ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಪ್ರಬಂಧ, ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ ಗಳನ್ನು ಸಂಗ್ರಹಿಸಿ ನಿಮ್ಮ ವಿವರಣೆಯೊಂದಿಗೆ ಪುಟ್ಟ ಪ್ರಬಂಧ ಬರೆಯಿರಿ ಸೂರ್ಯೋದಯ ವರ್ಣನೆ ಪ್ರಬಂಧ Kannada Kavigalu Kanda Suryodayada Varnane Prabandha
ಸೂರ್ಯೋದಯ ಎಂದರೆ ಬೆಳಗಿನ ಹೊತ್ತಿನಲ್ಲಿ ಸೂರ್ಯನ ಮೇಲಿನ ಶಾಖೆಯು ಕ್ಷಿತಿಜದಲ್ಲಿ ಕಾಣಿಸಿಕೊಳ್ಳುವ ಕ್ಷಣ ಲೋಕವನ್ನು ಮುತ್ತಿದ ಅಂಧಕಾರವನ್ನು ತನ್ನ ಕಿರಣಗಳಿಂದ ಓಡಿಸುವ ಸೂರ್ಯ ನಮ್ಮ ಕಣ್ಣಿಗೆ ಕಾಣಿಸುವ ದೇವರು ಪುಣ್ಯನದಿ, ಸರೋವರ ತೀರಗಳಲ್ಲಿ ಆಸ್ತಿಕರು ಸೂರ್ಯೋದಯ, ಸೂರ್ಯಾಸ್ತಗಳಲ್ಲಿ ತಮ್ಮೆರಡು ಕೈಗಳಿಂದ ಅರ್ಘ್ಯ ಪ್ರಧಾನ ಮಾಡುತ್ತಿರುವ ದೃಶ್ಯ ಮನಸ್ಸಿಗೆ ಮುದ ನೀಡುವಂತಹುದು.
ಈ ಸೂರ್ಯೋದಯದ ಕ್ಷಣವನ್ನು ಕವಿಗಳು ತಮ್ಮದೇ ಶೈಲಿಯಲ್ಲಿ ವರ್ಣನೆಯನ್ನು ಮಾಡಿದ್ದಾರೆ, ಒಂದೋಂದು ಕವಿಗಳ ವರ್ಣನೆಯ ಶೈಲಿಯು ಒಂದೋಂದು ರೀತಿಯಲ್ಲಿ ಬಿನ್ನವಾಗಿವೆ.
ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆಗಳ ಪ್ರಬಂಧ
ಕುವೆಂಪು
ಕುವೆಂಪು ಎಲ್ಲರೂ ಬಲ್ಲಂತೆ ನಿಸರ್ಗದ ಕವಿ. ಅದರಲ್ಲೂ ಸೂರ್ಯ, ಸೂರ್ಯೋದಯ, ಸೂರ್ಯಾಸ್ತಗಳನ್ನು ವಿಧವಿಧವಾಗಿ ಬಣ್ಣಿಸಿ ಈ ಕವಿ ಬರೆದಂತೆ ಮತ್ತಾರೂ ಬರೆದಿರಲಾರರು.
ಅವರಿಗೆ ಕತ್ತಲ ಬಸಿರ ಸೀಳಿ ಉದಯಿಸುವ ರವಿಯ ಮೇಲೆ ಬಹಳ ಮಮತೆ ಇದ್ದಿರಬೇಕು. ಅವರು ತಮ್ಮ ಮೈಸೂರಿನ ಮನೆಯನ್ನು ‘‘ಉದಯರವಿ’’ ಎಂದು ಹೆಸರಿಸಿರುವುದೇ ಅದಕ್ಕೆ ಸಾಕ್ಷಿ!
ಬೆಳಗಿನ ಬಗ್ಗೆ ಇತರ ಕವಿಗಳು ಬರೆದ ಕವನಗಳನ್ನು ಸಂಗ್ರಹಿಸಿ ಅವುಗಳ ವಿಶಿಷ್ಟತೆಯನ್ನು ಗುರುತಿಸಿ
ಕವಿಯ ಪಾಲಿಗೆ ಸೂರ್ಯ ಬರೀ ಬೆಳಕನ್ನಷ್ಟೇ ನೀಡಬಲ್ಲ ಒಂದು ಸಾಮಾನ್ಯ ಆಕಾಶಕಾಯವಲ್ಲ. ಈ ಸೃಷ್ಟಿಯ ಹೃದಯಕ್ಕೆ ಪ್ರಾಣಾಗ್ನಿಯ ಹೊಳೆಯನ್ನು ಹರಿಸಲು ದಯಮಾಡಿಸುವ ಮಾಯಗಾರ!
