ದ್ವಿತೀಯ ಪಿ.ಯು.ಸಿ ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ | 2 PUC Habbali Avara Rasaballi Kannada Notes.

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳು, 2 PUC Kannada Habbali Avara Rasaballi Notes Question Answer pdf Download

ತರಗತಿ : ದ್ವಿತೀಯ ಪಿ.ಯು.ಸಿ

ಪದ್ಯದ ಹೆಸರು : ಹಬ್ಬಲಿ ಅವರ ರಸಬಳ್ಳಿ

ಜನಪದ

ದ್ವಿತೀಯ ಪಿ.ಯು.ಸಿ ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌, 2 PUC Habbali Avara Rasaballi Kannada Notes.

ಕಾವ್ಯ ಪರಿಚಯ:

ಜನಪದ ಸಾಹಿತ್ಯ ಸಾಮೂಹಿಕ ಸೃಷ್ಟಿ , ಅದು ಅನಕ್ಷರಸ್ಥ ಜನಪದರ ನಾಲಗೆಯ ಮೇಲೆ ಜೀವಂತವಾಗಿರುವ ಕಂಠಸ್ಥ ಸಾಹಿತ್ಯ , ಕ್ರಿಯಾಮೂಲ ಸಾಹಿತ್ಯ . ನಮ್ಮ ಸಂಸ್ಕೃತಿಯ ಸಾರ ರೂಪವಾದ ಜನಪದ ಸಾಹಿತ್ಯ ಒಂದು ದೇಶದ ಬಹುಸಂಖ್ಯಾತರ ಆಶೋತ್ತರಗಳ ಪ್ರತೀಕವೂ ಹೌದು , ಜನಸಂಸ್ಕೃತಿಯ ಅಂತರಾಳದಲ್ಲಿ ಅವುಗಳ ಬೇರುಗಳಿರುತ್ತವೆ .

ಜನಪದ ಗೀತೆಗಳು ಜನಪದ ಸಾಹಿತ್ಯದ ಒಂದು ಮುಖ್ಯ ಪ್ರಕಾರ , ಇದರಲ್ಲಿ ಹೆಂಗಸರ ಹಾಡು , ಗಂಡಸರ ಹಾಡು , ಮಕ್ಕಳ ಹಾಡುಗಳೆಂದು ವಿಭಾಗಿಸಲಾಗಿದೆ . ಇವು ಬಾಯಿಂದ ಬಾಯಿಗೆ , ಪೀಳಿಗೆಯಿಂದ ಪೀಳಿಗೆಗೆ ಕಂಠಸ್ಥವಾಗಿ ಸಾಗಿಬಂದ ಸಾಹಿತ್ಯ . ಇದರಲ್ಲಿ ತ್ರಿಪದಿಗಳದ್ದು ಸಿಂಹಪಾಲು . ಜನಪದ ಕಾವ್ಯಛಂದಸ್ಸಿನಲ್ಲಿ ತ್ರಿಪದಿಗೆ ಪ್ರಥಮ ಸ್ಥಾನ . ಮೂರು ಸಾಲುಗಳುಳ್ಳ ಹಾಡುಗಬ್ಬ ಸಾಹಿತ್ಯವಿದು . ಅತ್ಯಂತ ಸರಳ , ಸುಂದರ ಪದಲಾಲಿತ್ಯದಿಂದ ಕೂಡಿದ ಪದ್ಯ ಸಾಹಿತ್ಯ ಇದಾಗಿದೆ .

‘ಹಬ್ಬಲಿ ಅವರ ರಸಬಳ್ಳಿ ‘ ಎಂಬ ಪ್ರಸ್ತುತ ಪದ್ಯಭಾಗದಲ್ಲಿ ಜನಪದರು ಬಾಳಿಬದುಕಿದ ರೀತಿ – ನೀತಿ , ತಾಯಿ ಮತ್ತು ತವರಿನ ಬಗೆಗೆ ಜನಪದರು ಇಟ್ಟುಕೊಂಡ ಅಪಾರವಾದ ಪ್ರೀತಿ ಅಭಿಮಾನಗಳು ವ್ಯಕ್ತವಾಗಿವೆ.

ಕಾವ್ಯದ ಹಿನ್ನೆಲೆ :

ಜನಪದ ಸಾಹಿತ್ಯದಲ್ಲಿ ‘ ತ್ರಿಪದಿ’ಯು ಪದ್ಯ ಪ್ರಕಾರಕ್ಕೆ ಸಂಬಂಧಿಸಿದುದಾಗಿದೆ . ಜನಪದ ಗೀತ ಪ್ರಕಾರ ತುಂಬಾ ಜನಪ್ರಿಯವಾದುದು . ತ್ರಿಪದಿಗಳಲ್ಲಿ ಬಡತನ – ಸಿರಿತನ ; ನಡೆನುಡಿ ; ನೆರೆಹೊರೆಯ ಸಂಬಂಧ : ಬಡತನದ ಬದುಕಿನ ಸಿಹಿ – ಕಹಿ ಹಾಗೂ ತವರು ಮನೆಯ ತಣ್ಣನೆಯ ನೆನಪಿದೆ . ಇದರೊಳಗೆ ಜನಪದರು ಕಂಡ ತಾಯಿಯ ರೂಪ – ಸ್ವರೂಪ ; ತೋರಿದ ಪ್ರೀತಿ , ಮಕ್ಕಳನ್ನು ಬೆಳೆಸಿದ ರೀತಿ ಇದೆ . ಜನಪದ ಲೋಕದ ಸುತ್ತೆಲ್ಲ ಇಂತಹ ಸಂಸ್ಕೃತಿ , ಬಿತ್ತರಿಸುವ ಹಾಡು – ಪಾಡಿನೊಂದಿಗೆ ತಾಯಿ ಮತ್ತು ತವರಿನ ಬಗೆಗಿನ ಪ್ರೀತಿ ಇಲ್ಲಿ ಅಭಿವ್ಯಕ್ತಗೊಂಡಿದೆ . ಜನಪದ ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳು ಇಲ್ಲಿ ಅಡಕವಾಗಿವೆ .

ಶಬ್ದಾರ್ಥ :

ಬಯಲಾಗೆ – ಕಡಿಮೆಯಾಗು ; ಪುತ್ಥಳಿ ವಿಗ್ರಹ , ಬೊಂಬೆ ; ನೆರೆಯ ಅಕ್ಕಪಕ್ಕದ ; ಎಂಜಲು ಉಂಡುಬಿಟ್ಟ ಆಹಾರ ; ಹೋಲು – ಹೋಲಿಕೆ ; ಕೊಳ್ಳಿ – ಉರಿಯುವ ಕಟ್ಟಿಗೆಯ ತುಂಡು ; ನೆನೆ – ಸ್ಕರಿಸು ; ಯಾಳಿ – ಸಮಯ ; ಸಂಪದ – ಸಂಪತ್ತು : ಖದ್ದರಗೇಡಿ – ಮಹಾದುಷ್ಪ .

ದ್ವಿತೀಯ ಪಿ.ಯು.ಸಿ ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌, 2 PUC Habbali Avara Rasaballi Kannada Notes.

ಅ ) ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )

1 ) ಬ್ಯಾಸಗಿ ದಿವಸಕ್ಕೆ ಯಾವ ಮರ ತಂಪು ?

ಬ್ಯಾಸಗಿ ದಿವಸಕ್ಕೆ ಬೇವಿನ ಮರ ತಂಪು .

2 ) ಎಂತಹ ನೆರೆಯವರು ಇರಬೇಕು ?

ಬುದ್ಧಿವಂತರಾದ ನೆರೆಯವರಿರಬೇಕು .

3 ) ಸುಟ್ಟು ಸುಣ್ಣವಾದುದು ಯಾವುದು ?

ದೇಹವು ಸುಟ್ಟು ಸುಣ್ಣವಾಯಿತು .

4 ) ಉತ್ತಮರ ಗೆಳೆತನ ಹೇಗೆ ಇರುತ್ತದೆ ?

ಉತ್ತಮರ ಗೆಳೆತನ ಬಂಗಾರದ ಪುತ್ಥಳಿಯಂತೆ ಇರುತ್ತದೆ .

5 ) ತಾಯಿಯನ್ನು ಯಾವುದಕ್ಕೆ ಹೋಲಿಸಲಾಗಿದೆ ?

ತಾಯಿಯನ್ನು ಬೆಳಗುವ ಜ್ಯೋತಿಗೆ ಹೋಲಿಸಲಾಗಿದೆ .

6 ) ಮಂದಿ ಮಕ್ಕಳೊಂದಿಗೆ ಹೇಗಿರಬೇಕು ?

ಮಂದಿ ಮಕ್ಕಳೊಂದಿಗೆ ಆನಂದದಿಂದ ಸಂತೋಷದಿಂದ ಇರಬೇಕು .

7 ) ಗರತಿಯು ಹಾಲುಂಡ ತವರಿಗೆ ಏನೆಂದು ಹರಸುತ್ತಾಳೆ ?

ಗರತಿಯು ಹಾಲುಂಡ ತವರಿಗೆ – “ ಹೊಳೆಯದಂಡಿಯಲ್ಲಿರುವ ಗರಿಕೆಯ ಕುಡಿಯಂಗೆ ಹಬ್ಬಲಿ ಅವರ ರಸಬಳ್ಳಿ ” ಎಂದು ಹರಸುತ್ತಾಳೆ .

8 ) ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು ?

ಹೆಣ್ಣು ಮಕ್ಕಳ ದುಃಖವನ್ನು ಹೆತ್ತವ್ವ ಬಲ್ಲಳು .

9 ) ತಾಯಿಯನ್ನು ಯಾವಾಗ ನೆನೆಯಬೇಕು ?

ಊರೆಲ್ಲಾ ಉಂಡು ಮಲಗಿದಾಗ, ಬೆಳ್ಳಿ ಚುಕ್ಕಿ ಮೂಡಿಬಂದಾಗ ತಾಯಿಯನ್ನು ನೆನೆಯಬೇಕು.

ಆ ) ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕಗಳ ಪ್ರಶ್ನೆಗಳು )

1 ) ಹಡೆದವ್ವನನ್ನು ಯಾವಾಗ ನೆನೆಯಬೇಕು ?

ಊರೆಲ್ಲ ಉಂಡು ಮಲಗಿದಾಗ , ಬೆಳ್ಳಿಚಿಕ್ಕೆ ಹೊರಟಾಗ , ಹಡೆದವ್ವನನ್ನು ನೆನೆಯಬೇಕು .

2 ) ಇದ್ದಷ್ಟು ಬುದ್ಧಿಯನ್ನು ಹೇಗೆ ಕಳೆದುಕೊಳ್ಳುತ್ತಾರೆ ?

ಬುದ್ಧಿವಂತರ ನೆರೆ ಬಿಟ್ಟು , ಸ್ವತಃ ಕುಲಗೇಡಿಗಳಾಗಿ , ಮೂರ್ಖರಾಗಿ , ಮೂರ್ಖರ ನೆರೆವಿನಲ್ಲಿದ್ದಾಗ ಇದ್ದಷ್ಟು ಬುದ್ಧಿಯನ್ನು ಕಳೆದುಕೊಳ್ಳುತ್ತಾರೆ .

3 ) ಹಿತ್ತಾಳೆಗಿಂತ ಬಲು ಹೀನ ಯಾವುದು ?

ಮತಿಹೀನರ ಗೆಳೆತನವು ಹಿತ್ತಾಳೆಗಿಂತ ಬಲುಹೀನ .

4 ) ಹಡೆದ ತಂದೆ – ತಾಯಿಯ ಮಹತ್ವ ತಿಳಿಸಿ .

ಉಂಗುರ , ಉಡದಾರ ಮುರಿದರೆ ಮತ್ತೆ ಮಾಡಿಸಬಹುದು . ಮಡದಿ ಸತ್ತರ ತರಬಹುದು . ಆದರೆ ಹಡೆದಂತ ತಂದೆ – ತಾಯಿ ಸಿಗಲು ಸಾಧ್ಯವಿಲ್ಲ ಎಂಬುದಾಗಿ ಜನಪದ ಸಾಹಿತ್ಯವು ಹಡೆದ ತಂದೆ – ತಾಯಿಯರ ಮಹತ್ವವನ್ನು ಕೊಂಡಾಡಿದೆ .

5 ) ಬಡತನ ಹೇಗೆ ಬಯಲಾಯಿತು ?

ಬಡತನದಲ್ಲಿರುವವನ್ನು ಕಂಡು ಬಂಗಾರ ತೊಟ್ಟ ಸಿರಿವಂತರು ಬೈದಾಗ , ಬಡತನವನ್ನು ಮುಚ್ಚಿಕೊಳ್ಳಲು ಅಸಾಧ್ಯವಾದಾಗ ತಮ್ಮ ಮಕ್ಕಳು ಬಡಿದಾಗ , ಹುಟ್ಟಿನಿಂದ ಸಾಯುವವರೆಗೂ ದೇಹದಂಡಿಸಿ ದುಡಿದು ಸುಣ್ಣವಾದರೂ ಬಡತನದಿಂದ ಮುಕ್ತಿ ಸಿಗದೆ ದೇವರ ಮೊರೆ ಹೊಕ್ಕಾಗ ಬಡತನ ಬಯಲಾಯಿತು .

ಇ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ನಾಲ್ಕು ಅಂಕಗಳ ಪ್ರಶ್ನೆಗಳು.

1 ) ಜನಪದರು ಹೇಳುವಂತೆ ನಮ್ಮ ನೆರೆಹೊರೆ ಹೇಗಿರಬೇಕು ? ವಿವರಿಸಿರಿ .

ಜನಪದರು ನಮ್ಮ ನೆರೆಹೊರೆಯಲ್ಲಿ ಎಂತಹವರಿರಬೇಕೆಂಬುದನ್ನು ವಿವರಿಸಿ ಹೇಳಿದ್ದಾರೆ . ಅವರ ಅಭಿಪ್ರಾಯದಂತೆ ನಮಗೆ ಬುದ್ಧಿವಂತರ ನೆರೆ ಇರಬೇಕು . ನಮ್ಮ ಅಕ್ಕಪಕ್ಕದಲ್ಲಿರುವ ಬುದ್ಧಿವಂತರ ಬದುಕಿನ ಕ್ರಮವನ್ನು ಅನುಸರಿಸಿ ನಾವೂ ಬದುಕನ್ನು ಬುದ್ಧಿವಂತಿಕೆಯಿಂದ ನಿಭಾಯಿಸಬಹುದು . ಅದಲ್ಲದೆ , ನೆರೆಯಲ್ಲಿ ದುಷ್ಟರು , ಕುಲಗೇಡಿ ಗಳಿದ್ದಲ್ಲಿ ನಾವು ಇರುವ ಅಲ್ಪಸ್ವಲ್ಪ ಬುದ್ಧಿಯನ್ನೂ ಕಳೆದುಕೊಂಡು ಅವರ ಗುಣಗಳನ್ನೇ , ಬಯಸುವ ರೀತಿಯನ್ನೇ ಕಲಿತುಕೊಳ್ಳಬಹುದು . ಆದ್ದರಿಂದ ನಾವು ವಾಸಿಸುವ ಪರಿಸರ ದಲ್ಲಿ ಬುದ್ಧಿವಂತರ ನೆರೆಯಿರುವುದು ಮುಖ್ಯವೆಂದು ಜನಪದರು ತಿಳಿಯ ಹೇಳಿದ್ದಾರೆ .

2 ) ತಾಯಿ ಮತ್ತು ತವರಿನ ಬಗೆಗೆ ಹೆಣ್ಣುಮಗಳ ನೆನೆಕೆಗಳೇನು ?

ಗರತಿಯು ತನ್ನ ತವರು ಮತ್ತು ತಾಯಿಯ ಬಗೆಗೆ ಅಪರಿಮಿತವಾದ ಪ್ರೀತಿ ಕೃತಜ್ಞತೆ ಧನ್ಯತೆಗಳನ್ನು ಉಳ್ಳವಳಾಗಿದ್ದಾಳೆ . ಅವಳಿಗೆ ತವರಿನಲ್ಲಿರುವ ತಾಯಿ ತಂಪನ್ನೆರೆ ಯುವ ಸಂಗತಿಯಾಗಿದ್ದಾಳೆ . ತಾಯಿಯ ಎಂಜಲುಂಡು ತಾನು ಬೆಳೆದಿರುವುದನ್ನು ಆಕೆ ಹೆಮ್ಮೆಯಿಂದ ಸ್ಮರಿಸುತ್ತಾಳೆ . ಅಲ್ಲದೆ ಯಾರಿದ್ದರೂ ತನ್ನ ತಾಯಿಯಿದ್ದಂತೆ ಆಗುವುದಿಲ್ಲ , ಆಕೆ ಜ್ಯೋತಿಸ್ವರೂಪಳೆಂದು ಕೀರ್ತಿಸುತ್ತಾಳೆ . ತಾಯಿಗೆ ಮಾತ್ರವೇ ಹೆಣ್ಣುಮಕ್ಕಳ ಕಷ್ಟ ನೋವು ಅರ್ಥವಾಗುವುದೆಂಬುದು ಅವಳ ಅನಿಸಿಕೆಯಾಗಿದೆ . ತಾಯಿಯನ್ನು ತಂಪು ಹೊತ್ತಿನಲ್ಲಿ ನೆನೆಯಬೇಕೆನ್ನುವ ಆಸೆ . ತಾಯವ್ವನನ್ನು ಬೈಯ್ದು ಅವಳ ಮನಸ್ಸಿಗೆ ನೋವುಂಟು ಮಾಡಬಾರದೆಂದು ತನ್ನ ತಮ್ಮನಿಗೆ ತಿಳಿಹೇಳುತ್ತಾಳೆ . ತಾಯಿಯಿಲ್ಲದ ತವರಿನ ಬಗ್ಗೆ ಚಿಂತಿಸಬಾರದೆಂದು ಮನಸ್ಸಿಗೆ ಹೇಳುವ ಗರತಿಯು ತನ್ನ ತವರಿನ ರಸಬಳ್ಳಿಯು ಹೊಳೆದಂಡೆಯಲ್ಲಿರುವ ಗರಿಕೆಯ ಕುಡಿಯಂತೆ ಹಬ್ಬಿ ಬೆಳೆಯಲೆಂದು ಮನದುಂಬಿ ಹರಸುತ್ತಾಳೆ .

3 ) ಹೆಣ್ಣು ಮಕ್ಕಳ ದುಃಖವನ್ನು ಬಲ್ಲವರು ಯಾರು ? ಹೇಗೆ ?

ಹೆಣ್ಣುಮಕ್ಕಳ ದುಃಖ ಅರ್ಥವಾಗುವುದು ಹೆತ್ತ ತಾಯಿಗೆ ಮಾತ್ರ . ಏಕೆಂದರೆ ಆಕೆಯೂ ಒಬ್ಬ ಹೆಣ್ಣು . ತನ್ನ ಮಗಳು ಅನುಭವಿಸುವ ಕಷ್ಟ – ದುಃಖ – ನೋವುಗಳನ್ನು ಸ್ವಾನುಭವದಿಂದ ಅರಿಯಬಲ್ಲಳು . ಮತ್ತು ಸಹಾನುಭೂತಿಯಿಂದ ಕಾಣುವ ಕರುಳು ಆಕೆಯದಾಗಿದೆ . ತಂದೆಗಾಗಲಿ ಅಥವ ಗಂಡ – ಮಕ್ಕಳಿಗಾಗಲಿ ಒಂದು ಹೆಣ್ಣಿನ ಕಷ್ಟಗಳು ಸಂಪೂರ್ಣವಾಗಿ ಅರ್ಥವಾಗುವುದೇ ಇಲ್ಲ . ಹಡೆದ ತಾಯಿ ಮಾತ್ರ ಮಗಳ ಪತಿ ಯೊಂದು ಕಷ್ಟವನ್ನು ಅರ್ಥಮಾಡಿಕೊಳ್ಳುವ ಶಕ್ತಿಯುಳ್ಳವಳಾಗಿರುತ್ತಾಳೆ . ತಲೆಯ ಮೇಲಿರುವ ಸರ್ಪದ ಬೇಗೆ ಅರ್ಥವಾಗುವುದು ಅದನ್ನು ಹೊತ್ತಿರುವ ಶಿವನಿಗೆ ಮಾತ್ರ ಅದರಂತೆಯೇ ಹೆಣ್ಣನ್ನು ಹೆತ್ತ ತಾಯಿಗೆ ಮಾತ್ರ ಹೆಣ್ಣುಮಕ್ಕಳ ದುಃಖದ ಅರಿವಾಗುತ್ತದೆ .

4 ) ‘ ಬಂಗಾರ ನಿನಗ ಸ್ಥಿರವಲ್ಲ ‘ ಎಂಬ ಮಾತಿನ ಸ್ವಾರಸ್ಯವನ್ನು ವಿವರಿಸಿರಿ .

ಬಡತನ ಸಿರಿತನಗಳಾವುವೂ ಶಾಶ್ವತವಲ್ಲ ಎಂಬುದರ ಅರಿವಿದ್ದೂ ಮನುಷ್ಯ ಸಿರಿತನಕ್ಕೆ ಹಂಬಲಿಸುತ್ತಾನೆ . ಅಲ್ಲದೆ ಸಿರಿತನವು ಬಂದಾಗ ತಲೆತಿರುಗಿದಂತೆ ವರ್ತಿಸುತ್ತಾನೆ . ಬಂಗಾರವನ್ನು ಮೈಮೇಲೆ ಹೇರಿಕೊಂಡು ಬಡವರನ್ನು , ಅವರ ಅಸಹಾಯಕತೆಯನ್ನು ಅಣಕಿಸಿ ಬೀಗುತ್ತಾನೆ . ಆದ್ದರಿಂದಲೇ ಜಾನಪದರು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಮಾತನ್ನು ಒತ್ತಿ ಹೇಳಿದ್ದಾರೆ . ಸಿರಿತನ ಬಂಗಾರ ಇವೆಲ್ಲವೂ ದೊರೆತಷ್ಟೇ ವೇಗವಾಗಿ ನಮ್ಮಿಂದ ದೂರಾಗಿ , ಬಡತನ ಕಾಲೂರಬಹುದು . ಮಧ್ಯಾಹ್ನದ ಉರಿಬಿಸಿಲು ಸ್ವಲ್ಪ ಹೊತ್ತಿನಲ್ಲಿ ಕಣ್ಮರೆಯಾಗಿ ನೆರಳು ಆವರಿಸುವಂತೆ , ಬಡತನ ದೂರಾಗಬಹುದು . ಆದ್ದರಿಂದ ಸಿರಿತನ ಬಂದಾಗ ಬೀಗದೆ , ಜಂಭದಿಂದ ವರ್ತಿಸದೆ , ಎಲ್ಲರೊಂದಿಗೆ ಪ್ರೀತಿ – ಸಾಮರಸ್ಯದಿಂದ ಬಾಳುವುದು ಮುಖ್ಯ ಎಂಬ ಮಾತನ್ನು ‘ ಬಂಗಾರ ನಿನಗೆ ಸ್ಥಿರವಲ್ಲ ‘ ಎಂಬ ಸ್ವಾರಸ್ಯಕರ ಮಾತಿನ ಮೂಲಕ ಅಭಿವ್ಯಕ್ತಿಸಿದ್ದಾರೆ .

5 ) ಗರತಿ ತವರಿಗೆ ಏನೆಂದು ಹರಸುತ್ತಾಳೆ ?

ಗರತಿಗೆ ತಾನು ಹಾಲುಂಡು ಬೆಳೆದ ತವರಿಗೆ ಏನಾದರೂ ಹಾರೈಸಿ ಹಾಡಬೇಕೆಂಬ ಬಯಕೆಯಿದೆ . ಏನೇ ಮಾಡಿದರೂ ತವರಿನ ಋಣ ತೀರಿಸಲು ಸಾಧ್ಯವಾಗದು . ಆದರೂ ತನ್ನ ತವರಿಗೆ ಶುಭವನ್ನು ಹರಸಬೇಕೆಂಬ ಬಯಕೆ ಆಕೆಯದು . ಆದ್ದರಿಂದ ಆಕೆಯು ಎಲ್ಲಾ ಹರಕೆಗಳಿಗಿಂತಲೂ ಮಿಗಿಲಾದ ತವರಿನ ವಂಶವೃದ್ಧಿಯ ಸಂಗತಿಯನ್ನು ಹರಸಿ ದ್ದಾಳೆ . ಹೊಳೆದಂಡೆಯಲ್ಲಿ ಗರಿಕೆಯ ಕುಡಿಯು ಎಲ್ಲೆಂದರಲ್ಲಿ ಸಮೃದ್ಧವಾಗಿ ಬೆಳೆದು ಹಬ್ಬಿಕೊಂಡಿರುತ್ತವೆ . ಇದೆರೀತಿಯಲ್ಲಿ ತನ್ನ ವಂಶದ ರಸಬಳ್ಳಿಯೂ ಹಬ್ಬಿ ವ್ಯಾಪಿಸಲಿ ಎಂದಾಕೆ ಹೃದಯ ತುಂಬಿ ಹರಸುತ್ತಾಳೆ . ತವರಿನ ಬಗ್ಗೆ ಆಕೆಗಿರುವ ಪ್ರೀತಿ – ಕೃತಜ್ಞತೆಗಳು ಇಲ್ಲಿ ಎದ್ದು ಕಾಣುತ್ತದೆ .

ಈ ) ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :

1 ) “ ಹಿತ್ತಾಳೆಗಿಂತ ಬಲುಹೀನ “

‘ಜನಪದ ತ್ರಿಪದಿಯಿಂದ ಆಯ್ದುಕೊಂಡಿರುವ ವಾಕ್ಯವಿದು’ . ನಾವು ಉತ್ತಮರ ಸ್ನೇಹವನ್ನೇ ಮಾಡಬೇಕೆಂಬ ಉಪದೇಶವನ್ನು ಹೇಳಿರುವ ಈ ತ್ರಿಪದಿಯು ಉತ್ತಮರ ಸ್ನೇಹದಿಂದ ನಮ್ಮ ವ್ಯಕ್ತಿತ್ವವು ಪಟವಿಟ್ಟ ಬಂಗಾರದಂತಾಗುತ್ತದೆ . ಅದೇ ನಾವು ತಪ್ಪಿ ನಡೆದು ಮತ್ತಹೀನರ ಸ್ನೇಹವನ್ನು ಮಾಡಿದರೆ ನಾವು ಹಿತ್ತಾಳೆಗಿಂತಲೂ ಹೀನಸ್ಥಿತಿಗೆ ತಲುಪುತ್ತೇವೆಂಬ ಎಚ್ಚರಿಕೆಯ ಮಾತು ಇಲ್ಲಿದೆ . ಬಂಗಾರ ಉತ್ತಮ . ಅದಕ್ಕೆ ಹೋಲಿಸಿ ದಾಗ ಹಿತ್ತಾಳೆಹೀನ ಎಂಬ ಭಾವನೆ ಇಲ್ಲಿದೆ . ಅದಕ್ಕಿಂತಲೂ ನಮ್ಮ ವ್ಯಕ್ತಿತ್ವದ ಘನತೆ ಹೆಚ್ಚುವುದು ಉತ್ತಮರ ಗೆಳೆತನದಿಂದ ಎಂಬುದನ್ನು ಇಲ್ಲಿ ವಿವರಿಸಲಾಗಿದೆ . .

2 ) “ ನೀ ತಂಪ ನನ್ನ ತವರೀಗಿ ”

ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ‘ ಎಂಬ ತ್ರಿಪದಿಗಳ ಸಂಕಲನದಿಂದ ಸ್ವೀಕರಿಸಲಾಗಿದೆ . ಹೆಣ್ಣುಮಗಳೊಬ್ಬಳು ತನ್ನ ತಾಯಿಯನ್ನು ನೆನೆದು ಹೇಳಿರುವ ಈ ಮೇಲಿನ ತವರಿನಲ್ಲಿ ತಾಯಿ ಇದ್ದರೆ ಮಾತ್ರ ತಂಪು ನೆಮ್ಮದಿ ಎಂಬುದಾಗಿ ಇಲ್ಲಿನ ಹೆಣ್ಣುಮಗಳು ಅಭಿಪ್ರಾಯಪಟ್ಟಿದ್ದಾಳೆ , ಬೇಸಿಗೆಯ ದಿನಗಳಲ್ಲಿ ತಂಪನ್ನು ನೀಡುವುದು ಬೇವಿನಮರ ಅದರಂತೆಯೇ ಭೀಮರತಿಯೆಂಬ ಹೊಳೆಯೂ ತಂಪೇ . ತವರಿನಲ್ಲಿ ತಾಯಿ ಇದ್ದರೆ ತವರುಮನ ತಂಪಾಗಿರುವುದು ಎಂಬುದು ಇಲ್ಲಿನ ಆಶಯವಾಗಿದೆ .

3 ) “ ಬಂಗಾರ ನಿನಗ ಸ್ಥಿರವಲ್ಲ ”

‘ಈ ಮೇಲಿನ ವಾಕ್ಯವನ್ನು ಹಬ್ಬಲಿ ಅವರ ರಸಬಳ್ಳಿ ‘ ಎಂಬ ಜನಪದ ತ್ರಿಪದಿ ಸಂಕಲನದಿಂದ ಆಯ್ದುಕೊಳ್ಳಲಾಗಿದೆ . ಶ್ರೀಮಂತಿಕೆ ಬಂದಾಗ ಕೆಲವರಿಗೆ ತುಂಬಾ ಜಂಭ , ಬಡವರನ್ನು ಬೈಯುವುದು – ಜರೆಯುವುದು ಮುಂತಾಗಿ ಕ್ರೂರವಾಗಿ ವರ್ತಿಸುತ್ತಾರೆ . ಆದ್ದರಿಂದ ಇಲ್ಲಿ ಜನಪದ ಕವಿಯು ಬಂಗಾರದ ಬಳೆತೊಟ್ಟು ಬಡವರನ್ನು ಬೈಯಬೇಡ , ಬಂಗಾರ ನಿನಗೆ ಸ್ಥಿರವಲ್ಲ . ಮಧ್ಯಾಹ್ನದ ಬಿಸಿಲು ಸ್ವಲ್ಪ ಹೊತ್ತಿನ ನಂತರ ಜಾರಿಹೋಗುವಂತೆ ಶ್ರೀಮಂತಿಕೆಯು ನಮ್ಮಿಂದ ದೂರಾಗುತ್ತದೆ . ಅಶಾಶ್ವತವಾದ ಶ್ರೀಮಂತಿಕೆ ಬಂದಾಗ ಡಂಬಾಚಾರವೇಕೆ ? ಎಂದಿನಂತೆಯೇ ಮಾನವೀಯತೆಯಿಂದ ವರ್ತಿಸೆಂಬ ನೀತಿಬೋಧೆ ಇಲ್ಲಿದೆ .

4 ) ‘ ಜ್ಯೋತಿ ನಿನ್ನ್ಯಾರ ಹೋಲರ “.

ಪ್ರಸ್ತುತ ಈ ವಾಕ್ಯವನ್ನು ‘ ಜನಪದ ಸಾಹಿತ್ಯ’ದಿಂದ ಆರಿಸಿಕೊಳ್ಳಲಾಗಿದೆ . ತಾಯಿಯ ಮಹತ್ವವನ್ನು ಈ ಜನಪದ ಸಾಲು ವರ್ಣಿಸುತ್ತದೆ. ಹೆತ್ತ ತಾಯಿ ಜಗತ್ತನ್ನೇ ಬೆಳಗುವ ಜ್ಯೋತಿಯಂತೆ . ಅದಕ್ಕೆ ಸಮಾನಾದುದು ಬೇರಾವುದು ಇಲ್ಲ . ಸಾವಿರ ಕೊಳ್ಳಿಯಂತಿರುವ ಬೇರೆ ಯಾರೇ ಆದರೂ ಸರಿ ಹೆತ್ತವ್ವ ಆಗಲಾರರು ಎಂಬುದು ಜನಪದ ಸಾಹಿತ್ಯವು ತಾಯಿಯ ಮಹತ್ವವನ್ನು ಎತ್ತಿ ಹಿಡಿದಿದೆ .

5 ) ” ಹಬ್ಬಲಿ ಅವರ ರಸಬಳ್ಳಿ” .

ಪ್ರಸ್ತುತ ಈ ವಾಕ್ಯವನ್ನು ‘ ಜನಪದ ಸಾಹಿತ್ಯ’ದಿಂದ ಆರಿಸಿಕೊಳ್ಳಲಾಗಿದೆ . ಪ್ರಸ್ತುತ ಈ ವಾಕ್ಯದಲ್ಲಿ ಮದುವೆಯಾಗಿ ಬಂದ ಹೆಣ್ಣು ಮಗಳು , ತಾನು ಹಾಲುಂಡ ತವರನ್ನು ಹರಸುವ ಪರಿಯು ಬಹಳ ಸೊಗಸಾಗಿ ಮೂಡಿಬಂದಿದೆ . ಹೆಣ್ಣು ಮಗಳೊಬ್ಬಳು ತವರು ಮನೆಯಿಂದ ತನ್ನ ಮನೆಗೆ ಬರುವಾಗ ಹಾಲುಂಡ ತವರನ್ನು ಹರಸುವ ಪರಿ ಬಹಳ ಸೊಗಸಾಗಿ ಮೂಡಿ ಬಂದಿದೆ – “ ತನ್ನ ತವರು ಹೊಳೆದಂಡೆಯಲ್ಲಿ ಬೆಳೆಯುವ ಗರಿಕೆಯಂತೆ ವಿಸ್ತಾರವಾಗಿ ರಸಬಳ್ಳಿಯಂತೆ ಹಬ್ಬಲಿ ” ಎಂಬುದಾಗಿ ಹರಸುವ ಮಾತುಗಳು ಇದಾಗಿದೆ .

6 ) “ ಭಾಳ ಮರುಗ್ಯಾಳ ಮನದಾಗ “

ʼಪ್ರಸ್ತುತ ಈ ವಾಕ್ಯವನ್ನು ಜನಪದ ಸಾಹಿತ್ಯ’ದಿಂದ ಆರಿಸಿಕೊಳ್ಳಲಾಗಿದೆ . ಹೆತ್ತವ್ವನ ಮನಸ್ಸು ಹೇಗಿರುತ್ತದೆ ? ಅದರಲ್ಲೂ ಮಗ ಹೆತ್ತವನನ್ನು ಗದರಿ ಬೈದಾಗ ಆಕೆಯ ಮನಃಸ್ಥಿತಿ ಯಾವ ರೀತಿ ಇರುತ್ತದೆ ಎಂಬುದನ್ನು ಪ್ರಸ್ತುತ ಸಾಲಿನಲ್ಲಿ ವ್ಯಕ್ತವಾಗಿದೆ . ಹೆಣ್ಣು ಮಗಳೊಬ್ಬಳು ತಮ್ಮನನ್ನು ಕುರಿತು ಎಂಥಹುದೇ ಸಂದರ್ಭ ಬಂದರು ಹೆತ್ತಮ್ಮನನ್ನು ಬೈಬೇಡ . ಆಕೆ ಏನು ಅನ್ನದಿದ್ದರೂ ಆಕೆಯ ಮನಸ್ಸು ತುಂಬಾ ನೊಂದುಕೊಂಡು ಮರುಗುತ್ತದೆ . ಮನದಲ್ಲಿ ಬೇಸರಗೊಳ್ಳುತ್ತಾಳೆ . ತಾಯಿ ಹೃದಯ ಮರುಗುತ್ತದೆ ಎಂಬುದಾಗಿ ತಾಯಿಯ ಮಮತೆಯ ಬಗ್ಗೆ ಹೇಳಲಾಗಿದೆ .

7 ) ” ತಾಯಿ ಇಲ್ಲದ ತವರೀಗೆ ಹೋಗದಿರು ನನಮನವೆ “

ಪ್ರಸ್ತುತ ಈ ವಾಕ್ಯವನ್ನು ‘ ಜನಪದ ಸಾಹಿತ್ಯ’ದಿಂದ ಆರಿಸಿಕೊಳ್ಳಲಾಗಿದೆ . ಮದುವೆಯಾದ ಹೆಣ್ಣು ಮಗಳೊಬ್ಬಳು ತಾಯಿಯಿಲ್ಲದ ತವರಿಗೆ ಹೋಗಲು ಯೋಚಿಸುವ ಸಂದರ್ಭವು ಈ ಜನಪದ ಸಾಹಿತ್ಯದ ಈ ವಾಕ್ಯದಲ್ಲಿ ಮೂಡಿಬಂದಿದೆ . ‘ತಾಯಿ ಇರುವವರೆಗೆ ಮಾತ್ರ ತವರು ‘ ಎಂಬಂತೆ , ಮದುವೆಯಾದ ಹೆಣ್ಣು ಮಗಳು ತಾಯಿ ಇಲ್ಲದಿರುವ ತವರಿಗೆ ಹೋಗಲು ಬಹಳವಾಗಿ ಯೋಚಿಸುತ್ತಾಳೆ . ಏಕೆಂದರೆ ತಾಯಿ ಇಲ್ಲದ ಮನೆಯಲ್ಲಿ ಅಣ್ಣ – ಅತ್ತಿಗೆ ಎಲ್ಲರ ಪ್ರೀತಿ ದೊರೆಯುವುದೋ ಇಲ್ಲವೋ . ಹೋದ ಮೇಲೆ ಎಲ್ಲಿ ಅನರ್ಥವಾಗುವುದೋ . ಬಾಯಾರಿ ನೀರು ಕುಡಿಯಲು ಹೋದ ಕರು , ನೀರು ಸಿಗದೆ ನಿರಾಶೆಯಿಂದ ಬಂದಂತ ಸ್ಥಿತಿ ಒದಗಬಹುದೆಂಬುದು ಜನಪದ ಸಾಹಿತ್ಯ ಬಹಳ ಮಾರ್ಮಿಕವಾಗಿ ವಿವರಿಸಿದೆ .

2 PUC Kannada Habbali Avara Rasaballi Notes Question Answer Pdf Download

ಆತ್ಮೀಯರೇ..

ನಮ್ಮ KannadaDeevige.in   ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್  ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ

ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವಿಷಯಗಳು:

  1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ

ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC  ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.

Leave a Reply

Your email address will not be published. Required fields are marked *

rtgh