ದ್ವಿತೀಯ ಪಿ.ಯು.ಸಿ ಮುಂಬೈ ಜಾತಕ ಕನ್ನಡ ನೋಟ್ಸ್‌ | 2 PUC Mumbai Jataka Kannada Notes.

ಮುಂಬೈ ಜಾತಕ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2nd PUC Mumbai Jataka Kannada Notes Question Answer Pdf Download in 2023

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಮುಂಬೈ ಜಾತಕ

ಕೃತಿಕಾರರ ಹೆಸರು : ಜಿ. ಎಸ್‌. ಶಿವರುದ್ರಪ್ಪ

Mumbai Jataka Kannada Notes

ಕವಿ ಪರಿಚಯ :

ರಾಷ್ಟ್ರಕವಿ ಜಿ.ಎಸ್ . ಶಿವರುದ್ರಪ್ಪ ( ೧೯೨೬-೨೦೧೩ ) ಅವರ ಪೂರ್ಣ ಹೆಸರು ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಎಂಬುದು . ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮ ಇವರ ಹುಟ್ಟೂರು . ಮೈಸೂರಿನ ಮಹಾರಾಜ ಕಾಲೇಜು , ಹೈದ್ರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಬೆಂಗಳೂರು ವಿ.ವಿ.ಯ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ನಿವೃತ್ತರಾದರು . ಕುವೆಂಪು ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ ಸೌಂದರ್ಯ ಸಮೀಕ್ಷೆ ‘ ಎಂಬ ಸಂಶೋಧನಾ ಪ್ರಬಂಧಕ್ಕೆ ಪಿಎಚ್.ಡಿ . ಪದವಿಯನ್ನು ಪಡೆದರು .

ಪ್ರಮುಖ ಕವಿ , ವಿದ್ವಾಂಸ ಮತ್ತು ವಿಮರ್ಶಕರೆಂದು ಪ್ರಸಿದ್ಧರಾಗಿರುವ ಜಿ.ಎಸ್ . ಶಿವರುದ್ರಪ್ಪನವರು ಸಾಮಗಾನ , ಚೆಲುವು – ಒಲವು , ದೇವಶಿಲ್ಪ , ದೀಪದ ಹೆಜ್ಜೆ , ಕಾರ್ತೀಕ , ತೆರೆದ ದಾರಿ , ಪ್ರೀತಿಯಿಲ್ಲದ ಮೇಲೆ , ವ್ಯಕ್ತ – ಮಧ್ಯ ಮಂತಾದ ಕವಿತಾ ಸಂಕಲನಗಳನ್ನೂ ಪರಿಶೀಲನ , ಗತಿಬಿಂಬ , ವಿಮರ್ಶೆಯ ಪೂರ್ವ – ಪಶ್ಚಿಮ , ಕಾವ್ಯಾರ್ಥ ಚಿಂತನ , ಗಂಗೆಯ ಶಿಖರಗಳಲ್ಲಿ , ಕರ್ಮಯೋಗಿ , ಮಾಸ್ಕೋದಲ್ಲಿ ಇಪ್ಪತ್ತೆರಡು ದಿನಗಳು ಇತ್ಯಾದಿ ಕೃತಿಗಳನ್ನೂ ರಚಿಸಿ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ . ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶ್ರೀಯುತರ ‘ ಕಾವ್ಯಾರ್ಥ ಚಿಂತನ ‘ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ . ನಾಡೋಜ , ಪಂಪ ಪ್ರಶಸ್ತಿ , ನೃಪತಂಗ ಪ್ರಶಸ್ತಿಗೆ ಬಾಜನರಾಗಿರುವ ಶಿವರುದ್ರಪ್ಪನವರನ್ನು ಕರ್ನಾಟಕ ಸರ್ಕಾರವು ‘ ರಾಷ್ಟ್ರಕವಿ ‘ ಎಂದು ಗೌರವಿಸಿದೆ .

ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ನಗರಕ್ಕೆ ವಲಸೆ ಬರುವವರ ಸಂಖ್ಯೆ ವೃದ್ಧಿಸುತ್ತಿರುವ ಇಂದಿನ ದಿನಕ್ಕೆ ಹೆಚ್ಚು ಪ್ರಸ್ತುತವೆನಿಸಿದೆ . ಪ್ರಕೃತಿಯಿಂದ ದೂರ ಸರಿಯುತ್ತ ನಾಗರಿಕರಾದಂತೆಲ್ಲ ನಿಸ್ಸಾರವೂ ನಿರ್ವೀಯ್ರವೂ ಆಗಿಬಿಡುವ ನಾಗರಿಕ ಬದುಕಿನ ದುರಂತವನ್ನು ಈ ಕವಿತೆಯು ದೃಶ್ಯವತ್ತಾಗಿ ಕಣ್ಮುಂದೆ ಇಡುತ್ತದೆ . ಇಂದು ಶಿಕ್ಷಿತರಾಗುವುದೆಂದರೆ ಭಾಷಾವಲಯದಿಂದ ದೂರಸರಿಯುವುದು , ಸೈಬರಿಕರಾಗುವುದೆಂದರೆ ಜನಸಮೂಹದಿಂದ ದೂರಾಗುವುದು ಎಂಬಂತಾಗಿದೆ . ಪ್ರಸ್ತುತ ಕವಿತೆಯಲ್ಲಿ ನೆರೆಹೊರೆಯವರಲ್ಲಾಗಲೀ , ಕರುಳುಬಳ್ಳಿಗಳೊಂದಿಗಾಗಲಿ ವಾತ್ಸಲ್ಯ – ಮಮಕಾರಗಳನ್ನು ವ್ಯಕ್ತಪಡಿಸಲೂ ವ್ಯವಧಾನವಿಲ್ಲದ ಅವಸರದ , ಯಾಂತ್ರಿಕ ಬದುಕು ಹೊಸ ಬಗೆಯಲ್ಲಿ ಅನಾವರಣಗೊಂಡಿದೆ .