ಒಮ್ಮೆ, ‘‘ಸೂರ್ಯೋದಯ, ಚಂದ್ರೋದಯ ದೇವರ ದಯ ಕಾಣು’’ ಎಂದು ಆಧ್ಯಾತ್ಮದ ಆಳಕ್ಕಿಳಿಯುವ ಕವಿ ಮತ್ತೊಮ್ಮೆ –
ಓಡು ಹೊರಗೆ ಓಡು ನೋಡು
ಬಂದ ನೋಡು ದಿನಮಣಿ!
ಹಚ್ಚ ಹಸಿರು ಬಯಲ ಮೇಲೆ
ಮಿರುಗುತಿಹವು ಹಿಮಮಣಿ!
ಎಂದು ಜಗತ್ತಿಗೆ ಬೆಳಕು ತರುವ ಬಾಲಕನನ್ನು ಕಂಡು ತಾವೂ ಮಗುವಿನಂತೆ ಆಡಿ ನಲಿದಿದ್ದಾರೆ. ಹಾಡಿ ಕುಣಿದಿದ್ದಾರೆ.
ಬೇಂದ್ರೆ
ಬೇಂದ್ರೆಯವರ ‘‘ಮೂಡಲ ಮನೆಯ ಮುತ್ತಿನ ನೀರಿನ ಎರಕವ ಹೊಯ್ದಾ’’ ಕವಿತೆಯಂತೂ ಬೆಳಗಿನ ಜಾವದ ಸಮಸ್ತ ಸೊಬಗನ್ನು ಪದಗಳ ರೂಪದಲ್ಲಿ ಶಾಶ್ವತವಾಗಿ ಸೆರೆ ಹಿಡಿದುಬಿಟ್ಟಿದೆ
ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯ ರಮ್ಯ ತಾಣದಲ್ಲಿ ಚಿತ್ರೀಕರಣಗೊಂಡು, ಬೆಳ್ಳಿಮೋಡ ಚಿತ್ರದಲ್ಲಿ ಬಳಕೆಯಾಗಿರುವ ಈ ಗೀತೆಯೊಂದು ಅದ್ಭುತ ದೃಶ್ಯ ಕಾವ್ಯವಾಗಿ ಅರಳಿದೆ ಈ ಹಾಡನ್ನು ಎಲ್ಲಿ,ಯಾವಾಗ ಕೇಳಿದರೂ ಮುಂಜಾವಿನ ಶುಭ್ರ,
ಶಾಂತ ಪರಿಸರವೊಂದು ಕಣ್ಮುಂದೆ ಬಂದು ನಿಲ್ಲುವುದು ಖಚಿತ. ಇಲ್ಲೂ ಅಷ್ಟೇ,
‘‘ಬಾಗಿಲ ತೆರೆದು ಬೆಳಕು ಹರಿದು
ಜಗವೆಲ್ಲಾ ತೊಯ್ದವನು’’
‘‘ದೇವ’’ನೆನ್ನುವುದರಲ್ಲಿ ಕವಿಗೆ
ಯಾವುದೇ ಅನುಮಾನವಿಲ್ಲ!
ಶಿವರುದ್ರಪ್ಪ
ಈ ಕವಿತೆಯಲ್ಲಿ ಕವಿ ಶಿವರುದ್ರಪ್ಪನವರಿಗೆ ಬಾಗಿಲಿನ ಹೊರಗೆ ಬಂದು ನಿಂತಿರುವವರು ಯಾರೆಂದು ಚೆನ್ನಾಗಿ ತಿಳಿದಿದೆ. ಆದರೂ ಬಂದವರನ್ನು ನೀವು ಯಾರು? ಎಂದು ಪ್ರಶ್ನಿಸುತ್ತಿದ್ದಾರೆ.
ಬಾಗಿಲ ಮರೆಯಲ್ಲಿ ಅಡಗಿ ಕುಳಿತಿರುವ ಮಗುವನ್ನು ತಾನು ಕಂಡೇ ಇಲ್ಲವೆನ್ನುವಂತೆ ನಟನೆ ಮಾಡುತ್ತಿರುವ ತಾಯಿಯಂತಿದೆ ಅವರ ವರ್ತನೆ. ಕವಿ ಮತ್ತು ರವಿಯ ನಡುವೆ ನಡೆದಿರುವ ಈ ಕಣ್ಣುಮುಚ್ಚಾಲೆ ಆಟ ಒಂದು ಸುಂದರ ಕವಿತೆಯೊಂದನ್ನು ನಮಗೆ ಉಡುಗೊರೆಯಾಗಿ ತಂದಿದೆ.
