “ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು “

ʼಕುಮಾರವ್ಯಾಸನು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ ಕಾವ್ಯಭಾಗದಿಂದ ಈ ಮೇಲಿನ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಇದನ್ನು ಭೀಮನು ದ್ರೌಪದಿಗೆ ಹೇಳುತ್ತಾನೆ . ದ್ರೌಪದಿಯು ತನಗೆ ಸಹಾಯ ಮಾಡೆಂದು ಭೀಮನನ್ನು ಕೇಳುತ್ತಾಳೆ . ಆಗ ಭೀಮನು “ ನಿನಗೆ ಇನ್ನೂ ನಾಲ್ವರು ಪತಿಗಳಿರುವರು . ಅವರೆಲ್ಲ ನಿನ್ನೊಂದಿಗೆ ರಮಿಸಲು ಮಾತ್ರ ಉತ್ಸುಕರು , ಕಷ್ಟದಿಂದ ಪಾರುಮಾಡಲು ನಾನೇ ? ‘ ಯಾರೋ ಕಷ್ಟಪಟ್ಟು ಗಳಿಸಿದರೆ , ಇನ್ಯಾರೋ ಅದನ್ನು ಉಂಡು ಜಾರಿಕೊಳ್ಳುವರೆಂಬ ‘ ಮಾತಿನಂತಾಗಿದೆ ‘ ಎಂದು ಉಳಿದ ಸಹೋದರರ ವರ್ತನೆಯನ್ನು ಗಾದೆಮಾತಿನ ಮೂಲಕ ಭೀಮನು ವಿಡಂಬಿಸಿದ್ದಾನೆ .

8. “ ಎನ್ನವೊಲು ಮುನ್ನಾರು ನವೆದವರುಂಟು “

ʼಈ ಮೇಲಿನ ವಾಕ್ಯವನ್ನು ಕುಮಾರವ್ಯಾಸನು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಿಂದ ಸ್ವೀಕರಿಸಲಾಗಿದೆ . ಕೀಚಕನ ಉಪಟಳದಿಂದ ನೊಂದಿರುವ ದ್ರೌಪದಿಯು ಹೇಳಿರುವ ಮಾತಿದು . ತನ್ನ ಕಷ್ಟವನ್ನು ಯಾರ ಬಳಿ ಹೇಳಿಕೊಳ್ಳಲಿ ? ಯಾರ ಬಳಿ ಹೋಗಲಿ ? ಯಾರನ್ನು ಕೇಳಲಿ ? ಯಾರನ್ನು ಬೇಡಲಿ ? ಎಂದೆಲ್ಲಾ ಗೋಳಿಡುವ ದ್ರೌಪದಿಯು ಹೆಣ್ಣು ಜನ್ಮವನ್ನು ಸುಡಲಿ ಎಂದುಕೊಳ್ಳುತ್ತಾಳೆ . ಇದುವರೆಗೆ ಯಾರೂ ನನ್ನಂತೆ ಕಷ್ಟಗಳನ್ನು ಅನುಭವಿಸಿ ದವರಿಲ್ಲ ಎಂದು ಯೋಚಿಸುವ ಆಕೆ ತನಗೆ ಮರಣವಾದರೂ ಬರಬಾರದೇಕೆ ಎಂದು ಹಂಬಲಿಸುವ ಸಂದರ್ಭವಿದಾಗಿದೆ .

9. “ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು”

ʼಕುಮಾರವ್ಯಾಸ ಕವಿಯು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ ‘ ಯಿಂದಾಯ್ದ ಈ ಮೇಲಿನ ವಾಕ್ಯವನ್ನು ಇದೇ ಶೀರ್ಷಿಕೆಯ ಕಾವ್ಯಭಾಗದಿಂದ ಸ್ವೀಕರಿಸಿದೆ . ದ್ರೌಪದಿಯು ಹತಾಶೆಯಿಂದ ಭೀಮನೆದುರು ನುಡಿಯುವ ಮಾತುಗಳಿವು . ő ಭೀಮನು ತನ್ನ ಅಣ್ಣನಾದ ಧರ್ಮರಾಯನ ಆಜ್ಞೆಯ ಹಗ್ಗವು ತನ್ನನ್ನು ಕಟ್ಟಿಹಾಕಿರುವುದರಿಂದ ನೆರವು ನೀಡಲಾಗದೆಂದು ದ್ರೌಪದಿಗೆ ಹೇಳುತ್ತಾನೆ . ಹತಾಶಳಾದ ದ್ರೌಪದಿಯು ಗೋಳಿಡುತ್ತ , ಇನ್ನು ಈ ಭೂಮಿಯ ಮೇಲೆ ತನ್ನಂತೆ ಕಷ್ಟಪಡುತ್ತಿರುವ ಯಾವ ಹೆಣ್ಣೂ ಹುಟ್ಟದಿರಲಿ ಎನ್ನುತ್ತಾಳೆ . ತನಗೊದಗಿದ ಇಂತಹ ಕಷ್ಟಗಳು – ಅಪಮಾನ ನೋವುಗಳು ಇನ್ನು ಯಾರಿಗೂ ಬರಬಾರದೆಂಬ ಆಶಯ ಅವಳ ಈ ಮಾತಿನಲ್ಲಿದೆ .

10. “ ಹಗೆಗಳನ್ನು ಹಿಂಡಿದನು ಮನದೊಳಗೆ “

ʼಕುಮಾರವ್ಯಾಸ ಕವಿಯ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ದ್ರೌಪದಿಯು ಕೀಚಕನ ಉಪಟಳವನ್ನು ಭೀಮನಿಗೆ ಹೇಳಿ ದುಃಖವನ್ನು ತೋಡಿಕೊಂಡಾಗ ಭೀಮನು ಮೊದಲಿಗೆ ಧರ್ಮಜನ ಆಜ್ಞೆಯ ಪ್ರಸ್ತಾಪ ಮಾಡುವನು . ದ್ರೌಪದಿಯು ಭೀಮನ ಮತ್ತು ಉಳಿದ ಪಾಂಡವರ ಪೌರುಷವನ್ನು ಮೂದಲಿಸಿ ಮಾತನಾಡಿದಾಗ ಭೀಮನ ಅಂತಃಕರಣದ ರೋಷದ ಘನತೆ ಹೆಚ್ಚಿತು . ಅವನು ಹಗೆಗಳನ್ನು ತನ್ನ ಮನದೊಳಗೆ ಹಿಂಡಿಹಾಕುವಂತೆ ಕಲ್ಪಿಸಿಕೊಂಡನು . ದ್ರೌಪದಿಗಾದ ಅಪಮಾನಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ನಿರ್ಧಾರಕ್ಕೆ ಬಂದು ಆಕೆಯನ್ನು ಸಂತೈಸುವ ಸಂದರ್ಭವಿದಾಗಿದೆ .

11. “ ತಳುವಿಲ್ಲದುಸುರಿರುಳೇಕೆ ಬಂದೆ “?

‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ಭೀಮನು ದ್ರೌಪದಿಯನ್ನು ಉದ್ದೇಶಿಸಿ ಈ ಮೇಲಿನ ಮಾತನ್ನು ಹೇಳುವನು . ಭೀಮನ ನೆರವನ್ನು ಪಡೆದು ಕೀಚಕನ ಪೀಡನೆಯಿಂದ ಪಾರಾಗಲು ಯೋಚಿಸಿದ ದ್ರೌಪದಿಯು ಭೀಮನಿದ್ದ ಪಾಕಶಾಲೆಗೆ ಇರುಳಿನಲ್ಲಿ ಬಂದು , ನಿದ್ರಿಸುತ್ತಿದ್ದ ಭೀಮನನ್ನು ಎಬ್ಬಿಸಿದಳು . ಅಪವೇಳೆಯಲ್ಲಿ ದ್ರೌಪದಿಯು ಏಕಾಂಗಿಯಾಗಿ ಬಂದಿರುವುದನ್ನು ಕಂಡ ಭೀಮನು “ ಈ ರಾತ್ರಿವೇಳೆಯಲ್ಲಿ ನೀನು ಏಕೆ ಬಂದಿರುವೆ ? ತಡಮಾಡದೆ ಹೇಳು , ಎಂದು ಅವಸರ ಮತ್ತು ಉದ್ವೇಗದಿಂದ ಪ್ರಶ್ನಿಸುವನು .

12. “ ನಾಯ ಕೊಲಲಕ್ಷಮರು”