ಕಾವ್ಯದ ಹಿನ್ನೆಲೆ :

ಮುಂಬೈ – ಬೆಂಗಳೂರು ಮುಂತಾದ ಬೃಹತ್ ನಗರಗಳಲ್ಲಿ ವಾಸಿಸುವವರ ಆತಂತ್ರ ಸ್ಥಿತಿ ಮರುಕ ಹುಟ್ಟಿಸುವಂಥದ್ದು , ಇಂತಹ ನಗರಗಳಲ್ಲಿ ಹುಟ್ಟುವ ಮಕ್ಕಳು ಕಣ್ಮರೆದಾಗ ಕಾಣುವುದು ಅವಸರದಿಂದ ಸರಿಯುವ ವಾಹನಗಳನ್ನು ಮಾತ್ರ ಬಾಲ್ಯಾವಸ್ಥೆಯನ್ನು ಹೆತ್ತವರೊಂದಿಗೆ , ಒಡಹುಟ್ಟಿದವರೊಂದಿಗೆ ಸಮೃದ್ಧಗೊಳಿಸಿಕೊಳ್ಳುವ ಅವಕಾಶದಿಂದ ಈ ಮಕ್ಕಳು ವಂಚಿತರು .

ಯಾಂತ್ರಿಕ ಬದುಕಿನ ಅವರಣಕ್ಕೆ ಎಳೆತನದಲ್ಲೇ ಸಿಲುಕಿ ನಲುಗುವ ಧಾರುಣತೆಯನ್ನು ಪ್ರಸ್ತುತ ಕವಿತೆ ಹಿಡಿದಿಟ್ಟಿದೆ . ಇಡೀ ಕವಿತೆಯ ರಚನಾಕ್ರಮವು ಅರ್ಜಿ ನಮೂನೆಯ ರೀತಿಯಲ್ಲಿದ್ದು ನೀಡುವ ವಿವರಗಳಲ್ಲಿಯೂ ದನಿಯಿಲ್ಲದಿರುವುದನ್ನು ಸಂಕೇತಿಸಿದೆ . ನಗರ ಸಂಸ್ಕೃತಿಯಲ್ಲಿ ಜೀವನದ ರಸಾನುಭವ ಅಸಾಧ್ಯವೆಂಬ ಧ್ವನಿ ಇಲ್ಲಿದೆ . ತಂದೆ – ತಾಯಿಯರ ಕರುಳುಬಳ್ಳಿಯ ಪ್ರೀತಿ ಮಮತೆ ಆರೈಕೆಗಳಲ್ಲೂ ಕೃತಕವಾದ ಹೊಣೆಗಾರಿಕೆಯನ್ನು ಕವಿ ಚಿತ್ರಿಸಿದ್ದಾರೆ . ನಗರ ಜೀವನದ ಭೂತ , ವರ್ತಮಾನ ಮತ್ತು ಭವಿಷ್ಯತ್ತಿನ ಬದುಕಿನ ಸ್ವರೂಪವನ್ನು ಮುಂಬೈ ಜಾತಕ ಸಮರ್ಥವಾಗಿ ಹಿಡಿದಿಟ್ಟಿದೆ . ಯಾರ ಹೆಸರನ್ನೂ ಸೂಚಿಸದೆ ಯಾರದಾದರೂ ಆಗಬಹುದಾದ ಪರಕೀಯತೆ ಕವಿತೆಗೊಂದು ಸುಂದರ ಚೌಕಟ್ಟನ್ನು ಒದಗಿಸಿದೆ .

ಶಬ್ದಾರ್ಥ :

ಸರಿವ – ಸಾಗುವ ; ಕ್ಯೂ – ಸಾಲು ; ಹೀರು – ಕುಡಿ ; ಗಾಲಿ – ಚಕ್ರ ; ಶಿಫಾರಸು – ಪ್ರಭಾವ ; ಬಣ್ಣ – ವರ್ಣ ( ಇಲ್ಲಿ ಹುಡುಗಿಯರು ಎಂಬ ಅರ್ಥ ) ; ಕಣ್ಣಾಡಿಸು – ನೋಡು ; ಚದುರಂಗದಾಟ – ಬುದ್ದಿವಂತಿಕೆ ಪ್ರದರ್ಶನದ ಒಂದು ಬಗೆಯ ಆಟ ; ಮಣ – ತೂಕದ ಒಂದು ಪ್ರಮಾಣ ; ಕೂಳು – ಅನ್ನ , ಆಹಾರ ; ಹಾಸುಗಂಬಿ – ರೈಲುಹಳಿ ; ತತ್ತರಿಸು ನಡುಗು , ಕಂಪಿಸು .

2nd PUC Kannada Mumbai Jataka Notes Question Answer

ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಮಗು ಹುಟ್ಟಿದು ಎಲ್ಲಿ ?

ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ

2 ) ಮುಂಬೈಯಲ್ಲಿ ಬೆಳಗಿನಿಂದ ಸಂಜೆಯತನಕ ಕಾಣುವುದೇನು ?

ಮುಂಬೈಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಕಾಣುವುದು ಲಕ್ಷಾಂತರ ವಾಹನಗಳ ಸಂಚಾರ , ಅದರೊಟ್ಟಿಗೆ ಮನುಷ್ಯರ ನೂಕು ನುಗ್ಗಲಿನ ಓಡಾಟ . ಇದನ್ನು ಕವಿ ಮಾರ್ಮಿಕವಾಗಿ ಹೀಗೆ ಹೇಳಿದ್ದಾರೆ – “ … ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರಾರು ಕೊರಳು

3 ) ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ಯಾರು ?

ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು ತಾಯಿ .

4 ) ಕುಳಿತು ಕೆಮ್ಮುವ ಪ್ರಾಣಿ ಯಾರು ?

ಕುಳಿತು ಕೆಮ್ಮುವ ಪ್ರಾಣಿ ತಂದೆ .

5 ) ತಾನಾಗಿ ಕಲಿತದ್ದು ಏನನ್ನು ?

ಬಸ್‌ಸ್ಟಾಪಿನಲ್ಲಿ ನಿಂತು ಹುಡುಗಿಯರ ಕಡೆ ಕಣ್ಣಾಡಿಸಿದ್ದು ತಾನಾಗಿ ಕಲಿತದ್ದು .

6 ) ಲಕ್ಷದಾರಿಗಳ ಚದುರಂಗದಾಟ ಯಾವುದು ?

ಸಿಗ್ನಲ್‌ಗಳನ್ನು ಒಳಗೊಂಡ ರಸ್ತೆಗಳು ಹಾಗೂ ರಸ್ತೆ ದಾಟುವುದು ಒಂದು ಬಗೆಯ ಚದುರಂಗದಾಟ

7 ) ಕನಸು ಬಂಡಿಯ ಕೆಳಗೆ ನಿದ್ರಿಸುವುದು ಹೇಗೆ ?

ಕನಸು ಬಂಡಿಯ ಕೆಳಗೆ ಹಾಸು ಗಂಬಿಯ ಹಾಗೆ ತತ್ತರಿಸುತ್ತ ಮಲಗುವುದೇ ಕನಸು ಬಂಡಿಯ ಕೆಳಗೆ ನಿದ್ರಿಸುವುದಾಗಿದೆ .

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ :

2nd puc kannada mumbai jataka question answer

1 ) ಮಗು ಏನನ್ನು ಕುಡಿದು ಬೆಳೆಯುವುದು ?

ಮಗು , ಬಾಟ್ಲಿ ಹಾಲು , ಗ್ರೆಪ್ ಸಿರಪ್ , ಹಾರ್ಲಿಕ್ಸ್ ಇತ್ಯಾದಿ ಕುಡಿದು ಬೆಳೆಯುವುದು

2 ) ಮಗು ಏನನ್ನು ಕಲಿಯಿತು ?

ಮಗು ಕಲಿತದ್ದು , ಕ್ಯೂ ನಿಲ್ಲುವುದು , ಫುಟ್‌ಪಾತ್‌ನಲ್ಲಿ ಸಂಚರಿಸುವುದು , ರಸ್ತೆ ದಾಟುವಾಗ ಎಚ್ಚರಿಕೆಯಿಂದ ಓಡಾಡುವುದು ಎಲ್ಲಿಯೂ ನಿಲ್ಲದೆ , ಹೇಗೋ ಅವರಿವರನ್ನು ತಳ್ಳಿ ಮುನ್ನುಗ್ಗುವುದು , ಎಲ್ಲಾದರೂ ಸೇರಿ ಬೇರೂರುವುದು .

3 ) ಮಗು ಹುಟ್ಟಿ ಬೆಳೆದುದು ಎಲ್ಲಿ ?

ಮಗು ಹುಟ್ಟಿದ್ದು ಆಸ್ಪತ್ರೆಯಲ್ಲಿ , ಬೆಳೆದದ್ದು ಬಸ್ಸು , ಟ್ರಾಂ , ಕಾರು , ಟ್ಯಾಕ್ಸಿ , ಎಲೆಕ್ನಿಕ್ ಟ್ರೇನ್‌ಗಳಲ್ಲಿ .

4 ) ಮಗುವಿನ ಪಾಲಿಗೆ ತಾಯಿ ಹೇಳಿದ್ದಾಳೆ ?

ಮಗುವಿನ ಪಾಲಿಗೆ ತಾಯಿ ಎಂದರೆ ಹೆಚ್ಚು ವಾಹನ ಸಂಚಾರವಿರುವ ರಸ್ತೆಯಂಚಿನಲ್ಲಿ ಕೈ ಹಿಡಿದು ನಡೆಸಿದವಳು . ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು .

5 ) ಮುಂಬೈನ ಅವಸರದ ಜೀವನ ಚಿತ್ರಕ್ಕೆ ಎರಡು ಉದಾಹರಣೆ ಕೊಡಿ .

ಮುಂಬೈನ ಜೀವನವೇ ಅವಸರದ ಜೀವನವಾಗಿದೆ . ಏಳುವುದು , ಬಟ್ಟೆಯಲ್ಲಿ ಮೈ ತುರುಕಿಕೊಂಡು ಓಡಿ ಬಸ್ಸೇ , ರೈಲೋ ಹಿಡಿಯುವುದು , ರಾತ್ರಿ ಸೋತು ಸುಸ್ತಾಗಿ ಹನ್ನೊಂದು ಘಂಟೆಗೆ ಬಂದು ಆಯಾಸದಿಂದ ಮಲಗಿದ ಹೆಂಡತಿಯನ್ನು ಎಬ್ಬಿಸಿ , ತಣ್ಣಗೆ ಕೊರೆಯುವ ಊಟವನ್ನೆ ಉಂಡು ಬಂಡಿಯ ಕೆಳಗಿನ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು .

6 ) ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆ ಹೇಗೆ ?

ತಂದೆ ಮಗುವಿಗೆ ಕಾಣಿಸಿಕೊಳ್ಳುವ ಬಗೆಯೆಂದರೆ – “ ಬೆಳಗಿನಿಂದ ಸಂಜೆಯವರೆಗೆ ಕಣ್ಮರೆಯಾಗಿ , ಒಮ್ಮೊಮ್ಮೆ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ ,

7 ) ಮಗು ಕಲಿತ ವಿದ್ಯೆಗಳಾವುವು ?