ಯಾರವರು ಯಾರವರು ಯಾರು?
ಬಾಗಿಲಲಿ ಬಂದವರು ನಿಂದವರು ಯಾರು?
ಒಳಗೆಲ್ಲಾ ಬೆಳಕನ್ನು ಚೆಲ್ಲಿದವರಾರು?
ತುಂಬಿದ್ದ ಕತ್ತಲನು ಕಳೆದವರು ಯಾರು?
ಬಾಳ ನಂದನದಲ್ಲಿ ಮಂದಾರ ಗಂಧವನು
ತಂದು ತುಂಬಿದ ಕುಸುಮ ಸುಂದರನು ಯಾರು?
ಸೂರ್ಯನಂತೆ ಸಮತಾವಾದಿ, ಸಮಾನತಾವಾದಿ ಇನ್ನೊಬ್ಬರಿರಲಿಕ್ಕಿಲ್ಲ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎಂದು ಸವಾಲೆಸೆಯುವ ಮನೋಭಾವ ಅವನದಲ್ಲ.
ನೀನಿರುವಲ್ಲಿಗೆ ನಾನೇ ನಡೆದು ಬರಬಲ್ಲೆ ಎಂಬ ವಿನಯವಂತನೀತ. ಧನಿಕರ ಬಂಗಲೆಗಳ ತಾರಸಿಯನ್ನು ತನ್ನ ಕಿರಣಗಳಿಂದ ನೇವರಿಸುವ ಸೂರ್ಯ ಅಷ್ಟೇ ಅಕ್ಕರೆಯಿಂದ ಬಡವರ ಗುಡಿಸಲುಗಳ ಒಳಗೂ ತೂರಿ ಬರುತ್ತಾನೆ.
ಸಿರಿ ಸಂಪಿಗೆಗೂ, ಬಡ ನುಗ್ಗೇಮರಕ್ಕೂ ಸಮನಾದ ಸ್ನೇಹಸಿಂಚನ ಅವನದು. ಗಗನಚುಂಬಿಯಾಗಿರುವ ಗಿರಿಶೃಂಗಗಳಲ್ಲಿ ಮನೆಮಾಡಿಕೊಂಡಿರುವ ಈ ದಿವ್ಯಾಂಬರ ಸಂಚಾರಿ, ಮಣ್ಣ ಧೂಳಿನಲ್ಲಿ ಕಣ್ಣೀರಿಡುತ್ತಿರುವವರ ಸಹಚಾರಿಯೂ ಹೌದು.
ಪತಿತಪಾವನರೆಂಬ ಭೇದಭಾವವಿಲ್ಲದೆ ಮನೆಮನೆಯ ಬಾಗಿಲುಗಳ ಮುಂದೆಯೂ ಬೆಳಕಿನ ರಂಗವಲ್ಲಿ ಬಿಡಿಸುವ ಸಹೃದಯಿ ಸೂರ್ಯ, ಕವಿ ಶಿವರುದ್ರಪ್ಪನವರದೇ ಮತ್ತೊಂದು ಕವಿತೆಯಲ್ಲಿ ಹೀಗೆ ಮೂಡಿಬರುತ್ತಾನೆ –
ಬಾಂದಳ ಚುಂಬಿತ ಶುಭ್ರ ಹಿಮಾವೃತ
ತುಂಗ ಶೃಂಗದಲಿ ಗೃಹವಾಸಿ
ದೀನ ಅನಾಥರ ದು:ಖಿ ದರಿದ್ರರ
ಮುರುಕು ಗುಡಿಸಲಲಿ ಉಪವಾಸಿ!
ಬಿ. ಆರ್. ಲಕ್ಷ್ಮಣರಾವ್
ಈ ಸೂರ್ಯನಿಗೆ ನಮ್ಮ ಭೂಮಿಯ ಜೊತೆಗೆ ಅನಾದಿಕಾಲದಿಂದ ನಡೆದು ಬಂದಿರುವ ಪ್ರೇಮ ವ್ಯವಹಾರವಿದೆ. ಮದುವೆಯ ರಗಳೆಗೆ ಸಿಲುಕದೆ ಸಾಗಿ ಬಂದಿರುವ ಅನಂತ ಪ್ರಣಯ ಅವರದು.
