ದ್ವಿತೀಯ ಪಿ.ಯು.ಸಿ. ಬಸವಣ್ಣನವರ ವಚನಗಳು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 2nd puc basavannanavara vachanagalu kannada 2 chapter Question Answer Notes pdf Download
ತರಗತಿ : ದ್ವಿತೀಯ ಪಿ.ಯು.ಸಿ.
ಪದ್ಯದ ಹೆಸರು : ವಚನಗಳು (ಬಸವಣ್ಣನವರ ವಚನಗಳು)
ಕೃತಿಕಾರರ ಹೆಸರು : ಬಸವಣ್ಣ.
ದ್ವಿತೀಯ ಪಿ.ಯು.ಸಿ. ಬಸವಣ್ಣನವರ ವಚನಗಳು ಕನ್ನಡ ನೋಟ್ಸ್̤ 2 PUC Basavannanavara Vachanagalu Kannada Notes.
2nd Puc Basavannanavara vachanagalu notes
ಕವಿ ಪರಿಚಯ :
‘ಭಕ್ತಿ ಭಂಡಾರಿ ‘ ಎಂದು ಖ್ಯಾತರಾಗಿರುವ ಬಸವಣ್ಣನವರು ೧೨ ನೇ ಶತಮಾನದ ಧಾರ್ಮಿಕ , ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ರಾಂತಿಯ ಕೇಂದ್ರ ಪುರುಷ , ಬಿಜಾಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಮಾದಿರಾಜ , ಮಾದಾಂಬೆ ದಂಪತಿಗಳ ಮಗನಾಗಿ ಜನಿಸಿದರು . ಬಿಜ್ಜಳನ ಆಸ್ಥಾನದಲ್ಲಿ ಕೋಶಾಧಿಕಾರಿಯಾಗಿದ್ದರು . ಭಕ್ತಿ ,ಜ್ಞಾನ , ಮಾನವೀಯತೆ ಹಾಗೂ ವೈರಾಗ್ಯ ಪರವಾದ ಬಸವಣ್ಣನವರ ವಚನಗಳು ಸುಲಭವಾದ , ಲಲಿತವಾದ , ಸರಳ ಭಾಷೆಯಿಂದ ಕೂಡಿವೆ . ಬಸವಣ್ಣನವರ ಮುಖ್ಯ ಕಾಳಜಿ ಸಮಾಜಸುಧಾರಣೆಯಾಗಿತ್ತು . ಜಾತಿ – ಕುಲ – ಲಿಂಗ ಭೇದಗಳಿಂದ ಹೊರತಾದ ಸಮಾಜ ನಿರ್ಮಿತಿ ಅವರ ಪ್ರಮುಖ ಗುರಿಯಾಗಿದ್ದಿತು . ಜನರ ಅಜ್ಞಾನ , ಕಂದಾಚಾರ , ಜಾತಿ ಸಂಕರಗಳನ್ನು ಕುರಿತು ಅವರ ವಚನಗಳು ಚಿಂತಿಸಿವೆ . ಉಪದೇಶ , ವಿಡಂಬನೆ ಮುಂತಾದ ಗುಣಗಳನ್ನು ಅಲ್ಲಿ ಕಾಣಬಹುದು . ಬಸವಣ್ಣ ಕಾಯಕದ ಮಹತ್ವವನ್ನು ಜಗತ್ತಿಗೆ ಸಾರಿದ ಮಹಾಪುರುಷ , ಮಹಾಮನೆಯಲ್ಲಿ ವಿವಿಧ ವರ್ಗದ ವಚನಕಾರರು ಒಂದೆಡೆ ಕಲೆಯುವಂತೆ ಮಾಡಿದ ಬಸವಣ್ಣನವರ ಸಂಘಟನಾ ಶಕ್ತಿಯ ಜೊತೆ ಜೊತೆಗೆ ಯುಗಪರಿವರ್ತನೆಗೆ ಶ್ರಮಿಸಿದ ಸಂಕಲ್ಪಬಲವೂ ಅತ್ಯಂತ ಗಮನಾರ್ಹ ವಾದುದು . ಅವರ ವಚನಗಳಲ್ಲಿ ಸಾರ್ವಕಾಲಿಕ ಗುಣವಿದೆ .