ಮಗು ಕಲಿತ ವಿದ್ಯೆಗಳೆಂದರೆ “ಶಾಲೆ ಕಾಲೇಜು ಕಲಿಸಿದ್ದು ದಾರಿಬದಿಯ ನೂರಾರು ಜಾಹಿರಾತುಗಳು ತಲೆಗೆ ತುರುಕಿದ್ದು , ರೇಡಿಯೋ ವಿಭಾಗ ಸಿಲೋನ್ ವ್ಯಾಪಾರಿ ಶಿಫಾರಸ್ಸು ಮಾಡಿದ್ದು , ತಾನಾಗಿ ಕಲಿತದ್ದು ಬಲು ಕಡಿಮೆ , ಬಸ್‌ಸ್ಟಾಪಿನಲ್ಲಿ ನಿಂತ ಹೆಣ್ಣುಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತುಪಡಿಸಿ ”

ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ

1. ನಗರ ಜೀವನದ ಯಾಂತ್ರಿಕ ವಿವರಗಳು ಕವಿತೆಯಲ್ಲಿ ಹೇಗೆ ಚಿತ್ರಿತಗೊಂಡಿದೆ ? ವಿವರಿಸಿ .

ನಗರ ಜೀವನದ ಯಾಂತ್ರಿಕತೆ ಹುಟ್ಟಿದಂದಿನಿಂದಲೂ ಆವರಿಸಿಕೊಳ್ಳುತ್ತದೆ . ಕವಿತೆಯಲ್ಲಿ ಚಿತ್ರಣಗೊಂಡಿರುವ ಬಾಲ್ಯ ಜೀವನ , ವಿದ್ಯಾರ್ಥಿ ಜೀವನ , ಸಾಂಸಾರಿಕ ಜೀವನ , ಯಾವ ವಿವರಗಳಲ್ಲಿಯೂ ಜೀವಂತಿಕೆಯೇ ಇಲ್ಲ . ಜೀವನೋತ್ಸಾಹವೂ ಇಲ್ಲ . ಬಾಲ್ಯದಲ್ಲಿಯೇ ಹೇಗಾದರೂ ಅವರಿವರ ತಳ್ಳಿ ಮುನ್ನುಗ್ಗುವ , ಬೇರೂರಿ ನಿಲ್ಲುವ ಚಾಣಾಕ್ಷತನ ಕಲಿಯಬೇಕು . ಬಾಲ್ಯದ ಸಮೃದ್ಧ ಭಾವಕೋಶದ ಬೆಳವಣಿಗೆಯ ಅವಕಾಶದಿಂದ ಮಕ್ಕಳು ವಂಚಿತರು . ಯೌವನದಲ್ಲೂ ಈ ಕೃತಕತೆ ಮುಂದುವರೆಯು ತ್ತದೆ . ಹೀಗೆ ಬೆಳೆದು , ಮದುವೆಯಾಗಿ , ಸಂಸಾರಿಯಾದ ಮೇಲೂ ಇತರರ ಕೈಗೊಂಬೆ ಯಾಗಿಯೇ ಕೊನೆಯವರೆಗೂ ಬಾಳಬೇಕಾದ ಸ್ಥಿತಿ ನಿರ್ಮಾಣವಾಗುತ್ತವೆ . ಮನುಷ್ಯ ಸಹಜ ಸಂಬಂಧಗಳಿಗೆ ಅವಕಾಶವೇ ಇಲ್ಲದ , ಬರೀ ಕೃತಕ ಜೀವನದ ಜಾಡನ್ನು ತುಳಿದು ಮುನ್ನಡೆಯುವ ಯಂತ್ರಗಳಾಗಿ ಇಲ್ಲಿನ ವ್ಯಕ್ತಿಯ ಬದುಕು ಚಿತ್ರಣಗೊಂಡಿರು ವುದು ನಗರ ಜೀವನದ ಯಾಂತ್ರಿಕತೆಯ ವಿವರಗಳಿಗೆ ಕನ್ನಡಿ ಹಿಡಿದಂತಿವೆ .

2. ತಂದೆ – ತಾಯಿಗಳು ಮಗುವಿಗೆ ಗೋಚರಿಸುವ ಬಗೆಯನ್ನು ವಿವರಿಸಿ ,

‘ಮುಂಬೈ ಜಾತಕ ‘ ಕವಿತೆಯಲ್ಲಿ ಚಿತ್ರಣಗೊಂಡಿರುವ ಮಗುವಿನ ತಂದೆ ತಾಯಿಗಳು ತಮ್ಮ ಕೃತಕ ಜವಾಬ್ದಾರಿಯನ್ನು ನಿರ್ವಹಿಸುವ ಯಂತ್ರಗಳಂತಿದ್ದಾರೆ . ಮಕ್ಕಳೊಂದಿಗೆ ವಾತ್ಸಲ್ಯಭರಿತ ಒಡನಾಟದ ಚಿತ್ರಣವೇ ಇಲ್ಲಿಲ್ಲ . ತಾಯಿ ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನ್ನು ಪರಿಚಯಿಸುವ , ಎಚ್ಚರಿಸುವ ಸಾವಿರ ಗಾಲಿಗಳು ಹೊರಳುವ ರಸ್ತೆಯಂಚಿನಲ್ಲಿ ಕೈಹಿಡಿದು ನಡೆಸುವ ಕೆಲಸಕ್ಕಷ್ಟೇ ಸೀಮಿತ ಳಾಗಿರುವ ಅಸಹಾಯಕಳಾಗಿ ಕಾಣುತ್ತಾಳೆ . ಇನ್ನು ತಂದೆಯೊಂದಿಗಿನ ಒಡನಾಟವೂ ಮಗುವಿಗಿಲ್ಲ . ಬೆಳಗ್ಗಿನಿಂದ ಸಂಜೆಯವರೆಗೂ ಕೆಲಸದ ನೆಪದಲ್ಲಿ ಕಣ್ಮರೆಯಾಗುವ ಆತ ಮಗುವಿಗೆ ಕಾಣಿಸಿಕೊಳ್ಳುವುದು ‘ ರಜಾ ದಿನಗಳಲ್ಲಿ ಕುಳಿತು ಕಮ್ಯುವ ಪ್ರಾಣಿಯಾಗಿ ಮಾತ್ರ , ನಗರ ಜೀವನದ ಯಾಂತ್ರಿಕತೆಯಲ್ಲಿ ತಂದೆ – ತಾಯಿಗಳೂ ಮಗುವಿನೊಂದಿಗೆ ಯಾಂತ್ರಿಕವಾಗಿ ಕರ್ತವ್ಯ ನಿರ್ವಹಿಸುವ ದುರಂತವನ್ನು ಇಲ್ಲಿ ಕಾಣಬಹುದಾಗಿದೆ .