ಬಿ. ಆರ್. ಲಕ್ಷಣರಾವ್ ಅವರ ಕವಿತೆಯೊಂದರಲ್ಲಿ ಇಳೆ ಮತ್ತು ರವಿಯ ಮಧುರ ಮಿಲನದ ಬಗೆಗೊಂದು ಮೋಹಕವಾದ ವರ್ಣನೆ ಇದೆ. ತನ್ನ ಪ್ರಿಯತಮನ ಆಗಮನಕ್ಕಾಗಿ ಕಾದಿರುವ ಪ್ರೇಯಸಿಯ ಸಡಗರ, ಕಾತುರಗಳನ್ನು ಸೊಗಸಾಗಿ ಬಣ್ಣಿಸುತ್ತಿದೆ ಕವಿತೆ.
ಹಸಿರು ಸೀರೆಗೊಪ್ಪುವ ಹೂ ಕುಬುಸ, ಇಬ್ಬನಿಯ ಮಾಲೆ ತೊಟ್ಟು ತನ್ನ ಇನಿಯನನ್ನು ಮೆಚ್ಚಿಸಲು ಕಾದು ನಿಂತಿದ್ದಾಳೆ ಭೂರಮಣಿ. ಅವಳ ನಿರೀಕ್ಷೆ ವ್ಯರ್ಥವಾಗಲಿಲ್ಲ. ಪ್ರಿಯೆಯನ್ನು ಕಾಣಲು ಸೂರ್ಯ ಬಾನಿನ ಅಂಚಿಂದ ಬಂದೇ ಬಿಟ್ಟ!
ಕಂಡೊಡನೆ ನೇಸರನ ಕೆಂಪಾದವು ಕೆನ್ನೆ
ಪುಲಕಿಸಿ ನಸು ಬಿಸಿಯೇರಿತು ಒಡಲು
ಅವನು ಸೋಕಿದೊಡನೆ
ನಾಚಿಕೆಯ ಮಂಜುತೆರೆ ಸರಿಸುತ ಪ್ರಿಯತಮನು
ಇಳೆಯ ಚುಂಬಿಸಿದನು!
ಲಕ್ಷ್ಮೀನಾರಾಯಣ ಭಟ್ಟ
‘ಚೆಲುವೆ ಯಾರೋ ನನ್ನ ತಾಯಿಯಂತೆ’’ ಕವಿತೆಯಲ್ಲಿ, ಕವಿ ಲಕ್ಷ್ಮೀನಾರಾಯಣ ಭಟ್ಟರು ನೇಯ್ದಿರುವ ಕಲ್ಪನೆಯಂತೂ ಮತ್ತೂ ಮನಮೋಹಕ
ಈ ಕವಿತೆಯಲ್ಲಿ ಉದಯರವಿ ಭೂತಾಯಿಯ ಹಣೆಗಿಟ್ಟ ಭಾಗ್ಯಬಿಂಬವಾಗಿದ್ದಾನೆ. ಕೆಂಪಗೆ, ಗುಂಡಗಿರುವ ಸೂರ್ಯ ಭೂದೇವಿಯ ಹಣೆಯಲ್ಲಿ ಕುಂಕುಮದ ಬೊಟ್ಟಿನಂತೆ ಕಾಣಿಸುತ್ತಿದ್ದಾನೆ ಎಂಬ ಉಪಮೆ ಅದೆಷ್ಟು ಸಮಂಜಸವೆನಿಸುತ್ತದೆ ಅಲ್ಲವೇ?
‘‘ಬಾ ಬಾ ಓ ಬೆಳಕೇ ಕರುಣಿಸಿ ಈ ನೆಲಕೆ’’ ಎಂಬ ಭಟ್ಟರದೇ ಇನ್ನೊಂದು ಕವಿತೆಯಲ್ಲಿ, ಸೂರ್ಯ ವಿಶ್ವದೆದೆಯ ಮೇಲೆ ಮೆರೆಯುತ್ತಿರುವ ಪುಟ್ಟ ಪದಕ! ಬಾಂದಳದ ನೊಸಲಿನಲ್ಲಿ ವಿರಾಜಿಸುವ ತಿಲಕ!
ವಿಶ್ವದೆದೆಯ ಪದಕವೆ
ಬಾಂದಳದ ತಿಲಕವೆ
ನಿನ್ನೊಳಗಿರುವ ಸತ್ಯ ತೋರು
ಬಂಗಾರದ ಫಲಕವೇ!