ಬಸವಣ್ಣನವರ ವಚನಗಳು ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಪ್ರಾಮುಖ್ಯತೆಯನ್ನು ನೀಡಿವೆ . ಮನುಷ್ಯರ ನಡುವಿನಲ್ಲಿ ಹೊಮ್ಮಬೇಕಾದ ಮಾನವೀಯತೆ , ಹೃದಯ ವೈಶಾಲ್ಯತೆಯು ಗೈರು ಹಾಜರಾದಾಗ ನಮ್ಮ ಭಕ್ತಿಗೆ ಅರ್ಥವಿರುವುದಿಲ್ಲ . ಭಕ್ತನು ಶಿವಲಿಂಗದೊಂದಿಗೆ ಹೊಂದಬೇಕಾದ ಸಾಮರಸ್ಯವೂ ಈ ಬಗೆಯದೇ ಆಗಿದೆ .
ಮೂಲದಲ್ಲಿ ಸತ್ವವಿರದ ತೋರಿಕೆಯ ಭಕ್ತಿಯು ಮಂಗನ ಕೈಯೊಳಗಣ ಮಾಣಿಕ್ಯದಂತೆ , ಬೆಲೆ ತಿಳಿಯದೆ ಹೋದೀತು . ನಮ್ಮನ್ನು ಕಾಯಬೇಕಾದವರು ಕೊಲ್ಲಲು ಸಂಚುಹೂಡಿದಾಗ , ಇನ್ಯಾರೂ ಕಾಯಲಾರ ರೆಂಬ ಸಂಗತಿಗಳನ್ನು ಇಲ್ಲಿನ ವಚನಗಳು ವಿವರಿಸಿವೆ . ಶಿವಪಥವನ್ನು ಅರಿಯುವ ಸಂಕಲ್ಪಬಲ ನಿಜಭಕ್ತನ ಮೂಲ ಗುಣವಾಗಬೇಕು ಎಂಬುದನ್ನು ಪ್ರತಿಪಾದಿಸುವಲ್ಲಿಯೂ ಎದ್ದು ಕಾಣುವ ಕಾವ್ಯಾತ್ಮಕ ಗುಣ ಬಸವಣ್ಣನವರ ಕವಿ ಹೃದಯವನ್ನು ಬಿಂಬಿಸಿದೆ . ಅಸ್ವಸ್ಥ ವ್ಯಕ್ತಿ ಮತ್ತು ಅಸ್ವಸ್ಥ ಸಮಾಜದ ಲಕ್ಷಣಗಳೆಂದರೆ ಆತ್ಮನಿಂದೆ ಆತ್ಮಸ್ತುತಿ ಆತ್ಮಹತ್ಯೆ – ಆತ್ಮರತಿ ಮುಂತಾದುವು , ಆತ್ಮವಿಮರ್ಶೆಯು ಆರೋಗ್ಯವಂತ ವ್ಯಕ್ತಿ ಮತ್ತು ಆರೋಗ್ಯವಂತ ಸಮಾಜಗಳ ಪ್ರತೀಕ . ಬಸವಣ್ಣನವರ ವಚನಗಳಲ್ಲಿರುವಷ್ಟು ಆತ್ಮವಿಮರ್ಶೆಯನ್ನು ಮತ್ತೊಬ್ಬ ವಚನಕಾರರಲ್ಲಿ ಕಾಣಲಾರೆವು , ಆತ್ಮವಿಮರ್ಶೆಯು ವ್ಯಕ್ತಿತ್ವದ ವರ್ಧಮಾನಕ್ಕೆ ಪ್ರೇರಕವಾಗುವ ಚೈತನ್ಯಶಕ್ತಿ .
ಕಾವ್ಯದ ಹಿನ್ನೆಲೆ :
ವಚನ ಸಾಹಿತ್ಯವು ತನ್ನ ಅನನ್ಯ ಸಾಮಾಜಿಕ ಕಳಕಳಿಯಿಂದಾಗಿ ವಿಶ್ವಸಾಹಿತ್ಯದಲ್ಲೇ ಪ್ರಮುಖವೆನಿಸಿರುವಂತಹದ್ದು . ಮನುಷ್ಯ ಕೇಂದ್ರಿತವಾದ ನೆಲೆಯಲ್ಲಿ ರಚಿತವಾಗಿರುವ ವಚನಗಳು ನಿಜವಾದ ಅರ್ಥದಲ್ಲಿ ಮಾನವನ ಸರ್ವತೋಮುಖ ವಿಕಸನದತ್ತ ತನ್ನ ಗಮನವನ್ನು ಕೇಂದ್ರೀಕರಿಸಿವೆ . ಸಮಾಜದಲ್ಲಿ ಬದುಕುವ ಜೀವಿ ನಡೆ ನುಡಿಯಲ್ಲಿ ಹೊಂದಬೇಕಾಗಿರುವ ಸತ್ವವನ್ನು , ಅಂತರಂಗದ ಪರಿಶುದ್ಧತೆಯನ್ನು ವಚನಕಾರರು ಮತ್ತೆ ಮತ್ತೆ ಬಲವಾಗಿ ಪ್ರತಿಪಾದಿಸಿದ್ದಾರೆ . ಸತ್ಯಮುಖಿಯಾಗಿರುವ ಮತ್ತು ಢಾಂಬಿಕತೆಯಿಲ್ಲದ ಸರಳ ಅಧ್ಯಾತ್ಮದ ಪ್ರತಿಪಾದನೆ , ಮನುಷ್ಯನಲ್ಲಿ ಮನುಷ್ಯತ್ವವನ್ನು ಬೆಳೆಸುವ ಕಳಕಳಿ ವಚನಕಾರರಲ್ಲಿ ಗಾಢವಾಗಿರುವುದನ್ನು ಗಮನಿಸಿದರೆ ವಚನಗಳು ಸಾರ್ವಕಾಲಿಕವಾದ ಮಾನವೀಯ ಮೌಲ್ಯಗಳ ಪ್ರತಿಬಿಂಬವಾಗಿರುವುದನ್ನು ಮನಗಾಣಬಹುದಾಗಿದೆ .
ಪರಿಶುದ್ಧತೆಯು ವ್ಯಕ್ತಿಯ ಬದುಕನ್ನು ಮಾತ್ರವಲ್ಲದೆ ಒಟ್ಟಾರೆ ಸಮಾಜದ ಆರೋಗ್ಯಪೂರ್ಣ ಬದುಕನ್ನು ಪ್ರಭಾವಿಸಬಹುದೆಂಬ ಆಶಯಗಳನ್ನು ಇಲ್ಲಿನ ವಚನಗಳು ಒಳಗೊಂಡಿವೆ . ಬಸವಣ್ಣ ಮತ್ತು ಉರಿಲಿಂಗಪೆದ್ದಿಯವರ ವಚನಗಳು ಪ್ರತಿಪಾದಿಸಿರುವ ವಿಚಾರಗಳು ಸಾಮಾಜಿಕ ವಿಘಟನೆಗೆ ಪರಿಹಾರವನ್ನು ಸೂಚಿಸಬಲ್ಲ ಬೆಳಕಿನ ಕಿರಣಗಳೆನಿಸಿವೆ .
ಪದಗಳ ಅರ್ಥ:
ತನು – ದೇಹ ; ಸೋಂಕು – ಮುಟ್ಟು , ತಗಲು , ಸ್ಪರ್ಶಿಸು ; ಪುಳಕ – ರೋಮಾಂಚನ ; ಅಶ್ರುಜಲ – ಕಣ್ಣೀರು ; ಗದ್ಗದ– ಗಂಟಲು ತೇವಗೊಳ್ಳುವುದು ; ಪೊಣ್ಣು – ಹೊಮ್ಮು : ಚಿಹ್ನೆ – ಸಂಕೇತ ; ಡಂಬಕ – ದೃಢಭಕ್ತಿಯಿಲ್ಲದವನು ; ಅರ್ಥ– ಹಣ , ಸಂಪತ್ತು : ಫಲ – ಪ್ರಯೋಜನ ; ಅಂಧಕ – ಕುರುಡ ; ದರ್ಪಣ – ಕನ್ನಡಿ ; ಮರ್ಕಟ – ಮಂಗ ; ಮಾಣಿಕ – ಮಾಣಿಕ್ಯ , ನವರತ್ನಗಳಲ್ಲಿ ಒಂದು ; ಶಿವಪಥ – ಲಿಂಗಾಚಾರದ ಮಾರ್ಗ ; ಅರಿಯದನ್ನಕ್ಕ – ಅರಿತುಕೊಳ್ಳುವವರೆಗೆ ; ಧರೆ – ಭೂಮಿ ; ಉಂಬು-ತಿನ್ನು , ಸೇವಿಸು ; ಕೆಯ್ಯ – ಬೆಳೆ , ನಾರಿ – ಹೆಣ್ಣು , ಗೃಹಿಣಿ : ನಂಜು – ವಿಷ
ಒಂದು ವಾಕ್ಯದಲ್ಲಿ ಉತ್ತರಿಸಿ : ( ಒಂದು ಅಂಕದ ಪ್ರಶ್ನೆಗಳು )
1 ) ಯಾರ ಕೈಲಿ ದರ್ಪಣವಿದ್ದು ಫಲವಿಲ್ಲ ?