3. ಮಗು ಕಲಿತದ್ದನ್ನು ಮತ್ತು ವಿದ್ಯಾಭ್ಯಾಸ ಮಾಡಿದ ವಿವರಗಳನ್ನು ವಿಶ್ಲೇಷಿಸಿ .

ಮುಂಬೈನಗರದಲ್ಲಿ ಬೆಳೆಯುವ ಮಗು ಕಲಿಯುವುದು ಸುಸಂಸ್ಕೃತ ಆಚಾರ ವಿಚಾರ , ಆಟ – ಪಾಠ , ಕಥೆ , ಮೌಲ್ಯಗಳನ್ನಲ್ಲ . ಅದನ್ನೆಲ್ಲ ಮಗುವಿಗೆ ಹೇಳಿಕೊಡಲು ತಂದೆ – ತಾಯಿಗಳಿಗಾಗಲಿ , ಇತರರಿಗಾಗಲಿ ಬಿಡುವಿದ್ದರಲ್ಲವೇ ? ಬೃಹತ್ ನಗರದಲ್ಲಿ ಬಾಳಿಬದುಕಲು ಬೇಕಾಗಿರುವುದು ಚಾಣಾಕ್ಷತನ ಮಾತ್ರ . ಹಾಗಾಗಿ ಮಗು ಕೂ ನಿಲ್ಲುವುದನ್ನು , ಫುಟ್‌ಪಾತಿನಲ್ಲಿ ಸಂಚರಿಸಿ , ಗುರಿ ತಲುಪುವುದನ್ನು , ರಸ್ತೆಯನ್ನು ಎಚ್ಚರದಿಂದ ದಾಟುವುದನ್ನು , ಎಲ್ಲಿಯೂ ನಿಲ್ಲದೆ ಅವರಿವರ ತಳ್ಳಿ ಮುನ್ನುಗ್ಗಿ ಬೇರೂರುವು ದನ್ನು ಮಾತ್ರ ಕಲಿಯುತ್ತವೆ . ಇನ್ನು ವಿದ್ಯೆಯೂ ಅಷ್ಟೇ , ಶಾಲಾ – ಕಾಲೇಜುಗಳಲ್ಲಿ ಕಲಿಯುವುದರ ಜೊತೆಗೆ ಜಾಹೀರಾತುಗಳಲ್ಲಿ , ರೇಡಿಯೋದಲ್ಲಿ ಮಾಡಿದ ಶಿಫಾರಸ್ಸು ಗಳಲ್ಲಿರುವುದನ್ನು ತಲೆಗೆ ತುಂಬಿಕೊಂಡು ಬೆಳೆಯಬೇಕು . ಸ್ವಂತವಾಗಿ ಏನನ್ನೂ ಕಲಿಯುವ ಅವಕಾಶವೇ ಇಲ್ಲಿಲ್ಲ . ಕೊನೆಯವರೆಗೂ ಇತರರ ಕೈಗೊಂಬೆಯಾಗಿ ಬಾಳುವುದನ್ನಷ್ಟೇ ಇಲ್ಲಿ ಕಲಿಯಬೇಕಾಗಿರುವುದನ್ನು ಕವಿ ಚಿತ್ರಿಸಿದ್ದಾರೆ .

4. ಮುಂಬೈ ಜಾತಕದಲ್ಲಿ ಮಕ್ಕಳ ಬಾಲ್ಯದ ಚಿತ್ರಣ ಹೇಗೆ ನಿರೂಪಿತವಾಗಿದೆ ?