ʼಕುಮಾರವ್ಯಾಸ ಕವಿಯ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದಾಯ್ದು ಕೊಂಡಿರುವ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದ್ದು ಇದನ್ನು ದ್ರೌಪದಿಯು ತನ್ನಲ್ಲೇ ಹೇಳಿಕೊಳ್ಳುತ್ತಾಳೆ . ದ್ರೌಪದಿಯು ಕೀಚಕನ ಉಪಟಳದ ವಿಚಾರವನ್ನು ತನ್ನ ಐವರು ಗಂಡಂದಿರಲ್ಲಿ ಯಾರಿಗೆ ಹೇಳಿಕೊಳ್ಳುವುದೆಂದು ಯೋಚಿಸುವಾಗ ಅವಳಿಗೆ ಮೊದಲಿಗೆ ಧರ್ಮಜ ಮತ್ತು ಅರ್ಜುನರು ನೆನಪಾಗುತ್ತಾರೆ . ಅವರಿಗೆ ಹೇಳಿ ಉಪಯೋಗವಿಲ್ಲವೆಂಬುದು ಅರಿವಿಗೆ ಬಂದಾಗ ಅವಳಿಗೆ ನಕುಲ – ಸಹದೇವರು ನೆನಪಾಗುತ್ತಾರೆ . ಆದರೆ ಮರುಕ್ಷಣವೇ ಅವರಿಬ್ಬರೂ ಈ ಕೀಚಕನೆಂಬ ನಾಯಿಯನ್ನು ಕೊಲ್ಲಲು ಅಸಮರ್ಥರೆಂದು ಅವಳು ಯೋಚಿಸುವ ಸಂದರ್ಭದಲ್ಲಿ ಈ ಮೇಲಿನ ವಾಕ್ಯವಿದೆ .

13. “ ಕೂಳುಗೇಡಿಂಗೊಡಲ ಹೊರುವಿರಿ “

ʼಕುಮಾರವ್ಯಾಸನ ‘ ಕರ್ಣಾಟ ಭಾರತ ಕಥಾಮಂಜರಿ ‘ ಎಂಬ ಕಾವ್ಯದಿಂದಾಯ್ದ “ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಿಂದ ಸ್ವೀಕರಿಸಿರುವ ಈ ಮೇಲಿನ ವಾಕ್ಯವನ್ನು ದ್ರೌಪದಿಯು ಕೋಪದಿಂದ ಭೀಮನಿಗೆ ಹೇಳುತ್ತಾಳೆ .ಪಾಂಡವರು ಮನಸ್ಸು ಮಾಡಿದರೆ ಕೆರಳಿದ ಯಮನನ್ನೇ ಸೋಲಿಸಬಲ್ಲ ಪರಾಕ್ರಮಿಗಳು . ಆದರೆ ಒಬ್ಬ ಹೆಂಡತಿಯನ್ನು ರಕ್ಷಿಸಲಾಗದ ಪಾಪಿಗಳು , ಅಪಕೀರ್ತಿಗೂ ಹೆದರದವರು . ನಿಮಗೆ ತೋಳ್ಲ ಬೇರೆ ಕೇಡಿಗೆ , ನೀವೇಕೆ ಕ್ಷತ್ರಿಯ ವಂಶದಲ್ಲಿ ಜನಿಸಿದಿರಿ ? ನಿಮಗೆ ಅನ್ನ ಹಾಕುವುದೂ ದಂಡಕ್ಕೆ ಎಂದು ಕೋಪ – ಉದ್ವೇಗಗಳಿಂದ ನುಡಿವಳು .

14. “ ಅವ ಬೆಂಬಳಿಯ ಬಿಡ ನಾನಿನ್ನು ಬದುಕುವಳಲ್ಲ”

ʼಕುಮಾರವ್ಯಾಸನು ರಚಿಸಿರುವ ‘ ಕರ್ಣಾಟ ಭಾರತ ಕಥಾಮಂಜರಿ’ಯಿಂದ ಆಯ್ದುಕೊಳ್ಳಲಾದ ‘ ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ‘ ಎಂಬ ಕಾವ್ಯಭಾಗದಲ್ಲಿ ದೌಪದಿಯು ಭೀಮನಿಗೆ ಈ ಮೇಲಿನ ಮಾತನ್ನು ಹೇಳುತ್ತಾಳೆ . ದೌಪದಿಯು ಭೀಮನಿಗೆ ಕೀಚಕನಿಂದಾದ ತೊಂದರೆಯನ್ನು ವಿವರಿಸುತ್ತ “ ನಿನ್ನ ಕಣ್ಣೆದುರಿನಲ್ಲಿಯೇ ಕೀಚಕನು ನನ್ನನ್ನು ಕಾಲಿನಿಂದ ಒದ್ದು ಬೀಳಿಸಿರುವನು . ಇನ್ನು ಮುಂದೆಯೂ ಆತ ನನ್ನ ಬೆನ್ನು ಹತ್ತದೆ ಬಿಡುವುದಿಲ್ಲ . ನೀನು ಈಗ ನೆರವಿಗೆ ಬಾರದೆ ಹೋದರೆ ನಾನಿನ್ನು ಬದುಕುವುದಿಲ್ಲ ” ಎಂದು ಮೊರೆಯಿಡುವ ಸಂದರ್ಭ ವಿದಾಗಿದೆ .

2nd Puc Kannada Innu Huttadeyirali Nariyarennavolu Notes pdf Download

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh