ಅಕ್ಕಮಹಾದೇವಿ ವಚನಗಳು, Akkamahadevi Vachanagalu in Kannada, 35 + Akkamahadevi Vachanagau in Kannada, ಅಕ್ಕಮಹಾದೇವಿ ವಚನಗಳು, Vachanagalu Akka Mahadevi Vachana in Kannada
ಈ ಲೇಖನದಲ್ಲಿ ಪ್ರಸಿಧ್ಧ ಕವಯಿತ್ರಿಯಾದ ಅಕ್ಕಮಹಾದೇವಿಯ ವಚನಗಳನ್ನು ಪಡೆಯುವಿರಿ
1. ಕಾಯವಿಕಾರಿಗೆ ಕಾಯಕ್ಕೆ ಮೆಚ್ಚಿದೆ.
ವಾಯದ ಸುಖ ನಿನಗೆ ಮುಂದೆ
ನರಕವೆಂದರಿಯೆ.
ದೇವರ ದೇವಂಗೆ ವಂದಿಸಹೋದರೆ
ಬಾಯಬಿಡದಿರು,
ಕೈವಿಡಿದು ಸೆಳೆಯದಿರು.
ಚೆನ್ನಮಲ್ಲಿಕಾರ್ಜುನನ ಪಾದಕ್ಕೆರಗುವ
ಭರವೆನಗೆ ಮರುಳೆ.
2. ಕೆಚ್ಚಿಲ್ಲದ ಮರನ ಕ್ರಿಮಿ
ಇಂಬುಗೊಂಬಂತೆ,
ಒಡೆಯನಿಲ್ಲದ ಮನೆಯ ಶುನಕ
ಸಂಚುಗೊಂಬಂತೆ,
ನೃಪತಿಯಿಲ್ಲದ ದೇಶವ
ಮನ್ನೆಯರಿಂಬುಗೊಂಬಂತೆ,
ನಿಮ್ಮ ನೆನಹಿಲ್ಲದ ಶರೀರವ
ಭೂತ ಪ್ರೇತ ಪಿಶಾಚಿಗಳಿಂಬುಗೊಂಬಂತೆ
ಚೆನ್ನಮಲ್ಲಿಕಾರ್ಜುನಾ.
3.ಕುಲಮದವೆಂಬುದಿಲ್ಲ
ಅಯೋನಿಸಂಭವನಾಗಿ,
ಛಲಮದವೆಂಬುದಿಲ್ಲ ಪ್ರತಿದೋರನಾಗಿ,
ಧನಮದವೆಂಬುದಿಲ್ಲ ತ್ರಿಕರಣ ಶುದ್ಭನಾಗಿ,
ವಿದ್ಯಾಮದವೆಂಬುದಿಲ್ಲ ಅಸಾಧ್ಯವ
ಸಾಧಿಸಿದನಾಗಿ.
ಮತ್ತಾವ ಮದವೆಂಬುದಿಲ್ಲ ನೀನವಗ್ರಹಿಸಿದ
ಕಾರಣ,
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣನು
ಅಕಾಯ ಚರಿತ್ರನಾಗಿ.
4. ಆಶೆಯಾಮಿಷವಳಿದು, ಹುಸಿ
ವಿಷಯಂಗಳೆಲ್ಲ ಹಿಂಗಿ,
ಸಂಶಯ ಸಂಬಂಧ ವಿಸಂಬಂಧವಾಯಿತ್ತು ನೋಡಾ.
ಎನ್ನ ಮನದೊಳಗೆ ಘನಪರಿಣಾಮವ ಕಂಡು ಮನ ಮಗ್ನವಾಯಿತ್ತಯ್ಯಾ.
ಚೆನ್ನಮಲ್ಲಿಕಾರ್ಜುನಾ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ
ಬದುಕಿದೆನಯ್ಯಾ.
5. ಆಳುತನದ ಮಾತನಾಡದಿರೆಲವೊ
ಮೇಲೆ ಕಾರ್ಯದಿಮ್ಮಿತ್ತಣ್ಣಾ.
ಅಲಗಿನ ಮೊನೆಯ ಧಾರೆ
ಮಿಂಚುವಾಗ ಕೋಡದೆ ಕೊಂಕದೆ
ನಿಲಬೇಕಯ್ಯ.
ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ.
ಚೆನ್ನಮಲ್ಲಿಕಾರ್ಜುನನಂತಲ್ಲದೊಲ್ಲ.
6. ಇಂದ್ರನೀಲದ ಗಿರಿಯನೇರಿಕೊಂಡು
ಚಂದ್ರಕಾಂತದ ಶಿಲೆಯನಪ್ಪಿಕೊಂಡು
ಕೊಂಬ ಬಾರಿಸುತ್ತ ಎಂದಿಪ್ಪೆನೊ ಶಿವನೆ ?
ನಿಮ್ಮ ನೆನೆವುತ್ತ ಎಂದಿಪ್ಪೆನೊ ?
ಅಂಗಭಂಗ ಮನಭಂಗವಳಿದು ನಿಮ್ಮನೆಂದಿಂಗೊಮ್ಮೆ
ನೆರೆವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
7.ಉಡುವೆ ನಾನು ಲಿಂಗಕ್ಕೆಂದು,
ತೊಡುವೆ ನಾನು ಲಿಂಗಕ್ಕೆಂದು,
ಮಾಡುವೆ ನಾನು ಲಿಂಗಕ್ಕೆಂದು,
ನೋಡುವೆ ನಾನು ಲಿಂಗಕ್ಕೆಂದು,
ಎನ್ನಂತರಂಗ ಬಹಿರಂಗಗಳು ಲಿಂಗಕ್ಕಾಗಿ.
ಮಾಡಿಯೂ ಮಾಡದಂತಿಪ್ಪೆ ನೋಡಾ.
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಡನೆ ಹನ್ನೊಂದಾಗಿಪ್ಪುದನೇನ
ಹೇಳುವೆನವ್ವಾ?
8.ಉದಯದಲೆದ್ದು ನಿಮ್ಮ ನೆನೆವೆನಯ್ಯಾ.
ಕಸದೆಗೆದು ಚಳೆಯ ಕೊಟ್ಟು
ನಿಮ್ಮ ಬರವ ಹಾರುತಿರ್ದೆನಯ್ಯಾ.
ಹಸೆ ಹಂದರವನಿಕ್ಕಿ
ನಿಮ್ಮಡಿಗಳಿಗೆಡೆಮಾಡಿಕೊಂಡಿರ್ದೆನಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ನೀನಾವಾಗ
ಬಂದೆಯಾ ಎನ್ನ ದೇವಾ ?
9. ಉದಯಾಸ್ತಮಾನವೆಂಬೆರಡು
ಕೊಳಗದಲ್ಲಿ,
ಆಯುಷ್ಯವೆಂಬ ರಾಶಿ ಅಳೆದು ತೀರದ ಮುನ್ನ
ಶಿವನ ನೆನೆಯಿರೆ ! ಶಿವನ ನೆನೆಯಿರೆ ! ಈ
ಜನ್ಮ ಬಳಿಕಿಲ್ಲ. ಚೆನ್ನಮಲ್ಲಿಕಾರ್ಜುನದೇವರದೇವನ ನೆನೆದು
ಪಂಚಮಹಾಪಾತಕರೆಲ್ಲರು
ಮುಕ್ತಿವಡೆದರಂದು ?
10. ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ
ಲೋಕವೆ ತಾನಾದ ಬಳಿಕ ಏಕಾಂತದ
ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ ?
11. ಊಡಿದಡುಣ್ಣದು, ನೀಡಿದಡೊಲಿಯದು.
ಕಾಡದು ಬೇಡದು ಒಲಿಯದು ನೋಡಾ.
ಊಡಿದಡುಂಡು ನೀಡಿದಡೊಲಿದು ಬೇಡಿದ
ವರವ ಕೊಡುವ
ಜಂಗಮಲಿಂಗದ ಪಾದವ ಹಿಡಿದು ಬದುಕಿದೆ,
ಕಾಣಾ ಚೆನ್ನಮಲ್ಲಿಕಾರ್ಜುನಾ.
35 + Akkamahadevi Vachanagau in Kannada
12.ಎರೆಯಂತೆ ಕರಕರಗಿ, ಮಳಲಂತೆ
ಜರಿಜರಿದು, ಕನಸಿನಲ್ಲಿ ಕಳವಳಿಸಿ, ಆನು ಬೆರಗಾದೆ.
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರನಾರನೂ ಕಾಣೆ.
ಅರಸಿ ಕಾಣದ ತನುವ, ಬೆರಸಿ ಕೂಡದ
ಸುಖವ,
ಎನಗೆ ನೀ ಕರುಣಿಸಾ, ಚೆನ್ನಮಲ್ಲಿಕಾರ್ಜುನಾ.
13.ಎನ್ನಂತೆ ಪುಣ್ಯಗೈದವರುಂಟೆ ,
ಎನ್ನಂತೆ ಭಾಗ್ಯಂಗೈದವರುಂಟೆ ,
ಕಿನ್ನರನಂತಪ್ಪ ಸೋದರರೆನಗೆ,
ಏಳೇಳು ಜನ್ಮದಲ್ಲಿ ಶಿವಭಕ್ತರೆ
ಬಂಧುಗಳೆನಗೆ.
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ
ಎನಗೆ.
15.ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ,
ಹಂದೆಗೆ ಸುಖವಿಲ್ಲ ಕಾಣಿರಣ್ಣಾ.
ಈವಂಗವಗುಣವಿಲ್ಲ,
ಕರುಣವುಳ್ಳವಂಗೆ ಪಾಪವಿಲ್ಲ.
ನಿಮ್ಮ ಮುಟ್ಟಿ ಪರಧನ ಪರಸ್ತ್ರೀಯ
ತೊರೆದಾತಂಗೆ ಮುಂದೆ ಭವವಿಲ್ಲ
ಚೆನ್ನಮಲ್ಲಿಕಾರ್ಜುನಾ.
16.ಎಲ್ಲ ಎಲ್ಲವನರಿದು ಫಲವೇನಯ್ಯಾ,
ತನ್ನ ತಾನರಿಯಬೇಕಲ್ಲದೆ ?
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ?
ಚೆನ್ನಮಲ್ಲಿಕಾರ್ಜುನಾ,
ನೀನರಿವಾಗಿ ಮುಂದುದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
17.ಎಲುವಿಲ್ಲದ ನಾಲಗೆ
ಹೊದಕುಳಿಗೊಂಡಾಡುದು,
ಎಲೆ ಕಾಲಂಗೆ ಗುರಿಯಾದ ಕರ್ಮಿ.
ಉಲಿಯದಿರು, ಉಲಿಯದಿರು ಭವಭಾರಿ
ನೀನು.
ಹಲವು ಕಾಲದ ಹುಲುಮನುಜಂಗೆ
ಹುಲುಮನುಜ ಹೆಂಡತಿ ಇವರಿದ್ದರೆ ಅದಕ್ಕದು
ಸರಿ.
ಚೆನ್ನಮಲ್ಲಿಕಾರ್ಜುನನೆ ಗಂಡನೆನಗೆ
ಲೋಕದೊಳಗ್ಹೆಂಡಿರುಂಟಾದರೆ ಮಾಡಿಕೊ,
ಎನ್ನ ಬಿಡು ಮರುಳೆ.
18.ಒಲುಮೆ ಒಚ್ಚತವಾದವರು
ಕುಲಛಲವನರಸುವರೆ ?
ಮರುಳುಗೊಂಡವರು ಲಜ್ಜೆನಾಚಿಕೆಯ ಬಲ್ಲರೆ ?
ಚೆನ್ನಮಲ್ಲಿಕಾರ್ಜುನದೇವಗೊಲಿದವರು
ಲೋಕಾಭಿಮಾನವ ಬಲ್ಲರೆ ?
19.ಒಬ್ಬಂಗೆ ಇಹವುಂಟು ಒಬ್ಬಂಗೆ
ಪರವುಂಟು,
ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ.
ಒಬ್ಬಂಗೆ ಇಹಪರವೆರಡೂ ಇಲ್ಲ.
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು.
20.ಒಡಲ ಕಳವಳಕ್ಕಾಗಿ ಅಡವಿಯ
ಪೊಕ್ಕೆನು.
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು.
ಅವು ನೀಡಿದವು ತಮ್ಮ ಲಿಂಗಕ್ಕೆಂದು.
ಆನು ಬೇಡಿ ಭವಿಯಾದೆನು ;
ಅವು ನೀಡಿ ಭಕ್ತರಾದವು.
ಇನ್ನು ಬೇಡಿದೆನಾದಡೆ
ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮಾಣೆ.
21.ಐದು ಪರಿಯ ಬಣ್ಣವ ತಂದು ಕೊಟ್ಟಡೆ
ನಾಲ್ಕು ಮೊಲೆಯ ಹಸುವಾಯಿತ್ತು.
ಹಸುವಿನ ಬಸಿರಲ್ಲಿ ಕರುವು ಹುಟ್ಟಿತ್ತು.
ಕರುವ ಮುಟ್ಟಲೀಯದೆ ಹಾಲು
ಕರೆದುಕೊಂಡಡೆ ಕರ ರುಚಿಯಾಯಿತ್ತು.
ಮಧುರ ತಲೆಗೇರಿ ಅರ್ಥವ ನೀಗಾಡಿ
ಆ ಕರುವಿನ ಬೆಂಬಳಿವಿಡಿದು ಭವಹರಿಯಿತ್ತು
ಚೆನ್ನಮಲ್ಲಿಕಾರ್ಜುನಾ.
ಅಕ್ಕಮಹಾದೇವಿ ವಚನಗಳು
22.ಒಲೆಯ ಹೊಕ್ಕು ಉರಿಯ ಮರೆದವಳ,
ಮಲೆಯ ಹೊಕ್ಕು ಉಲುಹ ಮರೆದವಳ
ನೋಡು ನೋಡಾ.
ಸಂಸಾರ ಸಂಬಂಧವ ನೋಡಾ.
ಸಂಸಾರ ಸಂಬಂಧ ಭವಭವದಲ್ಲಿ
ಬೆನ್ನಿಂದ ಬಿಡದು.
ಸರವು ನಿಸ್ಸರವು ಒಂದಾದವಳನು,
ಎನ್ನಲೇನ ನೋಡುವಿರಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯ
23.ಓದಿ ಓದಿ ವೇದ ವಾದಕ್ಕಿಕ್ಕಿತ್ತು.
ಕೇಳಿ ಕೇಳಿ ಶಾಸ್ತ್ರ ಸಂದೇಹಕ್ಕಿಕ್ಕಿತ್ತು.
ಅರಿದೆಹೆ ಅರಿದೆಹೆನೆಂದು ಆಗಮ ಅರೆಯಾಗಿ
ಹೋಯಿತ್ತು.
ಪೂರೈಸಿಹೆ ಪೂರೈಸಿಹೆನೆಂದು
ಪುರಾಣ ಪೂರ್ವದ ಬಟ್ಟೆಗೆ ಹೋಯಿತ್ತು.
ನಾನೆತ್ತ ತಾನೆತ್ತ ? ಬೊಮ್ಮ ಬಟ್ಟಬಯಲು
ಚೆನ್ನಮಲ್ಲಿಕಾರ್ಜುನಾ.
Akkamahadevi Vachanagalu in Kannada
24.ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ
ರೂಪವ ಕಂಡು ಮೈಮರೆದೆನವ್ವಾ.
ಮಣಿಮುಕುಟದ ಫಣಿಕಂಕಣದ
ನಗೆಮೊಗದ ಸುಲಿಪಲ್ಲ ಸೊಬಗನ ಕಂಡು
ಮನಸೋತೆನವ್ವಾ.
ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ,
ಆನು ಮದುವಣಿಗಿ ಕೇಳಾ ತಾಯೆ.
25.ಕಟ್ಟಿದ ಕೆರೆಗೆ ಕೋಡಿ ಮಾಣದು.
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯಾ ?
ಅರುಹಿರಿಯರೆಲ್ಲ ವೃಥಾ ಕೆಟ್ಟು ಹೋದರಿನ್ನೆಂತಯ್ಯಾ ?
ಚೆನ್ನಮಲ್ಲಿಕಾರ್ಜುನದೇವರಿಗೋತು
ಮುಟ್ಟಿದವರೆಲ್ಲಾ ನಿಶ್ಚಿಂತರಾದರು.
26.ಕಲ್ಯಾಣಕೈಲಾಸವೆಂಬ ನುಡಿ ಹಸನಾಯಿತ್ತು.
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.
ಇದರಂತುವನಾರು ಬಲ್ಲರಯ್ಯಾ ?
ನಿಮ್ಮ ಸತ್ಯ ಶರಣರ ಸುಳುಹು ತೋರುತ್ತಿದೆಯಯ್ಯಾ.
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ
ತವಕವೆನಗಾಯಿತ್ತು ಕೇಳಾ ಚೆನ್ನಮಲ್ಲಿಕಾರ್ಜುನಾ.
27.ಕರಸ್ಥಲಕ್ಕೆ ಲಿಂಗಸ್ವಾಯತವಾದ
ಬಳಿಕ ಕಾಯಕ ನಿವೃತ್ತಿಯಾಗಬೇಕು.
ಅಂಗದಲಳವಟ್ಟಲಿಂಗ,
ಲಿಂಗೈಕ್ಯಂಗೆ ಅಂಗಸಂಗ ಮತ್ತೆಲ್ಲಿಯದೊ ?
ಮಹಾಘನವನರಿತ ಮಹಾಂತಂಗೆ
ಮಾಯವೆಲ್ಲಿಯದೊ ಚೆನ್ನಮಲ್ಲಿಕಾರ್ಜುನಾ ?
28.ಕದಳಿ ಎಂಬುದು ತನು, ಕದಳಿ ಎಂಬುದು
ಮನ,
ಕದಳಿ ಎಂಬುದು ವಿಷಯಂಗಳು.
ಕದಳಿ ಎಂಬುದು ಭವಘೋರಾರಣ್ಯ.
ಈ ಕದಳಿ ಎಂಬುದ ಗೆದ್ದು ತವೆ ಬದುಕಿ
ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು.
ಭವ ಗೆದ್ದು ಬಂದ ಮಗಳೆ ಎಂದು
ಕರುಣದಿ ತೆಗೆದು ಬಿಗಿಯಪ್ಪಿದಡೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ
ಅಡಗಿದೆನು.
29.ಕಡೆಗೆ ಮಾಡಿದ ಭಕ್ತಿ ದೃಢವಿಲ್ಲದಾಳುತನ,
ಮೃಡನೊಲಿಯ ಹೇಳಿದಡೆ
ಎಂತೊಲಿವನಯ್ಯಾ ?
ಮಾಡಲಾಗದು ಅಳಿಮನವ,
ಮಾಡಿದಡೆ ಮನದೊಡೆಯ ಬಲ್ಲನೈಸೆ ?
ವಿರಳವಿಲ್ಲದೆ ಮಣಿಯ ಪವಣಿಸಿಹೆನೆಂದಡೆ
ಮರುಳಾ,
ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯಾ ?
30.ಸೋಮಧರನ ಹಿಡಿತಪ್ಪೆನು ಬಸವಾ
ನಿಮ್ಮ ಕೃಪೆಯಿಂದ.
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು ?
ಭಾವಿಸಲು ಗಂಡು ರೂಪು ಬಸವಾ ನಿಮ್ಮ
ದಯದಿಂದ.
ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿ
ಎರಡುವರಿಯದೆ ಕೂಡಿದೆನು
ಬಸವಾ ನಿಮ್ಮ ಕೃಪೆಯಿಂದ.
Akkamahadeviya Vachanagalu in Kannada
31.ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ
ನೋಡವ್ವಾ.
ಕೇಳುತ್ತ ಕೇಳುತ್ತ ಮೈಮರೆದೊರಗಿದೆ
ನೋಡವ್ವಾ.
ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು
ಕೇಳವ್ವಾ.
ಚೆನ್ನಮಲ್ಲಿಕಾರ್ಜುನದೇವರದೇವನ
ಕೂಡುವ
ಕೂಟವ ನಾನೇನೆಂದರಿಯದೆ ಮರೆದೆ ಕಾಣವ್ವಾ.
32.ಕಲ್ಲ ಹೊಕ್ಕಡೆ ಕಲ್ಲ ಬರಿಸಿದೆ,
ಗಿರಿಯ ಹೊಕ್ಕಡೆ ಗಿರಿಯ ಬರಿಸಿದೆ.
ಭಾಪು ಸಂಸಾರವೆ, ಬೆನ್ನಿಂದ ಬೆನ್ನ ಹತ್ತಿ ಬಂದೆ.
ಚೆನ್ನಮಲ್ಲಿಕಾರ್ಜುನಯ್ಯಾ, ಇನ್ನೇವೆನಿನ್ನೇವೆ ?
33.ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವಾ.
ಮೋಹಿಸಿ ಮುದ್ದಿಸಿ ಮರುಳಾದೆನವ್ವಾ.
ತೆರೆಯದೆ ತೊರೆಯದೆ ನಲಿದು ನಂಬಿದೆ
ನಾನು.
ಎನ್ನ ದೇವ
ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದಡೆ
ಆನೇವೆನವ್ವಾ ?
34.ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ.
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ.
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ.
ನೆನಹಿಂಗೆ ಅರುಹಾಗಿ ಕಾಡಿತ್ತು ಮಾಯೆ.
ಅರುಹಿಂಗೆ ಮರಹಾಗಿ ಕಾಡಿತ್ತು ಮಾಯೆ.
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು
ಮಾಯೆ.
ಚೆನ್ನಮಲ್ಲಿಕಾರ್ಜುನಾ,
ನೀನೊಡ್ಡಿದ ಮಾಯೆಯನಾರಿಗೂ ಗೆಲಬಾರದು.
Akkamahadevi Vachanagalu in Kannada
35.ಕಾಯದ ಕಾರ್ಪಣ್ಯವರತಿತ್ತು, ಕರಣಂಗಳ
ಕಳವಳವಳಿದಿತ್ತು.
ಮನ ತನ್ನ ತಾರ್ಕಣೆಯ ಕಂಡು
ತಳವೆಳಗಾದುದು.
ಇನ್ನೇವೆನಿನ್ನೇವೆನಯ್ಯಾ ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ
ಕಂಡಲ್ಲದೆ ಬಯಕೆ ಬಯಲಾಗದು.
ಇನ್ನೇವೆನಿನ್ನೇವೆನಯ್ಯಾ ಚೆನ್ನಮಲ್ಲಿಕಾರ್ಜುನಾ ?
36.ಕಾಯವಿಕಾರಿಗೆ ಕಾಯಕ್ಕೆ ಮೆಚ್ಚಿದೆ.
ವಾಯದ ಸುಖ ನಿನಗೆ ಮುಂದೆ
ನರಕವೆಂದರಿಯೆ.
ದೇವರ ದೇವಂಗೆ ವಂದಿಸಹೋದರೆ
ಬಾಯಬಿಡದಿರು,
ಕೈವಿಡಿದು ಸೆಳೆಯದಿರು.
ಚೆನ್ನಮಲ್ಲಿಕಾರ್ಜುನನ ಪಾದಕ್ಕೆರಗುವ
ಭರವೆನಗೆ ಮರುಳೆ.
37.ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ.
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ.
ಸುಖವಿಲ್ಲದೆ ಧಾವತಿಗೊಂಡೆನವ್ವಾ.
ಚೆನ್ನಮಲ್ಲಿಕಾರ್ಜುನದೇವಂಗೊಲಿದು ಬಾರದ
ಭವಂಗಳಲ್ಲಿ ಬಂದೆನವ್ವಾ.
38.ಕ್ರಿಯೆಗಳು ಮುಟ್ಟಲರಿಯವು,
ನಿಮ್ಮನೆಂತು ಪೂಜಿಸುವೆ ?
ನಾದ ಬಿಂದುಗಳು ಮುಟ್ಟಲರಿಯವು,
ನಿಮ್ಮನೆಂತು ಹಾಡುವೆ ?
ಕಾಯ ಮುಟ್ಟುವಡೆ ಕಾಣಬಾರದ ಘನವು,
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆ ?
ಚೆನ್ನಮಲ್ಲಿಕಾರ್ಜುನಯ್ಯಾ,
ನಾನೇನೆಂದರಿಯದೆ ನಿಮ್ಮ ನೋಡಿ ನೋಡಿ
ಸೈವೆರಗಾಗುತಿರ್ದೆನು
39.ಗುಣ ದೋಷ ಸಂಪಾದನೆಯ ಮಾಡುವನ್ನಕ್ಕ
ಕಾಮದ ಒಡಲು, ಕ್ರೋಧದ ಗೊತ್ತು, ಲೋಭದ ಇಕ್ಕೆ,
ಮೋಹದ ಮಂದಿರ, ಮದದಾವರಣ, ಮತ್ಸರದ ಹೊದಕೆ.
ಆ ಭಾವವರತಲ್ಲದೆ ಚೆನ್ನಮಲ್ಲಿಕಾರ್ಜುನನ
ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣಾ
40.ಗಟ್ಟಿದುಪ್ಪ ತಿಳಿದುಪ್ಪಕ್ಕೆ ಹಂಗುಂಟೆ ಅಯ್ಯಾ ?
ದೀಪಕ್ಕೆ ದೀಪ್ತಿಗೆ ಭೇದವುಂಟೆ ಅಯ್ಯಾ ?
ಅಂಗಕ್ಕೆ ಆತ್ಮಂಗೆ ಭಿನ್ನವುಂಟೆ ಅಯ್ಯಾ ?
ಎನ್ನಂಗವನು ಶ್ರೀಗುರು ಮಂತ್ರವಮಾಡಿ ತೋರಿದನಾಗಿ,
ಸಾವಯಕ್ಕೂ ನಿರವಯಕ್ಕೂ ಭಿನ್ನವಿಲ್ಲವಯ್ಯಾ.
ಚೆನ್ನಮಲ್ಲಿಕಾರ್ಜುನದೇವರ ಬೆರಸಿ ಮತಿಗೆಟ್ಟವಳನೇತಕ್ಕೆ ನುಡಿಸುವಿರಯ್ಯಾ ?
FAQ :
ಅಕ್ಕಮಹಾದೇವಿಯ ಅಂಕಿತನಾಮ ಚನ್ನಮಲ್ಲಿಕಾರ್ಜುನ
ತಂದೆ ನಿರ್ಮಲಶೆಟ್ಟಿ ಹಾಗೂ ತಾಯಿಯ ಹೆಸರು ಸುಮತಿ
ಇತರ ವಿಷಯಗಳು :
ಪ್ರಜಾಪ್ರಭುತ್ವದಲ್ಲಿ ಯುವಕರ ಪಾತ್ರ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ Kannada Deevige app
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ
ಈ ಅಕ್ಕಮಹಾದೇವಿ ವಚನಗಳು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ, ಅಕ್ಕಮಹಾದೇವಿ ವಚನಗಳು ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