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯ ಆರಂಭಿಕ ಭಾಗದಲ್ಲಿ ನಗರದಲ್ಲಿ ಹುಟ್ಟಿ ಬೆಳೆಯುವ ಮಕ್ಕಳ ಬಾಲ್ಯದ ಚಿತ್ರಣವಿದೆ . ಇಲ್ಲಿ ಹುಟ್ಟುವ ಮಗುವಿಗೆ ಹೇಳಿಕೊಳ್ಳಲು ಒಂದು ಊರು , ಸ್ಥಳದ ಗುರುತಿಲ್ಲ . ಆಸ್ಪತ್ರೆಯಲ್ಲಿ ಎಂಬ ಕೃತಕವಾದ ಉತ್ತರವಿದೆ . ಮಕ್ಕಳು ಕುಡಿಯುವುದು ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿಯ ಹಾಲು , ಎಮ್ಮೆಯನ್ನಾಗಲಿ , ಕರೆಯುವ ಕೈಗಳನ್ನಾಗಲಿ ಕಾಣುವ ಸಂದರ್ಭವಿರದ ಅಪರಿಚಿತತೆ ಎದ್ದು ಕಾಣುತ್ತದೆ . ಉಳಿದಂತೆ ಅವು ಕುಡಿಯುವುದು ಹೊಟ್ಟೆನೋವು – ಅಜೀರ್ಣ ಕಾಡಿದಾಗ ಡ್ರೈಫ್‌ಸಿರಫ್ ಮತ್ತು ಶಕ್ತಿಗಾಗಿ ಹಾರ್ಲಿಕ್ಸ್ ಕಾಣುವುದು ರಸ್ತೆಯ ಮೇಲೆ ಚಲಿಸುವ ಲಕ್ಷಚಕ್ರದ ಉರುಳು , ಜನನಿಬಿಡತೆಯ ಅವಸರದಲ್ಲಿ ಸರಿಯುವ ಸಾವಿರ ಕೊರಳನ್ನು ಬಾಲ್ಯದಲ್ಲಿ ಆಡಿ ಬೆಳೆಯಲು , ಸ್ನೇಹಿತ ರೊಂದಿಗೆ ನಲಿಯಲು ನಗರದಲ್ಲಿ ಸ್ಥಳವೇ ಇಲ್ಲ . ಪ್ರಕೃತಿಯೊಂದಿಗಿನ ಒಡನಾಟವೇ ಇಲ್ಲದೆ , ಕೃತಕ ಪರಿಸರದಲ್ಲಿ ಬದುಕನ್ನು ಸಾಗಿಸಲು ಅಶಕ್ತವಾದ ವಾತಾವರಣದಲ್ಲಿ ಮಕ್ಕಳು ಬಾಲ್ಯವನ್ನು ಕಳೆಯುವ ಚಿತ್ರಣವನ್ನು ಕವಿ ಇಲ್ಲಿ ನೀಡಿದ್ದಾರೆ .

5. ನಗರದ ಅಬ್ಬೇಪಾರಿ ಜೀವನದ ವಿವರಗಳು ಕವಿತೆಯಲ್ಲಿ ಹೇಗೆ ಮೂಡಿಬಂದಿದೆ ?

‘ಮುಂಬೈ ಜಾತಕ ‘ ಕವಿತೆಯ ಅಂತ್ಯದಲ್ಲಿರುವ ‘ ಜೀವನ ‘ ಎಂಬ ಭಾಗದಲ್ಲಿ ಕವಿಯು ನಗರ ಜೀವನದಲ್ಲಿ ನಡೆಯುವ ಯಾಂತ್ರಿಕ ಬದುಕಿನ ಚಿತ್ರಣವನ್ನು ನೀಡಿ ದ್ದಾರೆ . ಅಲ್ಲಿನ ಜೀವನವೆಂದರೆ ಲಕ್ಷದಾರಿಗಳ ಚದುರಂಗದಾಟವಿದ್ದಂತೆ . ಯಾರದೋ ಕೈಗೊಂಬೆಯಾಗಿ ಬದುಕನ್ನು ಸಾಗಿಸಬೇಕು . ಬೆಳಗ್ಗೆ ಎದ್ದೊಡನೆ ಬಟ್ಟೆಯಲ್ಲಿ ಮೈತುರುಕಿ , ರೈಲು ಅಥವಾ ಬಸ್ಸನ್ನು ಹಿಡಿದು ಕೆಲಸ ಮಾಡುವ ಸ್ಥಳ ಸೇರಬೇಕು . ಸಂಜೆವರೆಗೂ ಬಿಡುವಿಲ್ಲದೆ ದುಡಿದು ಸಾಯಂಕಾಲ ಆಯಾಸದಲ್ಲಿ ಮನೆಗೆ ಹೊರಟರೆ , ಬಂದು ಮನೆ ಸೇರುವಷ್ಟರಲ್ಲಿ ರಾತ್ರಿ ಹನ್ನೊಂದು ಗಂಟೆ . ಮಕ್ಕಳೊಂದಿಗೆ , ಹೆಂಡತಿಯೊಂದಿಗೆ ಹರಟಿ ಆನಂದಿಸಲು , ಕಷ್ಟ – ಸುಖ ಹಂಚಿಕೊಳ್ಳಲು ಬಿಡುವಿಲ್ಲ . ಹೆಂಡತಿ ಗಂಡನಿಗಾಗಿ ಅಡುಗೆ ಸಿದ್ಧಪಡಿಸಿ ಕಾದೂಕಾದೂ ನಿದ್ರೆಗೆ ಜಾರಿರುತ್ತಾಳೆ . ಅವಳೆನ್ನೆಬ್ಬಿಸಿ , ತಂಗಳನ್ನು ಉಂಡು ಮಲಗಿದರೆ ಅಂದಿನ ದಿನಚರಿ ಮುಗಿದಂತೆ . ಮರುದಿನವೂ ಇದೇ ದಿನಚರಿಯ ಪುನರಾವರ್ತನೆ . ಅಕ್ಕಪಕ್ಕದವರೊಂದಿಗೆ ಸಾಮರಸ್ಯ ಬೆಳೆಸುವ ಅವಕಾಶವೂ ಇಲ್ಲದ ಅಬ್ಬೇಪಾರಿ ಜೀವನ . ಇದು ನಗರ ಜೀವನದ ಯಾಂತ್ರಿಕತೆಯ ವರ .