ಅಂಧರ ಕೈಲಿ ದರ್ಪಣವಿದ್ದು ಫಲವಿಲ್ಲ .
2 ) ಬಸವಣ್ಣನವರ ವಚನಗಳ ಅಂಕಿತ ಯಾವುದು ?
“ ಕೂಡಲಸಂಗಮದೇವ ” ಬಸವಣ್ಣನವರ ವಚನಗಳ ಅಂಕಿತವಾಗಿದೆ .
3 ) ಶಿವಪಥವನ್ನು ಅರಿಯದಿದ್ದರೇನಾಗುವುದು ?
ಶಿವಪಥವನ್ನು ಅರಿಯದಿದ್ದರೆ ಶಿವಲಿಂಗವನ್ನು ಪೂಜಿಸಿ ಫಲವಿಲ್ಲ ಅಂದರೆ ಶಿವಪಥವನ್ನು ಅರಿಯದಿದ್ದರೆ ಲಿಂಗಪೂಜೆಯು ಪ್ರಯೋಜನವಾಗದು .
4 ) ತನು ಯಾವಾಗ ಕರಗಬೇಕು ?
ಮನಗಳು ಬೆರೆತಾಗ ತನುವು ಕರಗಬೇಕು .
ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )
1 ) ಯಾವಾಗ ನಿಲಬಹುದು ? ಯಾವಾಗ ನಿಲಲಾಗದು ?
ಒಲೆಹತ್ತಿ ಉರಿವಾಗ ನಿಲಬಹುದು , ಧರೆಯೇ ಹತ್ತಿ ಉರಿಯುವಾಗ ನಿಲಲು ಆಗದು ಎಂಬುದಾಗಿ ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ .
2 ) ಯಾವ ಗುಣಗಳಿಲ್ಲದವನು ಡಾಂಭಿಕನೆನಿಸುತ್ತಾನೆ ?
ಮನ ಬೆರತರು ತನು ಬೆರೆಯದಿದ್ದೆಡೆ ಸ್ಪರ್ಶದಲ್ಲಿ ಪುಳಕಿತನಾಗದಿದ್ದಲ್ಲಿ ರೋಮಾಂಚನಕಾರಿ ನುಡಿಗಳು ನುಡಿದಾಗ ಕಂಠದಲ್ಲಿ ಗದ್ದತೆ ಇಲ್ಲದಿದ್ದಲ್ಲಿ ಘಟನೆಗಳನ್ನು ನೋಡಿದಾಗ ಕಣ್ಣುಗಳಲ್ಲಿ ಅಶ್ರು ತುಂಬಿ ಬಾರದಿದ್ದಲ್ಲಿ ಏನು ಪ್ರಯೋಜನ ಕೂಡಲಸಂಗಮದೇವನಲ್ಲಿ ಭಕ್ತಿಯನ್ನು ತೋರದಿದ್ದಲ್ಲಿ ಅದು ಡಾಂಭಿಕ ಭಕ್ತಿ ಎನಿಸುತ್ತದೆ .
3 ) ಶಿವಪಥವನ್ನು ಅರಿಯದವನನ್ನು ಹೇಗೆ ವಿಡಂಬಿಸಲಾಗಿದೆ ?
ಶಿವಪಥವನ್ನು ಅರಿಯದವನನ್ನು ಬಸವಣ್ಣನವರು ಹಲವಾರು ಉದಾಹರಣೆಗಳ ಮೂಲಕ ವಿಡಂಬಿಸಿದ್ದಾರೆ . ಉದಾಹರಣೆಗೆ – ಹಣ , ಐಶ್ವರ್ಯವಿದ್ದು ಆಯುಷ್ಯ ಇಲ್ಲದಿದ್ದರೆ ಹೇಡಿಯ ಕೈಲಿ ಚಂದ್ರಾಯುಧ ಕೊಟ್ಟರೆ , ಅಂಧಕನ ಕೈಗೆ ಕನ್ನಡಿ ಕೊಟ್ಟಲ್ಲಿ , ಮಂಗನ ಕೈಲಿ ಮಾಣಿಕ್ಯ ಕೊಟ್ಟರೆ ಏನು ಹೇಗೆ ಪ್ರಯೋಜನವಿಲ್ಲವೋ ಅಂತೆಯೇ ಶಿವಪಥವನ್ನು ಅರಿಯದವನು ಶಿವ ಪೂಜೆ ಮಾಡಿದರೂ ಪ್ರಯೋಜನವಾಗದು .
ಈ ) ಐದಾರು ವಾಕ್ಯಗಳಲ್ಲಿ ಉತ್ತರಿಸಿ : ( ನಾಲ್ಕು ಅಂಕಗಳ ಪ್ರಶ್ನೆಗಳು )
1 ) ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ಘಟನೆಯನ್ನು ಬಸವಣ್ಣನವರು ಹೇಗೆ ಚಿತ್ರಿಸಿದ್ದಾರೆ ?
ರಕ್ಷಿಸಬೇಕಾದವರೆ ಭಕ್ಷಕರಾದರೆ ಒದಗುವ ವಿಘಟನೆಯನ್ನು ಬಸವಣ್ಣನವರು ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾರೆ . ಒಲೆಹತ್ತಿ ಉರಿಯುತ್ತಿದ್ದರೆ ಅಲ್ಲಿ ನಾವು ನಿಲ್ಲಬಹುದು . ಆದರೆ ಧರೆಯೇ ಹತ್ತಿ ಉರಿಯಲು ಅಲ್ಲಿ ನಿಲ್ಲುವುದಿರಲಿ ಯಾರೂ ಕೂಡ ಬದುಕಲಾರರೂ . ನೀರಿಗೆ ಅಡ್ಡ ಕಟ್ಟಿದ ಏರಿಯೇ ನೀರನ್ನು ಕುಡಿದರೆ , ಬೇಲಿಯೇ ಎದ್ದು ಹೊಲ ಮೇಯ್ದರೆ , ಮನೆಯ ಗೃಹಿಣಿಯೇ ತನ್ನ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದರೆ , ಅಮೃತವಾಗ ಬೇಕಾಗಿದ್ದ ತಾಯಿಯ ಮೊಲೆ ಹಾಲೆ ವಿಷವಾದಾಗ , ರಕ್ಷಿಸಬೇಕಾದವರೇ ಭಕ್ಷಕರಾದರೆ ಕೂಡಲಸಂಗಮ ಇನ್ನು ಉಳಿಯುವುದಾದರೂ ಹೇಗೆ ? ಬದುಕುವುದಾದರೂ ಹೇಗೆ ? ಎಂದು ತಿಳಿಸಿಕೊಟ್ಟಿದ್ದಾರೆ .
2 ) ಮನುಷ್ಯ – ಮನುಷ್ಯರ ನಡುವೆ ಅಂತಃಕರಣಗಳು ಸ್ಪಂದಿಸಬೇಕಾದ ವಿಚಾರವನ್ನು ಬಸವಣ್ಣನವರು ಹೇಗೆ ನಿರೂಪಿಸಿದ್ದಾರೆ ?
ಮನುಷ್ಯ – ಮನುಷ್ಯರ ನಡುವೆ ಅಂತಃಕರಣಗಳು ಸ್ಪಂದಿಸಬೇಕಾದ ವಿಚಾರವನ್ನು ಬಸವಣ್ಣನವರು ಈ ರೀತಿ ನಿರೂಪಿಸಿದ್ದಾರೆ . ಮನಗಳ ಅಂತಃಕರಣಗಳು ಬೆರೆತಾಗ ತನು ಕರಗುವುದು . ಸ್ಪರ್ಶದಿಂದ ಪುಳಕಿತಗೊಳ್ಳುವುದು , ಕಣ್ಣುಗಳಲ್ಲಿ ಅಶ್ರುಜಲಗಳು ತುಂಬಿಕೊಳ್ಳುವುದು , ಗಂಟಲು ಬಿಗಿಯುವುದು , ಮುಂತಾದ ಚಿಹ್ನೆಗಳು ಅಂತಃ ಕರಣಗಳನ್ನು ಸ್ಪಂದಿಸುತ್ತವೆ ಎಂಬುದಾಗಿ ಬಸವಣ್ಣನವರು ನಿರೂಪಿಸಿದ್ದಾರೆ . ಇದೆ ಅಲ್ಲದೆ ಇವೆಲ್ಲಕ್ಕೂ ಮಿಗಿಲಾದುದು ಕೂಡಲಸಂಗಮನಲ್ಲಿ ಅಚ ಭಕ್ತಿ , ಅಚಲವಾದ ಭಕ್ತಿ ಇದ್ದಲ್ಲಿ ಇತರ ಅಂತಃಕರಣಗಳು ತಾನೇ ತಾನಾಗಿ ಸ್ಪಂದಿಸುತ್ತವೆ ಎಂಬುದಾಗಿ ತಿಳಿಸಿಕೊಟ್ಟಿದ್ದಾರೆ .
3 ) ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣನವರು ಯಾವ ಯಾವ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ ?
ಶಿವಪಥವನ್ನರಿಯದವನ ಭಕ್ತಿ ನಿರರ್ಥಕವೆಂಬುದನ್ನು ಬಸವಣ್ಣನವರು ಹಲವಾರು ಉದಾಹರಣೆಗಳಿಂದ ವಿವರಿಸಿದ್ದಾರೆ . ಬೇಕಾದಷ್ಟು ಹಣ , ಐಶ್ವರ್ಯವಿದ್ದರೂ ಅದನ್ನು ಅನುಭವಿಸಲು ಆರೋಗ್ಯ ಆಯಸ್ಸು ಇಲ್ಲದಿದ್ದರೆ ಪ್ರಯೋಜನವಿಲ್ಲ . ಅಂತೆಯೇ ಹೇಡಿಯ ಅಥವಾ ಅಂಜುಬುರುಕನ ಕೈಲಿ ಚಂದ್ರಾಯುಧ ಕೊಟ್ಟರು ಅದನ್ನು ಆತ ಉಪಯೋಗಿಸಲಾಗದಿದ್ದಲ್ಲಿ ಅದು ವ್ಯರ್ಥ . ಕಣ್ಣೆ ಕಾಣದ ಕುರುಡನ ಕೈಗೆ ತನ್ನನ್ನು ತಾನು ನೋಡಿಕೊಳ್ಳಲು ಕನ್ನಡಿ ಕೊಟ್ಟರೆ ಅದರಿಂದ ಅವನಿಗೇನು ಉಪಯೋಗವಾಗದು . ಅಂತೆಯೇ ಬೆಲೆ ಬಾಳುವ ರತ್ನವನ್ನು ಮಂಗನ ಕೈಗೆ ಕೊಟ್ಟರೆ ಆ ರತ್ನದ ಬೆಲೆ ಮಂಗ ಹೇಗೆ ತಾನೇ ಬಲ್ಲದು . ಅಂತೆಯೇ ಶರಣನಾದವನಿಗೆ ಲಿಂಗ ಪೂಜೆ , ಶಿವ ಪಥದ ಅರಿವು ಇಲ್ಲದಿದ್ದರೆ ಆ ಪೂಜೆಯು ನಿರರ್ಥಕ ಎಂಬುದಾಗಿ ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ .
ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ವಿವರಿಸಿ :
1 “ ಧರಹತ್ತಿ ಉರಿದಡೆ ನಿಲಲುಬಾರದು”
ಬಸವಣ್ಣನವರ ಪ್ರಸಿದ್ಧವಾದ ವಚನವೊಂದರ ವಾಕ್ಯವಿದು . ಕಾಯಬೇಕಾದವರೆ ಕೊಲ್ಲಲು ನಿರ್ಧರಿಸಿದಾಗ ಯಾರಿಂದಲೂ ರಕ್ಷಿಸಲು ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಸಂದರ್ಭದಲ್ಲಿ ಬಸವಣ್ಣ ಈ ಮಾತನ್ನು ಹೇಳಿದ್ದಾರೆ . ಮನೆಯೊಳಗಿರುವ ಒಲೆಹತ್ತಿ ಉರಿಯುತ್ತಿದ್ದಾಗ ಅದರ ಶಾಖವನ್ನು ತಾಳಿಕೊಂಡು ನಿಲ್ಲಬಹುದು . ಆದರೆ ನಾವು ನಿಂತಿರುವ ನೆಲವೇ ಹತ್ತಿ ಉರಿಯತೊಡಗಿದರೆ ತಾಳಿನಿಲ್ಲಲು , ಬದುಕುಳಿಯಲು ಅಸಾಧ್ಯವೆಂಬುದು ಬಸವಣ್ಣನವರ ಅಭಿಪ್ರಾಯ . ಇದನ್ನು ಇನ್ನಿತರ ಉದಾಹರಣೆಗಳ ಮೂಲಕ ಅವರು ನಿರೂಪಿಸಿದ್ದಾರೆ .
2. “ ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು” ?
ಬಸವಣ್ಣನವರ ವಚನವೊಂದರಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ಮರ್ಕಟ ಎಂದರೆ ಮಂಗ ಅಥವಾ ಕೋತಿ . ಕೋತಿಗೆ ಮಾಣಿಕ್ಯದ ಬೆಲೆ ತಿಳಿಯದು . ಹಾಗಾಗಿ ತನ್ನ ಕೈಯೊಳಗಿರುವ ಮಾಣಿಕ್ಯವನ್ನು ಅದು ಕಲ್ಲಿನಂತಹ ಕ್ಷುಲ್ಲಕ ನಿರುಪಯುಕ್ತ ವಸ್ತು ಎಂದೇ ಭಾವಿಸುತ್ತದೆ . ಇದೇ ರೀತಿಯಲ್ಲಿ ಲಿಂಗದ ಮೌಲ್ಯ ಮಹತ್ತ್ವ ತಿಳಿಯದ ಡಾಂಬಿಕ ಭಕ್ತ ತಾನು ಧರಿಸಿರುವ ಶಿವಲಿಂಗದ ಮಹತ್ತ್ವವನ್ನರಿಯದೆ ವರ್ತಿಸುತ್ತಾನೆ . ಇದರಿಂದ ಯಾವ ಉಪಯೋಗವೂ ಇಲ್ಲ . ಇಂತಹ ಡಾಂಬಿಕನ ಅಂಗದ ಮೇಲೆ ಲಿಂಗವಿರುವುದು ಮರ್ಕಟನ ಕೈಯೊಳಗಣ ಮಾಣಿಕ್ಯದಂತೆ ಎಂಬುದು ಬಸವಣ್ಣನವರ ಅಭಿಪ್ರಾಯ .
3. “ ತಾಯ ಮೊಲೆವಾಲು ನಂಜಾಗಿ ಕೊಲುವಡೆ”
ಬಸವಣ್ಣನವರ ವಚನದಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ತಾಯ ಗರ್ಭದಿಂದ ಹೊರಬಂದ ಕೂಡಲೇ ಮಗು ಕಾತರಿಸುವುದು ತಾಯಿಯ ಎದೆಹಾಲಿಗೆ . ತಾಯಿ ಹಾಲು ಕುಡಿಸಿ ಮಗುವನ್ನು ಪೊರೆಯುತ್ತಾಳೆ . ಅವಳು ಕುಡಿಸುವ ಎದೆಹಾಲು ಮಗುವಿನ ಪಾಲಿಗೆ ಅಮೃತವಿದ್ದಂತೆ . ಒಂದು ವೇಳೆ ಅವಳು ಕುಡಿಸುವ ಎದೆಹಾಲು ಅಮೃತವಾಗುವ ಬದಲಿಗೆ ವಿಷವಾದರೆ ? ಯಾರೂ ಮಗುವನ್ನು ಉಳಿಸಲಾಗಲಿ , ಮೊರೆಯಲಾಗಲಿ ಸಾಧ್ಯವಿಲ್ಲ . ಇದರಂತೆಯೇ ತಾಯಿಯಂತೆ ಪೊರೆವ ದೇವರೇ ಶಿಕ್ಷಿಸತೊಡಗಿದಾಗ ಯಾರಿಂದಲೂ ರಕ್ಷಿಸಲಾಗವೆಂಬುದನ್ನು ಬಸವಣ್ಣ ಈ ಮೇಲಿನ ವಾಕ್ಯದ ಮೂಲಕ ವಿವರಿಸಿದ್ದಾರೆ .
4. “ ಅರ್ಥರೇಖೆಯಿದ್ದಲ್ಲಿ ಫಲವೇನು , ಆಯುಷ್ಯರೇಖೆ ಇಲ್ಲದನ್ನಕ್ಕರ”
ಈ ಮೇಲಿನ ವಾಕ್ಯವನ್ನು ಬಸವಣ್ಣನವರ ವಚನದಿಂದ ಆಯ್ದುಕೊಳ್ಳಲಾಗಿದೆ . ಡಾಂಭಿಕ ಭಕ್ತಿಯನ್ನು ವಿಡಂಬಿಸುವ ಸಂದರ್ಭದಲ್ಲಿ ಕವಿ ಈ ಮೇಲಿನ ವಾಕ್ಯವನ್ನು ರಚಿಸಿದ್ದಾರೆ . ಲಿಂಗವನ್ನು ಮೈಮೇಲೆ ಧರಿಸಿ , ಶಿವಭಕ್ತನೆಂದು ತೋರಿಕೆಯ ಭಕ್ತಿ ಆಚರಿಸುವುದಕ್ಕಿಂತ ಶಿವಪಥದಲ್ಲಿ ನಡೆಯುವುದು ಮುಖ್ಯವೆಂಬುದು ಬಸವಣ್ಣನವರ ಅಭಿಪ್ರಾಯವಾಗಿದೆ . ಆಯುಷ್ಯವಿಲ್ಲದವನ ಕೈಯಲ್ಲಿ ಅರ್ಥರೇಖೆಯಿದ್ದ ಮಾತ್ರಕ್ಕೆ ಸುಖಿಸಬಲ್ಲನೆ ? ಅರ್ಥ ( ಸಂಪತ್ತನ್ನು ) ವನ್ನು ಅನುಭವಿಸಲು ಆಯುಷ್ಯ ಮುಖ್ಯ ಅಂತೆಯೇ ಅಂಗದ ಮೇಲೆ ಶಿವಲಿಂಗವಿದ್ದ ಮಾತ್ರಕ್ಕೆ ಉಪಯೋಗವಿಲ್ಲ . ಶಿವಪಥವನ್ನು ಅರಿತು ನಡೆಯುವುದು ನಿಜಭಕ್ತನ ಲಕ್ಷಣ ಎಂದು ಬಸವಣ್ಣನವರು ತಿಳಿಸಿದ್ದಾರೆ .
ಆತ್ಮೀಯರೇ..
ನಮ್ಮ KannadaDeevige.in ವೆಬ್ಸೈಟ್ ಮತ್ತು ಆಪ್ ನಲ್ಲಿ 1ನೇ ತರಗತಿ ಯಿಂದ 12ನೇ ತರಗತಿಯವರೆಗಿನ ಎಲ್ಲಾ ಪಾಠ ಹಾಗೂ ಪದ್ಯಗಳ ಪಠ್ಯ ಪುಸ್ತಕ, ನೋಟ್ಸ್ ಸಂಪೂರ್ಣ ವಿವರಣೆ ಇದೆ. ಜೊತೆಗೆ ಕನ್ನಡ ವ್ಯಾಕರಣ,ಹಾಗೂ ಪಾಠ ಪದ್ಯಗಳ ಪ್ರಶ್ನೋತ್ತರಗಳ ಕುರಿತಾದ ಮಾಹಿತಿಯೂ ಇದೆ.
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ನಮ್ಮ Kannada Deevige ಆಪ್ ಡೌನ್ಲೋಡ್ ಮಾಡಿ. ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ.
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಲು ಹೇಗೆ ಇಲ್ಲಿ ಕ್ಲಿಕ್ ಮಾಡಿ.
ಇತರ ವಿಷಯಗಳು:
1 PUC Notes ಎಲ್ಲ ಪಾಠ ಪದ್ಯಗಳ ನೋಟ್ಸ್ Books Pdf Download Kannada Deevige App ಹಿಂದಕ್ಕೆ
ಕನ್ನಡ ದೀವಿಗೆ.in ಜಾಲತಾಣದಲ್ಲಿ 2PUC ಪಠ್ಯಪುಸ್ತಕಗಳು ನೋಟ್ಸ್ , ಪ್ರೆಶ್ನೆ ಉತ್ತರಗಳ ಕುರಿತು ನಿಮಗೆ ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಕೆಳಗೆ ಒಂದು ಕಾಮೆಂಟ್ ಅನ್ನು ಮಾಡಿ ತಿಳಿಸಿ.