ವಿಜ್ಞಾನ ಸೃಷ್ಟಿಯ ರಹಸ್ಯಗಳನ್ನೆಲ್ಲ ಒಂದೊಂದಾಗಿ ಬಿಡಿಸುತ್ತಾ ಹೋಗುತ್ತಿದೆ. ಆದರೂ ಹಲವಾರು ಸಂಗತಿಗಳನ್ನು ವಿವರಿಸಲು ಅದಕ್ಕೂ ಸಾಧ್ಯವಾಗಿಲ್ಲ. ಆ ಬಗ್ಗೆ ಪ್ರಯತ್ನಗಳಂತೂ ನಿಲ್ಲದೆ ನಡೆದೇ ಇವೆ. ಎಲ್ಲಿ ವಿಜ್ಞಾನ ಸೋತು ಕೈಚೆಲ್ಲುತ್ತದೋ, ಅಲ್ಲಿಂದ ತತ್ವಜ್ಞಾನದ ಮೊದಲ ಮೆಟ್ಟಿಲು ಪ್ರಾರಂಭವಾಗುತ್ತದಂತೆ. ಬೆಳಗಿನ ಬಿಸಿಲು, ಮುಂಜಾವದ ಇಬ್ಬನಿ,
ಅಚ್ಚ ಬಿಳುಪಿನ ಪುಟ್ಟ ಹೂವು, ಕತ್ತಲ ಮೊಗ್ಗೊಡೆದು ಬರುವ ಹಗಲು, ಅದನ್ನು ತಳ್ಳಿಕೊಂಡೇ ಬರುವ ಇರುಳು, ಯಾರದೋ ನಿಯಂತ್ರಣಕ್ಕೆ ಒಳಪಟ್ಟಂತೆ ತನ್ನಿಂದತಾನೇ ಬದಲಾಗುವ ಋತುಗಳು, ಸುರಿಯುವ ಮಳೆ, ಕಡಲಿನತ್ತ ಗುರಿ ತಪ್ಪದೆ ಹರಿಯುವ ಹೊಳೆ….ಇವೆಲ್ಲವುಗಳ ಹಿಂದಿರುವ ಯಾವುದೋ ಒಂದು ಅಗೋಚರ ಹಸ್ತ ಯಾರದ್ದಿರಬಹುದು?
ಕೋಟ್ಯಾನುಕೋಟಿ ವರ್ಷಗಳಿಂದ ಬೆಳಗುತ್ತಿದ್ದು, ಈಗಲೂ ಇರುವ, ನಮ್ಮ ನಂತರವೂ ಇರುವ ತೇಜೋಮಯ ಸೂರ್ಯನ ಮುಂದೆ ನಮ್ಮ ಬದುಕು ಅದೆಷ್ಟು ಹ್ರಸ್ವ! ನಾವೆಷ್ಟು ಅಲ್ಪಾಯುಷಿಗಳು ಯುಗಯುಗಾಂತರಗಳಾಗಿ ಉರುಳುತ್ತಿರುವ ಕಾಲಚಕ್ರದ ಯಾವುದೋ ಒಂದು ಹಂತದಲ್ಲಿ, ಸಣ್ಣಗೆ ಬಂದು ಮರೆಯಾಗಿ ಹೋಗುವ ನಮ್ಮೆಲ್ಲರ ಮದ, ಮತ್ಸರ, ಅಹಂಕಾರಗಳಿಗೆ ಕಿಂಚಿತ್ತಾದರೂ ಅರ್ಥವಿದ್ದೀತೇ?
FAQ :
ಬೇಂದ್ರೆಯವರು ಬರೆದ ಕವಿತೆ
ಲಕ್ಷ್ಮೀ ನಾರಾಯಣ ಭಟ್ಟರವರ ಕವಿತೆ
ಕನ್ನಡ ಕವಿಗಳು ಕಂಡ ಸೂರ್ಯೋದಯದ Pdf
Kavi Kanda Suryodaya in Kannada, ಕನ್ನಡ ಕವಿಗಳು ಕಂಡ ಸೂರ್ಯೋದಯದ ವರ್ಣನೆ Pdf ಅನ್ನು Download ಮಾಡಲು ನಮ್ಮ App ಡೌನ್ಲೋಡ್ ಮಾಡಿ ಅಲ್ಲಿಂದ ನೀವು ಡೌನ್ಲೋಡ್ ಮಾಡಬಹುದು.
ಇತರ ವಿಷಯಗಳು :
ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ
ಇನ್ನು ಹೆಚ್ಚಿನ ವಿಷಯಗಳನ್ನು ನೀವು ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ ಹೆಚ್ಚಿನ ಮಾಹಿತಿಯನ್ನು ಕನ್ನಡದಲ್ಲಿ ಪಡೆಯಬಹುದಾಗಿದೆ
ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ ವಿಷಯಗಳನ್ನು ಕಲಿಯಿರಿ
ಟೆಲಿಗ್ರಾಮ್ ಗೆ ಜಾಯಿನ್ ಆಗಿ