ಈ ) ಅಭ್ಯಾಸ – ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1. “ ರಸ್ತೆ ದಾಟುವಾಗೆಚ್ಚರಿಕೆ . ”

ಜಿ.ಎಸ್ . ಶಿವರುದಪ್ಪನವರು ರಚಿಸಿರುವ ‘ ಮುಂಬೈ ಜಾತಕ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಮುಂಬೈಯಂತಹ ಮಹಾನಗರದಲ್ಲಿ ಹುಟ್ಟುವ ಮಕ್ಕಳು ಕಲಿತದ್ದು – ಕಲಿಯ ಬೇಕಾದ್ದು ನಗರದಲ್ಲಿ ಸಂಚರಿಸಿ , ನೆಲೆಗಾಣುವ ವಿಚಾರ ಮಾತ್ರ . ಕ್ಯೂ ನಿಲ್ಲುವುದನ್ನು ಕಲಿಯಬೇಕು . ಪಾದಚಾರಿಗಳಿಗಾಗಿ ಇರುವ ಪಥದಲ್ಲೇ ಸಂಚರಿಸಬೇಕು , ರಸ್ತೆಯಲ್ಲಿ ಸದಾ ಲಕ್ಷ ಚಕ್ರಗಳು ಉರುಳುತ್ತಿರುತ್ತವೆಯಾದ್ದರಿಂದ ‘ ರಸ್ತೆ ದಾಟುವಾಗ ‘ ಎಚ್ಚರ ದಿಂದಿರುವುದನ್ನು ಕಲಿಯಬೇಕು . ಇಲ್ಲದಿದ್ದರೆ ಜೀವಕ್ಕೆ ಸಂಚಕಾರ ಒದಗುತ್ತದೆಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ .

2. “ ರಸ್ತೆಯಂಚಿನಲ್ಲೇ ಕೈ ಹಿಡಿದು ನಡೆಸಿದವಳು .

”ರಾಷ್ಟ್ರಕವಿ ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಎಂಬ ಕವಿತೆಯಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸಬಹುದು . ಮುಂಬೈ ನಗರದಲ್ಲಿ ಹುಟ್ಟಿ ಬೆಳೆಯುವ ಮಗುವಿನ ತಾಯಿಯ ವಿಚಾರವನ್ನು ವಿವರಿಸುವಾಗ ಕವಿಯು ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ . ತಾಯಿ ಯಾಂತ್ರಿಕವಾಗಿ ತನ್ನ ತಾಯ್ತನವನ್ನು ನಿರ್ವಹಿಸಿದ್ದಾಳೆ . ಇರುವ ಒಂದಿಂಚು ಕೋಣೆಯಲ್ಲಿ ಹೊರಲೋಕ ವನ್ನು ಮಗುವಿಗೆ ಪರಿಚಯಿಸಿಕೊಟ್ಟಿದ್ದಾಳೆ . ಮಾತ್ರವಲ್ಲ , ಸಾವಿರ ಗಾಲಿ ಉರುಳಿ ಹೊರಳುವ ರಸ್ತೆಯಲ್ಲಿ ಮಗುವಿನ ಕೈಹಿಡಿದು ಅಂಚಿನಲ್ಲಿ ನಡೆಯುವುದನ್ನು ಕಲಿಸಿದ್ದಾಳೆ . ಹೊರಲೋಕದ ಬಗ್ಗೆ ಎಚ್ಚರಿಕೆ ನೀಡಿದ್ದಾಳೆ . ಇಷ್ಟು ಮಾತ್ರವೇ ಆ ಅಸಹಾಯಕ ತಾಯಿಯಿಂದ ಮಾಡಲು ಸಾಧ್ಯವಾಗಿರುವುದು . ಇಷ್ಟನ್ನು ಬಿಟ್ಟರೆ ತಾಯಿಯ ಇನ್ನಾವ ಸಂಗತಿಗಳೂ ನೆನಪಿಗೆ ಬರುತ್ತಿಲ್ಲ .

3. “ ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು . ”

ಜಿ.ಎಸ್ . ಶಿವರುದ್ರಪ್ಪನವರು ರಚಿಸಿರುವ ‘ ಮುಂಬೈ ಜಾತಕ ‘ ಎಂಬ ಕವಿತೆ ಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಕವಿತೆಯ ಆರಂಭದಲ್ಲಿ ‘ ಕಂಡದ್ದು ‘ ಎಂಬುದನ್ನು ವಿವರಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿರುವರು . ಮುಂಬೈ ನಗರದಲ್ಲಿನ ವಾಹನದಟ್ಟಣೆ ಮತ್ತು ಜನದಟ್ಟಣೆಯನ್ನು ಈ ಮಾತು ವಿವರಿಸುತ್ತದೆ . ಬೆಳಿಗ್ಗೆಯಿಂದ ಸಂಜೆಯವರೆಗೂ ಅವಸರವಸರವಾಗಿ ತಮ್ಮತಮ್ಮ ಕೆಲಸಗಳಿಗೆ ನಡೆಯುತ್ತಿರುವುದನ್ನು ಕವಿ “ ಅವಸರದ ಹೆಜ್ಜೆಯ ಮೇಲೆ ಸರಿವ ಸಾವಿರ ಕೊರಳು ‘ ಎಂದಿದ್ದಾರೆ . ಸ್ವಲ್ಪವೂ ಸಮಯವಿಲ್ಲದ , ಅವಸರದ ಯಾಂತ್ರಿಕ ಬದುಕನ್ನು , ಜನನಿಬಿಡತೆಯನ್ನು ಕವಿ ಇಲ್ಲಿ ಸಂಕೇತಿಸಿದ್ದಾರೆ .

4 “ ಬಟ್ಟೆಯಲ್ಲಿ ಮೈ ತುರುಕಿ ಓಡುವುದು . ”

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯ ‘ ಜೀವನ ‘ ಎಂಬ ಭಾಗದಲ್ಲಿ ಈ ಮೇಲಿನ ವಾಕ್ಯವನ್ನು ಗಮನಿಸುತ್ತೇವೆ . ನಗರ ಜೀವನದ ಅವಸರದ ಓಟವನ್ನು ಈ ಮೇಲಿನ ಮಾತು ಪರಿಣಾಮಕಾರಿಯಾಗಿ ವಿವರಿಸಿದೆ . ನಗರ ಜೀವನದಲ್ಲಿ ಬೆಳಿಗ್ಗೆ ಶುರುವಾಗುವುದೇ ಅವಸರದಲ್ಲಿ ಎದ್ದೊಡನೆ ರೈಲೋ , ಬಸ್ಸನ್ನೋ ಹಿಡಿದು ಕೆಲಸಕ್ಕೆ ಓಡಬೇಕು . ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ವಾಹನದಟ್ಟಣೆಯ ಸಂಚಾರದಲ್ಲಿ ಸಮಯಕ್ಕೆ ಸರಿಯಾಗಿ ತಲುಪುವುದೇ ಕಷ್ಟದ ಕೆಲಸ . ನಿಧಾನವಾಗಿ ಬಟ್ಟೆ ಹಾಕಿಕೊಳ್ಳುವ ವ್ಯವಧಾನವಿಲ್ಲ . ಅಲ್ಲದೆ ಮೈಗೆ ಬಟ್ಟೆ ಹಾಕುವ ಬದಲು , ಮೈಯನ್ನೇ ಬಟ್ಟೆಯಲ್ಲಿ ತುರುಕಿ ಓಡುವುದು ಎಂದಿದ್ದಾರೆ ಕವಿ ಜಿಎಸ್ಸೆಸ್ , ಇದು ಅತ್ಯಂತ ವ್ಯಂಗ್ಯದ ನುಡಿಯಾಗಿವೆ . ಸ್ವಂತಕ್ಕೆ ಯೋಚಿಸಲು ಸಮಯವಿಲ್ಲದ ನಗರದ ಅವಸರದ ಜೀವನ ಬೇಕೆ ? ಇದೂ ಒಂದು ಬದುಕೆ ? ಎಂಬೆಲ್ಲಾ ಪ್ರಶ್ನೆಗಳನ್ನು ಈ ವಾಕ್ಯ ತನ್ನಲ್ಲಿ ಹುದುಗಿಸಿಕೊಂಡಿದೆ .

5. ” ಕುಳಿತು ಕೆಮ್ಮುವ ಪ್ರಾಣಿ .

” ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಕವಿತೆಯಲ್ಲಿ ಈ ಮೇಲಿನ ವಾಕವಿದೆ , ತಂದೆಯ ವಿಚಾರವನ್ನು ತಿಳಿಸುವಾಗ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ . ಮಗು ತಂದೆಯನ್ನು ನೋಡುವ ಸಂದರ್ಭಗಳೇ ಅಪರೂಪ , ಏಕೆಂದರೆ ಆತ ಮಗು ಏಳುವ ಮೊದಲೇ ಮನೆಬಿಟ್ಟು ಕೆಲಸಕ್ಕೆ ತೆರಳಿದವನು , ಹಿಂದಿರುಗುವುದು ೮.೪ದಿನಗಳಲ್ಲಿ ತಡರಾತ್ರಿ ಮಗುಮಲಗಿದ ಮೇಲೆ , ಆತ ಕಾಣಿಸಿಕೊಳ್ಳುವುದು ರಜಾ ಮಾತ್ರ . ಅದೂ ಕುಳಿತು ಕೆಯ್ಯುವ ಪಾಣಿ’ಯಾಗಿ , ತಂದೆ ಮಗುವಿನ ನಡುವೆ ಇರುವ ಅಪರಿಚಿತತೆ ಹಾಗೂ ಪ್ರಾಣಿ’ಯೆಂದು ಭಾವಿಸುವ ಬಾಂಧವ್ರರಾಹಿತ್ಯ ಮನೋಭಾವವನ್ನು ಕವಿ ಈ ಮೇಲಿನ ವಾಕ್ಯದ ಮೂಲಕ ಚಿತ್ರಿಸಿದ್ದಾರೆ .

6. “ ನೂರಾರು ಜಾಹೀರಾತುಗಳು ತಲೆಗೆ ತುರುಕಿದ್ದು . ”

ಜಿ.ಎಸ್ . ಶಿವರುದ್ರಪ್ಪನವರ ‘ ಮುಂಬೈ ಜಾತಕ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ‘ ಕಲಿತದ್ದು ‘ ಏನೇನನ್ನು ಎಂಬ ಪ್ರಶ್ನೆಗೆ ಉತ್ತರವಾಗಿ ಈ ಮೇಲಿನ ವಾಕ್ಯವಿದೆ . ಜಾಹೀರಾತುಗಳು ಬೆಳೆದ ಮಕ್ಕಳ ಪಾಲಿಗೆ ವೇದವಾಕ್ಯವಾಗಿರುತ್ತದೆ . ಜಾಹೀರಾತುಗಳು ತಿಳಿಸುವ ಉತ್ಪನ್ನಗಳೇ ಮಕ್ಕಳಿಗೆ ಬೇಕು . ಆದ್ದರಿಂದ ಜಾಹೀರಾತೇ ತಲೆಯ ತುಂಬಾ ಇದ್ದು , ಅದನ್ನೇ ಜೀವನ ವಿಧಾನವಾಗಿಸಿಕೊಳ್ಳುವ ನಗರಜೀವನದ ಮಕ್ಕಳ ಮನೋಭಾವ ವನ್ನು ಕವಿ ಇಲ್ಲಿ ಈ ಮೇಲಿನ ವಾಕ್ಯದ ಮೂಲಕ ವಿವರಿಸಿ ಹೇಳಿದ್ದಾರೆ .

2nd PUC Mumbai Jataka Kannada Notes Question Answer Pdf Download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh